ಬ್ರಿಟನ್‌ನಲ್ಲಿ ರಾಜಕೀಯ ಬಿಕ್ಕಟ್ಟು : ಪ್ರಧಾನಿ ಹುದ್ದೆಗೆ ಕೀರ್ ಸ್ಟಾರ್ಮರ್ ರಾಜೀನಾಮೆ ಘೋಷಣೆ !

ಲಂಡನ್: ಬ್ರಿಟನ್ ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಆಡಳಿತಾರೂಢ ಲೇಬರ್ ಪಕ್ಷದ ತೀವ್ರ ಒತ್ತಡಕ್ಕೆ ಮಣಿದಿರುವ ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಕಳೆದ ಒಂದು ದಶಕದಲ್ಲಿ ಬ್ರಿಟನ್ ತನ್ನ ಏಳನೇ ಪ್ರಧಾನಿಯನ್ನು ಕಾಣಲು ಸಜ್ಜಾಗಿದೆ.
ಪ್ರಧಾನಿ ಹುದ್ದೆಯ ಜೊತೆಗೆ ಲೇಬರ್ ಪಕ್ಷದ ನಾಯಕತ್ವಕ್ಕೂ ರಾಜೀನಾಮೆ ನೀಡುವುದಾಗಿ ಪ್ರಕಟಿಸಿರುವ 63 ವರ್ಷದ ಸ್ಟಾರ್ಮರ್, ಹೊಸ ನಾಯಕರ ಆಯ್ಕೆಯಾಗುವವರೆಗೆ ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಅಲ್ಲದೆ, ಮುಂಬರುವ ಹೊಸ ನಾಯಕನಿಗೆ ತಮ್ಮ ಪೂರ್ಣ ಬೆಂಬಲ ಇರಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ತಮ್ಮ ಅಧಿಕೃತ ನಿವಾಸ ’10 ಡೌನಿಂಗ್ ಸ್ಟ್ರೀಟ್’ ಮೆಟ್ಟಿಲುಗಳ ಮೇಲಿಂದ ದೇಶವನ್ನುದ್ದೇಶಿಸಿ ಅತ್ಯಂತ ಭಾವನಾತ್ಮಕವಾಗಿ ಮಾತನಾಡಿದ ಸ್ಟಾರ್ಮರ್, “ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ನಾನು ಸೂಕ್ತ ವ್ಯಕ್ತಿಯೇ ಎಂಬ ಪ್ರಶ್ನೆ ಈಗ ನನ್ನ ಪಕ್ಷದೊಳಗೆ ಎದ್ದಿದೆ. ನನ್ನ ಸಂಸದೀಯ ಪಕ್ಷ ನೀಡಿದ ಆ ಉತ್ತರವನ್ನು ನಾನು ಗೌರವಪೂರ್ವಕವಾಗಿ ಮತ್ತು ಸದ್ಭಾವನೆಯಿಂದ ಸ್ವೀಕರಿಸುತ್ತೇನೆ. ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ನಾನು ಪ್ರೀತಿಸುವ ದೇಶವನ್ನು ಮೊದಲ ಸ್ಥಾನದಲ್ಲಿಟ್ಟುಕೊಂಡೇ ಆಗಿತ್ತು. ಇದೇ ಕಾರಣಕ್ಕೆ ನಾನು ಲೇಬರ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ” ಎಂದರು.
 ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್ III ಅವರೊಂದಿಗೆ ಮಾತನಾಡಿ ತಮ್ಮ ನಿರ್ಧಾರವನ್ನು ತಿಳಿಸಿರುವುದಾಗಿ ಸ್ಟಾರ್ಮರ್ ಸ್ಪಷ್ಟಪಡಿಸಿದರು. “ಸೆಪ್ಟೆಂಬರ್‌ನಲ್ಲಿ ಸಂಸತ್ತಿನ ಮುಂದಿನ ಅಧಿವೇಶನ ಆರಂಭವಾಗುವ ಮೊದಲೇ ಹೊಸ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲು ಲೇಬರ್ ನ್ಯಾಷನಲ್ ಎಕ್ಸಿಕ್ಯೂಟಿವ್‌ಗೆ (ರಾಷ್ಟ್ರೀಯ ಕಾರ್ಯಕಾರಿಣಿ) ಸೂಚಿಸಿದ್ದೇನೆ. ನನ್ನ ಉತ್ತರಾಧಿಕಾರಿಗೆ ಭದ್ರವಾದ ಬ್ರಿಟನ್ ಸಿಗಲಿದೆ ಮತ್ತು ಲೇಬರ್ ಪಕ್ಷ ಎರಡನೇ ಅವಧಿಗೂ ಅಧಿಕಾರಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಲು ನಾನು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ. ನನಗೆ ಸಹಕರಿಸಿದ ಎಲ್ಲಾ ಸಹೋದ್ಯೋಗಿಗಳಿಗೆ ಧನ್ಯವಾದಗಳು” ಎಂದು ಹೇಳಿದರು.
ಇದೇ ವೇಳೆ ತಮ್ಮ ಪತ್ನಿ ವಿಕ್ಟೋರಿಯಾ ಅವರಿಗೆ ಧನ್ಯವಾದ ಅರ್ಪಿಸಿದ ಅವರು, “ಒಳ್ಳೆಯ ಮತ್ತು ಕಷ್ಟದ ಸಮಯಗಳೆರಡರಲ್ಲೂ ಅವರು ನನ್ನ ಜೊತೆಗೆ ಬಂಡೆಯಂತೆ ನಿಂತಿದ್ದಾರೆ. ದೇಶದ ಅತ್ಯಂತ ದೊಡ್ಡ ಜವಾಬ್ದಾರಿಯಿಂದ ಹೊರಬಂದ ನಂತರ, ನಾನು ನನ್ನ ಅದ್ಭುತ ಪತ್ನಿ ವಿಕ್ಟೋರಿಯಾಗೆ ಉತ್ತಮ ಪತಿಯಾಗಿ ಮತ್ತು ನನ್ನ ಹೆಮ್ಮೆಯ ಹಾಗೂ ಸಂತೋಷದ ಮೂಲವಾಗಿರುವ ಮಕ್ಕಳಿಗೆ ಉತ್ತಮ ತಂದೆಯಾಗಿ ಹೆಚ್ಚು ಸಮಯ ಕಳೆಯಲಿದ್ದೇನೆ” ಎಂದು ಭಾವುಕರಾದರು.
ನೂತನ ನಾಯಕನ ಆಯ್ಕೆ ಪ್ರಕ್ರಿಯೆ
ಲೇಬರ್ ಪಕ್ಷದ ನಾಯಕತ್ವದ ಚುನಾವಣೆಗೆ ವೇಳಾಪಟ್ಟಿ ಸಿದ್ಧಪಡಿಸುವಂತೆ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಗೆ (NEC) ಸೂಚಿಸಲಾಗಿದ್ದು, ಜುಲೈ 9 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಜುಲೈ 16 ರಂದು ಸಂಸತ್ತಿನ ಬೇಸಿಗೆ ರಜೆಯ ಮೊದಲು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಸ್ಪರ್ಧೆ ಏರ್ಪಟ್ಟಲ್ಲಿ, ಸೆಪ್ಟೆಂಬರ್‌ನಲ್ಲಿ ಸಂಸತ್ತು ಪುನರಾರಂಭಗೊಳ್ಳುವ ವೇಳೆಗೆ ಬ್ರಿಟನ್‌ಗೆ ಹೊಸ ಲೇಬರ್ ನಾಯಕ ಹಾಗೂ ಪ್ರಧಾನಿ ಆಯ್ಕೆ ನಡೆಯಲಿದೆ.
ಆಂಡಿ ಬರ್ನ್‌ಹ್ಯಾಮ್ ಗೆಲುವು ಮತ್ತು ಟ್ರಂಪ್ ಭವಿಷ್ಯ:
ಕಳೆದ ವಾರ ನಡೆದ ಸಂಸತ್ತಿನ ವಿಶೇಷ (ಉಪ) ಚುನಾವಣೆಯಲ್ಲಿ ಸ್ಟಾರ್ಮರ್ ಅವರ ಪಕ್ಷದೊಳಗಿನ ಪ್ರಬಲ ಪ್ರತಿಸ್ಪರ್ಧಿ ಆಂಡಿ ಬರ್ನ್‌ಹ್ಯಾಮ್ ಭರ್ಜರಿ ಜಯ ಸಾಧಿಸಿದ್ದರು. ಗ್ರೇಟರ್ ಮ್ಯಾಂಚೆಸ್ಟರ್‌ನ ಮೇಯರ್ ಆಗಿದ್ದ ಬರ್ನ್‌ಹ್ಯಾಮ್, ಸ್ಟಾರ್ಮರ್ ಅವರ ನಾಯಕತ್ವಕ್ಕೆ ಸವಾಲೊಡ್ಡುವ ಉದ್ದೇಶದಿಂದಲೇ ಚುನಾವಣಾ ಕಣಕ್ಕಿಳಿದಿದ್ದರು. ಈ ಗೆಲುವಿನ ನಂತರ ಸ್ಟಾರ್ಮರ್ ವಾರಾಂತ್ಯ ಪೂರ್ತಿ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ತೀವ್ರ ಚಿಂತನೆ ನಡೆಸಿದ್ದರು. ಬರ್ನ್‌ಹ್ಯಾಮ್ ಅವರು ಸೋಮವಾರವೇ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮತ್ತೊಂದೆಡೆ, ಭಾನುವಾರವಷ್ಟೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರುತ್ ಸೋಷಿಯಲ್’ ಜಾಲತಾಣದಲ್ಲಿ “ಸ್ಟಾರ್ಮರ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ” ಎಂದು ಪೋಸ್ಟ್ ಮಾಡಿದ್ದರು. ಆದರೆ ಬ್ರಿಟನ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಈ ಕುರಿತು ಟ್ರಂಪ್ ಅವರೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ ಮತ್ತು ಸರ್ಕಾರದಿಂದ ಅವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕುಸಿಯುತ್ತಿದ್ದ ಜನಪ್ರಿಯತೆ ಮತ್ತು ವಿವಾದಗಳು:
ಜುಲೈ 2024 ರಲ್ಲಿ ಲೇಬರ್ ಪಕ್ಷಕ್ಕೆ ಭರ್ಜರಿ ಬಹುಮತ ತಂದುಕೊಟ್ಟಿದ್ದ ಕೀರ್ ಸ್ಟಾರ್ಮರ್ ವಿರುದ್ಧ ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ಸಂಸದರಲ್ಲೇ ಅಸಮಾಧಾನದ ಹೊಗೆಯಾಡುತ್ತಿತ್ತು. ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡಿದ್ದ ಆರ್ಥಿಕ ಪ್ರಗತಿ, ಸಾರ್ವಜನಿಕ ಸೇವೆಗಳ ಸುಧಾರಣೆ ಮತ್ತು ಜೀವನ ವೆಚ್ಚದ ಬಿಕ್ಕಟ್ಟನ್ನು ನಿವಾರಿಸಲು ಸ್ಟಾರ್ಮರ್ ತೀವ್ರ ಹೋರಾಟ ನಡೆಸಬೇಕಾಯಿತು.
ಇದಲ್ಲದೆ, ಲೈಂಗಿಕ ಹಗರಣದ ವಿವಾದಿತ ವ್ಯಕ್ತಿ ಜೆಫ್ರಿ ಎಪ್ಸ್ಟೀನ್‌ನ ಸ್ನೇಹಿತ ಪೀಟರ್ ಮ್ಯಾಂಡೆಲ್ಸನ್ ಅವರನ್ನು ಅಮೆರಿಕದ ಬ್ರಿಟನ್ ರಾಯಭಾರಿಯನ್ನಾಗಿ ನೇಮಕ ಮಾಡಿದ ಸ್ಟಾರ್ಮರ್ ಅವರ ನಿರ್ಧಾರ ಸರ್ಕಾರಕ್ಕೆ ಭಾರಿ ಹಿನ್ನಡೆ ತಂದಿತ್ತು. ಸದ್ಯ ಲೇಬರ್ ಪಕ್ಷದ ಉದಾರವಾದಿ ಮತದಾರರು ಗ್ರೀನ್ ಪಾರ್ಟಿಯತ್ತ ಮುಖ ಮಾಡುತ್ತಿದ್ದರೆ, ನೈಜೆಲ್ ಫರಾಜ್ ನೇತೃತ್ವದ ವಲಸೆ ವಿರೋಧಿ ‘ರಿಫಾರ್ಮ್ ಯುಕೆ’ ಪಕ್ಷವು ರಾಷ್ಟ್ರವ್ಯಾಪಿ ಜನಾಭಿಪ್ರಾಯ ಸಮೀಕ್ಷೆಗಳಲ್ಲಿ ಮುಂಚೂಣಿಯಲ್ಲಿದ್ದು, ಇದು ಲೇಬರ್ ಪಕ್ಷದಲ್ಲಿ ತಳಮಳ ಸೃಷ್ಟಿಸಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement