
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು (10 ಜೂನ್ 2026) ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿಗೆ ಸೇವೆ ಸಲ್ಲಿಸಿದ ‘ಚುನಾಯಿತ ಪ್ರಧಾನಿ’ ಎಂಬ ಅಭೂತಪೂರ್ವ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಇದರೊಂದಿಗೆ ಅವರು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಹೆಸರಿನಲ್ಲಿದ್ದ ಸುದೀರ್ಘಾವಧಿಯ ದಾಖಲೆಯನ್ನು ಮುರಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ 26 ಮೇ 2014 ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದಿನಿಂದ ಇಂದಿನವರೆಗೆ (10 ಜೂನ್ 2026) ಅವರ ನಿರಂತರ ಆಡಳಿತಾವಧಿ 4,399 ದಿನಗಳನ್ನು ಪೂರೈಸಿದೆ. ಇದಕ್ಕೂ ಮುನ್ನ, ದೇಶದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ 13 ಮೇ 1952 ರಂದು ಚುನಾಯಿತ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಪಂಡಿತ್ ಜವಾಹರಲಾಲ ನೆಹರು ಅವರು 27 ಮೇ 1964 ರವರೆಗೆ ಒಟ್ಟು 4,398 ದಿನಗಳ ಕಾಲ ಚುನಾಯಿತ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. 1952 ರಿಂದ ನೆಹರೂ ಅವರ ಅಧಿಕಾರಾವಧಿಯನ್ನು ಪರಿಗಣಿಸಲಾಗುತ್ತದೆ, ಏಕೆಂದರೆ ದೇಶದ ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆಯುವ ಮೊದಲು 1947 ಮತ್ತು 1952 ರ ನಡುವೆ ಅವರು ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ 14 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದ್ದರೂ, ಅವರ ಅಧಿಕಾರಾವಧಿ ನಿರಂತರವಾಗಿರಲಿಲ್ಲ, ಇದು ದೇಶದ ಇತಿಹಾಸದಲ್ಲಿ ಮೋದಿ ಅವರನ್ನು ಅತ್ಯಂತ ಹೆಚ್ಚು ಕಾಲ ನಿರಂತರವಾಗಿ ಆಯ್ಕೆಯಾದ ಪ್ರಧಾನಿಯನ್ನಾಗಿ ಮಾಡಿದೆ.
ಇಂದು, ಬುಧವಾರ ( (10 ಜೂನ್ 2026) ಪ್ರಧಾನಿ ಮೋದಿ ಅವರು ಈ ದಾಖಲೆಯನ್ನು ದಾಟಿ, ದೇಶದ ಇತಿಹಾಸದಲ್ಲೇ ಸುದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಹೊರಹೊಮ್ಮಿದ್ದಾರೆ. 2014 ರಲ್ಲಿ ಅವರು ತಮ್ಮ ಮೊದಲ ಪ್ರಮಾಣವಚನ ಸ್ವೀಕಾರ ಸಮಾರಂಭದಿಂದ ಹಿಡಿದು 2024 ರಲ್ಲಿ ಐತಿಹಾಸಿಕ ಮೂರನೇ ಅವಧಿಗೆ ಸತತವಾಗಿ ಪ್ರಧಾನಿಯಾಗಿ ಮುಂದುವರಿದಿದ್ದಾರೆ.
ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ನಂತರ ಮೋದಿ ಮೇ 26, 2014 ರಂದು ಅಧಿಕಾರ ವಹಿಸಿಕೊಂಡರು. 2019 ರಲ್ಲಿ ಅವರು ದೊಡ್ಡ ಬಹುಮತದೊಂದಿಗೆ ಮರು ಆಯ್ಕೆಯಾದರು, ಅವರ ಎರಡನೇ ಅವಧಿ ಅದೇ ವರ್ಷ ಮೇ 30 ರಂದು ಪ್ರಾರಂಭವಾಯಿತು.2024 ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮರು ಐಕೆಯಾಗಿ ಅವರ ಸತತ ಮೂರನೇ ಅವಧಿ ಜೂನ್ 9, 2024 ರಂದು ಪ್ರಾರಂಭವಾಯಿತು.
1.4 ಬಿಲಿಯನ್‌ಗಿಂತಲೂ (140 ಕೋಟಿ) ಹೆಚ್ಚು ಜನಸಂಖ್ಯೆ ಹೊಂದಿರುವ, ಭಾಷೆ, ಸಂಸ್ಕೃತಿ, ಧರ್ಮ ಮತ್ತು ಭೌಗೋಳಿಕವಾಗಿ ಅಪಾರ ವೈವಿಧ್ಯತೆಗಳಿಂದ ಕೂಡಿರುವ ಭಾರತದಂತಹ ಬೃಹತ್ ದೇಶವನ್ನು ಮುನ್ನಡೆಸುವುದು ಅತ್ಯಂತ ಸಂಕೀರ್ಣವಾದ ಸವಾಲಾಗಿದೆ.
ಸ್ವತಂತ್ರ ಅಂತಾರಾಷ್ಟ್ರೀಯ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವದ ಅತ್ಯಂತ ಜನಪ್ರಿಯ ಪ್ರಜಾಪ್ರಭುತ್ವ ನಾಯಕರಲ್ಲಿ ಸದಾ ಮುಂಚೂಣಿಯಲ್ಲಿ ಗುರುತಿಸುತ್ತಾ ಬಂದಿವೆ. ಇದರ ಜೊತೆಗೆ, ಜಗತ್ತಿನ 30 ಕ್ಕೂ ಹೆಚ್ಚು ದೇಶಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಪ್ರಧಾನಿ ಮೋದಿ ಅವರನ್ನು ಗೌರವಿಸಿವೆ.
ಪ್ರಧಾನಿ ಮೋದಿ ಅವರ ಆಡಳಿತಾವಧಿಯಲ್ಲಿ ದೇಶದ ಸುಮಾರು 250 ಮಿಲಿಯನ್ (25 ಕೋಟಿ) ಜನರು ಬಹು ಆಯಾಮದ ಬಡತನದ ರೇಖೆಗಿಂತ ಮೇಲೆ ಬಂದಿದ್ದಾರೆ. ದೇಶದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (Digital Public Infrastructure) ಬೃಹತ್ ಪ್ರಮಾಣದಲ್ಲಿ ವಿಸ್ತರಣೆಯಾಗಿದೆ. ಹೊಸ ಸಂಸತ್ತಿನ ಕಟ್ಟಡ ಸೆಂಟ್ರಲ್ ವಿಸ್ಟಾ ನಿರ್ಮಾಣ, ಕರ್ತವ್ಯ ಪಥ, ವಂದೇ ಭಾರತ ರೈಲುಗಳು, ಏಕತಾ ಪ್ರತಿಮೆ, ಐಎನ್‌ಎಸ್ ವಿಕ್ರಾಂತ, ಕಾಶ್ಮೀರ ರೈಲು ಸಂಪರ್ಕ, ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗಂಗಾ ಎಕ್ಸ್‌ಪ್ರೆಸ್‌ವೇ ಸೇರಿದಂತೆ ಹಲವಾರು ಉನ್ನತ ಮಟ್ಟದ ಮೂಲಸೌಕರ್ಯ ಮತ್ತು ರಾಷ್ಟ್ರ ನಿರ್ಮಾಣ ಯೋಜನೆಗಳಿಂದ ಗುರುತಿಸಲ್ಪಟ್ಟಿದೆ. ರಸ್ತೆ, ರೈಲ್ವೆ ಸೇರಿದಂತೆ ಬೃಹತ್ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಜನಕಲ್ಯಾಣ ಯೋಜನೆಗಳು ಅರ್ಹರಿಗೆ ನೇರವಾಗಿ ತಲುಪುವಂತೆ ಸುಧಾರಣೆ ತರಲಾಗಿದೆ.
ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಭಾರತ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ವಿಶ್ವದ ಪ್ರಮುಖ ದೇಶಗಳೊಂದಿಗೆ ಪ್ರಮುಖ ಮುಕ್ತ ವ್ಯಾಪಾರ ಒಪ್ಪಂದಗಳನ್ನು (Trade Agreements) ಮಾಡಿಕೊಳ್ಳಲಾಗಿದೆ. ಜಾಗತಿಕ ಅಭಿವೃದ್ಧಿ, ತಂತ್ರಜ್ಞಾನ, ಹವಾಮಾನ ವೈಪರೀತ್ಯದ ವಿರುದ್ಧದ ಹೋರಾಟ ಮತ್ತು ‘ಗ್ಲೋಬಲ್ ಸೌತ್’ (ಅಭಿವೃದ್ಧಿಶೀಲ ರಾಷ್ಟ್ರಗಳ) ಹಿತಾಸಕ್ತಿಗಳ ಪರವಾಗಿ ಭಾರತ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಪ್ರಭಾವಶಾಲಿ ಧ್ವನಿಯಾಗಿ ಹೊರಹೊಮ್ಮಿದೆ. ಒಟ್ಟಾರೆಯಾಗಿ, ಪ್ರಧಾನಿ ನರೇಂದ್ರ ಮೋದಿ ಅವರ ಈ 4,399 ದಿನಗಳ ಆಡಳಿತಾವಧಿಯು ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದಿದೆ.
ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ 12 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾದ ಗೌರವಾರ್ಥವಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಬುಧವಾರದೆಹಲಿಯಲ್ಲಿ ಸಭೆ ನಡೆಸಲಿದೆ.
ಭಾರತ ಮಂಟಪದಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರಧಾನಿ ಮೋದಿ, 22 ಎನ್‌ಡಿಎ ಆಡಳಿತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಹಾಗೂ ಮೈತ್ರಿಕೂಟದ ಘಟಕ ಪಕ್ಷಗಳ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಅಭಿನಂದಿಸುವ ನಿರ್ಣಯವನ್ನು ಎನ್‌ಡಿಎ ಅಂಗೀಕರಿಸುವ ಸಾಧ್ಯತೆಯಿದೆ.



ನಿಮ್ಮ ಕಾಮೆಂಟ್ ಬರೆಯಿರಿ