ವಯನಾಡು ಮುಂದಿನ ಅಮೇಥಿ ‘: ರಾಹುಲ್-ಪ್ರಿಯಾಂಕಾ ವಿರುದ್ಧ ವಿವಾದಾತ್ಮಕ ಪೋಸ್ಟರ್ ; ಪೊಲೀಸರಿಂದ ಪ್ರಕರಣ ದಾಖಲು

ವಯನಾಡು (ಕೇರಳ): ಕೇರಳದ ವಯನಾಡ್‌ನಲ್ಲಿರುವ ಕಾಂಗ್ರೆಸ್ ಕಚೇರಿ (DCC) ಗೋಡೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಟಾರ್ಗೆಟ್‌ ಮಾಡಿ ವಿವಾದಾತ್ಮಕ ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು, ಈ ಸಂಬಂಧ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.
ಕಾಂಗ್ರೆಸ್ ಶಾಸಕ ಟಿ. ಸಿದ್ದಿಕ್ ನೀಡಿದ ದೂರಿನ ಮೇರೆಗೆ ಕಲ್ಪೆಟ್ಟಾ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಪ್ರಥಮ ಮಾಹಿತಿ ವರದಿ (FIR) ಪ್ರಕಾರ, ಮೇ 13 ರಂದು ಕೇರಳದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಗೊಂದಲ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಈ ಪೋಸ್ಟರ್‌ಗಳು ಪ್ರತ್ಯಕ್ಷವಾಗಿದ್ದವು. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿಯಲ್ಲಿ ಅನುಭವಿಸಿದ ಸೋಲನ್ನು ನೆನಪಿಸುವಂತೆ, “ವಯನಾಡ್ ಕಾಂಗ್ರೆಸ್‌ಗೆ ಮುಂದಿನ ಅಮೇಥಿ ಆಗಬಹುದು” ಎಂದು ಪೋಸ್ಟರ್‌ಗಳಲ್ಲಿ ಎಚ್ಚರಿಸಲಾಗಿತ್ತು.
“ರಾಹುಲ್ ಮತ್ತು ಪ್ರಿಯಾಂಕಾ ಅವರೇ, ವಯನಾಡ್ ಅನ್ನು ಮರೆತುಬಿಡಿ… ನೀವು ಇಲ್ಲಿಂದ ಮತ್ತೊಮ್ಮೆ ಗೆಲ್ಲಲು ಸಾಧ್ಯವಿಲ್ಲ” ಎಂದು ಪೋಸ್ಟರ್‌ಗಳಲ್ಲಿದ್ದ ಬರೆಯಲಾಗಿದೆ. ರಾಹುಲ್ ಅವರೇ, ಕೆ.ಸಿ. (ವೇಣುಗೋಪಾಲ) ನಿಮ್ಮ ಬ್ಯಾಗ್ ಹಿಡಿಯುವವರಾಗಿರಬಹುದು, ಆದರೆ ಕೇರಳದ ಜನತೆ ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ”. “ಆರ್.ಜಿ (ರಾಹುಲ್ ಗಾಂಧಿ) ಮತ್ತು ಪಿ.ಜಿ (ಪ್ರಿಯಾಂಕಾ ಗಾಂಧಿ), ಇದು ಕೇವಲ ಎಚ್ಚರಿಕೆಯಲ್ಲ. ಈ ದೊಡ್ಡ ತಪ್ಪಿಗಾಗಿ ಕೇರಳ ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಸಹ ಬರೆಯಲಾಗಿದೆ.
ತನಿಖೆ ಚುರುಕುಗೊಳಿಸಿದ ಪೊಲೀಸರು
ಪೋಸ್ಟರ್‌ಗಳು ಗಮನಕ್ಕೆ ಬಂದ ತಕ್ಷಣ ಕಾಂಗ್ರೆಸ್ ಕಾರ್ಯಕರ್ತರು ಅವುಗಳನ್ನು ತೆರವುಗೊಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಕೇರಳ ಪೊಲೀಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಪೋಸ್ಟರ್ ಅಂಟಿಸುತ್ತಿರುವುದು ಪತ್ತೆಯಾಗಿದ್ದು, ಆತನ ಗುರುತು ಪತ್ತೆ ಹಚ್ಚಲು ಪೊಲೀಸರು ಜಾಲ ಬೀಸಿದ್ದಾರೆ.
ಇತ್ತೀಚೆಗೆ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಒಟ್ಟು 140 ಸ್ಥಾನಗಳ ಪೈಕಿ 102 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತ ಪಡೆದಿತ್ತು. ಆದರೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಷಯದಲ್ಲಿ ವಿ.ಡಿ. ಸತೀಶನ್, ರಮೇಶ ಚೆನ್ನಿತ್ತಲ ಮತ್ತು ಕೆ.ಸಿ. ವೇಣುಗೋಪಾಲ ನಡುವೆ ತೀವ್ರ ಪೈಪೋಟಿ ಏರ್ಪಟ್ಟು ಗೊಂದಲ ಸೃಷ್ಟಿಯಾಗಿತ್ತು.
ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರಾಗಿರುವ ಕೆ.ಸಿ. ವೇಣುಗೋಪಾಲ ಅವರನ್ನು ಮುಖ್ಯಮಂತ್ರಿ ಮಾಡಲು ಹೈಕಮಾಂಡ್ ಒಲವು ತೋರಿತ್ತಾದರೂ, ಸ್ಥಳೀಯ ಕಾರ್ಯಕರ್ತರು ಸತೀಶನ್ ಮತ್ತು ಚೆನ್ನಿತ್ತಲ ಅವರ ಬೆನ್ನಿಗೆ ನಿಂತಿದ್ದರು ಎನ್ನಲಾಗಿದೆ. ಆದರೆ, ಈ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್ ನಾಯಕತ್ವವು ಅಂತಿಮವಾಗಿ ವಿ.ಡಿ. ಸತೀಶನ್ ಅವರನ್ನು ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಮೇ 18 ರಂದು ಹಿರಿಯ ನಾಯಕರ ಸಮ್ಮುಖದಲ್ಲಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement