ಮೈಸೂರು/ಮಂಡ್ಯ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರು ಮೈಸೂರಿನ ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅವರು ಮಂಡ್ಯ ಜಿಲ್ಲೆಯ ಪ್ರಸಿದ್ಧ ನಿಮಿಷಾಂಬಾ ದೇಗುಲಕ್ಕೂ ಭೇಟಿ ನೀಡಿ ಪ್ರಾರ್ಥಿಸಿದ್ದಾರೆ.
ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿದ ದುರ್ಗಾ ಸ್ಟಾಲಿನ್ ಅವರು ತಮ್ಮ ಇಡೀ ಕುಟುಂಬದ ಕಲ್ಯಾಣಕ್ಕಾಗಿ ಮತ್ತು ಆರೋಗ್ಯಕ್ಕಾಗಿ ತಾಯಿಗೆ ವಿಶೇಷ ಪೂಜೆಯನ್ನು ನೆರವೇರಿಸಿದರು.
ನಿಮಿಷಾಂಬಾ ದೇವಸ್ಥಾನಕ್ಕೂ ಭೇಟಿ
ಮೈಸೂರಿಗೆ ಆಗಮಿಸುವ ಮುನ್ನ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನಲ್ಲಿರುವ ಐತಿಹಾಸಿಕ ಶ್ರೀ ನಿಮಿಷಾಂಬಾ ದೇವಸ್ಥಾನಕ್ಕೆ ಕುಟುಂಬಸ್ಥರೊಂದಿಗೆ ಭೇಟಿ ನೀಡಿದ ಅವರು, ದೇವಿಗೆ ಉಡಿ ತುಂಬಿ ತಾಯಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಿದರು. ನಿಮಿಷಾಂಬಾ ದೇವಾಲಯದಲ್ಲಿ ಸುಮಾರು 30 ನಿಮಿಷಗಳ ಕಾಲ ಅಲ್ಲಿದ್ದು ಪೂಜಾ ಕೈಕಂರ್ಯ ನೆರವೇರಿಸಿದ ಅವರು, ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆದರು.
ಜಿ.ಟಿ. ದೇವೇಗೌಡರ ನಿವಾಸಕ್ಕೆ ಭೇಟಿ
ನಂತರ ದುರ್ಗಾ ಸ್ಟಾಲಿನ್ ಅವರು ಮೈಸೂರಿನ ವಿ.ವಿ. ಮೊಹಲ್ಲಾದಲ್ಲಿರುವ ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿ.ಟಿ.ಡಿ ಕುಟುಂಬಸ್ಥರು ಅವರನ್ನು ಅತ್ಯಂತ ಆತ್ಮೀಕವಾಗಿ ಸ್ವಾಗತಿಸಿದರು. ಬಳಿಕ ದುರ್ಗಾ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ವಿಶೇಷ ವಿಮಾನದ ಮೂಲಕ ಚೆನ್ನೈಗೆ ತೆರಳಿದರು.
ತಮಿಳುನಾಡು ಮಾಜಿ ಡಿಸಿಎಂ ದುರ್ಗಾ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ‘ಸನಾತನ ಧರ್ಮ’ ನಿರ್ಮೂಲನೆ ಕುರಿತು ನೀಡಿದ್ದ ಹೇಳಿಕೆ ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿತ್ತು.ಸದ್ಯ ತಮಿಳುನಾಡು ವಿಧಾನಸಭೆಯಲ್ಲಿ ವಿಪಕ್ಷದ ನಾಯಕರಾಗಿರುವ ಉದಯನಿಧಿ ಅವರು, ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು” ಎಂದು ಹೇಳಿಕೆ ನೀಡಿ ಮತ್ತೆ ಸುದ್ದಿಯಾಗಿದ್ದರು. ಮಗ ಸನಾತನ ಧರ್ಮವನ್ನು ವಿರೋಧಿಸಿದ್ದರೂ, ತಾಯಿ ದುರ್ಗಾ ಸ್ಟಾಲಿನ್ ಮಾತ್ರ ತಮ್ಮ ಧಾರ್ಮಿಕ ನಂಬಿಕೆಯನ್ನು ಮುಂದುವರಿಸಿದ್ದಾರೆ. ಮಗನ ಒಳಿತಿಗಾಗಿ ಹಾಗೂ ಕುಟುಂಬದ ಸುಖ-ಶಾಂತಿಗಾಗಿ ಅವರು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ