ತಾನು ಬದುಕಿರುವಾಗಲೇ ಮರಣಾ ನಂತರದ ಕ್ರಿಯಾ ಕರ್ಮ ನೆರವೇರಿಸಿ ಸಾವಿರಾರು ಜನರಿಗೆ ಊಟ ಹಾಕಿಸಿದ ವೃದ್ಧ ; ಕಾರಣ..?

ಶಿವಪುರಿ (ಮಧ್ಯಪ್ರದೇಶ) : ನನ್ನ ಮರಣದ ನಂತರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವವರು ಯಾರು ಎಂಬ ಚಿಂತೆ ಆ 60 ವರ್ಷದ ವೃದ್ಧನನ್ನು ಬಹುವಾಗಿ ಕಾಡುತ್ತಿತ್ತು. ಇದೇ ಕಾರಣಕ್ಕೆ ಆತ ಬದುಕಿರುವಾಗಲೇ ತನಗಾಗಿ ಸ್ವತಃ ತಾನೇ ಮರಣೋತ್ತರ ಕ್ರಿಯಾ ಕರ್ಮಗಳನ್ನು ನೆರವೇರಿಸಿದ ಅಪರೂಪದ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.
ಈ ವಿಲಕ್ಷಣ ಘಟನೆ ಶಿವಪುರಿಯ ಕರೇರಾ ವ್ಯಾಪ್ತಿಯ ಹಾಜಿನಗರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಕಲ್ಯಾಣ ಪಾಲ (60) ಎಂಬುವವರೇ ಈ ಕಾರ್ಯ ಮಾಡಿದವರು. ಅವರು ಅವಿವಾಹಿತರಾಗಿದ್ದು, ಒಬ್ಬರೇ ವಾಸಿಸುತ್ತಿದ್ದಾರೆ. ಅವರಿಗೆ ಯಾವುದೇ ಆಪ್ತ ಕುಟುಂಬ ಸದಸ್ಯರಿಲ್ಲದ ಕಾರಣ, ಸಾಮಾನ್ಯವಾಗಿ ಮನುಷ್ಯ ತೀರಿಕೊಂಡ ನಂತರ ಮಾಡುವ ಎಲ್ಲಾ ಧಾರ್ಮಿಕ ವಿಧಿಗಳನ್ನು ತಾವೇ ನಿಂತು ಮಾಡಿಸಿದ್ದಾರೆ.

ಗ್ರಾಮಸ್ಥರು ನೀಡಿದ ಮಾಹಿತಿ ಪ್ರಕಾರ, ಈ ಕಾರ್ಯಕ್ರಮಕ್ಕೂ ಎರಡು ದಿನಗಳ ಮುಂಚಿತವಾಗಿ ಕಲ್ಯಾಣ ಪಾಲ ಅವರು ಉತ್ತರ ಪ್ರದೇಶದ ಪ್ರಯಾಗರಾಜ್‌ಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ತಮ್ಮದೇ ಹೆಸರಿನಲ್ಲಿ ಪಿಂಡ ಪ್ರದಾನ ಸೇರಿದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದರು. ಅಲ್ಲದೆ, ಅಸ್ತಿ ವಿಸರ್ಜನೆಯ ನಂತರ ಮಾಡುವ ಸಾಂಪ್ರದಾಯಿಕ ಆಚರಣೆಯಂತೆ ಗಂಗಾ ನದಿಯಲ್ಲಿ ಪವಿತ್ರ ಸ್ನಾನವನ್ನೂ ಮಾಡಿದ್ದರು.
ಅಲ್ಲಿಂದ ಗ್ರಾಮಕ್ಕೆ ಮರಳಿದ ನಂತರ, ಅವರು ತಮ್ಮ ಮನೆಯಲ್ಲಿ 24 ಗಂಟೆಗಳ ಕಾಲ ಸತತವಾಗಿ ಭಜನೆ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಬಳಿಕ ಶನಿವಾರದಂದು ಬೃಹತ್ ಸಾರ್ವಜನಿಕ ಭೋಜನ ಕೂಟವನ್ನು (ಮರಣೋತ್ತರ ಔತಣಕೂಟ) ಏರ್ಪಡಿಸಿದ್ದರು. ಈ ಅಪರೂಪದ ಊಟಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಂದ ಸುಮಾರು 6,000 ದಿಂದ 7,000 ಜನರು ಆಗಮಿಸಿದ್ದರು.
ಈ ಇಡೀ ಕಾರ್ಯಕ್ರಮವು ಸಾಂಪ್ರದಾಯಿಕವಾಗಿ ಮರಣದ ನಂತರ ನಡೆಸುವ ಉತ್ತರ ಕ್ರಿಯೆಯಂತೆಯೇ ಇತ್ತು. ಆದರೆ ಇಲ್ಲಿದ್ದ ಒಂದೇ ಒಂದು ವ್ಯತ್ಯಾಸವೆಂದರೆ, ಯಾರ ಸಾವಿನ ನೆನಪಿಗಾಗಿ ಈ ಭೋಜನ ಕೂಟ ನಡೆಯುತ್ತಿತ್ತೋ, ಅದೇ ವ್ಯಕ್ತಿ ಸ್ವತಃ ಬಂದ ಅತಿಥಿಗಳನ್ನು ಕೈಮುಗಿದು ಸ್ವಾಗತಿಸುತ್ತಿದ್ದರು! ಬಂದವರಿಗೆಲ್ಲರಿಗೂ ವ್ಯವಸ್ಥಿತವಾಗಿ ಕುಳಿತುಕೊಳ್ಳಲು ಮತ್ತು ಊಟ ಮಾಡಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ವೈರಲ್ ಆಗಿತ್ತು ಆಮಂತ್ರಣ ಪತ್ರಿಕೆ!
ಈ ವಿಚಿತ್ರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಕೆಲವು ದಿನಗಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಆ ಪತ್ರಿಕೆಯಲ್ಲಿ ಈ ಕಾರ್ಯಕ್ರಮವನ್ನು ‘ನನ್ನ ಸಮ್ಮುಖದಲ್ಲೇ ನಡೆಯುವ ಅಂತಿಮ ಗಂಗಾ ಪೂಜೆ ಮತ್ತು ಮಹಾ ಪ್ರಸಾದ ಭೋಜನ’ ಎಂದು ಮುದ್ರಿಸಲಾಗಿತ್ತು. ಇದು ಎಲ್ಲರ ಗಮನ ಸೆಳೆದಿತ್ತು.
ಒಬ್ಬನೇ ಮಗ, ಮದುವೆಯೂ ಆಗಿರಲಿಲ್ಲ
ಸ್ಥಳೀಯರ ಪ್ರಕಾರ, ಕಲ್ಯಾಣ ಪಾಲ ತಮ್ಮ ಪೋಷಕರಿಗೆ ಒಬ್ಬನೇ ಮಗನಾಗಿದ್ದು, ಮದುವೆಯಾಗಿರಲಿಲ್ಲ. ತಾನು ತೀರಿಕೊಂಡ ಮೇಲೆ ತನ್ನ ಅಂತಿಮ ಸಂಸ್ಕಾರ ಹಾಗೂ ಧಾರ್ಮಿಕ ವಿಧಿಗಳನ್ನು ಶಾಸ್ತ್ರೋಕ್ತವಾಗಿ ಮಾಡಲು ಯಾರೂ ಇಲ್ಲವಲ್ಲ ಎಂಬ ಆತಂಕ ಅವರನ್ನು ತೀವ್ರವಾಗಿ ಕಾಡುತ್ತಿತ್ತು.
“ನನ್ನ ಕೊನೆಯ ಪಯಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿಧಿವಿಧಾನಗಳನ್ನು ನಾನು ಬದುಕಿರುವಾಗಲೇ ಪೂರ್ಣಗೊಳಿಸಿರುವುದರಿಂದ ಈಗ ನನ್ನ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ಇನ್ನು ಮುಂದೆ ಸಾವು ಯಾವಾಗ ಬಂದರೂ ನಾನು ಶಾಂತಿಯಿಂದ ಕಣ್ಣು ಮುಚ್ಚುತ್ತೇನೆ. ಏಕೆಂದರೆ ನನ್ನ ಅಂತಿಮ ಸಂಸ್ಕಾರಕ್ಕೆ ಸಂಬಂಧಿಸಿದ ಎಲ್ಲಾ ಆಚರಣೆಗಳನ್ನು ನಾನೇ ನನ್ನ ಸ್ವಂತ ಕಣ್ಣುಗಳಿಂದ ನೋಡಿ ಧನ್ಯನಾಗಿದ್ದೇನೆ ಎಂದು ಅವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement