ಬಲೂಚಿಸ್ತಾನದಲ್ಲಿ ಭೀಕರ ಸ್ಫೋಟ : ಪಾಕ್ ಸೈನಿಕರಿದ್ದ ರೈಲಿಗೆ ಸ್ಫೋಟಕ ತುಂಬಿದ ಕಾರು ಡಿಕ್ಕಿ ; 24 ಮಂದಿ ಸಾವು

ಕ್ವೆಟ್ಟಾ: ಪಾಕಿಸ್ತಾನದ ಗಲಭೆ ಪೀಡಿತ ನೈಋತ್ಯ ಪ್ರಾಂತ್ಯವಾದ ಬಲೂಚಿಸ್ತಾನದಲ್ಲಿ ಭಾನುವಾರ (ಮೇ 24) ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ 24 ಜನರು ಸಾವಿಗೀಡಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ನಡೆದ ಈ ಭೀಕರ ದಾಳಿಯಲ್ಲಿ ಮೃತರ ಪೈಕಿ ಸೇನಾ ಸಿಬ್ಬಂದಿಯೂ ಸೇರಿದ್ದಾರೆ. ಘಟನೆಯಲ್ಲಿ 50 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ಎಎಫ್‌ಪಿ (AFP) ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಸ್ಫೋಟದ ತೀವ್ರತೆಗೆ ರೈಲಿನ ಬೋಗಿಯೊಂದು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ಪಕ್ಕಕ್ಕೆ ಉರುಳಿ ಬಿದ್ದಿದೆ. ರೈಲ್ವೆ ಹಳಿಗಳಿಂದ ಸುಮಾರು 25 ರಿಂದ 30 ಮೀಟರ್ ದೂರದಲ್ಲಿ ನಿಲ್ಲಿಸಲಾಗಿದ್ದ ಅನೇಕ ಕಾರುಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಅವುಗಳ ಪಕ್ಕದಲ್ಲಿ, ಬಹುಮಹಡಿ ಕಟ್ಟಡವೂ ಸಹ ಹಾನಿಗೊಳಗಾಯಿತು, ಅದರ ಕಿಟಕಿಗಳು ಹಾರಿಹೋಗಿವೆ ಮತ್ತು ಗೋಡೆಗಳು ಕುಸಿದಿವೆ. ಇದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಿದ್ದು, ಜನರು ಧ್ವಂಸಗೊಂಡ ಅವಶೇಷಗಳ ಮೇಲೆ ಹತ್ತಿ ಬದುಕುಳಿದವರಿಗಾಗಿ ಹುಡುಕಾಡುತ್ತಿರುವುದು ಕಂಡುಬಂದಿದೆ. ಮತ್ತೊಂದೆಡೆ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತ್ರಸ್ತರನ್ನು ಸ್ಟ್ರೆಚರ್‌ಗಳ ಮೂಲಕ ರೈಲಿನ ಬೋಗಿಯಿಂದ ಹೊರಗೆ ಸಾಗಿಸುತ್ತಿರುವುದು ಮತ್ತು ಸಶಸ್ತ್ರ ಭದ್ರತಾ ಪಡೆಗಳು ಸ್ಥಳದಲ್ಲಿ ಕಾವಲು ಕಾಯುತ್ತಿರುವುದು ಕಂಡುಬಂದಿದೆ.
ಈದ್ ಹಬ್ಬದ ಸಂಭ್ರಮದಲ್ಲಿದ್ದ ಸೈನಿಕರು
ಸೇನಾ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರನ್ನು ಹೊತ್ತೊಯ್ಯುತ್ತಿದ್ದ ಈ ರೈಲು ಕ್ವೆಟ್ಟಾದಿಂದ ಪಾಕಿಸ್ತಾನದ ವಾಯುವ್ಯ ಭಾಗದಲ್ಲಿರುವ ಪೇಶಾವರಕ್ಕೆ ಹೊರಟಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. “ರೈಲು ಕ್ವೆಟ್ಟಾದ ಚಮನ್ ಪಟ್ಟಾಕ್ ಬಳಿ ಸಿಗ್ನಲ್ ದಾಟುತ್ತಿದ್ದಾಗ, ಸ್ಫೋಟಕಗಳನ್ನು ತುಂಬಿದ್ದ ಕಾರೊಂದು ರೈಲಿನ ಬೋಗಿಗೆ ಬಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಈ ಭೀಕರ ಸ್ಫೋಟ ಸಂಭವಿಸಿದೆ” ಎಂದು ಅಧಿಕಾರಿ ವಿವರಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಹತ್ತಿರದ ಕಟ್ಟಡಗಳ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.  ಮಂಗಳವಾರದಿಂದ ಪ್ರಾರಂಭವಾಗಲಿರುವ ‘ಈದ್’ ಹಬ್ಬವನ್ನು ಆಚರಿಸಲು ಈ ಸೇನಾ ಸಿಬ್ಬಂದಿ ತಮ್ಮ ಮನೆಗಳಿಗೆ ತೆರಳುತ್ತಿದ್ದರು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಇದು ಆತ್ಮಾಹುತಿ ಸ್ಫೋಟ ಎಂದು ಸೂಚಿಸುತ್ತದೆ. “ಇಂದು ಬೆಳಿಗ್ಗೆ, ಬಲೂಚ್ ಲಿಬರೇಶನ್ ಆರ್ಮಿಯ ಫಿದಾಯಿನ್‌ ಘಟಕವಾದ ಮಜೀದ್ ಬ್ರಿಗೇಡ್, ಕ್ವೆಟ್ಟಾ ಕ್ಯಾಂಟ್‌ನಿಂದ ಆಕ್ರಮಿತ ಪಡೆಗಳ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ಹೆಚ್ಚು ಸಂಘಟಿತ ಫಿದಾಯಿನ್‌ ದಾಳಿ ನಡೆಸಿತು. ಬಲೂಚ್ ಲಿಬರೇಶನ್ ಆರ್ಮಿ ಈ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತದೆ” ಎಂದು ಬಿಎಲ್‌ಎ ಹೇಳಿಕೆಯಲ್ಲಿ ತಿಳಿಸಿದೆ.
“ದಾಳಿಯ ಪರಿಣಾಮವಾಗಿ ಶತ್ರುಗಳ ಮೇಲೆ ಉಂಟಾದ ಹಾನಿಗಳು ಮತ್ತು ಮಾನವ ಸಾವುನೋವುಗಳ ಜೊತೆಗೆ ಕಾರ್ಯಾಚರಣೆಯ ಬಗ್ಗೆ ವಿವರವಾದ ಮಾಹಿತಿಯನ್ನು ಶೀಘ್ರದಲ್ಲೇ ಮಾಧ್ಯಮಗಳಿಗೆ ಅಧಿಕೃತ ಹೇಳಿಕೆಯಲ್ಲಿ ಬಿಡುಗಡೆ ಮಾಡಲಾಗುವುದು” ಎಂದು ಅದು ಹೇಳಿದೆ.
ಬಲೂಚಿಸ್ತಾನವು ಭೌಗೋಳಿಕವಾಗಿ ಪಾಕಿಸ್ತಾನದ ಅತಿ ದೊಡ್ಡ ಪ್ರಾಂತ್ಯವಾಗಿದ್ದರೂ, ಆರ್ಥಿಕವಾಗಿ ಅತ್ಯಂತ ಬಡ ಪ್ರದೇಶವಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿ ಸೇರಿದಂತೆ ಪ್ರತಿಯೊಂದು ಸೂಚ್ಯಂಕದಲ್ಲೂ ಇದು ದೇಶದ ಇತರ ಭಾಗಗಳಿಗಿಂತ ತೀರಾ ಹಿಂದುಳಿದಿದೆ.
ಬಲೂಚಿಸ್ತಾನದಲ್ಲಿರುವ ನೈಸರ್ಗಿಕ ಅನಿಲ ಮತ್ತು ಹೇರಳವಾದ ಖನಿಜ ಸಂಪನ್ಮೂಲಗಳನ್ನು ಪಾಕಿಸ್ತಾನ ಸರ್ಕಾರವು ಸ್ಥಳೀಯ ಜನರಿಗೆ ಯಾವುದೇ ಪ್ರಯೋಜನ ನೀಡದೆ ಲೂಟಿ ಮಾಡುತ್ತಿದೆ ಎಂದು ಬಲೂಚ್ ಪ್ರತ್ಯೇಕತಾವಾದಿಗಳು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದು, ಈ ಭಾಗದಲ್ಲಿ ನಿರಂತರ ಹಿಂಸಾಚಾರಕ್ಕೆ ಇದು ಪ್ರಮುಖ ಕಾರಣವಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement