ಶಿರಸಿ : ಹಿರಿಯ ಪತ್ರಕರ್ತ ಪಿ.ಎಸ್.ಸದಾನಂದ ನಿಧನಕ್ಕೆ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ

ಶಿರಸಿ: ಮಂಗಳವಾರ ನಿಧನರಾದ ಹಿರಿಯ ಪತ್ರಕರ್ತ ಹಾಗೂ ಲೋಕಧ್ವನಿ ಪತ್ರಿಕೆಯ ಮಾಜಿ ಸಂಪಾದಕ ಪಿ.ಎಸ್.ಸದಾನಂದ ಅವರಿಗೆ ಬುಧವಾರ ನಗರದ ಪತ್ರಿಕಾಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಿತ್ತು. ಪಿ.ಎಸ್.ಸದಾನಂದ ಅವರು ಸುದೀರ್ಘ ಅವಧಿಯವರೆಗೆ ಪತ್ರಿಕಾ ಕ್ಷೇತ್ರದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸಲ್ಲಿಸಿದ ಸೇವೆ ಸಲ್ಲಿಸಿದ್ದನ್ನು ಸ್ಮರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಅಡಿ ಮಾತನಾಡಿ, ಪತ್ರಕರ್ತರು ಸಂಘಟಿತರಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ.‌ ಪತ್ರಿಕೆ ಹೊರತರಲು ಕಷ್ಟಪಡುತ್ತಿದ್ದ ಪರಿಸ್ಥಿತಿಯಲ್ಲಿ ಸದಾನಂದ ಅವರು ಮೊಳೆ ಜೋಡಿಸಿ, ಬೆಳಿಗ್ಗೆಯಿಂದ ತಡ ರಾತ್ರಿಯವರೆಗೂ ಕೆಲಸ ಮಾಡುತ್ತಿದ್ದರು. ಉತ್ತರಕನ್ನಡದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ ಹಿರಿಯಣ್ಣನಾದ ಅವರು ಪತ್ರಿಕೋದ್ಯಮ ಬೆಳೆಯಲು ಹೆಗಲುಕೊಟ್ಟ ವ್ಯಕ್ತಿಯಾಗಿದ್ದರು. ವರದಿಗಾರರಾಗಿ, ಉಪ ಸಂಪಾದಕರಾಗಿ, ಸಂಪಾದಕರಾಗಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಪಿ.ಎಸ್.ಸದಾನಂದ ನಮ್ಮನ್ನು ಅಗಲಿದ್ದಾರೆ. ಅವರ ಅಗಲಿಕೆಯ ದುಃಖವನ್ನು ಕುಟುಂಬಸ್ಥರಿಗೆ ಸಹಿಸುವ ಶಕ್ತಿ ನೀಡಲಿ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಬೀದರ : ಶಾಲೆಯ 4ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು ; ಕಿರುಕುಳ ಕಾರಣ ಎಂದು ಪೋಷಕರ ಆರೋಪ

ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಕೆರೆಗದ್ದೆ ಮಾತನಾಡಿ, ಆಕಸ್ಮಿಕವಾಗಿ ಪತ್ರಿಕಾ ಕ್ಷೇತ್ರಕ್ಕೆ ಬಂದ ನನಗೆ ಸದಾನಂದರು ಗುರುಗಳಾಗಿದ್ದರು. ಸಾವಧಾನವಾಗಿ ಸುದ್ದಿ ಬರವಣಿಯನ್ನು ಕಲಿಸಿಕೊಡುತ್ತಿದ್ದರು. ಸುದ್ದಿಗೆ ನ್ಯಾಯ ನೀಡುತ್ತಿದ್ದರು. ಸರಳ ಮತ್ತು ಸಜ್ಜನಿಕೆಗೆ ಹೆಸರಾಗಿರುವ ಪಿ.ಎಸ್.ಸದಾನಂದ ಅವರು ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಅವರ ಆದರ್ಶ, ಮೌಲ್ಯಗಳನ್ನು ಅಳವಡಿಸಿಕೊಂಡು, ಅವರು ಹಾಕಿಕೊಟ್ಟ ದಾರಿಯಲ್ಲಿ‌ ಮುನ್ನಡೆಯೋಣ ಎಂದರು.
ದೈನಿಕ ಸತ್ಯಸಾರ ಪತ್ರಿಕೆಯ ಪ್ರಧಾನ ಸಂಪಾದಕ ಪರಮಾನಂದ ಹೆಗಡೆ ಮಾತನಾಡಿ, ಮುಂಡಗೋಡದಲ್ಲಿ ಝರಾಕ್ಸ್ ಅಂಗಡಿಯ ಮೊದಲು ಪ್ರಾರಂಭಿಸಿ, ನಂತರ ಲೋಕಧ್ವನಿಯ ಮುಂಡಗೋಡ ತಾಲೂಕು ವರದಿಗಾರನಾಗಿ ಉತ್ತಮ ರೀತಿಯಲ್ಲಿ ಸುದ್ದಿ ಮಾಡಿ ಜನಪ್ರಿಯತೆ ಗಳಿಸಿದ್ದರು. ಶಿರಸಿಗೆ ಆಗಮಿಸಿದ ವೇಳೆ ಮುಖಾಮುಖಿಯಾಗಿ ಭೇಟಿಯಾಗುತ್ತಿದ್ದೆವು. ಸ್ನೇಹ ಜೀವಿಯಾಗಿದ್ದ ಅವರ ನೆನಪು ಸದಾ ಉಳಿಯುತ್ತದೆ. ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದರು.

ಜನಮಾಧ್ಯಮ ಪತ್ರಿಕೆಯ ಸಂಪಾದಕ ಶ್ರೀಧರ ಮಂಗಳೂರು ಮಾತನಾಡಿ, ನನ್ನ ಪತ್ರಿಕೋದ್ಯಮದ ತೀರಾ ಆರಂಭದ ದಿನಗಳಲ್ಲಿ ಸುದ್ದಿಯ ಒಳಹೊರಗಿನ ಮಾಹಿತಿಗಳನ್ನು ಮಾರ್ಗದರ್ಶಕರಾಗಿ, ಶಿಕ್ಷಕರಾಗಿ, ಪರೀಕ್ಷಕಾಗಿ ಕಲಿಸಿದ್ದರು. ಆ ಸಂದರ್ಭ ನೆನಪಿಸಿಕೊಂಡರೆ ದುಃಖವಾಗುವುದು ಸಹಜ. ಅವರ ವ್ಯಕ್ತಿತ್ವದಲ್ಲಿ ಹತ್ತು ವರ್ಷಗಳ ಕಾಲ ಅವರ ಜೊತೆ ಕೆಲಸ ಮಾಡಿದ್ದೇನೆ. ಅವರು ಇನ್ನೊಬ್ಬರ ಭಾವನೆಯನ್ನು ಗೌರವಿಸುವ ಗುಣ ಹೊಂದಿದ್ದರು. ಅವರು ವೈಯಕ್ತಿಕ ಟೀಕೆಯನ್ನು ಎಂದು ಮಾಡಿದವರಲ್ಲ. ಆರೋಗ್ಯವಾಗಿದ್ದವರು ಏಕಾಏಕಿ ನಿಧನರಾಗಿರುವುದು ಬಹಳ ದುಃಖದ ಸಂಗತಿ ಎಂದರು.
ತತ್ವ ನಿಷ್ಠ ಪತ್ರಿಕೆಯ ಪ್ರಧಾನ ಸಂಪಾದಕ ಪ್ರವೀಣ ಹೆಗಡೆ ಕರ್ಜಗಿ ಮಾತನಾಡಿ, ಹಿರಿಯರ ಪತ್ರಕರ್ತರ ಆದರ್ಶಗಳನ್ನು ಪಾಲಿಸುವುದು ಅತಿ ಮುಖ್ಯವಾಗಿದೆ. 36 ವರ್ಷ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವುದು ಗಮನಾರ್ಹವಾಗಿದೆ ಎಂದರು.
ಪತ್ರಕರ್ತರಾದ ಮಂಜುನಾಥ ಸಾಯಿಮನೆ, ಜೆ.ಆರ್ .ಸಂತೋಷಕುಮಾರ, ರಾಜು ಕಾನಸೂರು, ರವಿ ಹೆಗಡೆ ಗಡಿಹಳ್ಳಿ, ಜಯಂತ ಭಟ್ಟ ಮತ್ತಿತರರು ಸದಾನಂದ ಅವರ ವ್ಯಕ್ತಿತ್ವದ ಕುರಿತು ಮಾತನಾಡಿದರು. ಹಿರಿಯ ಪತ್ರಕರ್ತ ಪ್ರದೀಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ಸಂದೇಶ ಭಟ್ಟ ವಂದಿಸಿದರು.

ಪ್ರಮುಖ ಸುದ್ದಿ :-   ಬೀದರ : ಶಾಲೆಯ 4ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು ; ಕಿರುಕುಳ ಕಾರಣ ಎಂದು ಪೋಷಕರ ಆರೋಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement