
ನವದೆಹಲಿ: ತಮಿಳುನಾಡು ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ದಕ್ಷಿಣ ಭಾರತದ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ವಿಪಕ್ಷಗಳ ರಾಷ್ಟ್ರೀಯ ಒಕ್ಕೂಟವಾದ ‘ಇಂಡಿಯಾ’ (INDIA)ಮೈತ್ರಿಕೂಟದಲ್ಲಿ ದೊಡ್ಡ ಬಿರುಕು ಮೂಡಿದೆ. ತಮಿಳುನಾಡಿನಲ್ಲಿ ಉಂಟಾದ ರಾಜಕೀಯ ಮರುಮೈತ್ರಿಯಿಂದ ಬೇಸತ್ತಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ (DMK), ಜೂನ್ 8 ರಂದು ನವದೆಹಲಿಯಲ್ಲಿ ಕರೆಯಲಾಗಿರುವ ‘ಇಂಡಿಯಾ’ ಮೈತ್ರಿಕೂಟದ ಮಹತ್ವದ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಈ ಮೂಲಕ ಕಾಂಗ್ರೆಸ್ ಜೊತೆಗಿನ ಬಿರುಕು ಮತ್ತಷ್ಟು ದೊಡ್ಡದಾಗಿದೆ.
ಸಭೆಯಿಂದ ದೂರ ಉಳಿಯುವ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಡಿಎಂಕೆ, ಕಾಂಗ್ರೆಸ್ ಪಕ್ಷದ ವಿರುದ್ಧ ನೇರ ವಾಗ್ದಾಳಿ ನಡೆಸಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷವು ತಮಗೆ ಎಸಗಿರುವ ‘ದ್ರೋಹ’ದಿಂದ ಪಕ್ಷದ ಕಾರ್ಯಕರ್ತರು ತೀವ್ರವಾಗಿ ನೊಂದಿದ್ದಾರೆ. ಕಾರ್ಯಕರ್ತರ ಈ ಭಾವನೆಗಳನ್ನು ಗೌರವಿಸಿ ಜೂನ್ 8 ರ ಸಭೆಗೆ ಗೈರಾಗಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
“ವಿಶೇಷವಾಗಿ ಕಾಂಗ್ರೆಸ್ ಪಕ್ಷವು ಭಾಗವಹಿಸುತ್ತಿರುವ ಸಭೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ. ಆದರೆ, ದೇಶದ ಹಿತಾಸಕ್ತಿ ಹಾಗೂ ಜನಕಲ್ಯಾಣಕ್ಕೆ ಸಂಬಂಧಿಸಿದಂತೆ ಒಕ್ಕೂಟದ ಇತರ ಪಕ್ಷಗಳು ಎತ್ತುವ ಧ್ವನಿಗೆ ನಮ್ಮ ಬೆಂಬಲ ಎಂದಿನಂತೆ ಮುಂದುವರಿಯಲಿದೆ” ಎಂದು ಡಿಎಂಕೆ ಸ್ಪಷ್ಟಪಡಿಸಿದೆ.
ಬಿರುಕಿಗೆ ಕಾರಣವೇನು?
ತಮಿಳುನಾಡು ಚುನಾವಣೆಯ ನಂತರ ಡಿಎಂಕೆ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡಿರುವ ಕಾಂಗ್ರೆಸ್, ರಾಜ್ಯದ ನೂತನ ಮುಖ್ಯಮಂತ್ರಿ ವಿಜಯ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದೊಂದಿಗೆ ಕೈಜೋಡಿಸಿದೆ. ಕಾಂಗ್ರೆಸ್‌ನ ಈ ಹಠಾತ್ ನಡೆ ಡಿಎಂಕೆ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ವೇಳೆ, ಹೊಸದಾಗಿ ಉದಯಿಸಿರುವ ಟಿವಿಕೆ (TVK) ಪಕ್ಷವನ್ನು ರಾಷ್ಟ್ರ ಮಟ್ಟದ ವಿಪಕ್ಷಗಳ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ತೆರೆಮರೆಯ ಪ್ರಯತ್ನಗಳು ನಡೆಯುತ್ತಿರುವುದು ಡಿಎಂಕೆ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.
ಜೂನ್ 8 ರಂದು ‘ಇಂಡಿಯಾ’ ನಾಯಕರ ಮಂಥನ
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಮತ್ತು ತಮಿಳುನಾಡಿನಲ್ಲಿ ಡಿಎಂಕೆ (DMK) ಅಧಿಕಾರ ಕಳೆದುಕೊಂಡು ಹಿನ್ನಡೆ ಅನುಭವಿಸಿವೆ. ಈ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜಂಟಿ ಕಾರ್ಯತಂತ್ರ ರೂಪಿಸಲು ಮತ್ತು ಒಕ್ಕೂಟದ ಪಕ್ಷಗಳ ನಡುವೆ ಸಮನ್ವಯತೆ ಬಲಪಡಿಸಲು ಜೂನ್ 8 ರಂದು ನವದೆಹಲಿಯ ‘ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ’ದಲ್ಲಿ ಹಿರಿಯ ನಾಯಕರ ಸಭೆ ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು 15 ವಿಪಕ್ಷಗಳು ಇದರಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಯಾರೆಲ್ಲಾ ಭಾಗಿ? ಯಾರಿಗೆ ಕೊಕ್?
ಈ ಪ್ರಮುಖ ಸಭೆಯಲ್ಲಿ ಟಿಎಂಸಿ ಸುಪ್ರೀಮೋ ಮಮತಾ ಬ್ಯಾನರ್ಜಿ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ್, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಳ್ಳಲಿದ್ದಾರೆ.
ಆದರೆ, ಆಮ್ ಆದ್ಮಿ ಪಕ್ಷವು (AAP) ಈಗಾಗಲೇ ತಾನು ‘ಇಂಡಿಯಾ’ ಒಕ್ಕೂಟದಿಂದ ದೂರ ಉಳಿಯುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದು, ಸಭೆಗೆ ಗೈರಾಗಲಿದೆ. ಈಗ ಡಿಎಂಕೆ ಕೂಡ ಸಭೆಯಿಂದ ಹೊರಗುಳಿಯುತ್ತಿರುವುದು ಒಕ್ಕೂಟದ ಬಲಕ್ಕೆ ಪೆಟ್ಟು ನೀಡಿದೆ.
ಬಂಗಾಳದ ವಿಷಯ ಪ್ರಸ್ತಾಪಿಸಲಿರುವ ಮಮತಾ
ಸಭೆಯಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ತಮ್ಮ ಪಕ್ಷದ ನಾಯಕರ ಮೇಲೆ ನಡೆಯುತ್ತಿರುವ ರಾಜಕೀಯ ದಾಳಿಗಳ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ ಹಾಗೂ ಈ ಕುರಿತು ಒಕ್ಕೂಟದ ಇತರ ನಾಯಕರ ಬೆಂಬಲ ಕೋರಲಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ, ರಾಜ್ಯಗಳ ಮಟ್ಟದಲ್ಲಿ ಬದಲಾಗುತ್ತಿರುವ ರಾಜಕೀಯ ಸಮೀಕರಣಗಳು ರಾಷ್ಟ್ರ ಮಟ್ಟದ ಮಹಾಘಟಬಂಧನದ ಒಗ್ಗಟ್ಟಿಗೆ ದೊಡ್ಡ ಸವಾಲನ್ನು ತಂದೊಡ್ಡಿವೆ.



ನಿಮ್ಮ ಕಾಮೆಂಟ್ ಬರೆಯಿರಿ