
ಭುವನೇಶ್ವರ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಒಡಿಶಾ ಜಾಗೃತ ದಳ (ವಿಜಿಲೆನ್ಸ್) ಶನಿವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸರ್ಕಾರಿ ಇಂಜಿನಿಯರ್ ಒಬ್ಬರಿಗೆ ಸೇರಿದ 9 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ವೇಳೆ ಇಂಜಿನಿಯರ್ ಕುಟುಂಬಕ್ಕೆ ಸೇರಿದ ಬ್ಯಾಂಕ್ ಲಾಕರ್‌ಗಳಿಂದ ಬರೋಬ್ಬರಿ 2 ಕೋಟಿ ರೂಪಾಯಿ ನಗದು ಹಣವನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ.
ಕಂಧಮಾಲ್ ಜಿಲ್ಲೆಯ ಬಾಲಿಗುಡದ ‘ಸಮಗ್ರ ಬುಡಕಟ್ಟು ಅಭಿವೃದ್ಧಿ ಸಂಸ್ಥೆ’ಯಲ್ಲಿ (ITDA) ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE) ಆಗಿ ಕಾರ್ಯನಿರ್ವಹಿಸುತ್ತಿರುವ ಬೈಕುಂಠನಾಥ ಬೆಹೆರಾ ಎಂಬುವವರೇ ಈ ಭ್ರಷ್ಟಾಚಾರದ ಜಾಲದಲ್ಲಿ ಸಿಲುಕಿದ ಅಧಿಕಾರಿ. ಭುವನೇಶ್ವರ, ಬಾಲಸೋರ್, ಜಾಜಪುರ ಮತ್ತು ಬಾಲಿಗುಡದಲ್ಲಿ ಜಾಗೃತ ದಳ ನಡೆಸಿದ ಈ ವ್ಯಾಪಕ ಶೋಧ ಕಾರ್ಯದಲ್ಲಿ ಕೋಟ್ಯಂತರ ಮೌಲ್ಯದ ಐಷಾರಾಮಿ ಕಟ್ಟಡಗಳು, ದುಬಾರಿ ಜಮೀನುಗಳು ಮತ್ತು ಇತರ ಹಣಕಾಸು ಹೂಡಿಕೆಗಳು ಪತ್ತೆಯಾಗಿವೆ.
ಏಕಕಾಲದಲ್ಲಿ 9 ಕಡೆ ದಾಳಿ:
ಬೈಕುಂಠನಾಥ ಬೆಹೆರಾ ಅವರು ತಮ್ಮ ಅಧಿಕೃತ ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ದೂರಿನ ಮೇರೆಗೆ ಭುವನೇಶ್ವರದ ವಿಶೇಷ ವಿಜಿಲೆನ್ಸ್ ನ್ಯಾಯಾಲಯದಿಂದ ವಾರಂಟ್ ಪಡೆದು ಈ ದಾಳಿ ಸಂಘಟಿಸಲಾಗಿತ್ತು. ವಿಜಿಲೆನ್ಸ್ ಇಲಾಖೆಯ ಅಪರ ಪೊಲೀಸ್ ವರಿಷ್ಠಾಧಿಕಾರಿಗಳು (ASP), ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (DSP) ಮತ್ತು ಇನ್ಸ್‌ಪೆಕ್ಟರ್‌ಗಳನ್ನೊಳಗೊಂಡ ಬೃಹತ್ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಭುವನೇಶ್ವರದ ಚಂದ್ರಶೇಖರಪುರ, ಶೈಲಶ್ರೀ ವಿಹಾರ, ಕಾನನ್ ವಿಹಾರ್, ಜಾಜಪುರ ಜಿಲ್ಲೆಯ ಧರ್ಮಶಾಲಾ, ಬಾರೀಪದಾ ಹಾಗೂ ಬಾಲಿಗುಡದಲ್ಲಿರುವ ಅವರ ಅಧಿಕೃತ ಸರ್ಕಾರಿ ನಿವಾಸ ಮತ್ತು ಕಚೇರಿ ಸೇರಿದಂತೆ ಒಟ್ಟು ಒಂಬತ್ತು ಕಡೆಗಳಲ್ಲಿ ಏಕಕಾಲದಲ್ಲಿ ತಪಾಸಣೆ ನಡೆಸಲಾಗಿದೆ.
5 ಬಹುಮಹಡಿ ಕಟ್ಟಡಗಳು, 13 ನಿವೇಶನಗಳು ಪತ್ತೆ:
ದಾಳಿಯ ವೇಳೆ ಇಂಜಿನಿಯರ್ ಮತ್ತು ಅವರ ಕುಟುಂಬದ ಹೆಸರಿನಲ್ಲಿರುವ ಐದು ಬೃಹತ್ ಬಹುಮಹಡಿ ಕಟ್ಟಡಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇವುಗಳಲ್ಲಿ ಭುವನೇಶ್ವರದ ನೀಲಾದ್ರಿ ವಿಹಾರದಲ್ಲಿರುವ ಸುಮಾರು 10,500 ಚದರ ಅಡಿ ವಿಸ್ತೀರ್ಣದ ನಾಲ್ಕು ಮಹಡಿಯ ಐಷಾರಾಮಿ ಕಟ್ಟಡವೂ ಸೇರಿದೆ. ಉಳಿದಂತೆ ಭುವನೇಶ್ವರ ಮತ್ತು ಜಾಜಪುರ ಜಿಲ್ಲೆಗಳಲ್ಲಿ ಇತರ ನಾಲ್ಕು ವಸತಿ ಕಟ್ಟಡಗಳನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.
ಜೊತೆಗೆ ಪ್ರಮುಖ ನಗರಗಳಲ್ಲಿರುವ 13 ನಿವೇಶನ/ಜಮೀನು ಗುರುತಿಸಲಾಗಿದೆ. ಈ ಪೈಕಿ ಭುವನೇಶ್ವರದ ಅತ್ಯಂತ ಬೇಡಿಕೆಯುಳ್ಳ ಪ್ರೈಮ್ ಲೊಕೇಶನ್‌ಗಳಲ್ಲೇ 7 ನಿವೇಶನಗಳಿದ್ದು, ಇನ್ನುಳಿದ ಪ್ಲಾಟ್‌ಗಳು ಜಾಜಪುರ ಮತ್ತು ಬಾರೀಪದಾದಲ್ಲಿವೆ.
ಬ್ಯಾಂಕ್ ಲಾಕರ್‌ನಿಂದ ₹2 ಕೋಟಿ ಜಪ್ತಿ:
ವಿಜಿಲೆನ್ಸ್ ಅಧಿಕಾರಿಗಳು ಬೆಹೆರಾ ಅವರ ಕುಟುಂಬಕ್ಕೆ ಸೇರಿದ ಬ್ಯಾಂಕ್ ಲಾಕರ್‌ಗಳನ್ನು ತೆರೆದು ಪರಿಶೀಲಿಸಿದಾಗ ಅಧಿಕಾರಿಗಳೇ ಬೆರಗಾಗುವಂತೆ ಸುಮಾರು 2 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದೆ. ಇದಕ್ಕೂ ಮುನ್ನ ಅವರ ಮನೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ₹2.66 ಲಕ್ಷಕ್ಕೂ ಅಧಿಕ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಸ್ತುತ ಇವರ ಹೆಸರಿನಲ್ಲಿರುವ ಚಿನ್ನಾಭರಣಗಳು, ಬ್ಯಾಂಕ್ ಠೇವಣಿಗಳು, ಅಂಚೆ ಕಚೇರಿ ಉಳಿತಾಯ, ವಿವಿಧ ಹಣಕಾಸು ಹೂಡಿಕೆಗಳ ಮೌಲ್ಯಮಾಪನ ಪ್ರಗತಿಯಲ್ಲಿದೆ. ತಾಂತ್ರಿಕ ತಜ್ಞರ ನೆರವುದೊಂದಿಗೆ ಈ ಸ್ಥಿರ ಮತ್ತು ಚರಾಸ್ತಿಗಳ ನಿಖರ ಮಾರುಕಟ್ಟೆ ಮೌಲ್ಯವನ್ನು ಲೆಕ್ಕ ಹಾಕಲಾಗುತ್ತಿದೆ.
₹6,000 ಸಂಬಳದಿಂದ ಶುರುವಾಗಿದ್ದ ಜರ್ನಿ!
ಅಧಿಕೃತ ದಾಖಲೆಗಳ ಪ್ರಕಾರ, ಬೈಕುಂಠನಾಥ ಬೆಹೆರಾ ಅವರು 1999 ರಲ್ಲಿ ಕೇವಲ 6,000 ರೂಪಾಯಿ ಮಾಸಿಕ ವೇತನಕ್ಕೆ ಜೂನಿಯರ್ ಇಂಜಿನಿಯರ್ (ಜೆಇ) ಆಗಿ ಸರ್ಕಾರಿ ಸೇವೆಗೆ ಸೇರಿದ್ದರು. ಕಳೆದ ಹಲವು ವರ್ಷಗಳ ಅವಧಿಯಲ್ಲಿ ಅವರು ವಿವಿಧ ಬುಡಕಟ್ಟು ಅಭಿವೃದ್ಧಿ ಸಂಸ್ಥೆಗಳಲ್ಲಿ ಮತ್ತು ಪ್ರಮುಖ ಇಂಜಿನಿಯರಿಂಗ್ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. ಇದೇ ವರ್ಷದ ಆರಂಭದಲ್ಲಷ್ಟೇ ಅವರಿಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE) ಆಗಿ ಬಡ್ತಿ ಸಿಕ್ಕಿತ್ತು.
ಸದ್ಯ ಜಪ್ತಿಯಾಗಿರುವ ಐಷಾರಾಮಿ ಆಸ್ತಿಪಾಸ್ತಿಗಳು, ಕೋಟ್ಯಂತರ ರೂಪಾಯಿ ನಗದು ಹಾಗೂ ದುಬಾರಿ ನಿವೇಶನಗಳು ಹಾಗೂ ಜಮೀನುಗಳನ್ನು ಗಮನಿಸಿದರೆ, ಈ ಪ್ರಕರಣವು ಒಡಿಶಾದಲ್ಲಿ ಈ ವರ್ಷ ನಡೆದ ಅತಿ ದೊಡ್ಡ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಸದ್ಯ ವಿಜಿಲೆನ್ಸ್ ತನಿಖೆ ಮುಂದುವರಿದಿದ್ದು, ಸಂಪೂರ್ಣ ಮೌಲ್ಯಮಾಪನ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಈ ಭ್ರಷ್ಟ ಅಧಿಕಾರಿಯ ಒಟ್ಟು ಆಸ್ತಿಯ ನಿಖರ ಮೌಲ್ಯ ಹೊರಬರಬೇಕಿದೆ.



ನಿಮ್ಮ ಕಾಮೆಂಟ್ ಬರೆಯಿರಿ