ನವದೆಹಲಿ: ಮೆಟಾ (Meta) ಕಂಪನಿಯಲ್ಲಿ ಇತ್ತೀಚೆಗೆ ನಡೆದ ಉದ್ಯೋಗ ಕಡಿತದ (Layoff) ಅಲೆಯು H-1B ವೀಸಾ ಹೊಂದಿರುವ ಭಾರತೀಯ ತಂತ್ರಜ್ಞರಿಗೆ ಭಾರಿ ಹೊಡೆತ ನೀಡಿದೆ. ವರ್ಷಗಳಿಂದ ಭಾರತೀಯ ಎಂಜಿನಿಯರ್‌ಗಳು ಮತ್ತು ಸಾಫ್ಟ್‌ವೇರ್ ಡೆವಲಪರ್‌ಗಳು ಅಮೆರಿಕದ ಅತಿ ದೊಡ್ಡ ತಂತ್ರಜ್ಞಾನ ಕಂಪನಿಗಳನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೋಡಿಂಗ್ ಬರೆಯುವುದು, ತಂಡಗಳನ್ನು ಮುನ್ನಡೆಸುವುದು ಸೇರಿದಂತೆ ಾನೇಕ ನೈಪುಣ್ಯ ಕೆಲಸವನ್ನು ನಿರ್ವಹಿಸಿದ್ದಾರೆ. ಅಲ್ಲಿಯೇ ಮನೆ ಖರೀದಿಸಿ, ಕುಟುಂಬದೊಂದಿಗೆ ನೆಲೆಸಿ ಸುಭದ್ರ ಜೀವನದ ಕನಸು ಕಂಡಿದ್ದರು. ಆದರೆ, ಕಂಪನಿಯಿಂದ ಬಂದ ಕೇವಲ ಒಂದು ಇಮೇಲ್ ಈಗ ಎಲ್ಲವನ್ನೂ ಬದಲಾಯಿಸಿದೆ.
ಅಮೆರಿಕ ತಂತ್ರಜ್ಞಾನ ವಲಯದಲ್ಲಿ ಕಂಡುಬರುತ್ತಿರುವ ಈ ಇತ್ತೀಚಿನ ಉದ್ಯೋಗ ವಜಾಗೊಳಿಸುವಿಕೆಯ ಅಲೆಯು ಕೇವಲ ಉದ್ಯೋಗಗಳನ್ನು ಕಡಿತಗೊಳಿಸುತ್ತಿಲ್ಲ, ಬದಲಿಗೆ ಅಮೆರಿಕದಲ್ಲಿರುವ ಭಾರತೀಯ ವೃತ್ತಿಪರರಲ್ಲಿ ಹಳೆಯ ಭಯವೊಂದನ್ನು ಮತ್ತೆ ಜಾಗೃತಗೊಳಿಸಿದೆ. ಉದ್ಯೋಗ ನಷ್ಟವಾದರೆ ದೇಶದಲ್ಲಿ ಉಳಿಯುವ ಹಕ್ಕನ್ನೂ ಕಳೆದುಕೊಳ್ಳಬೇಕಾಗಬಹುದು ಎಂಬ ಆತಂಕ ಅವರನ್ನು ಕಾಡುತ್ತಿದೆ.
ಅಮೆರಿಕದ ಸಿಲಿಕಾನ್ ವ್ಯಾಲಿಯ ಕಂಪನಿಗಳು ಮತ್ತೊಮ್ಮೆ ವೆಚ್ಚ ಕಡಿತದ ಹಾದಿ ಹಿಡಿದಿವೆ. ಕೃತಕ ಬುದ್ಧಿಮತ್ತೆ (AI) ಕಡೆಗೆ ಹೆಚ್ಚಿನ ಗಮನ ಹರಿಸುತ್ತಿರುವ ಮೆಟಾ ಸಂಸ್ಥೆಯು ಸುಮಾರು 8,000 ಉದ್ಯೋಗಗಳನ್ನು ಕಡಿತಗೊಳಿಸಿದೆ. ಅಮೆಜಾನ್ ಹಲವು ಸುತ್ತುಗಳ ನಂತರವೂ ತನ್ನ ತಂಡಗಳನ್ನು ಮತ್ತಷ್ಟು ಕಡಿತಗೊಳಿಸುತ್ತಲೇ ಸಾಗಿದೆ. ಎಐ ಮತ್ತು ಆಟೊಮೇಷನ್ ತಂತ್ರಜ್ಞಾನಕ್ಕೆ ತಕ್ಕಂತೆ ಸಂಸ್ಥೆಯನ್ನು ಮರುರೂಪಿಸುತ್ತಿರುವ ಲಿಂಕ್ಡ್‌ಇನ್ (LinkedIn) ಕೂಡ ಇತ್ತೀಚಿನ ತಿಂಗಳುಗಳಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿದೆ.
ಭಾರತೀಯ ಉದ್ಯೋಗಿಗಳಿಗೆ ಈ ಲೇಆಫ್‌ಗಳು ಕೇವಲ ಅಂಕಿ-ಅಂಶಗಳಲ್ಲ. ಅವರ ವೈಯಕ್ತಿಕ ಬದುಕು ಇದರೊಂದಿಗೆ ಬೆಸೆದುಕೊಂಡಿದೆ. ಅಮೆರಿಕದಲ್ಲಿ ಉದ್ಯೋಗ ನಷ್ಟವಾಗುವುದೆಂದರೆ ಅದು ದೇಶ ತೊರೆಯಲು ಆರಂಭವಾಗುವ ಕೌಂಟ್‌ಡೌನ್ ಆಗಿದೆ.
ಭಾರತೀಯ ಉದ್ಯೋಗಿಗಳಿಗೆ ಶುರುವಾದ ಕೌಂಟ್‌ಡೌನ್
ಅಮೆರಿಕದಲ್ಲಿರುವ ಬಹುತೇಕ ಭಾರತೀಯ ಟೆಕ್ ವೃತ್ತಿಪರರು H-1B ವೀಸಾಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ವೀಸಾಗಳು ನೇರವಾಗಿ ಅವರ ಉದ್ಯೋಗದಾತ ಕಂಪನಿಗಳಿಗೆ ಲಿಂಕ್ ಆಗಿರುತ್ತವೆ. ಉದ್ಯೋಗ ನಷ್ಟವಾದ ತಕ್ಷಣ ಅವರ ಸಮಯದ ಮಿತಿ ಆರಂಭವಾಗುತ್ತದೆ. ಅಮೆರಿಕ ವಲಸೆ ನಿಯಮಗಳ ಪ್ರಕಾರ, ವೀಸಾ ಪ್ರಾಯೋಜಕತ್ವ (Sponsor) ನೀಡಲು ಸಿದ್ಧರಿರುವ ಮತ್ತೊಂದು ಕಂಪನಿಯನ್ನು ಹುಡುಕಲು ಅವರಿಗೆ ಕೇವಲ 60 ದಿನಗಳ ಕಾಲಾವಕಾಶ ಸಿಗುತ್ತದೆ. ಒಂದು ವೇಳೆ ಇದರಲ್ಲಿ ವಿಫಲರಾದರೆ ಅವರು ದೇಶ ತೊರೆಯಬೇಕಾಗುತ್ತದೆ.
ಈ ಒತ್ತಡವು ಪರಿಸ್ಥಿತಿಯನ್ನೇ ಬದಲಾಯಿಸುತ್ತದೆ. ಉದ್ಯೋಗ ನಷ್ಟವು ಕೇವಲ ವೃತ್ತಿಪರ ಹಿನ್ನಡೆಯಾಗಿ ಉಳಿಯದೆ, ವಲಸೆ ದಾಖಲೆಗಳ ಪ್ರಕ್ರಿಯೆ, ಗೃಹ ಸಾಲದ ಕಂತುಗಳು (ಮಾರ್ಗೇಜ್), ಮಕ್ಕಳ ಶಾಲಾ ಪ್ರವೇಶಾತಿ, ಆರೋಗ್ಯ ವಿಮೆ ಮತ್ತು ಕೌಟುಂಬಿಕ ನಿರ್ಧಾರಗಳ ನಡುವೆ ಸಮಯದ ವಿರುದ್ಧ ನಡೆಸುವ ಸ್ಪರ್ಧೆಯಾಗಿ ಬದಲಾಗುತ್ತಿದೆ.
ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಅನೇಕ ಭಾರತೀಯರು ಗ್ರೀನ್ ಕಾರ್ಡ್‌ಗಾಗಿ ಭಾರಿ ಬ್ಯಾಕ್‌ಲಾಗ್‌ನಲ್ಲಿ ಸಿಲುಕಿ ವರ್ಷಗಳಿಂದ ಕಾಯುತ್ತಿದ್ದಾರೆ. ಕೆಲವರ ಮಕ್ಕಳು ಅಮೆರಿಕದಲ್ಲೇ ಜನಿಸಿದರೆ, ಇನ್ನು ಕೆಲವರು ದೀರ್ಘಕಾಲ ಅಲ್ಲೇ ಇರಬಹುದೆಂಬ ನಂಬಿಕೆಯಿಂದ ಮನೆಗಳನ್ನು ಖರೀದಿಸಿದ್ದಾರೆ. ಉದ್ಯೋಗ ನಷ್ಟವು ಅವರ ಎಲ್ಲಾ ಯೋಜನೆಗಳನ್ನು ಒಂದೇ ರಾತ್ರಿಯಲ್ಲಿ ಅನಿಶ್ಚಿತತೆಗೆ ತಳ್ಳಿದೆ.
ಮಾಧ್ಯಮ ವರದಿಗಳ ಪ್ರಕಾರ, ಉದ್ಯೋಗ ಕಳೆದುಕೊಂಡ ಅನೇಕ ಭಾರತೀಯ ಉದ್ಯೋಗಿಗಳು ಅಮೆರಿಕದಲ್ಲಿ ಇನ್ನು ಕೆಲವು ದಿನಗಳ ಕಾಲ ಉಳಿಯಲು ತಾತ್ಕಾಲಿಕ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇದರಲ್ಲಿ ಪ್ರಮುಖವಾದುದು B-2 ವಿಸಿಟರ್ ವೀಸಾಕ್ಕೆ ಬದಲಾಗುವುದು. ಇದು ಹೊಸ ಉದ್ಯೋಗದಾತರನ್ನು ಹುಡುಕುವವರೆಗೆ ದೇಶದಲ್ಲಿ ಕೆಲವು ಹೆಚ್ಚುವರಿ ತಿಂಗಳುಗಳ ಕಾಲ ಉಳಿಯಲು ಅವಕಾಶ ನೀಡುತ್ತದೆ.
ಏನಿದು 60 ದಿನಗಳ H-1B ನಿಯಮ?
ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ (USCIS) ನಿಯಮಗಳ ಪ್ರಕಾರ, ಉದ್ಯೋಗ ಕಳೆದುಕೊಂಡ H-1B ಕಾರ್ಮಿಕರಿಗೆ ತಮ್ಮ ಮುಂದಿನ ಹಾದಿಯನ್ನು ನಿರ್ಧರಿಸಲು ಸಾಮಾನ್ಯವಾಗಿ 60 ದಿನಗಳ ಗ್ರೇಸ್ ಪೀರಿಯಡ್ (ಅಥವಾ ಅವರ I-94 ಸ್ಟೇಟಸ್ ಮುಕ್ತಾಯಗೊಳ್ಳುವವರೆಗೆ, ಯಾವುದು ಮೊದಲೋ ಅದು) ಸಿಗುತ್ತದೆ. ಈ ಅವಧಿಯಲ್ಲಿ ಅವರು ತಮಗೆ ವೀಸಾ ಪ್ರಾಯೋಜಕತ್ವ ನೀಡುವ ಹೊಸ ಕಂಪನಿಯನ್ನು ಹುಡುಕಬಹುದು, ಬೇರೆ ವೀಸಾ ಕೆಟಗರಿಗೆ ಅರ್ಜಿ ಸಲ್ಲಿಸಬಹುದು ಅಥವಾ ಅಮೆರಿಕ ತೊರೆಯಲು ಸಿದ್ಧರಾಗಬಹುದು.
ಇಲ್ಲಿ ಮುಖ್ಯವಾದ ವಿಷಯವೆಂದರೆ, ಈ 60 ದಿನಗಳ ಅವಧಿಯು ಉದ್ಯೋಗಿಯ ಕೊನೆಯ ಕೆಲಸದ ದಿನದಿಂದ ಪ್ರಾರಂಭವಾಗುತ್ತದೆಯೇ ವಿನಃ ಅಂತಿಮ ಸಂಬಳ ಬ್ಯಾಂಕ್ ಖಾತೆಗೆ ಜಮಾ ಆದ ದಿನದಿಂದಲ್ಲ.
ಪ್ರಸ್ತುತ ತಂತ್ರಜ್ಞಾನ ವಲಯದಲ್ಲೇ ನೇಮಕಾತಿ ಪ್ರಕ್ರಿಯೆ ಮಂದಗತಿಯಲ್ಲಿರುವುದರಿಂದ, ಎರಡು ತಿಂಗಳ ಅವಧಿ ಅತ್ಯಂತ ವೇಗವಾಗಿ ಕಳೆದುಹೋಗುತ್ತದೆ. ಹೊಸ ಪ್ರಾಯೋಜಕರನ್ನು ಹುಡುಕುವುದು ಸುಲಭದ ಮಾತಲ್ಲ. ಉದ್ಯೋಗ ಸಂದರ್ಶನಗಳು ಸಮಯ ತೆಗೆದುಕೊಳ್ಳುತ್ತವೆ, ವೀಸಾ ವರ್ಗಾವಣೆಗೆ ಸಾಕಷ್ಟು ದಾಖಲೆಗಳ ಅಗತ್ಯವಿರುತ್ತದೆ ಮತ್ತು ಆರ್ಥಿಕ ಅನಿಶ್ಚಿತತೆ ಹಾಗೂ ಎಐ ಆಧಾರಿತ ಮರುರಚನೆಯಿಂದಾಗಿ ಕಂಪನಿಗಳು ಹೊಸ ನೇಮಕಾತಿ ಮಾಡಿಕೊಳ್ಳಲು ಹಿಂಜರಿಯುತ್ತಿವೆ.
ಈ ಕಾರಣದಿಂದಾಗಿ, ವಲಸೆ ವಕೀಲರು (immigration lawyers) ಉದ್ಯೋಗ ಕಳೆದುಕೊಂಡವರಿಗೆ Form I-539 ಸಲ್ಲಿಸುವ ಮೂಲಕ ತಾತ್ಕಾಲಿಕವಾಗಿ B-1 ಅಥವಾ B-2 ವಿಸಿಟರ್ ವೀಸಾಕ್ಕೆ ಬದಲಾಗಲು ಸಲಹೆ ನೀಡುತ್ತಿದ್ದರು. ವಿಸಿಟರ್ ಸ್ಟೇಟಸ್‌ನಲ್ಲಿದ್ದೂ ಉದ್ಯೋಗ ಸಂದರ್ಶನಗಳಲ್ಲಿ ಭಾಗವಹಿಸಬಹುದು ಮತ್ತು ಕೆಲಸ ಹುಡುಕಬಹುದು, ಆದರೆ ಸಕ್ರಿಯವಾಗಿ ಕೆಲಸ ಮಾಡುವಂತಿಲ್ಲ ಎಂದು ಈ ಹಿಂದೆ USCIS ಮಾರ್ಗಸೂಚಿಗಳು ತಿಳಿಸಿದ್ದವು.
ಆ ಆಯ್ಕೆ ಈಗಲೂ ಕಾನೂನುಬದ್ಧವಾಗಿ ಲಭ್ಯವಿದೆ. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ಅಮೆರಿಕ ಅಧಿಕಾರಿಗಳು ಈಗ ಇಂತಹ ಅರ್ಜಿಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ವೀಸಾ ಸ್ಟೇಟಸ್ ಬದಲಾವಣೆ ಅರ್ಜಿಗಳಿಗೆ ಹೆಚ್ಚುವರಿ ದಾಖಲೆಗಳನ್ನು ಕೇಳಲಾಗುತ್ತಿದೆ ಮತ್ತು ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತಿದೆ ಎಂದು ವಲಸೆ ವಕೀಲರು ಪಾಯಿಂಟ್ ಮಾಡಿದ್ದಾರೆ. ಬ್ಯಾಕಪ್ ಪ್ಲಾನ್‌ಗಳು ಕೂಡ ತಮಗೆ ರಕ್ಷಣೆ ನೀಡಲಾರವೇ ಎಂಬ ಭಯ ಉದ್ಯೋಗಿಗಳಲ್ಲಿ ಹೆಚ್ಚಾಗುತ್ತಿದ್ದು, ಟೆಕ್ ಉದ್ಯಮದಾದ್ಯಂತ ನಡೆಯುತ್ತಿರುವ ಬೃಹತ್ ತೆಗೆಯುವಿಕೆಯು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.
ಸಿಲಿಕಾನ್ ವ್ಯಾಲಿಯಲ್ಲಿ ವ್ಯಾಪಕ ಉದ್ಯೋಗ ಕಡಿತ
Layoffs.fyi ದತ್ತಾಂಶಗಳ ಪ್ರಕಾರ, ಈ ವರ್ಷವೊಂದರಲ್ಲೇ ಟೆಕ್ ಕಂಪನಿಗಳಾದ್ಯಂತ 1,10,000 ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇವರಲ್ಲಿ ಗಣನೀಯ ಪ್ರಮಾಣದಲ್ಲಿ ವಿದೇಶದ ಉದ್ಯೋಗಿಗಳಿದ್ದು, ಅದರಲ್ಲೂ ಪ್ರಮುಖವಾಗಿ H-1B ವೀಸಾ ಕಾರ್ಯಕ್ರಮದ ಸಿಂಹಪಾಲು ಫಲಾನುಭವಿಗಳಾಗಿರುವ ಭಾರತೀಯರೇ ಆಗಿದ್ದಾರೆ.
ಹಣಕಾಸು ವರ್ಷ 2025 ರ ಅಮೆರಿಕ ಸರ್ಕಾರಿ ಅಂಕಿ-ಅಂಶಗಳು ಅನುಮೋದಿತ H-1B ಅರ್ಜಿಗಳಲ್ಲಿ ಭಾರತೀಯರೇ ಬಹುಪಾಲು ಹೊಂದಿದ್ದಾರೆ ಎಂಬುದನ್ನು ತೋರಿಸಿವೆ. ಈ ಸಿಸ್ಟಮ್ ಮೇಲಿನ ಅತಿಯಾದ ಅವಲಂಬನೆಯೇ ಈಗ ಅವರ ಪಾಲಿಗೆ ದುರ್ಬಲತೆಯಾಗಿ ಪರಿಣಮಿಸಿದೆ. ಈ ಅನಿಶ್ಚಿತತೆಯು ಭಾರತೀಯರು ಅಮೆರಿಕನ್ ಕನಸನ್ನು (American Dream) ನೋಡುವ ದೃಷ್ಟಿಕೋನವನ್ನೇ ಬದಲಾಯಿಸುತ್ತಿದೆ.
ದಶಕಗಳ ಕಾಲ ಅಮೆರಿಕ ಅಂದರೆ ವೃತ್ತಿಜೀವನದ ಬೆಳವಣಿಗೆ, ಹೆಚ್ಚಿನ ಸಂಬಳ ಮತ್ತು ಜಾಗತಿಕ ಮಾನ್ಯತೆಯ ಸಂಕೇತವಾಗಿತ್ತು. ಆದರೆ ಪದೇ ಪದೇ ನಡೆಯುತ್ತಿರುವ ಉದ್ಯೋಗ ವಜಾಗೊಳಿಸುವಿಕೆಯು, ವೀಸಾ ಅವಲಂಬನೆ, ವಲಸೆ ಕುರಿತ ರಾಜಕೀಯ ಹೇಳಿಕೆಗಳು ಮತ್ತು ಎಐ ಆಧಾರಿತ ಮರುರಚನೆಯಿಂದಾಗಿ ಅನೇಕ ವೃತ್ತಿಪರರು ತಮ್ಮ ಭವಿಷ್ಯದ ಬಗ್ಗೆ ಮರುಚಿಂತನೆ ನಡೆಸುವಂತೆ ಮಾಡಿದೆ.
ಇತ್ತೀಚಿನ ಬ್ಲೈಂಡ್ (Blind) ಸಮೀಕ್ಷೆಯ ಪ್ರಕಾರ, ಅಮೆರಿಕದಲ್ಲಿರುವ ಸುಮಾರು ಅರ್ಧದಷ್ಟು ಭಾರತೀಯ ವೃತ್ತಿಪರರು ಉದ್ಯೋಗ ಕಳೆದುಕೊಂಡರೆ ಭಾರತಕ್ಕೆ ಮರಳಲು ಸಿದ್ಧರಿದ್ದಾರೆ. ಇನ್ನು ಕೆಲವರು ಕೆನಡಾ ಮತ್ತು ಯುರೋಪ್ ದೇಶಗಳನ್ನು ಪರ್ಯಾಯವಾಗಿ ನೋಡುತ್ತಿದ್ದಾರೆ.
ಮೆಟಾ ಕಂಪನಿಯಿಂದ ವಜಾಗೊಂಡ ಉದ್ಯೋಗಿಗಳಿಗೆ 16 ವಾರಗಳ ಮೂಲ ವೇತನ (Base Pay) ಮತ್ತು ಪ್ರತಿ ವರ್ಷದ ನಿರಂತರ ಸೇವೆಗೆ ತಲಾ ಎರಡು ವಾರಗಳ ಹೆಚ್ಚುವರಿ ವೇತನವನ್ನು ಒಳಗೊಂಡ ಸೆವೆರೆನ್ಸ್ ಪ್ಯಾಕೇಜ್ ನೀಡಲಾಗುತ್ತಿದೆ ಎಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ. ಇದರೊಂದಿಗೆ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ 18 ತಿಂಗಳ ಆರೋಗ್ಯ ವಿಮೆ ರಕ್ಷಣೆಯನ್ನೂ ನೀಡಲಾಗುತ್ತಿದೆ.
ಆದರೆ, ಅನೇಕರ ಲೆಕ್ಕಾಚಾರ ಕೇವಲ ಆರ್ಥಿಕತೆಗೆ ಸೀಮಿತವಾಗಿಲ್ಲ. ವೀಸಾ ಅನಿಶ್ಚಿತತೆಯ ನಡುವೆ ಬದುಕುವ ಮಾನಸಿಕ ಒತ್ತಡವನ್ನು ನಿರ್ಲಕ್ಷಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಉದ್ಯೋಗಿಗಳು ವೃತ್ತಿಜೀವನದಲ್ಲಿ ವಿರಾಮ ತೆಗೆದುಕೊಳ್ಳಲು, ಸುಲಭವಾಗಿ ಕೆಲಸ ಬದಲಾಯಿಸಲು ಅಥವಾ ದೀರ್ಘಕಾಲ ನಿರುದ್ಯೋಗಿಯಾಗಿರಲು ಸಾಧ್ಯವಿಲ್ಲ. ಹೀಗಾಗಿ ವಜಾಗೊಳಿಸುವಿಕೆಯು ಇಡೀ ಕುಟುಂಬದ ಜೀವನವನ್ನೇ ಅಸ್ತವ್ಯಸ್ತಗೊಳಿಸುತ್ತದೆ.
ಅಮೆರಿಕದ ಸ್ಥಳೀಯ ಉದ್ಯೋಗಿಗಳಿಗೆ ಹೋಲಿಸಿದರೆ, ವಿದೇಶಿ ಉದ್ಯೋಗಿಗಳು ‘ವಲಸೆ ಸ್ಟೇಟಸ್’ ಕಾಯ್ದುಕೊಳ್ಳುವ ಹೆಚ್ಚುವರಿ ಹೊರೆಯನ್ನು ಹೊರಬೇಕಾಗುತ್ತದೆ.
H-1B ವೀಸಾ ಮೇಲೆ ಅವಲಂಬಿತರಾಗದ ಭಾರತೀಯರ ಪರಿಸ್ಥಿತಿ ಭಿನ್ನವಾಗಿದೆ. ಗ್ರೀನ್ ಕಾರ್ಡ್ ಅಥವಾ ಕಾಯಂ ನಿವಾಸಿ (Permanent Residency) ಸ್ಥಾನಮಾನ ಹೊಂದಿರುವವರು ಉದ್ಯೋಗ ಕಳೆದುಕೊಂಡರೂ ದೇಶದಲ್ಲೇ ಉಳಿಯಬಹುದು. ಅವರು ಆರ್ಥಿಕ ಒತ್ತಡ ಮತ್ತು ಉದ್ಯೋಗದ ಅನಿಶ್ಚಿತತೆಯನ್ನು ಎದುರಿಸಬೇಕಾಗಬಹುದಾದರೂ, ಕೆಲವೇ ವಾರಗಳಲ್ಲಿ ದೇಶ ತೊರೆಯಬೇಕಾದ ತಕ್ಷಣದ ಅಪಾಯ ಅವರಿಗಿರುವುದಿಲ್ಲ. ಅದೇ ರೀತಿ ಡಿಪೆಂಡೆಂಟ್ ವೀಸಾ, ವಿದ್ಯಾರ್ಥಿ ವೀಸಾ ಅಥವಾ ಪೌರತ್ವದ ಹಾದಿಯಲ್ಲಿರುವ ಭಾರತೀಯರು ತಮ್ಮ ಸ್ಟೇಟಸ್‌ಗೆ ಅನುಗುಣವಾಗಿ ಸ್ವಲ್ಪ ರಿಲ್ಯಾಕ್ಸ್ (Flexibility) ಹೊಂದಿರುತ್ತಾರೆ. ಆದರೆ H-1B ಕಾರ್ಮಿಕರ ಮೇಲಾಗುವ ಪರಿಣಾಮಗಳು ಅತ್ಯಂತ ತೀಕ್ಷ್ಣ ಮತ್ತು ತಕ್ಷಣದ್ದಾಗಿರುತ್ತವೆ.
ಎಐ (AI) ತಂದಿಟ್ಟ ಸಂಕಷ್ಟ
ಟೆಕ್ ಉದ್ಯಮದಲ್ಲಿ ಎಐ ತಂತ್ರಜ್ಞಾನವು ನೇಮಕಾತಿ ಪ್ರಕ್ರಿಯೆಯನ್ನು ವೇಗವಾಗಿ ಬದಲಾಯಿಸುತ್ತಿರುವ ಸಮಯದಲ್ಲಿಯೇ ಈ ಇತ್ತೀಚಿನ ಉದ್ಯೊಗ ಕಡಿತವು ಸಂಭವಿಸುತ್ತಿವೆ. ಕಂಪನಿಗಳು ತಮ್ಮ ತಂಡಗಳನ್ನು ಮರುರಚಿಸುತ್ತಿವೆ, ಮ್ಯಾನೇಜ್‌ಮೆಂಟ್ ಹಂತಗಳನ್ನು ಸರಳಗೊಳಿಸುತ್ತಿವೆ ಮತ್ತು ಎಐ ಉತ್ಪನ್ನಗಳು ಹಾಗೂ ಆಟೊಮೇಷನ್ ಪರಿಕರಗಳಿಗಾಗಿ ಶತಕೋಟಿ ಡಾಲರ್ ಹೂಡಿಕೆ ಮಾಡುತ್ತಿವೆ.
ಬ್ಲೂಮ್‌ಬರ್ಗ್ ವರದಿ ಪ್ರಕಾರ, ಮೆಟಾ ಕಂಪನಿಯೊಂದೇ ಈ ವರ್ಷ ಎಐ ಸಂಬಂಧಿತ ಹೂಡಿಕೆಗಳಿಗಾಗಿ $100 ಬಿಲಿಯನ್‌ಗಿಂತಲೂ ಹೆಚ್ಚು ಖರ್ಚು ಮಾಡುವ ನಿರೀಕ್ಷೆಯಿದೆ. ಕಂಪನಿಯು ಲೇಆಫ್ ಪ್ರಕ್ರಿಯೆ ಮುಂದುವರಿಸಿರುವ ನಡುವೆಯೇ, ಸಾವಿರಾರು ಉದ್ಯೋಗಿಗಳನ್ನು ಆಂತರಿಕವಾಗಿ ಎಐ-ಕೇಂದ್ರಿತ ಪಾತ್ರಗಳಿಗೆ ಮರುನಿಯೋಜಿಸಿದೆ ಎನ್ನಲಾಗಿದೆ.
ಈ ಬದಲಾವಣೆಯು ಉದ್ಯೋಗಿಗಳಲ್ಲಿ ಹೊಸ ಭಯಕ್ಕೆ ಕಾರಣವಾಗಿದೆ. ಇದು ಕೇವಲ ತಾತ್ಕಾಲಿಕವಲ್ಲ ಎಂಬ ಆತಂಕ ಮೂಡಿದೆ. ಎಐ ತಂತ್ರಜ್ಞಾನದಿಂದಾಗಿ ಕೆಲವು ಟೆಕ್ ವಿಭಾಗಗಳಲ್ಲಿ, ವಿಶೇಷವಾಗಿ ದಿನನಿತ್ಯದ ಎಂಜಿನಿಯರಿಂಗ್ ಮತ್ತು ಸಪೋರ್ಟ್ ರೋಲ್‌ಗಳಿಗೆ ನೇಮಕಾತಿ ಬೇಡಿಕೆ ಕಾಯಂ ಆಗಿ ಕಡಿಮೆಯಾಗಬಹುದು ಎಂದು ಅನೇಕ ವೃತ್ತಿಪರರು ಆತಂಕ ವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿರುವ ಭಾರತೀಯ ಉದ್ಯೋಗಿಗಳಿಗೆ ಇದು ಅತ್ಯಂತ ಕಠಿಣ ವಾಸ್ತವವನ್ನು ಮುಂದಿಟ್ಟಿದೆ. ಅವರ ಮುಂದಿರುವ ಸವಾಲು ಕೇವಲ ಮುಂದಿನ ಉದ್ಯೋಗವನ್ನು ಹುಡುಕುವುದಲ್ಲ, ಬದಲಿಗೆ ಇಡೀ ಜೀವನದ ಅಸ್ತಿತ್ವ ಕುಸಿದುಬೀಳುವ ಮುನ್ನ ಅತ್ಯಂತ ವೇಗವಾಗಿ ಕೆಲಸವನ್ನು ಹುಡುಕುವುದಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ