ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ

ಫಿರೋಜಾಬಾದ್ (ಉತ್ತರ ಪ್ರದೇಶ): ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ ಭಾಗವತ್ ಅವರು ಪ್ರಯಾಣಿಸುತ್ತಿದ್ದ ದೆಹಲಿ ಮುಖಿ ‘ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್’ ರೈಲಿನ ಮೇಲೆ ಗುರುವಾರ ಸಂಜೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಚಲಿಸುತ್ತಿದ್ದ ರೈಲಿನ ಕೋಚ್ ಒಂದರ ಕಿಟಕಿ ಗಾಜು ಜಖಂಗೊಂಡಿದೆ.
ಆದರೆ, ಘಟನೆಯಲ್ಲಿ ಮೋಹನ ಭಾಗವತ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ತುಂಡ್ಲಾ ಜಂಕ್ಷನ್‌ನಲ್ಲಿ ರೈಲನ್ನು ಕೆಲಕಾಲ ಸ್ಥಗಿತಗೊಳಿಸಿದ ಬಳಿಕ, ಅದು ತನ್ನ ಮುಂದಿನ ಪ್ರಯಾಣವನ್ನು ಮುಂದುವರೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಇನ್ಸ್‌ಪೆಕ್ಟರ್ ಶೇರ್ ಸಿಂಗ್ ಅವರು ನೀಡಿರುವ ಮಾಹಿತಿ ಪ್ರಕಾರ, ಕಾನ್ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಸಂಜೆ ಸುಮಾರು 7:20 ರ ವೇಳೆಗೆ ಫಿರೋಜಾಬಾದ್ ಜಿಲ್ಲೆಯ ಮೂಲಕ ಹಾದುಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ರೈಲು ಮಕ್ಕನ್‌ಪುರ ನಿಲ್ದಾಣವನ್ನು ದಾಟಿದ ತಕ್ಷಣ, ಇ-1 (E-1) ಕೋಚ್‌ನ ಕಿಟಕಿಗೆ ಕಲ್ಲು ಬಡಿದ ಪರಿಣಾಮ ಅದರ ಗಾಜು ಬಿರುಕು ಬಿಟ್ಟಿದೆ.
ಘಟನೆ ನಡೆದ ತಕ್ಷಣ ತುಂಡ್ಲಾ ಜಂಕ್ಷನ್‌ನ ಹೊರ ಸಿಗ್ನಲ್ ಬಳಿ ರೈಲನ್ನು ನಿಲ್ಲಿಸಲಾಯಿತು. ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಮತ್ತು ಪೊಲೀಸ್ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
“ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರು ಕಲ್ಲು ತಗುಲಿದ ಅದೇ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಅವರು ಕಿಟಕಿಯ ವಿರುದ್ಧ ಬದಿಯ ಸೀಟಿನಲ್ಲಿ ಕುಳಿತಿದ್ದರಿಂದ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ. ರೈಲಿನಲ್ಲಿದ್ದ ಯಾವುದೇ ಪ್ರಯಾಣಿಕರಿಗೂ ಗಾಯಗಳಾಗಿಲ್ಲ” ಎಂದು ಇನ್ಸ್‌ಪೆಕ್ಟರ್ ಶೇರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ತಪಾಸಣೆಯ ನಂತರ ಸಂಜೆ 7:41 ಕ್ಕೆ ರೈಲು ದೆಹಲಿಯತ್ತ ಪ್ರಯಾಣ ಬೆಳೆಸಿದೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ:
ಘಟನೆಯ ಹಿನ್ನೆಲೆಯಲ್ಲಿ ಆಗ್ರಾ ವಲಯದ ಎಡಿಜಿ (ADG) ಎಸ್.ಕೆ. ಭಗತ್ ಮತ್ತು ಆಗ್ರಾ ವಲಯದ ಡಿಐಜಿ (DIG) ಶೈಲೇಶ ಪಾಂಡೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಗುರುತಿಸಿ ಬಂಧಿಸಲು ಜಂಟಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಕೇವಲ ಫಸ್ಟ್ ಎಸಿ ಕೋಚ್‌ನ ಹೊರಗಿನ ಕಿಟಕಿ ಗಾಜು ಮಾತ್ರ ಹಾನಿಗೊಳಗಾಗಿದೆ ಎಂದು ಎಡಿಜಿ ಭಗತ್ ತಿಳಿಸಿದ್ದಾರೆ.
ಒಬ್ಬ ವಶಕ್ಕೆ, ತನಿಖೆ ಚುರುಕು:
ಫಿರೋಜಾಬಾದ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಆದಿತ್ಯ ಲಾಂಗೇ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಸದ್ಯ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಮತ್ತು ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
“ರೈಲು ಸಂಖ್ಯೆ 12003 ಫಿರೋಜಾಬಾದ್‌ನ ರಸೂಲಪುರ ಮತ್ತು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿ ಪ್ರದೇಶದ ಮೂಲಕ ಸಂಜೆ 7:15 ರ ಸುಮಾರಿಗೆ ಹಾದುಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಎಂದು ಎಸ್ಎಸ್‌ಪಿ ಆದಿತ್ಯ ಲಾಂಗೇ ತಿಳಿಸಿದ್ದಾರೆ. ಎಸ್‌ಪಿ ಸಿಟಿ (SP City) ರವಿಶಂಕರ ಪ್ರಸಾದ ಅವರು ರೈಲ್ವೆ ಹಳಿ ಪಕ್ಕದ ಪೇಮೇಶ್ವರ ಗೇಟ್ ಬಳಿಯ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದು, ಕೃತ್ಯದಲ್ಲಿ ಭಾಗಿಯಾದ ಉಳಿದ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement