10 ದಿನಗಳಲ್ಲಿ 3ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಮತ್ತು ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಸಾರ್ವಜನಿಕ ವಲಯದ ತೈಲ ಕಂಪನಿಗಳು ಶನಿವಾರ ದೇಶಾದ್ಯಂತ ಇಂಧನ ದರಗಳನ್ನು ಮತ್ತೊಮ್ಮೆ ಪರಿಷ್ಕರಿಸಿವೆ. ಈ ತಿಂಗಳಲ್ಲೇ ನಡೆದಿರುವ ಮೂರನೇ ಬೆಲೆ ಏರಿಕೆ ಇದಾಗಿದ್ದು, ಲೀಟರ್ ಪೆಟ್ರೋಲ್ ದರದಲ್ಲಿ 87 ಪೈಸೆ ಹಾಗೂ ಡೀಸೆಲ್ ದರದಲ್ಲಿ 91 ಪೈಸೆ ಹೆಚ್ಚಳ ಮಾಡಲಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 98.64 ರೂಪಾಯಿಯಿಂದ 99.51 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 91.58 ರೂಪಾಯಿಯಿಂದ 92.49 ರೂಪಾಯಿಗೆ ತಲುಪಿದೆ.
ಮೇ ತಿಂಗಳಿನಲ್ಲಿ ಇಂಧನ ದರ ಸತತವಾಗಿ ಏರುತ್ತಲೇ ಸಾಗಿದೆ. ಮೇ 15 ರಂದು ತೈಲ ಕಂಪನಿಗಳು ದೇಶದ ಪ್ರಮುಖ ನಗರಗಳಲ್ಲಿ ಲೀಟರ್‌ಗೆ ಬರೋಬ್ಬರಿ 3 ರೂಪಾಯಿ ಹೆಚ್ಚಿಸಿದ್ದವು. ಅದಾದ ಬೆನ್ನಲ್ಲೇ, ಮೇ 19 ರಂದು ಎಲ್ಲಾ ಮೆಟ್ರೋ ನಗರಗಳಲ್ಲಿ ಮತ್ತೆ 90 ಪೈಸೆ ಏರಿಕೆ ಮಾಡಲಾಗಿತ್ತು. ಇಂದಿನ ಮೂರನೇ ಕಂತಿನ ಹೆಚ್ಚಳದೊಂದಿಗೆ, ಕೇವಲ ಎಂಟರಿಂದ ಹತ್ತು ದಿನಗಳ ಅವಧಿಯಲ್ಲಿ ಇಂಧನ ದರಗಳು ಒಟ್ಟಾರೆಯಾಗಿ ಸರಿಸುಮಾರು 5 ರೂಪಾಯಿಗಳಷ್ಟು ದುಬಾರಿಯಾದಂತಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 107.14 ರೂ. ಆಗಿದ್ದು ಡೀಸೆಲ್ ಬೆಲೆ 95.04 ರೂ. ಆಗಿದೆ. ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ 87 ಪೈಸೆ ಏರಿಕೆಯೊಂದಿಗೆ 99.51 ರೂಪಾಯಿ ತಲುಪಿದ್ದರೆ, ಡೀಸೆಲ್ ದರ 91 ಪೈಸೆ ಹೆಚ್ಚಳದೊಂದಿಗೆ 92.49 ರೂಪಾಯಿಗೆ ಬಂದು ನಿಂತಿದೆ. ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ 110.64 ರೂಪಾಯಿ ಹಾಗೂ ಡೀಸೆಲ್ ಬೆಲೆ 97.02 ರೂಪಾಯಿ ತಲುಪಿದೆ. ಮುಂಬೈನಲ್ಲಿ ಇಂದಿನ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 108.49 ರೂಪಾಯಿ ಆಗಿದ್ದರೆ, ಡೀಸೆಲ್ ದರ 95.02 ರೂಪಾಯಿ ಆಗಿದೆ. ಚೆನ್ನೈನಲ್ಲಿ ಗ್ರಾಹಕರು ಒಂದು ಲೀಟರ್ ಪೆಟ್ರೋಲ್‌ಗೆ 105.31 ರೂಪಾಯಿ ಹಾಗೂ ಡೀಸೆಲ್ ಪಡೆಯಲು 96.98 ರೂಪಾಯಿ ಪಾವತಿಸಬೇಕಿದೆ.
ಸಿಎನ್‌ಜಿ (CNG) ದರ ಹೆಚ್ಚಳ
ಪೆಟ್ರೋಲ್ ಮತ್ತು ಡೀಸೆಲ್ ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಸಿಎನ್‌ಜಿ ಮತ್ತು ಪಿಎನ್‌ಜಿ (PNG) ದರಗಳೂ ಏರಿಕೆಯಾಗಿವೆ. ದೆಹಲಿಯಲ್ಲಿ ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ 1 ರೂಪಾಯಿ ಹೆಚ್ಚಿಸಿದೆ. ಈ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಈಗ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 81.09 ರೂಪಾಯಿ ತಲುಪಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಬೆಲೆ ಏರಿಕೆಗೆ ಕಾರಣವೇನು?
ಭಾರತವು ತನ್ನ ಒಟ್ಟು ಕಚ್ಚಾ ತೈಲದ ಅಗತ್ಯತೆಯಲ್ಲಿ ಶೇಕಡಾ 85 ಕ್ಕಿಂತ ಹೆಚ್ಚಿನ ಪಾಲನ್ನು ಆಮದಿನ ಮೇಲೆಯೇ ಅವಲಂಬಿಸಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯ ಏರಿಳಿತಗಳು ಭಾರತದ ಮೇಲೂ ನೇರ ಪರಿಣಾಮ ಬೀರುತ್ತವೆ. ಅದರಲ್ಲೂ ವಿಶೇಷವಾಗಿ ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ (Strait of Hormuz) ಇತ್ತೀಚಿನ ಬಿಕ್ಕಟ್ಟಿನಿಂದಾಗಿ ಸರಬರಾಜಿಗೆ ಅಡಚಣೆಯಾಗಬಹುದು ಎಂಬ ಭೀತಿ ಉಂಟಾಗಿದೆ. ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿನ ಈ ಅನಿಶ್ಚಿತತೆ ಮತ್ತು ಹೆಚ್ಚುತ್ತಿರುವ ಆಮದು ವೆಚ್ಚವನ್ನು ಸರಿದೂಗಿಸಲು ಬೆಲೆ ಪರಿಷ್ಕರಣೆ ಅನಿವಾರ್ಯ ಎಂದು ಸರ್ಕಾರಿ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
‘ಆತಂಕ ಬೇಡ, ಇಂಧನ ದಾಸ್ತಾನು ಸಾಕಷ್ಟಿದೆ’: ಕೇಂದ್ರ ಸಚಿವಾಲಯ ಸ್ಪಷ್ಟನೆ
ದೇಶದಲ್ಲಿ ಇಂಧನ ಕೊರತೆಯಿದೆ ಎಂಬ ವದಂತಿಗಳು ಹರಡುತ್ತಿರುವ ಬೆನ್ನಲ್ಲೇ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶದ ಜನತೆಗೆ ಭರವಸೆ ನೀಡಿದೆ. “ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜು ಸ್ಥಿರವಾಗಿದ್ದು, ಅಗತ್ಯ ಪ್ರಮಾಣದ ದಾಸ್ತಾನು ಲಭ್ಯವಿದೆ. ಸಾರ್ವಜನಿಕರು ಆತಂಕಗೊಂಡು ಮುಗಿಬೀಳುವ ಅಗತ್ಯವಿಲ್ಲ (Panic Buying). ನಿಮ್ಮ ವಾಸ್ತವಿಕ ಅಗತ್ಯಕ್ಕೆ ತಕ್ಕಂತೆ ಮಾತ್ರ ಇಂಧನ ಖರೀದಿಸಿ. ಕೆಲವು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಕಂಡುಬಂದಿರುವ ತಾತ್ಕಾಲಿಕ ಕೊರತೆಯನ್ನು ತೈಲ ಕಂಪನಿಗಳು ನಿರಂತರ ಮೇಲ್ವಿಚಾರಣೆ ಮತ್ತು ಸಂಘಟಿತ ವಿತರಣೆಯ ಮೂಲಕ ಪರಿಹರಿಸುತ್ತಿವೆ” ಎಂದು ಸಚಿವಾಲಯ ಟ್ವೀಟ್ ಮಾಡಿದೆ. ಅಲ್ಲದೆ, ಪ್ರಸ್ತುತ ಹೆಚ್ಚಿನ ಬೇಡಿಕೆ ಇರುವ ಅವಧಿಯಲ್ಲಿ ಜವಾಬ್ದಾರಿಯುತ ಬಳಕೆ ಮತ್ತು ಸಾರ್ವಜನಿಕ ಸಹಕಾರ ಅತ್ಯಗತ್ಯ ಎಂದೂ ಸಚಿವಾಲಯ ಕೋರಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement