ಅಮೆರಿಕ ವಿಮಾನ ದುರಂತ: ಟೇಕ್‌ಆಫ್ ವೇಳೆ ಯುಪಿಎಸ್ ವಿಮಾನದ ಇಂಜಿನ್ ಕಳಚಿ ಬಿದ್ದ ವಿಡಿಯೋ ಬಿಡುಗಡೆ ಮಾಡಿದ ಎನ್‌ಟಿಎಸ್‌ಬಿ

ಲೂಯಿಸ್‌ವಿಲ್ಲೆ (ಕೆಂಟಕಿ): ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಯುಪಿಎಸ್ (UPS) ಸರಕು ಸಾಗಣೆ ವಿಮಾನವೊಂದು ಭೀಕರ ಅಪಘಾತಕ್ಕೀಡಾದ ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಬಿಡುಗಡೆ ಮಾಡಿದೆ. ವಿಮಾನದ ರೆಕ್ಕೆಯಿಂದ ಎಡ ಇಂಜಿನ್ ಕಳಚಿಕೊಂಡು ಬಿದ್ದ ಭೀಕರ ಕ್ಷಣಗಳು ಈ ವಿಡಿಯೋದಲ್ಲಿ ಸೆರೆಯಾಗಿವೆ.
ನವೆಂಬರ್ 4, 2025 ರಂದು  ನಡೆದ ಘಟನೆಯಾಗಿದ್ದು ಅದರ ವಿಡಿಯೊವನ್ನು ಈಗ ಬಿಡುಗಡೆ ಮಾಡಲಾಗಿದೆ. ಲೂಯಿಸ್‌ವಿಲ್ಲೆ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಪಿಎಸ್ ಏರ್‌ಲೈನ್ಸ್‌ನ ‘ಮೆಕ್‌ಡೊನೆಲ್ ಡೌಗ್ಲಾಸ್ MD-11F’ (UPS Flight 2976) ವಿಮಾನವು ಹೊನೊಲುಲು ಕಡೆಗೆ ಹೊರಟಿತ್ತು. ಆದರೆ, ರನ್‌ವೇಯಿಂದ ಮೇಲಕ್ಕೆದ್ದ ಕೆಲವೇ ಸೆಕೆಂಡುಗಳಲ್ಲಿ ಈ ದುರಂತ ಸಂಭವಿಸಿದೆ. ಜಾಗತಿಕ ಲಾಜಿಸ್ಟಿಕ್ಸ್ ದೈತ್ಯ ಸಂಸ್ಥೆಯಾದ ಯುಪಿಎಸ್ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ಅಪಘಾತ ಎಂದು ಹೇಳಲಾಗಿದೆ.
30 ಅಡಿ ಎತ್ತರದಲ್ಲೇ ನಿಯಂತ್ರಣ ತಪ್ಪಿದ ವಿಮಾನ
ಎನ್‌ಟಿಎಸ್‌ಬಿ (NTSB) ಪ್ರಾಥಮಿಕ ವರದಿಯ ಪ್ರಕಾರ, ವಿಮಾನವು ಟೇಕ್‌ಆಫ್ ಆದ ನಂತರ ಹೆಚ್ಚು ಎತ್ತರಕ್ಕೆ ಹಾರಲು ಸಾಧ್ಯವಾಗಲಿಲ್ಲ. ಫ್ಲೈಟ್ ರೆಕಾರ್ಡರ್ ಡೇಟಾ ಪ್ರಕಾರ, ವಿಮಾನವು ಕೇವಲ 30 ಅಡಿ ಎತ್ತರಕ್ಕೆ ತಲುಪುತ್ತಿದ್ದಂತೆ ಅದರ ಎಡ ಇಂಜಿನ್ ಮತ್ತು ಅದನ್ನು ಹಿಡಿದಿಟ್ಟಿದ್ದ ಪೈಲಾನ್ (Pylon) ತೀವ್ರ ಸ್ಫೋಟದೊಂದಿಗೆ ರೆಕ್ಕೆಯಿಂದ ಕಳಚಿಕೊಂಡು ಬಿದ್ದಿದೆ. ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು, ಅದರ ಅವಶೇಷಗಳು ವಿಮಾನ ನಿಲ್ದಾಣದ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ ಸಿಡಿದು ಬಿದ್ದವು.
ಇದರ ಬೆನ್ನಲ್ಲೇ ನಿಯಂತ್ರಣ ತಪ್ಪಿದ ವಿಮಾನವು ವಿಮಾನ ನಿಲ್ದಾಣದ ಸಮೀಪವಿರುವ ಕೈಗಾರಿಕಾ ಕಟ್ಟಡಗಳ ಮೇಲೆ ಅಪ್ಪಳಿಸಿತು. ಈ ಅಪಘಾತದ ತೀವ್ರತೆಗೆ ಅರ್ಧ ಮೈಲಿ ಉದ್ದಕ್ಕೂ ವಿಮಾನದ ಅವಶೇಷಗಳು ಹರಡಿಕೊಂಡು ಬಿದ್ದಿದ್ದವು.
 ಭಾರಿ ಅಗ್ನಿ ಅವಘಡ ; 15 ಜನರ ದುರ್ಮರಣ 
‘ನ್ಯೂಯಾರ್ಕ್ ಪೋಸ್ಟ್’ ವರದಿಯ ಪ್ರಕಾರ, ಈ ಭೀಕರ ದುರಂತದಲ್ಲಿ ವಿಮಾನದಲ್ಲಿದ್ದ ಮೂವರು ಸಿಬ್ಬಂದಿ ಹಾಗೂ ನೆಲದ ಮೇಲಿದ್ದ 12 ಜನರು ಸೇರಿದಂತೆ ಒಟ್ಟು 15 ಮಂದಿ ಮೃತಪಟ್ಟಿದ್ದರು. 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ವಿಮಾನದಲ್ಲಿದ್ದ ಏವಿಯೇಷನ್ ಇಂಧನ ಮತ್ತು ಕೈಗಾರಿಕಾ ಪ್ರದೇಶದ ರಾಸಾಯನಿಕಗಳ ಕಾರಣದಿಂದಾಗಿ ಅಪಘಾತದ ಸ್ಥಳದಲ್ಲಿ ದಟ್ಟವಾದ ಸಾರ್ವತ್ರಿಕ ಸುಡುವಿಕೆ (ಬೆಂಕಿ) ಉಂಟಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತಕ್ಕೆ ಕಾರಣವೇನು? ತನಿಖೆಯಲ್ಲಿ ಬಯಲಾದ ಸತ್ಯ
ವಿಮಾನದ ಎಡ ಇಂಜಿನ್ ಅನ್ನು ರೆಕ್ಕೆಗೆ ಜೋಡಿಸುವ ಪ್ರಮುಖ ಲೋಹದ ಭಾಗವಾದ ‘ಆಫ್ಟ್ ಮೌಂಟ್ ಲಗ್’ (Aft mount lug) ನಲ್ಲಿ ಉಂಟಾಗಿದ್ದ ಮೈಕ್ರೋ ಕ್ರ್ಯಾಕ್‌ಗಳು (Fatigue cracks) ಅಥವಾ ಲೋಹದ ಸವಕಳಿಯ ಬಿರುಕುಗಳೇ ಈ ದುರಂತಕ್ಕೆ ಮುಖ್ಯ ಕಾರಣ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ನಿರಂತರ ಒತ್ತಡದಿಂದಾಗಿ ಈ ಲೋಹದ ಭಾಗವು ದುರ್ಬಲಗೊಂಡು, ಟೇಕ್‌ಆಫ್ ಸಮಯದಲ್ಲಿ ತೂಕ ಮತ್ತು ಒತ್ತಡ ತಾಳಲಾರದೆ ಮುರಿದು ಬಿದ್ದಿದೆ ಎನ್ನಲಾಗಿದೆ.
ವಿಮಾನದ ನಿರ್ವಹಣೆ ಮತ್ತು ತಪಾಸಣೆಯ ಸಮಯದಲ್ಲಿ ಈ ಬಿರುಕುಗಳನ್ನು ಏಕೆ ಗುರುತಿಸಲಾಗಿಲ್ಲ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ‘ರಾಯಿಟರ್ಸ್’ ವರದಿಯ ಪ್ರಕಾರ, ಬೋಯಿಂಗ್ ಸಂಸ್ಥೆಯು ವರ್ಷಗಳ ಹಿಂದೆಯೇ ಇಂತಹದ್ದೇ ಲೋಹದ ವೈಫಲ್ಯಗಳನ್ನು ಕೆಲವು ವಿಮಾನಗಳಲ್ಲಿ ಗುರುತಿಸಿತ್ತು. ಆದರೂ ಫೆಡರಲ್ ತನಿಖಾಧಿಕಾರಿಗಳು ಈ ಬಗ್ಗೆ ಮುಂಚಿತವಾಗಿಯೇ ಕಟ್ಟುನಿಟ್ಟಿನ ಕ್ರಮಗಳನ್ನು ಏಕೆ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆ ಎದ್ದಿದೆ.
MD-11 ಮತ್ತು DC-10 ವಿಮಾನಗಳ ಹಾರಾಟ ಸ್ಥಗಿತ
ಅಪಘಾತಕ್ಕೀಡಾದ ಸರಕು ಸಾಗಣೆ ವಿಮಾನವು 34 ವರ್ಷ ಹಳೆಯದಾದ MD-11 ಮಾದರಿಯದ್ದಾಗಿದ್ದು, ಇದನ್ನು ಬೋಯಿಂಗ್ ಸಂಸ್ಥೆ ಜೊತೆ ವಿಲೀನಗೊಳ್ಳುವ ಮುನ್ನ ‘ಮೆಕ್‌ಡೊನೆಲ್ ಡೌಗ್ಲಾಸ್’ ಸಂಸ್ಥೆ ಸಿದ್ಧಪಡಿಸಿತ್ತು. ಈ ಅಪಘಾತದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA), ತುರ್ತು ತಪಾಸಣೆಗಾಗಿ ದೇಶಾದ್ಯಂತ ಇರುವ ಎಲ್ಲಾ MD-11 ಮತ್ತು ಅದಕ್ಕೆ ಸಂಬಂಧಿಸಿದ DC-10 ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ‘ಸಿಎನ್‌ಎನ್’ ವರದಿ ಮಾಡಿದೆ.
ಪ್ರಸ್ತುತ ಎನ್‌ಟಿಎಸ್‌ಬಿ ಈ ಕುರಿತು ಔಪಚಾರಿಕ ವಿಚಾರಣೆಯನ್ನು ಆರಂಭಿಸಿದ್ದು, ವಿಮಾನದ ವಿನ್ಯಾಸದ ಮಾನದಂಡಗಳು, ತಪಾಸಣಾ ಪ್ರಕ್ರಿಯೆಗಳು ಮತ್ತು ತಯಾರಕರ ಜವಾಬ್ದಾರಿಯ ಕುರಿತು ತನಿಖೆ ನಡೆಸುತ್ತಿದೆ. ಈ ಭೀಕರ ಅಪಘಾತದ ಅಂತಿಮ ತನಿಖಾ ವರದಿಯು ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement