
ಮುಂಬೈ: ಶಿವಸೇನೆ (ಯುಬಿಟಿ) ಪಕ್ಷದಲ್ಲಿ ಬಂಡಾಯದ ಬಿರುಗಾಳಿ ತೀವ್ರಗೊಂಡಿರುವ ಬೆನ್ನಲ್ಲೇ, ಪಕ್ಷದ ಕಾರ್ಯಕರ್ತರಿಗೆ ತಮ್ಮ ನಾಯಕತ್ವದ ಮೇಲೆ ವಿಶ್ವಾಸವಿಲ್ಲದಿದ್ದರೆ ತಕ್ಷಣವೇ ಹುದ್ದೆಯಿಂದ ಕೆಳಗಿಳಿಯಲು ಸಿದ್ಧ ಎಂದು ಪಕ್ಷದ ಮುಖ್ಯಸ್ಥ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ಹೇಳಿದ್ದಾರೆ. ಕಾರ್ಯಕರ್ತರು ತಾವು ಈ ಸ್ಥಾನಕ್ಕೆ ಯೋಗ್ಯರಲ್ಲ ಎಂದು ಭಾವಿಸಿದರೆ, ಪಕ್ಷದ ಚುಕ್ಕಾಣಿಯನ್ನು ಯಾವುದೇ ಸಾಮಾನ್ಯ ಕಾರ್ಯಕರ್ತನಿಗೆ ವಹಿಸಿಕೊಡಲು ಸಿದ್ಧರಿರುವುದಾಗಿ ಅವರು ತಿಳಿಸಿದ್ದಾರೆ.
ಶಿವಸೇನೆಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, “ನಾನು ಅಧಿಕಾರಕ್ಕೆ ಅಂಟಿಕೊಳ್ಳುವ ವ್ಯಕ್ತಿಯಲ್ಲ. ಯಾರನ್ನಾದರೂ ಪಕ್ಷದ ಮುಖ್ಯಸ್ಥರನ್ನಾಗಿ ಮಾಡಲು ನಾನು ಸಿದ್ಧನಿದ್ದೇನೆ. ಆದರೆ, ಪಕ್ಷದ ಸಿದ್ಧಾಂತಕ್ಕಾಗಿ ನಾನು ನಡೆಸುತ್ತಿರುವ ಹೋರಾಟವನ್ನು ಮಾತ್ರ ಕೈಬಿಡುವುದಿಲ್ಲ. ನಾನು ಸುಲಭವಾಗಿ ಸೋಲೊಪ್ಪಿಕೊಳ್ಳುವುದಿಲ್ಲ. ಆದರೆ, ಈ ಸ್ಥಾನದಲ್ಲಿ ಮುಂದುವರಿಯಲು ನಾನು ಯೋಗ್ಯನಲ್ಲ ಎಂದು ನಿಮಗೆ ಅನ್ನಿಸಿದ ದಿನವೇ ನಾನು ಈ ಸ್ಥಾನದಿಂದ ಕೆಳಗಿಳಿಯುತ್ತೇನೆ” ಎಂದು ಭಾವುಕರಾಗಿ ನುಡಿದರು.

ನಾವು ಧೃತಿಗೆಡುವುದನ್ನು ಕೆಲವು ವಿರೋಧಿಗಳು ಕಾಯುತ್ತಿದ್ದಾರೆ, ಆದರೆ ಶಿವಸೇನೆ (ಯುಬಿಟಿ) ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಸಂಸ್ಥಾಪಕ ಬಾಳಾಸಾಹೇಬ ಠಾಕ್ರೆ ಅವರನ್ನು ಸ್ಮರಿಸಿದ ಉದ್ಧವ್, “ಪಕ್ಷಕ್ಕೆ ದ್ರೋಹ ಬಗೆದವರನ್ನು ಸುಮ್ಮನೆ ಬಿಡಬೇಡಿ, ಅವರನ್ನು ಸದೆಬಡಿಯಿರಿ ಎಂದು ಈ ಹಿಂದೆ ಬಾಳಾಸಾಹೇಬ ನಮಗೆ ಆದೇಶ ನೀಡಿದ್ದರು” ಎಂದು ಕಾರ್ಯಕರ್ತರಿಗೆ ನೆನಪಿಸಿದರು. ಇತ್ತೀಚೆಗೆ ಪಕ್ಷದ ಸಭೆಗೆ ಗೈರಾಗಿ, ನಾಯಕತ್ವದ ವಿರುದ್ಧ ಬಂಡೆದ್ದಿರುವ 9 ಲೋಕಸಭಾ ಸಂಸದರ ಪೈಕಿ 6 ಸಂಸದರನ್ನು ಉಲ್ಲೇಖಿಸಿ ಅವರು ಈ ಮಾತುಗಳನ್ನು ಆಡಿದರು.
ಮತದಾರರ ಕ್ಷಮೆ ಕೇಳಿದ ಉದ್ಧವ್:
ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ನಂಬಿ ವೋಟ್ ಹಾಕಿದ ಮತದಾರರಿಗೆ ಠಾಕ್ರೆ ಬಹಿರಂಗ ಕ್ಷಮೆಯಾಚಿಸಿದರು. “ಇಂದು ನಾನು ಮತದಾರರ ಕ್ಷಮೆ ಕೇಳುತ್ತಿದ್ದೇನೆ. ಏಕೆಂದರೆ ಅವರು ನಮಗೆ ಮತ ಹಾಕಿದರು, ಆದರೆ ನಮ್ಮ ಸಂಸದರು ಪಕ್ಷಾಂತರ ಮಾಡಿ ಕೈಕೊಟ್ಟರು,” ಎಂದರು.
ಇದೇ ವೇಳೆ, ತಾವು ಭೇಟಿಗೆ ಸಿಗುತ್ತಿರಲಿಲ್ಲ ಎಂದು ಆರೋಪಿಸಿ ಪಕ್ಷ ತೊರೆಯುತ್ತಿರುವ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, “ಇವತ್ತು ದೊಡ್ಡ ನಾಯಕರಾಗಿರುವವರನ್ನು ಬೆಳೆಸಿದ್ದೇ ಶಿವಸೇನೆ. ನಾನು ಭೇಟಿಗೆ ಸಿಗುತ್ತಿರಲಿಲ್ಲ ಎಂದಾದರೆ ನೀವು ಚುನಾವಣೆಯಲ್ಲಿ ಗೆದ್ದಿದ್ದು ಹೇಗೆ?” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಜೊತೆ ವಿಲೀನವಿಲ್ಲ:
ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯನ್ನು ಸಮರ್ಥಿಸಿಕೊಂಡ ಉದ್ಧವ್, ಕಾಂಗ್ರೆಸ್ ಜೊತೆ ಶಿವಸೇನೆ ವಿಲೀನವಾಗಲಿದೆ ಎಂಬ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. “ನಾವು 30 ವರ್ಷಗಳ ಕಾಲ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಅವರೊಂದಿಗೆ ವಿಲೀನವಾಗಲಿಲ್ಲ. ಹಾಗಿರುವಾಗ ಕಾಂಗ್ರೆಸ್ನೊಂದಿಗೆ ಹೇಗೆ ವಿಲೀನವಾಗಲು ಸಾಧ್ಯ?” ಎಂದು ಪ್ರಶ್ನಿಸಿದರು. ಹಿಂದೆ ಕಾಂಗ್ರೆಸ್ ಜೊತೆ ಭಿನ್ನಾಭಿಪ್ರಾಯಗಳಿದ್ದರೂ, ಅವರು ಎಂದಿಗೂ ಠಾಕ್ರೆ ನಿವಾಸ ‘ಮಾತೋಶ್ರೀ’ಯನ್ನು ಅವಮಾನಿಸಿಲ್ಲ ಮತ್ತು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಬಿಜೆಪಿಗಿಂತ ಕಾಂಗ್ರೆಸ್ ಎಷ್ಟೋ ವಾಸಿ ಎಂದು ಹೇಳಿದರು.
ಇದು ಬರೀ ಟ್ರೈಲರ್, ಪಿಕ್ಚರ್ ಅಬೀ ಬಾಕಿ ಹೈ : ಏಕನಾಥ ಶಿಂಧೆ
ಮತ್ತೊಂದೆಡೆ, ಇದೇ ದಿನ ನಡೆದ ಶಿವಸೇನೆಯ ಪ್ರತ್ಯೇಕ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಉದ್ಧವ್ ಠಾಕ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಉದ್ಧವ್ ಅವರು ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆ ಕೈಜೋಡಿಸುವ ಮೂಲಕ ಬಾಳಾಸಾಹೇಬ ಠಾಕ್ರೆ ಅವರ ಸಿದ್ಧಾಂತಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.
“ಬಾಳಾಸಾಹೇಬ ಅವರನ್ನು ಜೀವಮಾನವಿಡೀ ನಿಂದಿಸಿದವರ ಪಾದಪೂಜೆಯನ್ನು ನೀವು ಇಂದು ಮಾಡುತ್ತಿದ್ದೀರಿ. ಶಿವಸೇನೆಯನ್ನು ಒಡೆದ ಕಾಂಗ್ರೆಸ್ ಮತ್ತು ಎನ್ಸಿಪಿ ಮಡಿಲಲ್ಲೇ ನೀವು ಇಂದು ಕುಳಿತಿದ್ದೀರಿ” ಎಂದು ಶಿಂಧೆ ಟೀಕಿಸಿದರು.
ಪಕ್ಷದಲ್ಲಿನ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಶಿಂಧೆ, “ಇದು ಕೇವಲ ಆರಂಭವಷ್ಟೇ. ಇದು ಬರೀ ಟ್ರೈಲರ್, ಅಸಲಿ ಪಿಕ್ಚರ್ ಇನ್ನೂ ಬಾಕಿ ಇದೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡಿ,” ಎಂದು ಹೇಳಿದರ ಅವರು ತಾವು ಬಾಳಾಸಾಹೇಬ ಅವರ ನಿಜವಾದ ಕನಸುಗಳನ್ನು ನನಸು ಮಾಡುತ್ತಿರುವುದಾಗಿ ಅವರು ಪ್ರತಿಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಶ್ಲಾಘಿಸಿದ ಶಿಂಧೆ, ದೇಶಕ್ಕಾಗಿ ಮೋದಿ ಮಾಡುತ್ತಿರುವ ಕೆಲಸವನ್ನು ನೋಡಿ ಬಾಳಾಸಾಹೇಬ ಅವರೇ ಬೆನ್ನು ತಟ್ಟುತ್ತಿದ್ದರು ಎಂದರು. ಮಹಾಯುತಿ ಮೈತ್ರಿಕೂಟ ಒಗ್ಗಟ್ಟಾಗಿದೆ ಎಂದ ಅವರು, “ನನ್ನ ಮತ್ತು ದೇವೇಂದ್ರ ಫಡ್ನವೀಸ್ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಕೆಲವರು ಯತ್ನಿಸುತ್ತಿದ್ದಾರೆ, ಆದರೆ ನಮ್ಮ ಬಾಂಡ್ ಅತ್ಯಂತ ಗಟ್ಟಿಯಾಗಿದೆ,” ಎಂದು ಸ್ಪಷ್ಟಪಡಿಸಿದರು.
ಸಂಕಷ್ಟದಲ್ಲಿ ಉದ್ಧವ್ ಸೇನೆ:
2022ರಲ್ಲಿ ಏಕನಾಥ ಶಿಂಧೆ ನೇತೃತ್ವದಲ್ಲಿ ನಡೆದ ಬಂಡಾಯದ ಬಳಿಕ ಶಿವಸೇನೆ (ಯುಬಿಟಿ) ಈಗ ಮತ್ತೊಂದು ಅತ್ಯಂತ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪಕ್ಷದ ಒಟ್ಟು 9 ಲೋಕಸಭಾ ಸಂಸದರ ಪೈಕಿ 6 ಸಂಸದರು ಬಂಡಾಯವೆದ್ದು, ಶಿಂಧೆ ಬಣದತ್ತ ಮುಖ ಮಾಡಿದ್ದಾರೆ. ಅಲ್ಲದೆ ತಮಗೆ ಪ್ರತ್ಯೇಕ ಗುಂಪಾಗಿ ಮಾನ್ಯತೆ ನೀಡಬೇಕೆಂದು ಲೋಕಸಭಾ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ. ಉದ್ಧವ್ ಬಣವು ಕಾಂಗ್ರೆಸ್ಸಿಗೆ ಹತ್ತಿರವಾಗುತ್ತಿರುವುದು ಮತ್ತು ಬಾಳಾಸಾಹೇಬ ಸಿದ್ಧಾಂತದಿಂದ ದೂರ ಸರಿಯುತ್ತಿರುವುದೇ ಇದಕ್ಕೆ ಕಾರಣ ಎಂದು ಬಂಡಾಯ ಸಂಸದರು ಆರೋಪಿಸಿದ್ದಾರೆ. ಆದರೆ ಠಾಕ್ರೆ ಬಣ ಈ ಆರೋಪಗಳನ್ನು ತಿರಸ್ಕರಿಸಿದ್ದು, ಬಂಡಾಯ ಸಂಸದರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ನೋಟಿಸ್ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ