ಇನ್‌ಸ್ಟಾಗ್ರಾಂನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಹವಾ : 66 ಲಕ್ಷ ದಾಟಿದ ಇದರ ವೆಬ್‌ಸೈಟಿನ ಫಾಲೋವರ್ಸ್ ಸಂಖ್ಯೆ !

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ರಾಜಕೀಯ ಪ್ರಚಾರದ ವೇದಿಕೆಯಾಗಿ ಉಳಿದಿಲ್ಲ, ಬದಲಿಗೆ ತೀವ್ರ ವಿಡಂಬನೆ ಮತ್ತು ವ್ಯಂಗ್ಯದ ಕೇಂದ್ರಗಳಾಗಿಯೂ ಬದಲಾಗುತ್ತಿವೆ. ಇದಕ್ಕೆ ಹೊಸ ಉದಾಹರಣೆಯೆಂಬಂತೆ, ಕೇವಲ ಕೆಲವೇ ದಿನಗಳ ಹಿಂದೆ ಆರಂಭವಾದ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janta Party) ಎಂಬ ವ್ಯಂಗ್ಯಭರಿತ ವೆಬ್‌ಸೈಟ್ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆರಂಭವಾದ ಕೆಲವೇ ದಿನಗಳಲ್ಲಿ ಇದು ಬರೋಬ್ಬರಿ 66 ಲಕ್ಷಕ್ಕೂ (6.6 ಮಿಲಿಯನ್) ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದುವ ಮೂಲಕ ದೇಶದ ಪ್ರಮುಖ ರಾಜಕೀಯ ಪಕ್ಷಗಳಿಗೇ ಆಘಾತ ನೀಡುವಂತೆ ಬೆಳೆದು ನಿಂತಿದೆ.
ಈ ವಿಶಿಷ್ಟ ವೆಬ್‌ಸೈಟ್‌ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದುವರೆಗೆ ಚಿತ್ರಗಳು ಹಾಗೂ ರೀಲ್ಸ್‌ಗಳು ಸೇರಿದಂತೆ ಸುಮಾರು 50 ಪೋಸ್ಟ್‌ಗಳನ್ನು ಮಾತ್ರ ಹಂಚಿಕೊಳ್ಳಲಾಗಿದ್ದು, ಯುವ ಜನತೆಯನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸುತ್ತಿದೆ. ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳ ಪ್ರೊಫೈಲ್‌ನಲ್ಲಿ ಈ ತಾಣವು ತನ್ನನ್ನು “ಯುವಜನತೆಯ, ಯುವಜನತೆಗಾಗಿ, ಯುವಜನತೆಯಿಂದ ರೂಪಿತವಾದ ರಾಜಕೀಯ ರಂಗ” ಎಂದು ಬಣ್ಣಿಸಿಕೊಂಡಿದೆ. ಆದರೆ, ಈ ವೆಬ್‌ಸೈಟ್‌ನ ಅಡಿಟಿಪ್ಪಣಿಯಲ್ಲಿ ಇದು ಕೇವಲ ಒಂದು ರಾಜಕೀಯದ ‘ವ್ಯಂಗ್ಯಭರಿತ ಕಲ್ಪನೆ’ (Satire) ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಅಭಿಜೀತ ದಿಪ್ಕೆ ಎಂಬ ವ್ಯಕ್ತಿ ಈ ವೆಬ್‌ಸೈಟ್ ಅನ್ನು ಸೃಷ್ಟಿಸಿದ್ದು, ತಮ್ಮನ್ನು ತಾವು ಈ ಕಾಲ್ಪನಿಕ ‘ಕಾಕ್ರೋಚ್ ಜನತಾ ಪಾರ್ಟಿ’ಯ “ಸಂಸ್ಥಾಪಕ ಅಧ್ಯಕ್ಷ” ಎಂದು ಘೋಷಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ತಮಾಷೆಯ ಪಕ್ಷವನ್ನು “ಸೇರಲು” ಜನರು ಭರ್ತಿ ಮಾಡಬಹುದಾದ ಫಾರ್ಮ್ ಒಂದನ್ನು ಸಹ ವೆಬ್‌ಸೈಟ್‌ನಲ್ಲಿ ನೀಡಲಾಗಿದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ವಿಶೇಷವೆಂದರೆ, ರಾಜಕೀಯ ವಿಡಂಬನೆಯನ್ನೇ ಮುಖ್ಯವಾಗಿಸಿಕೊಂಡು ರಚಿತವಾದ ಈ ಪೇಜ್, ಭಾರತದ ಪ್ರಮುಖ ಮತ್ತು ಹಳೆಯ ರಾಜಕೀಯ ಪಕ್ಷಗಳ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಗೆ ತೀವ್ರ ಪೈಪೋಟಿ ನೀಡುತ್ತಿದೆ. ಪ್ರಸ್ತುತ ಇನ್‌ಸ್ಟಾಗ್ರಾಮ್‌ನಲ್ಲಿ ಕಾಂಗ್ರೆಸ್ ಪಕ್ಷವು 13.2 ಮಿಲಿಯನ್ ಹಾಗೂ ಭಾರತೀಯ ಜನತಾ ಪಕ್ಷವು (ಬಿಜೆಪಿ) 8.7 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದುವ ಮೂಲಕ ಮೊದಲ ಎರಡು ಸ್ಥಾನಗಳಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಈ ಕಾಲ್ಪನಿಕ ಕಾಕ್ರೋಚ್ ಜನತಾ ಪಾರ್ಟಿ 6.6 ಮಿಲಿಯನ್ ಫಾಲೋವರ್ಸ್‌ನೊಂದಿಗೆ ನೆಲೆಯೂರಿದೆ.
2012ರಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಪ್ರಮುಖ ರಾಜಕೀಯ ಪಕ್ಷವಾದ ಆಮ್ ಆದ್ಮಿ ಪಾರ್ಟಿ (AAP) ಕೇವಲ 1.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಇದೀಗ ಕೇವಲ ಕೆಲವೇ ದಿನಗಳ ಹಿಂದೆ ಬಂದ ಈಕಾಕ್ರೋಚ್ ಜನತಾ ಪಾರ್ಟಿಯ ಪೇಜ್ ಅದಕ್ಕಿಂತ ಮೂರು ಪಟ್ಟು ಹೆಚ್ಚು ಫಾಲೋವರ್ಸ್ ಗಳಿಸಿ ಮುನ್ನಗ್ಗುತ್ತಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement