
ವಾಷಿಂಗ್ಟನ್ : ಅತ್ಯಂತ ನುರಿತ ವಿದೇಶಿ ಕಾರ್ಮಿಕರಿಗೆ ನೀಡಲಾಗುವ ಎಚ್-1ಬಿ (H-1B) ವೀಸಾಗಳ ಮೇಲೆ ಬರೋಬ್ಬರಿ 1,00,000 ಡಾಲರ್ (ಸುಮಾರು 85 ಲಕ್ಷ ರೂಪಾಯಿ) ಭಾರಿ ಮೊತ್ತದ ಶುಲ್ಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಕೈಗೊಂಡಿದ್ದ ವಿವಾದಾತ್ಮಕ ನಿರ್ಧಾರವನ್ನು ಅಮೆರಿಕದ ಫೆಡರಲ್ ನ್ಯಾಯಾಲಯವು ಸೋಮವಾರ ರದ್ದುಗೊಳಿಸಿದೆ. ಸರ್ಕಾರದ ಈ ಕ್ರಮವು ಸಂಸತ್ತಿನ (ಕಾಂಗ್ರೆಸ್) ಅನುಮೋದನೆ ಇಲ್ಲದ “ಕಾನೂನುಬಾಹಿರ ತೆರಿಗೆ” ಎಂದು ನ್ಯಾಯಾಲಯದ ಹೇಳಿದ್ದು, ಟ್ರಂಪ್ ಆಡಳಿತಕ್ಕೆ ಭಾರಿ ಮುಖಭಂಗ ಉಂಟಾದೆ.
ಬಾಸ್ಟನ್‌ನ ಅಮೆರಿಕದ ಡಿಸ್ಟ್ರಿಕ್ಟ್ ಜಡ್ಜ್ ಲಿಯೋ ಸೊರೊಕಿನ್ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ. ಟ್ರಂಪ್ ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಕಟಿಸಿದ್ದ ಈ ಅತಿಯಾದ ಶುಲ್ಕದ ನೀತಿಯನ್ನು ಪ್ರಶ್ನಿಸಿ, 20 ಡೆಮಾಕ್ರಟಿಕ್ ಪಕ್ಷದ ರಾಜ್ಯ ಅಟಾರ್ನಿ ಜನರಲ್‌ಗಳು ಜಂಟಿಯಾಗಿ ಮೊಕದ್ದಮೆ ಹೂಡಿದ್ದರು.
ಕೋರ್ಟ್ ಹೇಳಿದ್ದೇನು?
ಅಮೆರಿಕದ ಫೆಡರಲ್ ವಲಸೆ ಕಾನೂನಿನ ಅಡಿಯಲ್ಲಿ ವಿದೇಶಿ ಪ್ರಜೆಗಳ ಪ್ರವೇಶವನ್ನು ನಿರ್ಬಂಧಿಸಲು ಅಧ್ಯಕ್ಷರಿಗೆ ಕಾನೂನಾತ್ಮಕ ಅಧಿಕಾರವಿದ್ದು, ಅದರ ಭಾಗವಾಗಿಯೇ ಈ ಹಣಕಾಸಿನ ದಂಡವನ್ನು ವಿಧಿಸಲಾಗಿದೆ ಎಂದು ಟ್ರಂಪ್ ಆಡಳಿತವು ವಾದಿಸಿತ್ತು. ಆದರೆ ಈ ವಾದವನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ.
“ಕಾಂಗ್ರೆಸ್ (ಅಮೆರಿಕ ಸಂಸತ್ತು) ಶಾಸನದ ಮೂಲಕ ಸ್ಪಷ್ಟವಾಗಿ ಅಧಿಕಾರ ನೀಡದ ಹೊರತು, ಯಾವುದೇ ತೆರಿಗೆಯನ್ನು ವಿಧಿಸಲು ಅಧ್ಯಕ್ಷರಿಗೆ ಯಾವುದೇ ಅಧಿಕಾರವಿರುವುದಿಲ್ಲ. ಪ್ರಸ್ತುತ ಜಾರಿಗೆ ತಂದಿರುವ ನೀತಿಯು ಅಗತ್ಯ ಮುಂಜಾಗ್ರತಾ ಅನುಮೋದನೆಗಳಿಲ್ಲದೆ ಎಚ್-1ಬಿ ಅರ್ಜಿಗಳ ಮೇಲೆ ನೇರವಾಗಿ ತೆರಿಗೆ ವಿಧಿಸುವಂತಿದೆ. ಆದ್ದರಿಂದ ಈ ನೀತಿಯನ್ನು ಕಾನೂನುಬಾಹಿರ ಎಂದು ಘೋಷಿಸಿ, ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ (ವ್ಯಾಕೇಟ್),” ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಕುಸಿದಿದ್ದ ವೀಸಾ ಅರ್ಜಿಗಳ ಸಂಖ್ಯೆ:
ಅಮೆರಿಕವು ವಾರ್ಷಿಕವಾಗಿ 65,000 ಸಾಮಾನ್ಯ ಎಚ್-1ಬಿ ವೀಸಾಗಳನ್ನು ಮತ್ತು ಉನ್ನತ ಪದವಿ ಹೊಂದಿರುವ ಉದ್ಯೋಗಿಗಳಿಗೆ ಹೆಚ್ಚುವರಿ 20,000 ವೀಸಾಗಳನ್ನು 3 ರಿಂದ 6 ವರ್ಷಗಳ ಅವಧಿಗೆ ನೀಡುತ್ತದೆ. ಈ ಹಿಂದೆ ಅಮೆರಿಕದ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಕೇವಲ $2,000 ರಿಂದ $5,000 ವರೆಗೆ ಶುಲ್ಕ ಪಾವತಿಸುತ್ತಿದ್ದವು. ಆದರೆ ಟ್ರಂಪ್ ಸರ್ಕಾರ ಇದನ್ನು ಏಕಾಏಕಿ $1,00,000 ಕ್ಕೆ ಏರಿಸಿದ್ದರಿಂದ ಉದ್ಯೋಗದಾತರು ಅರ್ಜಿ ಸಲ್ಲಿಸಲು ಹಿಂದೇಟು ಹಾಕಿದ್ದರು.
ಸರ್ಕಾರವೇ ಕೋರ್ಟ್‌ಗೆ ಸಲ್ಲಿಸಿದ ಅಂಕಿ-ಅಂಶಗಳ ಪ್ರಕಾರ, ಫೆಬ್ರವರಿ 15ರ ವೇಳೆಗೆ ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ (USCIS) ಇಲಾಖೆಗೆ ಕೇವಲ 85 ಅರ್ಜಿಗಳಿಂದ ಮಾತ್ರ ಈ ಹೆಚ್ಚುವರಿ ಶುಲ್ಕ ಸಂದಾಯವಾಗಿತ್ತು. ಇದರ ಬೆನ್ನಲ್ಲೇ ಕಳೆದ ತಿಂಗಳು ಬಿಡುಗಡೆಯಾದ ವರದಿಯಲ್ಲಿ, ಸೂಕ್ತವಾಗಿ ಸಲ್ಲಿಕೆಯಾದ ಎಚ್-1ಬಿ ನೋಂದಣಿಗಳು ಶೇ. 38.5 ರಷ್ಟು ಭಾರಿ ಕುಸಿತ ಕಂಡಿರುವುದು ಬಹಿರಂಗವಾಗಿತ್ತು. ಕಳೆದ ಹಣಕಾಸು ವರ್ಷದಲ್ಲಿ (2026) 3,43,981 ರಷ್ಟಿದ್ದ ಅರ್ಜಿಗಳ ಸಂಖ್ಯೆ, ಪ್ರಸಕ್ತ ಸಾಲಿಗೆ (2027) 2,11,600 ಕ್ಕೆ ಕುಸಿದಿತ್ತು. ಆದರೆ ಟ್ರಂಪ್ ಸರ್ಕಾರ ಮಾತ್ರ “ವಿದೇಶಿ ಉದ್ಯೋಗಿಗಳಿಂದ ಅಮೆರಿಕನ್ನರಿಗೆ ಆಗುತ್ತಿದ್ದ ವೀಸಾ ದುರುಪಯೋಗದ ದಿನಗಳು ಕೊನೆಗೊಂಡಿವೆ” ಎಂದು ಇದನ್ನು ಸಮರ್ಥಿಸಿಕೊಂಡಿತ್ತು.
ಟ್ರಂಪ್ ಸರ್ಕಾರದ ವಾದ ಏನಿತ್ತು?
ವಿದೇಶಿ ಉದ್ಯೋಗಿಗಳ ಮೇಲಿನ ಶುಲ್ಕ ಹೆಚ್ಚಳಕ್ಕೆ ಟ್ರಂಪ್ ಅವರ ಪ್ರಕಟಣೆಯು ತನ್ನದೇ ಆದ ಕಾರಣಗಳನ್ನು ನೀಡಿತ್ತು. “ಎಚ್-1ಬಿ ಕಾರ್ಯಕ್ರಮವನ್ನು ಅಮೆರಿಕನ್ ಕಾರ್ಮಿಕರಿಗೆ ಪೂರಕವಾಗಿ ಬಳಸುವ ಬದಲು, ಉದ್ದೇಶಪೂರ್ವಕವಾಗಿ ಕಡಿಮೆ ಸಂಬಳದ, ಕಡಿಮೆ ಕೌಶಲ್ಯದ ವಿದೇಶಿ ಕಾರ್ಮಿಕರನ್ನು ಅಮೆರಿಕನ್ನರ ಜಾಗದಲ್ಲಿ ತುಂಬಿಸಲು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದು ದೇಶದ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದಿದೆ,” ಎಂದು ಪ್ರಕಟಣೆಯಲ್ಲಿ ದೂರಲಾಗಿತ್ತು. ಅಲ್ಲದೆ, ಕೆಲವು ಉದ್ಯೋಗದಾತ ಕಂಪನಿಗಳು ವ್ಯವಸ್ಥಿತವಾಗಿ ವೇತನವನ್ನು ಕಡಿಮೆ ಮಾಡಲು ಈ ವೀಸಾಗಳನ್ನು ಬಳಸುತ್ತಿದ್ದು, ಇದರಿಂದ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳಲ್ಲಿ ಅರ್ಹ ಅಮೆರಿಕನ್ನರಿಗೆ ಉದ್ಯೋಗ ಸಿಗದಂತಾಗಿದೆ ಎಂದು ವಾದಿಸಲಾಗಿತ್ತು.
ಭಾರತದ ಮೇಲಾದ ಭೀಕರ ಪರಿಣಾಮ:
ಟ್ರಂಪ್ ಸರ್ಕಾರದ ಈ ಕಠಿಣ ನಿಯಮಗಳು ಮತ್ತು ಶುಲ್ಕ ಹೆಚ್ಚಳದ ನಿರ್ಧಾರವು ಭಾರತ ಮತ್ತು ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಅತ್ಯಂತ ಭೀಕರ ಪರಿಣಾಮ ಬೀರಿದೆ. ಮತ್ತೊಂದೆಡೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಬ್ಬರದಿಂದಾಗಿ ಸಾವಿರಾರು ಐಟಿ ಉದ್ಯೋಗ ಕಡಿತಗಳು ಸಂಭವಿಸುತ್ತಿವೆ. ಇದರಿಂದಾಗಿ ಅಮೆರಿಕದ ಕಂಪನಿಗಳು ವಿದೇಶಿ ಪ್ರಜೆಗಳನ್ನು ಹೊಸದಾಗಿ ಕೆಲಸಕ್ಕೆ ತೆಗೆದುಕೊಳ್ಳಲು ಹೆದರುತ್ತಿದ್ದು, ಭಾರಿ ಉದ್ಯೋಗದ ಶೂನ್ಯತೆ ನಿರ್ಮಾಣವಾಗಿದೆ.
ಅಮೆರಿಕದ ವಲಸೆ ನಿಯಮಗಳ ಪ್ರಕಾರ, ಕೆಲಸ ಕಳೆದುಕೊಂಡ ವಿದೇಶಿ ಉದ್ಯೋಗಿಗಳಿಗೆ ಕೇವಲ 60 ದಿನಗಳ ಕಾಲಾವಕಾಶ (Grace Period) ಇರುತ್ತದೆ. ಅಷ್ಟರೊಳಗೆ ಹೊಸ ಕೆಲಸ ಹುಡುಕಿಕೊಳ್ಳದಿದ್ದರೆ ಅವರು ದೇಶ ಬಿಡಬೇಕಾಗುತ್ತದೆ. ಈ ನಿಯಮದಿಂದಾಗಿ ಕೆಲಸ ಕಳೆದುಕೊಂಡು ಹೊಸ ಕೆಲಸ ಸಿಗದ ಸಾವಿರಾರು ಭಾರತೀಯ ತಂತ್ರಜ್ಞರು ಅನಿವಾರ್ಯವಾಗಿ ಸ್ವದೇಶಕ್ಕೆ ಮರಳುವಂತಾಗಿದೆ. ಇದರಿಂದ ಭಾರತದಿಂದ ಸಲ್ಲಿಕೆಯಾಗುವ ವೀಸಾ ಅರ್ಜಿಗಳ ಸಂಖ್ಯೆಯೂ ಗಣನೀಯವಾಗಿ ಕುಸಿದಿದೆ.
ಭಾರತದ ಕಳವಳಕ್ಕೆ ಅಮೆರಿಕದ ಪ್ರತಿಕ್ರಿಯೆ:
ಕಳೆದ ಮೇ ತಿಂಗಳಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಅವರು ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಮಾರ್ಕೊ ರೂಬಿಯೋ ಅವರೊಂದಿಗೆ ಮಾತುಕತೆ ನಡೆಸಿದಾಗ ಈ ವೀಸಾ ಕಳವಳದ ವಿಷಯವನ್ನು ಪ್ರಸ್ತಾಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಮಾರ್ಕೊ ರೂಬಿಯೋ, “ಅಮೆರಿಕದ ವಲಸೆ ವ್ಯವಸ್ಥೆಯನ್ನು ಸುಧಾರಿಸುವ ಈ ಪರಿವರ್ತನೆಯ ಹಂತದಲ್ಲಿ ಕೆಲವು ‘ಏರುಪೇರುಗಳು’ (Bumps) ಮತ್ತು ‘ಘರ್ಷಣೆಯ ಬಿಂದುಗಳು’ (Friction points) ಎದುರಾಗುವುದು ಸಹಜ. ಆದರೆ ಅಂತಿಮವಾಗಿ ರೂಪಿತವಾಗಲಿರುವ ‘ದಕ್ಷ’ ವ್ಯವಸ್ಥೆಯು ಪ್ರತಿಯೊಬ್ಬ ಪಾಲುದಾರರಿಗೂ ನೆರವಾಗಲಿದೆ,” ಎಂದು ಭರವಸೆ ನೀಡಿದ್ದರು.
ಅಲ್ಲದೆ, ಈ ಕಠಿಣ ಕ್ರಮಗಳು ಭಾರತವನ್ನು ಗುರಿಯಾಗಿಸಿಕೊಂಡು ಮಾಡಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದ ರೂಬಿಯೋ, “ಕಳೆದ ಕೆಲವು ವರ್ಷಗಳಲ್ಲಿ ಸುಮಾರು 2 ಕೋಟಿಗೂ ಹೆಚ್ಚು (20 Million) ಜನರು ಅಕ್ರಮವಾಗಿ ಅಮೆರಿಕದ ಗಡಿಯೊಳಗೆ ನುಗ್ಗಿದ್ದಾರೆ. ಅಮೆರಿಕ ಪ್ರಸ್ತುತ ಎದುರಿಸುತ್ತಿರುವ ಈ ಬೃಹತ್ ‘ವಲಸೆ ಬಿಕ್ಕಟ್ಟನ್ನು’ (Migration Crisis) ಪರಿಹರಿಸಲು ನಾವು ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿ ಬಂದಿದೆಯೇ ಹೊರತು, ಇದಕ್ಕೆ ಭಾರತ ಕಾರಣವಲ್ಲ,” ಎಂದು ಸ್ಪಷ್ಟನೆ ನೀಡಿದ್ದರು.
ಇದೀಗ ಕೋರ್ಟ್ ಈ ಶುಲ್ಕವನ್ನು ರದ್ದುಗೊಳಿಸಿರುವುದರಿಂದ ಭಾರತೀಯ ಐಟಿ ವಲಯ ಮತ್ತು ಉದ್ಯೋಗಿಗಳಿಗೆ ಸದ್ಯಕ್ಕೆ ದೊಡ್ಡ ಮಟ್ಟದ ಸಮಾಧಾನ ಸಿಕ್ಕಂತಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ