ದೆಹಲಿ ಪ್ರೊಫೆಸರ್ ಕೊಲೆ ಮಾಡಲು 1400 ಕಿಮೀ ದೂರದಿಂದ ಬಂದಿದ್ದ ದಂಪತಿ ; ಇವರು ಸಿಕ್ಕಿಬಿದ್ದಿದ್ದು ಹೇಗೆ..?

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿಯೊಬ್ಬರ ಭೀಕರ ಕೊಲೆ ಪ್ರಕರಣವನ್ನು ದೆಹಲಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬರೋಬ್ಬರಿ 1,400 ಕಿಲೋಮೀಟರ್ ದೂರದಿಂದ ಬಂದು ಈ ಕೊಲೆ ಮಾಡಿ ಪರಾರಿಯಾಗಿದ್ದ ಕೊಲೆ ಆರೋಪಿತರನ್ನು ಪಶ್ಚಿಮ ಬಂಗಾಳದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಸ್ತಿಗಾಗಿ ಈ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿಯಶಿವಾಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ದೆಬೋಸ್ಮಿತಾ ಪಾಲ್ ಅವರು, ಪೂರ್ವ ದೆಹಲಿಯ ವಸುಂಧರಾ ಎನ್‌ಕ್ಲೇವ್‌ನಲ್ಲಿರುವ ಸತ್ಯಂ ಅಪಾರ್ಟ್‌ಮೆಂಟ್‌ನ ತಮ್ಮ ಫ್ಲಾಟ್‌ನಲ್ಲಿ ಬುಧವಾರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣದ ಬೆನ್ನಟ್ಟಿದ ಪೊಲೀಸರು ಕಾರ್ಯಾಚರಣೆ ನಡೆಸಿ, ಪಶ್ಚಿಮ ಬಂಗಾಳದ ವರ್ಧಮಾನ್ (Bardhaman) ಜಿಲ್ಲೆಯಲ್ಲಿ ಆರೋಪಿಗಳಾದ ರಾಮಪ್ರಸಾದ ದಾಸ್ ಮತ್ತು ಬನಶ್ರೀ ದಾಸ್ ಎಂಬ ದಂಪತಿಯನ್ನು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ದಂಪತಿಯ ಅಪ್ರಾಪ್ತ ಮಗನನ್ನು ಸಹ ವಶಕ್ಕೆ ಪಡೆಯಲಾಗಿದೆ. ಸದ್ಯ ಬಂಧಿತ ದಂಪತಿಯನ್ನು ಅಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಹೆಚ್ಚಿನ ತನಿಖೆಗಾಗಿ ದೆಹಲಿಗೆ ಕರೆತರಲು ದೆಹಲಿ ಪೊಲೀಸರು ಟ್ರಾನ್ಸಿಟ್ ರಿಮಾಂಡ್ (Transit Remand) ಕೋರಲಿದ್ದಾರೆ.

ಕೊಲೆ ನಡೆದದ್ದು ಹೇಗೆ?
ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಕೊಲೆಗಾರರು ಪಶ್ಚಿಮ ಬಂಗಾಳದ ವರ್ಧಮಾನ್ ನಿವಾಸಿಗಳಾಗಿದ್ದು, ಮೃತ ದೆಬೋಸ್ಮಿತಾ ಪಾಲ್ ಅವರನ್ನು ಭೇಟಿಯಾಗುವ ನೆಪದಲ್ಲಿ ದೆಹಲಿಗೆ ಬಂದಿದ್ದರು. ದೆಬೋಸ್ಮಿತಾ ಅವರು ಮದುವೆಯಾದ 5 ವರ್ಷಗಳ ನಂತರ, ಅಂದರೆ 2022 ರಲ್ಲಿ ಪತಿಯಿಂದ ದೂರವಾಗಿದ್ದರು. ಅವರ ಪತಿ ಬೆಂಗಳೂರಿನಲ್ಲಿದ್ದರೆ, ದೆಬೋಸ್ಮಿತಾ ದೆಹಲಿಯ ಫ್ಲಾಟ್‌ನಲ್ಲಿ ಒಬ್ಬರೇ ವಾಸಿಸುತ್ತಿದ್ದರು.
ಬುಧವಾರ ಆರೋಪಿಗಳು ಮುಖಕ್ಕೆ ಮಾಸ್ಕ್ ಧರಿಸಿ ದೆಬೋಸ್ಮಿತಾ ಅವರ ಫ್ಲಾಟ್‌ಗೆ ಭೇಟಿ ನೀಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಖಾಸಗಿ ಕ್ಯಾಬ್‌ನಲ್ಲಿ ಕೆಲವು ಬ್ಯಾಗ್‌ಗಳೊಂದಿಗೆ ಬಂದಿದ್ದ ಅವರು, ಯಾರಿಗೂ ಕ್ಲೂ ಸಿಗಬಾರದೆಂದು ಎಂದು ಲಿಫ್ಟ್ ಬಳಸದೆ ಮೆಟ್ಟಿಲುಗಳ ಮೂಲಕ ಆರನೇ ಮಹಡಿಗೆ ತಲುಪಿದ್ದರು. ಯಾರಿಗೂ ಅನುಮಾನ ಬರಬಾರದೆಂದು ಜೊತೆಯಲ್ಲಿ ತಮ್ಮ ಅಪ್ರಾಪ್ತ ಮಗನನ್ನೂ ಕರೆದುಕೊಂಡು ಬಂದಿದ್ದರು.. ಪರಿಚಿತರೇ ಆಗಿದ್ದರಿಂದ ದೆಬೋಸ್ಮಿತಾ ಅವರನ್ನು ಮನೆಯೊಳಗೆ ಬರಮಾಡಿಕೊಂಡಿದ್ದರು. ಆದರೆ, ಆರೋಪಿಗಳು ತಮ್ಮೊಂದಿಗೆ ತಂದಿದ್ದ ಮಾರಕಾಸ್ತ್ರದಿಂದ ದೆಬೋಸ್ಮಿತಾ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳ

ಕೊಲೆ ಮಾಡಿದ ನಂತರ, ಕೇವಲ 30 ನಿಮಿಷಗಳಲ್ಲಿ ಬಟ್ಟೆಗಳನ್ನು ಬದಲಾಯಿಸಿಕೊಂಡು ಕೆಳಗೆ ಕಾಯುತ್ತಿದ್ದ ಅದೇ ಕ್ಯಾಬ್‌ನಲ್ಲಿ ಆರೋಪಿಗಳು ಪರಾರಿಯಾಗಿದ್ದರು. ತನಿಖೆ ಆರಂಭಿಸಿದ ಪೊಲೀಸರು ಮೊದಲು ಕ್ಯಾಬ್ ಚಾಲಕನನ್ನು ವಶಕ್ಕೆ ಪಡೆದು, ಆತನ ರೈಡ್ ವಿವರಗಳ ಆಧಾರದ ಮೇಲೆ ಪ್ರಯಾಣಿಕರ ಗುರುತು ಪತ್ತೆ ಹಚ್ಚಿದ್ದರು.
ಬುಧವಾರ ಆ ಅಪಾರ್ಟ್‌ಮೆಂಟ್ ಸಂಕೀರ್ಣಕ್ಕೆ ಭೇಟಿ ನೀಡಿದ್ದ ಸುಮಾರು 200 ಜನರನ್ನು ಪರಿಶೀಲಿಸಿದ ಪೊಲೀಸರು, 13 ಶಂಕಿತರ ಪಟ್ಟಿಯನ್ನು ಸಿದ್ಧಪಡಿಸಿ ವಿಚಾರಣೆ ನಡೆಸಿದ್ದರು. ಹಂತಕರ ಪತ್ತೆಗಾಗಿ ರಚಿಸಲಾಗಿದ್ದ 7 ಪೊಲೀಸ್ ತಂಡಗಳು ದೇಶದ ನಾಲ್ಕು ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ನೂರಾರು ಜನರನ್ನು ವಿಚಾರಣೆಗೆ ಒಳಪಡಿಸಿದ್ದವು. ಕೊನೆಗೆ ಪಶ್ಚಿಮ ಬಂಗಾಳದ ವರ್ಧಮಾನ್‌ನಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದ್ದು, ಸದ್ಯ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಕೊಲೆಗೆ ಕಾರಣವೇನು?:
ಮೃತ ದೆಬೋಸ್ಮಿತಾ ಪಾಲ್ ಅವರಿಗೆ ಪಶ್ಚಿಮ ಬಂಗಾಳದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇತ್ತು. ಇದು ಅವರಿಗೆ ತಾಯಿಯ ಕಡೆಯ ಅಜ್ಜನ ಮರಣದ ನಂತರ ವಂಶಪಾರಂಪರ್ಯವಾಗಿ ಬಂದಿತ್ತು. ಬಂಧಿತ ಆರೋಪಿ ದಂಪತಿ ಅದೇ ಮನೆಯಲ್ಲಿ ಬಾಡಿಗೆಗೆ ಇದ್ದುಕೊಂಡು, ಆ ಆಸ್ತಿಯನ್ನು ಹೇಗಾದರೂ ಮಾಡಿ ಲಪಟಾಯಿಸಲು ಸಂಚು ರೂಪಿಸುತ್ತಿದ್ದರು. ಆದರೆ, ದೆಬೋಸ್ಮಿತಾ ಅವರು ತಕ್ಷಣ ಮನೆ ಖಾಲಿ ಮಾಡುವಂತೆ ಅವರ ಮೇಲೆ ತೀವ್ರ ಒತ್ತಡ ಹೇರುತ್ತಿದ್ದರು. ಇದರಿಂದ ಆಕ್ರೋಶಗೊಂಡ ದಂಪತಿ, ಆಸ್ತಿಯನ್ನು ಲಪಟಾಯಿಸುವ ದುರುದ್ದೇಶದಿಂದ ಪ್ರಾಧ್ಯಾಪಕಿಯ ಕೊಲೆಗೆ ಮಾಸ್ಟರ್ ಪ್ಲಾನ್ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

ಪ್ರಮುಖ ಸುದ್ದಿ :-   ಎಐಎಡಿಎಂಕೆಗೆ ಮತ್ತೆ ಆಘಾತ ; ಟಿವಿಕೆ ಸೇರಿದ 4 ಮಾಜಿ ಸಚಿವರು, 6 ಮಾಜಿ ಶಾಸಕರು

ಗುರುವಾರ ದೆಬೋಸ್ಮಿತಾ ಅವರ ಸಹೋದರಿ ದೇವರತಿ (Devarati) ಪೊಲೀಸರಿಗೆ ಕರೆ ಮಾಡಿ, ತನ್ನ ಸೋದರಿ ಫ್ಲಾಟ್‌ನಲ್ಲಿ ಶವವಾಗಿ ಬಿದ್ದಿರುವ ವಿಷಯ ತಿಳಿಸಿದ್ದರು. ದೆಬೋಸ್ಮಿತಾ ಅವರಿಗೆ ಎಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಸಂಶಯಗೊಂಡು ದೇವರತಿ ಅಲ್ಲಿಗೆ ಬಂದಿದ್ದರು. ಫ್ಲಾಟ್‌ಗೆ ಹೊರಗಿನಿಂದ ಬೀಗ ಹಾಕಲಾಗಿದ್ದರಿಂದ, ಅವರು ಬಾಗಿಲು ಮುರಿದು ಒಳಗೆ ಹೋಗಬೇಕಾಯಿತು.
ಒಳಗೆ ಹೋದಾಗ ದೆಬೋಸ್ಮಿತಾ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಮಣಿಕಟ್ಟಿನ ನರಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಹಣ ಹಾಗೆಯೇ ಸುರಕ್ಷಿತವಾಗಿ ಇದ್ದಿದ್ದರಿಂದ, ಇದು ದರೋಡೆಗಾಗಿ ನಡೆದ ಕೊಲೆಯಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲೇ ಸ್ಪಷ್ಟವಾಗಿತ್ತು. ನಂತರ ಪೊಲೀಸರು ಶೋಧ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement