ಬೆಂಗಳೂರು: ನಗರದ ಸಂಚಾರ ದಟ್ಟಣೆಯ ನಡುವೆ ವಿಐಪಿ (VIP) ಸಂಸ್ಕೃತಿಯ ಅತಿರೇಕ ಮತ್ತೊಮ್ಮೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯಪಾಲರ ಬೆಂಗಾವಲು ಪಡೆಯ (ಕಾನ್ವಾಯ್) ಸುಗಮ ಸಂಚಾರಕ್ಕಾಗಿ ಪೊಲೀಸರು ಬರೋಬ್ಬರಿ 30 ನಿಮಿಷಗಳ ಕಾಲ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ, ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ಗರ್ಭಿಣಿ ಪತ್ನಿಯ ತುರ್ತು ವೈದ್ಯಕೀಯ ತಪಾಸಣೆಗಾಗಿ ಆಕೆಯ ಪತಿ ರಸ್ತೆಯಲ್ಲೇ ಕುಳಿತು ವಿನೂತನ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಸಂಜೆ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ (Old Airport Road) ನಡೆದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಲಿಕಾನ್ ಸಿಟಿ ಜನರಲ್ಲಿ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಭಾನುವಾರ ಸಂಜೆ ಹಳೆ ವಿಮಾನ ನಿಲ್ದಾಣ ರಸ್ತೆಯ ಮಾರ್ಗವಾಗಿ ರಾಜ್ಯಪಾಲರ ವಾಹನ ಸಾಗಬೇಕಿದ್ದ ಹಿನ್ನೆಲೆಯಲ್ಲಿ, ಬೆಂಗಳೂರು ಸಂಚಾರ ಪೊಲೀಸರು (BTP) ಈ ಭಾಗದಲ್ಲಿ ಸುಮಾರು ಅರ್ಧ ಗಂಟೆಯ ಕಾಲ ವಾಹನ ಸಂಚಾರವನ್ನು ಸಂಪೂರ್ಣವಾಗಿ ತಡೆದಿದ್ದರು. ಈಗಾಗಲೇ ಅಂಡರ್‌ಪಾಸ್ ಕಾಮಗಾರಿಯಿಂದಾಗಿ ಕಿರಿದಾಗಿ, ಬಾಟಲ್‌ನೆಕ್ ಆಗಿ ಮಾರ್ಪಟ್ಟಿರುವ ಈ ರಸ್ತೆಯಲ್ಲಿ ದಿಢೀರ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ನೂರಾರು ವಾಹನಗಳು ರಸ್ತೆಯಲ್ಲೇ ಸ್ತಬ್ಧಗೊಂಡವು. ಕಿಲೋಮೀಟರ್‌ಗಟ್ಟಲೆ ಬಂಪರ್-ಟು-ಬಂಪರ್ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಪರದಾಡುವಂತಾಯಿತು.
ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದ ಪತಿ
ಈ ಸಂಚಾರ ದಟ್ಟಣೆಯ ನಡುವೆ ಕಾರೊಂದರಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಸಿಲುಕಿಕೊಂಡಿದ್ದರು. ಆಕೆಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು. ಟ್ರಾಫಿಕ್‌ನಿಂದಾಗಿ ಕಾರು ಮುಂದೆ ಚಲಿಸಲಾಗದೆ ಪತ್ನಿ ಒದ್ದಾಡುತ್ತಿರುವುದನ್ನು ಕಂಡು ಕಂಗಾಲಾದ ಆಕೆಯ ಪತಿ, ತಕ್ಷಣವೇ ಕಾರಿನಿಂದ ಕೆಳಗಿಳಿದು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮುಂದೆಯೇ ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ಆರಂಭಿಸಿದರು.
“ಸಾರ್, ನನ್ನ ಹೆಂಡತಿ ಗರ್ಭಿಣಿ, ಆಕೆಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ,” ಎಂದು ಅವರು ಪೊಲೀಸರ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಅವರು ರಸ್ತೆಯ ಮಧ್ಯದಲ್ಲೇ ಕುಳಿತ ವ್ಯಕ್ತಿ ಅಲ್ಲಿಂದ ಕದಲಲು ನಿರಾಕರಿಸಿದರು. ರಾಜಕಾರಣಿಗಳಷ್ಟೇ ಸಾಮಾನ್ಯ ನಾಗರಿಕರ ಸಮಯವೂ ಅಮೂಲ್ಯವಾದುದು ಎಂದು ಅವರು ಹೇಳಿದರು. “ನನ್ನ ಹೆಂಡತಿ ಗರ್ಭಿಣಿ. ನಮಗೂ ಕೆಲಸ ಇರುತ್ತೆ ಅಲ್ವಾ ಸಾರ್?” ಎಂದು ವ್ಯಕ್ತಿ ಪೊಲೀಸರಿ ಬಳಿ ಹೇಳಿದರು.
“ಬದಿಗೆ ಸರಿರಿ. ಅಲ್ಲಿ ಹೋಗಿ ನಿಲ್ಲು” ಎಂದು ಸಂಚಾರ ಪೊಲೀಸ್ ಹೇಳಿದರು. ಆಗ ವ್ಯಕ್ತಿ, “ನನ್ನ ಹೆಂಡತಿ ಗರ್ಭಿಣಿ ಇದ್ದಾಳೆ. ಸಿಗ್ನಲ್ ಯಾಕೆ ಬ್ಲಾಕ್ ಮಾಡಿದ್ದೀರಾ? ರಾಜ್ಯಪಾಲರು ವಿಐಪಿ ಅಂದಾಕ್ಷಣ ನಾವು ಯಾರೂ ಅಲ್ವಾ?” ಎಂದು ಸಂಚಾರಿ ಪೊಲೀಸರನ್ನು ಪ್ರಶ್ನಿಸಿದರು.
“ನೀವು ಕೂಡ ವಿಐಪಿನೇ. ಈಗ ಎದ್ದು ಜಾಗ ಬಿಡಿ. ನೀವು ಎದ್ದೇಳ್ತೀರಾ ಇಲ್ವಾ?” ಎಂದು ಸಂಚಾರ ಪೊಲೀಸ್ ಆ ವ್ಯಕ್ತಿಗೆ ಹೇಳಿದ್ದಾರೆ. ವ್ಯಕ್ತಿ “ಇಲ್ಲ” ಎಂದು ಉತ್ತರಸಿದ್ದಾರೆ.
ಸಂಚಾರ ಪೊಲೀಸ್ “ಎದ್ದೇಳ್ತೀರಾ ಇಲ್ವಾ ನೀವು?” ಎಂದು ಮತ್ತೆ ಕೇಳಿದ್ದಾರೆ. ಆ ವ್ಯಕ್ತಿ ಇಲ್ಲ ಎಂದು ಮತ್ತೆ ಹೇಳಿದ್ದಾರೆ. ಗಣ್ಯರ ಭದ್ರತೆಗಿಂತ ಸಾರ್ವಜನಿಕರ ತುರ್ತು ವೈದ್ಯಕೀಯ ಸ್ಥಿತಿ ಮುಖ್ಯವಲ್ಲವೇ ಎಂದು ಅವರು ಪೊಲೀಸರನ್ನು ಪ್ರಶ್ನಿಸಿದರು. ನಂತರ ರಾಜ್ಯಪಾಲರ ಕಾನ್ವಾಯ್ ಬರುತ್ತಿದ್ದಂತೆ ರಸ್ತೆಯಿಂದ ಎದ್ದು ಹೋಗಿರುವುದು ವಿಡೊಯದಲ್ಲಿ ಕಂಡುಬಂದಿದೆ.
ಅಲ್ಲಿ ನೆರೆದಿದ್ದ ಸಹ ಪ್ರಯಾಣಿಕರು ಮತ್ತು ಸಾರ್ವಜನಿಕರು ಈ ದೃಶ್ಯವನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಒಬ್ಬಂಟಿ ವ್ಯಕ್ತಿಯೊಬ್ಬರು ವ್ಯವಸ್ಥೆಯ ವಿರುದ್ಧ ಮತ್ತು ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲೇ ಹತಾಶೆಯಿಂದ ಪ್ರತಿಭಟಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ನೆಟ್ಟಿಗರ ಮತ್ತು ಸಾರ್ವಜನಿಕರ ಆಕ್ರೋಶ:
ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವಿಐಪಿ ಸಂಸ್ಕೃತಿಯ ವಿರುದ್ಧ ದೊಡ್ಡ ಮಟ್ಟದ ಆಂದೋಲನಕ್ಕೆ ನಾಂದಿ ಹಾಡಿದೆ. ಕಿರಿದಾದ ಮತ್ತು ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಪರ್ಯಾಯ ವ್ಯವಸ್ಥೆ ಮಾಡದ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
“ರಾಜಕಾರಣಿಗಳ ಮತ್ತು ಗಣ್ಯರ ಸೌಕರ್ಯದಷ್ಟೇ ಸಾಮಾನ್ಯ ಜನರ ಸೌಕರ್ಯವೂ ಮುಖ್ಯ ಎಂದು ಅಧಿಕಾರಿಗಳಿಗೆ ಯಾವಾಗ ಅರ್ಥವಾಗುತ್ತದೆ? ಹಳೆ ವಿಮಾನ ನಿಲ್ದಾಣ ರಸ್ತೆ ಈಗಾಗಲೇ ಅಂಡರ್‌ಪಾಸ್ ಕಾಮಗಾರಿಯಿಂದಾಗಿ ಉಸಿರುಗಟ್ಟುತ್ತಿದೆ. ಇಂತಹ ಸಂದರ್ಭದಲ್ಲಿ 30 ನಿಮಿಷಗಳ ಕಾಲ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡುವುದು ಶುದ್ಧ ಅಮಾನವೀಯತೆ.” ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.
“ರಾಜಕೀಯ ಗಣ್ಯರ ಐಷಾರಾಮಿ ಸಂಚಾರಕ್ಕಾಗಿ ಸಾಮಾನ್ಯ ನಾಗರಿಕರ ಮತ್ತು ರೋಗಿಗಳ ಜೀವವನ್ನು ಪಣಕ್ಕಿಡುವುದು ಎಷ್ಟು ಸರಿ? ವಿಐಪಿಗಳ ಮುಂದೆ ಸಾಮಾನ್ಯರ ಜೀವಕ್ಕೆ ಬೆಲೆ ಇಲ್ಲವೇ?” ಎಂದು ಆನ್‌ಲೈನ್‌ನಲ್ಲಿ ಪ್ರಶ್ನಿಸಿದ್ದಾರೆ.
ಒಟ್ಟಾರೆಯಾಗಿ, ಈ ಘಟನೆಯು ಬೆಂಗಳೂರಿನ ಸಂಚಾರ ನಿರ್ವಹಣೆ ಮತ್ತು ವಿಐಪಿ ಸಂಚಾರದ ಹೆಸರಿನಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳದ ಮೇಲಿನ ಸಾರ್ವಜನಿಕರ ಆಕ್ರೋಶವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ