ಅತ್ಯಾಚಾರ ಆರೋಪಿಗೆ ಭವ್ಯ ಸ್ವಾಗತ: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ರಸ್ತೆಯಲ್ಲಿ ಮೆರವಣಿಗೆ

ಘಾಜಿಯಾಬಾದ್ : ಕಾನೂನು ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರದ ಆರೋಪದಡಿ ಜೈಲು ಪಾಲಾಗಿದ್ದ ಸುಶೀಲ ಪ್ರಜಾಪತಿ ಎಂಬಾತ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಂತೆ ಆತನಿಗೆ ಹೂವಿನ ಹಾರ ಹಾಕಿ, ವೀರನಂತೆ ಭವ್ಯ ಸ್ವಾಗತ ಕೋರಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವರದಿಗಳ ಪ್ರಕಾರ, ಜೈಲಿನಿಂದ ಬಿಡುಗಡೆಯಾದ ತಕ್ಷಣವೇ ಬಿಳಿ ಬಣ್ಣದ ಉಡುಪು ಧರಿಸಿದ್ದ ಅತ್ಯಾಚಾರ ಆರೋಪಿ ಸುಶೀಲ ಪ್ರಜಾಪತಿಗೆ ಆತನ ಬೆಂಬಲಿಗರು ಚೆಂಡು ಹೂವಿನ ಹಾರಗಳನ್ನು ಹಾಕಿ ಸ್ವಾಗತಿಸಿದ್ದಾರೆ.

ಅಷ್ಟಕ್ಕೇ ನಿಲ್ಲದೆ, ಆತನನ್ನು ಬೆಂಬಲಿಗರು ಹೆಗಲ ಮೇಲೆ ಹೊತ್ತುಕೊಂಡು, ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದ್ದಾರೆ. ಯಾವುದೋ ಯುದ್ಧ ಗೆದ್ದು ಬಂದವನಂತೆ ಆರೋಪಿಯು ಕೈಕುಲುಕುತ್ತಾ, ನಗುತ್ತಾ ಮೆರವಣಿಗೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಸುತ್ತಲಿದ್ದವರು ವಿಜಯದ ಸಂಕೇತವಾದ ‘V’ (Victory) ಸೈನ್ ಪ್ರದರ್ಶಿಸಿದ್ದಾರೆ. ಈ ಇಡೀ ಘಟನೆಯನ್ನು ಅಲ್ಲಿ ನೆರೆದಿದ್ದವರು ಮೊಬೈಲ್‌ ಫೋನ್‌ಗಳಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು. ಅತ್ಯಾಚಾರದಂತಹ ಗಂಭೀರ ಆರೋಪ ಹೊತ್ತಿರುವ ವ್ಯಕ್ತಿಗೆ ಇಂತಹ ರಾಜಮರ್ಯಾದೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಏನಿದು ಪ್ರಕರಣ?
ಕಾನೂನು ವಿದ್ಯಾರ್ಥಿನಿಯೊಬ್ಬಳಿಗೆ ಪರಿಚಯಸ್ಥ ವಕೀಲರೊಬ್ಬರನ್ನು ಭೇಟಿ ಮಾಡಿಸುವ ನೆಪದಲ್ಲಿ ಆರೋಪಿ ಸುಶೀಲ ಪ್ರಜಾಪತಿ ಆಕೆಯನ್ನು ಫ್ಲಾಟ್‌ ಒಂದಕ್ಕೆ ಕರೆದೊಯ್ದಿದ್ದ ಎನ್ನಲಾಗಿದೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಈತನ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂಬತ್ತು ತಿಂಗಳುಗಳಿಂದ ಜೈಲಿನಲ್ಲಿದ್ದ ಈತನಿಗೆ ಮೇ 17 ರಂದು ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ತನಿಖೆ ಆರಂಭಿಸಿದ ಪೊಲೀಸ್
ಅತ್ಯಾಚಾರ ಆರೋಪಿಗೆ ಹೂವಿನ ಮಳೆಗರೆದು, ವಾಹನಗಳ ದೊಡ್ಡ ಕಾನ್ವಾಯ್ ಮೂಲಕ ಮೆರವಣಿಗೆ ನಡೆಸಿ ಸಂಭ್ರಮಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು, ಈ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement