ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನಲ್ಲಿ ಭೀಕರ ದುರಂತ: ಎಂಟು ಕಾರ್ಮಿಕರ ಸಾವು, ಹಲವರಿಗೆ ಗಾಯ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನಲ್ಲಿ ಸೋಮವಾರ ಭೀಕರ ಅವಘಡ ಸಂಭವಿಸಿದೆ. ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಬೃಹತ್ ಪಾತ್ರೆ (ಲಾಡಲ್) ಸ್ಫೋಟಗೊಂಡ ಪರಿಣಾಮ ಎಂಟು ಕಾರ್ಮಿಕರು ಮೃತಪಟ್ಟಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಉಕ್ಕಿನ ಕಾರ್ಖಾನೆಯ ಎಸ್‌ಎಂಎಸ್-೨ (SMS-2) ಮತ್ತು ಎಸ್‌ಟಿಸಿ-೩ (STC-3) ಹೀಟ್ ಫೆಸಿಲಿಟಿ ವಿಭಾಗದಲ್ಲಿ ಈ ದುರಂತ ಸಂಭವಿಸಿದೆ. ಅತ್ಯಂತ ಹೆಚ್ಚಿನ ತಾಪಮಾನದಲ್ಲಿದ್ದ ಕರಗಿದ ಉಕ್ಕನ್ನು ಸಾಗಿಸುತ್ತಿದ್ದ ಬೃಹತ್ ಲಾಡಲ್ ದಿಢೀರನೆ ಸ್ಫೋಟಗೊಂಡಿದೆ.ಸ್ಫೋಟದ ತೀವ್ರತೆಗೆ ಅಪಾರ ಪ್ರಮಾಣದ ಕರಗಿದ ಉಕ್ಕು ಸುತ್ತಲೂ ಸೋರಿಕೆಯಾಗಿದೆ. ಈ ಆಕಸ್ಮಿಕ ಸ್ಫೋಟದಿಂದಾಗಿ ಇಡೀ ಘಟಕದಲ್ಲಿ ಭೀತಿ ಆವರಿಸಿದ್ದು, ಜೀವ ಉಳಿಸಿಕೊಳ್ಳಲು ಕಾರ್ಮಿಕರು ಮತ್ತು ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಟೀಲ್ ಪ್ಲಾಂಟ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ದುರಂತದಲ್ಲಿ ಮೃತಪಟ್ಟ ಎಂಟು ಜನರಲ್ಲಿ ಐವರು ಕಾಯಂ ನೌಕರರು ಮತ್ತು ಮೂವರು ಗುತ್ತಿಗೆ ಕಾರ್ಮಿಕರಾಗಿದ್ದಾರೆ.
ಕರಗಿದ ಉಕ್ಕನ್ನು ಸಾಗಿಸುತ್ತಿದ್ದ ಲ್ಯಾಡಲ್ ತಂತಿಗಳು ತುಂಡಾಗಿ ಕರಗಿದ ಉಕ್ಕು ನೆಲಕ್ಕೆ ಚೆಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸ್ಟೀಲ್ ಪ್ಲಾಂಟ್ ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ.
ಅಪಘಾತದಲ್ಲಿ ಹಲವಾರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಪ್ರಧಾನಿ ಮೋದಿ ಕಂಬನಿ

ಈ ಭೀಕರ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಸ್ಥರಿಗೆ ಆರ್ಥಿಕ ನೆರವು ಘೋಷಿಸಿದ್ದಾರೆ.
ಪ್ರಧಾನ ಮಂತ್ರಿಗಳ ಕಾರ್ಯಾಲಯ (PMO) ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಮೋದಿ ಅವರು, “ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನಲ್ಲಿ ನಡೆದ ಅಪಘಾತದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸ್ಥಳೀಯ ಅಧಿಕಾರಿಗಳು ಬಾಧಿತರಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡುತ್ತಿದ್ದಾರೆ,” ಎಂದು ತಿಳಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟ ಪ್ರತಿಯೊಬ್ಬ ಕಾರ್ಮಿಕರ ಕುಟುಂಬಕ್ಕೆ (ವಿನಾಶ ಹೊಂದಿದವರ ವಾರಸುದಾರರಿಗೆ) ಪಿಎಂಎನ್‌ಆರ್‌ಎಫ್‌ನಿಂದ ತಲಾ ೨ ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ ೫೦,೦೦೦ ರೂಪಾಯಿಗಳ ಎಕ್ಸ್‌-ಗ್ರೇಷಿಯಾ (ಪರಿಹಾರ ಧನ) ವನ್ನು ಪ್ರಧಾನಿ ಘೋಷಿಸಿದ್ದಾರೆ.

ಪ್ರಮುಖ ಸುದ್ದಿ :-   2 ತಾಸು ಹುಡುಕಿದ್ರೂ ಏನೂ ಸಿಗದ ಪೊಲೀಸರಿಗೆ ಕುಕ್ಕರ್ ಸೀಟಿಯಿಂದ ಪತ್ತೆಯಾಯ್ತು ಗಾಂಜಾ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement