ದೆಹಲಿ, ಮುಂಬೈ ಸೇರಿದಂತೆ ಹಲವೆಡೆ ದಾಳಿಗೆ ಸಂಚು ; ಐಎಸ್‌ಐ-ದಾವೂದ್ ನಂಟಿದ್ದ 9 ಶಂಕಿತ ಉಗ್ರರ ಬಂಧನ

ನವದೆಹಲಿ : ದೆಹಲಿ ಪೊಲೀಸ್ ವಿಶೇಷ ಘಟಕದ (Special Cell) ಭರ್ಜರಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI) ಮತ್ತು ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದ ಒಂಬತ್ತು ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ದೆಹಲಿ, ಮುಂಬೈ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭೀಕರ ದಾಳಿ ನಡೆಸಲು ಸಂಚು ರೂಪಿಸಿದ್ದ ಈ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.
ಬಂಧಿತ ಆರೋಪಿಗಳು ದೆಹಲಿ, ಮುಂಬೈ ಮತ್ತು ಪಂಜಾಬ್ ನಿವಾಸಿಗಳಾಗಿದ್ದು, ಅವರಲ್ಲಿ ಕೆಲವರು ವಿದೇಶಿ ಪ್ರಜೆಗಳೂ ಸೇರಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಬಂಧಿತರಿಂದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸಜೀವ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ, ದೇಶದ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಸ್ಥಾವರಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಈ ಉಗ್ರರಿಗೆ ಸೂಚನೆ ನೀಡಲಾಗಿತ್ತು.
ದೇಶದ ಪರಮಾಣು ಕೇಂದ್ರಗಳು (Nuclear facilities), ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ವಿದ್ಯುತ್ ಉತ್ಪಾದನಾ ಘಟಕಗಳು (Power plants) ಇವೇ ಮೊದಲಾದವುಗಳನ್ನು ಗುರುಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಹೇಳಲಾಗಿದೆ.
ಈ ಶಂಕಿತರ  ಮೇಲೆ ಭದ್ರತಾ ಸಂಸ್ಥೆಗಳು ಕಳೆದ ಕೆಲವು ಸಮಯದಿಂದ ತೀವ್ರ ನಿಗಾ ಇರಿಸಿದ್ದವು. ಸದ್ಯ ಪೊಲೀಸರು ಇವರ ಗಡಿಯಾಚೆಗಿನ ಸಂಪರ್ಕಗಳು, ಹಣಕಾಸಿನ ಮೂಲಗಳು (Funding channels) ಮತ್ತು ವಿದೇಶದಲ್ಲಿ ಕುಳಿತು ಇವರನ್ನು ನಿಯಂತ್ರಿಸುತ್ತಿದ್ದ ಹ್ಯಾಂಡ್ಲರ್‌ಗಳ ಪಾತ್ರದ ಕುರಿತು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಹೈ ಅಲರ್ಟ್‌ನಲ್ಲಿ ರಾಜಧಾನಿ ದೆಹಲಿ
ಸಾಧ್ಯವಿರುವ ಭಯೋತ್ಪಾದನಾ ದಾಳಿಯ ಬಗ್ಗೆ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದ ಬೆನ್ನಲ್ಲೇ ದೆಹಲಿಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಕೇಂದ್ರ ದೆಹಲಿಯ ಪ್ರಮುಖ ಕಚೇರಿಗಳು ಮತ್ತು ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ದಾಳಿ, ವಾಹನ ಆಧಾರಿತ ಐಇಡಿ (IED) ಸ್ಫೋಟಗಳು, ಗುಂಡಿನ ದಾಳಿ ಹಾಗೂ ಸಂಘಟಿತ ಸರಣಿ ದಾಳಿಗಳನ್ನು ನಡೆಸಲು ಉಗ್ರರು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಈ ತಿಂಗಳ ಆರಂಭದಲ್ಲಿ ಭದ್ರತಾ ಸಂಸ್ಥೆಗಳಿಗೆ ಸಿಕ್ಕಿತ್ತು. ಹೀಗಾಗಿ, ಎಲ್ಲಾ ಜಿಲ್ಲಾ ಪೊಲೀಸ್ ಘಟಕಗಳಿಗೆ ಜಾಗರೂಕರಾಗಿರಲು ಮತ್ತು ಗುಪ್ತಚರ ಸಂಸ್ಥೆಗಳು ಹಾಗೂ ಕೇಂದ್ರ ಅರೆಸೇನಾ ಪಡೆಗಳೊಂದಿಗೆ ನಿಕಟ ಸಮನ್ವಯ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿದೆ.
ಕಳೆದ ವರ್ಷ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಬಳಿ ನಡೆದ ತೀವ್ರ ತರಹದ ವಾಹನ ಆಧಾರಿತ ಐಇಡಿ (IED) ಸ್ಫೋಟದಲ್ಲಿ 15 ಜನರು ಮೃತಪಟ್ಟಿದ್ದರು ಮತ್ತು ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ದೆಹಲಿ ಸಮೀಪದ ಫರೀದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಕಾಶ್ಮೀರಿ ಮೂಲದ ವೈದ್ಯ ಉಮರ್-ಉನ್-ನಬಿ ಎಂಬಾತ ಹುಂಡೈ ಐ20 (Hyundai i20) ಕಾರಿನ ಮೂಲಕ ಈ ದಾಳಿ ನಡೆಸಿದ್ದ.
ಈ ಪ್ರಕರಣದ ಇತರ ಪ್ರಮುಖ ಆರೋಪಿಗಳನ್ನು ಕಾಶ್ಮೀರದ ನಿವಾಸಿಗಳಾದ ಮುಜಮ್ಮಿಲ್ ಶಕೀಲ್ ಗಣೈ, ಅದೀಲ್ ಅಹಮದ್ ರಾಥರ್, ಆತನ ಸಹೋದರ ಮುಜಾಫರ್ ಅಹಮದ್ ರಾಥರ್, ಮುಫ್ತಿ ಇರ್ಫಾನ್ ಅಹ್ಮದ್ ವಾಗೇ ಮತ್ತು ಉತ್ತರ ಪ್ರದೇಶದ ಶಾಹೀನ್ ಸಯೀದ್ ಎಂದು ಗುರುತಿಸಲಾಗಿತ್ತು. ಇವರಲ್ಲಿ ಕೆಲವರು ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲೂ ಕೆಲಸ ಮಾಡುತ್ತಿದ್ದರು. ದೆಹಲಿ ಸ್ಫೋಟಕ್ಕೆ ಕೆಲವೇ ದಿನಗಳ ಮುನ್ನ ಈ “ವೈಟ್-ಕಾಲರ್” (White-collar) ಉಗ್ರರ ಜಾಲವನ್ನು ಪತ್ತೆಹಚ್ಚಲಾಗಿತ್ತು. ಇದು ಅಲ್-ಖೈದಾ ಸಂಘಟನೆಯೊಂದಿಗೆ ನಂಟು ಹೊಂದಿರುವ ‘ಅನ್ಸಾರ್ ಗಜ್ವತುಲ್-ಹಿಂದ್’ ಉಗ್ರಗಾಮಿ ಗುಂಪಿಗೆ ಸೇರಿದ್ದಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement