ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

ಶಹಾಜಹಾನಪುರ (ಉತ್ತರ ಪ್ರದೇಶ): ಭಾರತೀಯ ಸೇನೆಯ ಹಿರಿಯ ಅಧಿಕಾರಿ ‘ಬ್ರಿಗೇಡಿಯರ್’ ಸೋಗಿನಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ 21 ವರ್ಷದ ಯುವಕನೊಬ್ಬ ಕೊನೆಗೂ ಸೇನಾ ಅಧಿಕಾರಿಗಳು ಹೆಣೆದ ತಂತ್ರಕ್ಕೆ ಸಿಲುಕಿ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮಿಲಿಟರಿ ಶೈಲಿಯ ಐಷಾರಾಮಿ ಎಸ್‌ಯುವಿ ಕಾರು, ಬೌನ್ಸರ್‌ಗಳ ಸೆಕ್ಯುರಿಟಿಯೊಂದಿಗೆ ಬಂದಿದ್ದ ಈ ನಕಲಿ ಅಧಿಕಾರಿಯನ್ನು ಉತ್ತರ ಪ್ರದೇಶದ ಶಹಾಜಹಾನಪುರದಲ್ಲಿ ಸೇನೆ ಬಂಧಿಸಿದೆ.
ಬಂಧಿತ ಆರೋಪಿಯನ್ನು ಆರ್ಯನ್ ವರ್ಮಾ (21) ಎಂದು ಗುರುತಿಸಲಾಗಿದೆ. ಶುಕ್ರವಾರ ಶಹಾಜಹಾನಪುರ ಕ್ಯಾಂಟೋನ್ಮೆಂಟ್‌ನಲ್ಲಿರುವ ಶಹೀದ್ ಮ್ಯೂಸಿಯಂ (ಹುತಾತ್ಮರ ಸ್ಮಾರಕ) ಬಳಿ ಸೇನಾ ಸಿಬ್ಬಂದಿ ಹೂಡಿದ್ದ ನಿಖರ ಜಾಲಕ್ಕೆ ಈತ ಸಿಕ್ಕಿಬಿದ್ದಿದ್ದಾನೆ. ಕಳೆದ ಕೆಲವು ಸಮಯದಿಂದ ಈತ ಶಹಾಜಹಾನಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬ್ರಿಗೇಡಿಯರ್ ಧರಿಸುವ ಅಧಿಕೃತ ಸೇನಾ ಸಮವಸ್ತ್ರವನ್ನು ಧರಿಸಿ, ತಾನೊಬ್ಬ ಹಿರಿಯ ಮಿಲಿಟರಿ ಅಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಾ ತಿರುಗಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಬ್ರಿಗೇಡಿಯರ್ ಸಿಕ್ಕಿಬಿದ್ದದ್ದು ಹೇಗೆ?
ಆರೋಪಿ ಆರ್ಯನ್ ವರ್ಮಾ ಹಿರಿಯ ಸೇನಾ ಅಧಿಕಾರಿಯ ಸೋಗಿನಲ್ಲಿ ಓಡಾಡುತ್ತಿರುವ ಬಗ್ಗೆ ಕಳೆದ ಏಪ್ರಿಲ್ ತಿಂಗಳಿನಲ್ಲೇ ಸೇನಾ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಅಂದಿನಿಂದಲೇ ಅಧಿಕಾರಿಗಳು ಈತನ ಚಲನವಲನದ ಮೇಲೆ ಕಣ್ಣಿಟ್ಟಿದ್ದರು. ಆದರೆ, ಈತನ ನಿಖರ ಸ್ಥಳ ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ, ಕೊನೆಗೆ ಸೇನಾ ಅಧಿಕಾರಿಗಳೇ ಈತನನ್ನು ಸೆರೆಹಿಡಿಯಲು ಒಂದು ಮಾಸ್ಟರ್ ಪ್ಲಾನ್ ರೂಪಿಸಿದರು.
ಸಾಮಾನ್ಯ ನಾಗರಿಕರಂತೆ ನಟಿಸಿದ ಸೇನಾ ಅಧಿಕಾರಿಗಳು, ಆರ್ಯನ್ ವರ್ಮಾನನ್ನು ಸಂಪರ್ಕಿಸಿ, ಸೇನಾ ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಕರಿಗೆ ಪ್ರೇರಣಾದಾಯಕ ಭಾಷಣ (Motivational Speech) ನೀಡುವಂತೆ ಆಹ್ವಾನ ನೀಡಿದ್ದರು. ಈ ಕಾರ್ಯಕ್ರಮವನ್ನು ಕ್ಯಾಂಟೋನ್ಮೆಂಟ್ ಪ್ರದೇಶದ ಒಳಗಿರುವ ಶಹೀದ್ ಮ್ಯೂಸಿಯಂನಲ್ಲಿ ಆಯೋಜಿಸಲಾಗಿದೆ ಎಂದು ನಂಬಿಸಲಾಗಿತ್ತು.
ಇದನ್ನು ನಿಜವೆಂದು ನಂಬಿದ ಆರ್ಯನ್ ವರ್ಮಾ, ಶುಕ್ರವಾರ ಬೆಳಗ್ಗೆ ಬ್ರಿಗೇಡಿಯರ್ ಸಮವಸ್ತ್ರ ಧರಿಸಿ ಭಾಷಣ ಬಿಗಿಯಲು ಕಾರ್ಯಕ್ರಮಕ್ಕೆ  ಬಂದಿದ್ದ. ಹಿರಿಯ ಸೇನಾ ಅಧಿಕಾರಿಗಳ ವಾಹನಗಳಿಗೆ ಇರುವಂತೆ ಮಿಲಿಟರಿ ನಕ್ಷತ್ರಗಳು (Stars) ಮತ್ತು ಧ್ವಜವನ್ನು ಅಳವಡಿಸಲಾಗಿದ್ದ ಹ್ಯಾರಿಯರ್ ಎಸ್‌ಯುವಿ (Harrier SUV) ಕಾರಿನಲ್ಲಿ ಈತ ರಾಜಗಾಂಭೀರ್ಯದಿಂದ ಬಂದಿದ್ದ.
ಎನ್‌ಎಸ್‌ಜಿ ಕಮಾಂಡೋಗಳೆಂದು ಬಿಂಬಿಸಿಕೊಂಡಿದ್ದ ಇಬ್ಬರು ಬೌನ್ಸರ್‌ಗಳು!
ಆರೋಪಿ ಆರ್ಯನ್ ವರ್ಮಾ ಮ್ಯೂಸಿಯಂ ಆವರಣಕ್ಕೆ ಬರುತ್ತಿದ್ದಂತೆ ಸದ್ದಿಲ್ಲದೆ ಸುತ್ತುವರಿದ ಸೇನಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದರು. ಈ ಕಾರ್ಯಾಚರಣೆಯ ವೇಳೆ ಆತನ ಕಾರು ಚಾಲಕನ ಬಳಿ ಇದ್ದ ನಕಲಿ ಸರ್ಕಾರಿ ಗುರುತಿನ ಕಾರ್ಡನ್ನೂ ಜಪ್ತಿ ಮಾಡಲಾಗಿದೆ.
ವಿಚಾರಣೆ ವೇಳೆ ತನಿಖಾಧಿಕಾರಿಗಳಿಗೆ ಮತ್ತಷ್ಟು ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಆರ್ಯನ್ ವರ್ಮಾ ತನ್ನ ರಕ್ಷಣೆಗಾಗಿ ಇಬ್ಬರು ಖಾಸಗಿ ಬೌನ್ಸರ್‌ಗಳನ್ನು ಇಟ್ಟುಕೊಂಡಿದ್ದಲ್ಲದೆ, ಅವರಿಬ್ಬರೂ ದೇಶದ ಪ್ರತಿಷ್ಠಿತ ‘ರಾಷ್ಟ್ರೀಯ ಭದ್ರತಾ ಪಡೆ’ (NSG) ಕಮಾಂಡೋಗಳು ಎಂದು ಜನರಿಗೆ ಪರಿಚಯಿಸುತ್ತಿದ್ದ! ತನಗೆ ಸರ್ಕಾರದಿಂದಲೇ ವಿಶೇಷ ಭದ್ರತೆ ಒದಗಿಸಲಾಗಿದೆ ಎಂದು ಹೇಳಿಕೊಂಡು ಹಿರಿಯ ಮಿಲಿಟರಿ ಅಧಿಕಾರಿಯಂತೆ ಹವಾ ಸೃಷ್ಟಿಸುತ್ತಿದ್ದ.
ನಕಲಿ ಪಿಸ್ತೂಲ್, ಸೀಲು ಪತ್ತೆ
ಬಂಧಿತನಿಂದ ನಕಲಿ ದಾಖಲೆಗಳ ರಾಶಿಯನ್ನೇ ವಶಪಡಿಸಿಕೊಳ್ಳಲಾಗಿದೆ. ಆತನ ತಪಾಸಣೆ ನಡೆಸಿದಾಗ ಪ್ರತಿಷ್ಠಿತ ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾಲೇಜ್ (AFMC) ಡೀನ್ ಅವರ ನಕಲಿ ಸೀಲು ಹೊಂದಿದ್ದ ಗುರುತಿನ ಕಾರ್ಡ್‌ ಪತ್ತೆಯಾಗಿದ್ದು, ಇದನ್ನು ನಕಲಿ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇದರೊಂದಿಗೆ ಸೇನಾ ರೆಜಿಮೆಂಟಲ್ ಬೆತ್ತ (Cane) ಮತ್ತು ಒಂದು ನಕಲಿ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಸ್ತುತ ಬರೇಲಿಯಿಂದ ಬಂದಿರುವ ಸೇನಾ ಗುಪ್ತಚರ ಇಲಾಖೆಯ (Army Intelligence) ವಿಶೇಷ ತಂಡವು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ಇಷ್ಟೊಂದು ದೊಡ್ಡ ಮಟ್ಟದ ವಂಚನೆಯ ಜಾಲದ ಹಿಂದಿರುವ ಅಸಲಿ ಉದ್ದೇಶವೇನು ಮತ್ತು ಈತ ಯಾರಿಗೆಲ್ಲ ವಂಚಿಸಿದ್ದಾನೆ ಎಂಬ ಸಂಪೂರ್ಣ ಮಾಹಿತಿಯನ್ನು ಹೊರಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement