ಬಲೋದಾಬಜಾರ್ (ಛತ್ತೀಸಗಢ್): ಗುಂಡಿನ ಸದ್ದುಗಳಿಲ್ಲ, ಆಕ್ರಂದನವಿಲ್ಲ, ರಕ್ತಪಾತವೂ ಇಲ್ಲ… ಆದರೆ ಸಾವು ಮಾತ್ರ ಆ ಇಡೀ ಹಳ್ಳಿಯನ್ನೇ ನಡುಗಿಸಿಬಿಟ್ಟಿದೆ ! ಛತ್ತೀಸಗಢದ ಬಲೋದಾಬಜಾರ್ ಜಿಲ್ಲೆಯ ಖಾರ್ವೆ ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳಿಂದ ಸದ್ದಿಲ್ಲದೆ ನಡೆದ ಸರಣಿ ನಿಗೂಢ ಸಾವುಗಳ ಬೆನ್ನತ್ತಿದ ಪೊಲೀಸರಿಗೆ ಎದೆ ನಡುಗಿಸುವ ಸತ್ಯವೊಂದು ಬಯಲಾಗಿದೆ. ಕೇವಲ ಕ್ಷುಲ್ಲಕ ಕಾರಣಗಳಿಗಾಗಿ ಗ್ರಾಮದ ಎಂಟು ಜನರನ್ನು ಮದ್ಯದಲ್ಲಿ ವಿಷ ಬೆರೆಸಿ ಅತ್ಯಂತ ಕ್ರೂರವಾಗಿ ಹತ್ಯೆಗೈದ “ಸೈಕೋ ಕಿಲ್ಲರ್” ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು 46 ವರ್ಷದ ರಾಮ ಸಹಾಯ ಜೈಸ್ವಾಲ್ ಎಂದು ಗುರುತಿಸಲಾಗಿದ್ದು, ಈತ ಹತ್ಯೆ ಮಾಡಿದ ಬಳಿಕ ಏನೂ ಅರಿಯದವನಂತೆ ಮೃತರ ಕುಟುಂಬಸ್ಥರ ಜೊತೆ ನಿಂತು ತಾನು ಕೊಂದವರ ಶವಸಂಸ್ಕಾರದಲ್ಲೂ ಭಾಗವಹಿಸುತ್ತಿದ್ದ ಎನ್ನುವ ಸಂಗತಿ ಬೆಳಕಿಗೆ ಬಂದಿದ್ದು, ಇದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಇಲಿ ಪಾಷಾಣ ಎಂದಿದ್ದ ‘ಬೋರಾಕ್ಸ್ ಪೌಡರ್’ ಈ ಮನುಷ್ಯರ ಮೃತ್ಯುಪಾಶ
ಪೊಲೀಸ್ ತನಿಖೆಯ ಪ್ರಕಾರ, ಆರೋಪಿ ರಾಮ ಸಹಾಯ ಜೈಸ್ವಾಲ್ ಕೃತ್ಯಕ್ಕೆ ಬಳಸಿದ್ದು ಬೋರಾಕ್ಸ್ ಪೌಡರ್ (ಸೋಡಿಯಂ ಟೆಟ್ರಾಬೋರೇಟ್ ಡೆಕಾಹೈಡ್ರೇಟ್) ಎಂಬ ರಾಸಾಯನಿಕವನ್ನು. ಗ್ರಾಮದ ವ್ಯಕ್ತಿಯೊಬ್ಬನ ಬಳಿ ಹೋಗಿ, “ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದೆ, ಸಾಯಿಸಲು ವಿಷ ಬೇಕು” ಎಂದು ಬೋರಾಕ್ಸ್ ಪೌಡರ್ ಪಡೆದುಕೊಂಡಿದ್ದ.
ಆದರೆ ಅದನ್ನು ಮನುಷ್ಯರ ಮೇಲೆ ಪ್ರಯೋಗಿಸುವ ಮುನ್ನ, ಈತ ಮೊದಲು ನಾಯಿಯೊಂದಕ್ಕೆ ಆಹಾರದಲ್ಲಿ ಇದನ್ನು ಬೆರೆಸಿ ಅದಕ್ಕೆ ಉಣಿಸಿ ಪರೀಕ್ಷಿಸಿದ್ದ. ನಾಯಿ ಮೃತಪಟ್ಟನಂತರ ಈ ವಿಷಕಾರಿ ವಿಧಾನ ಕೆಲಸ ಮಾಡುತ್ತದೆ ಎಂಬುದನ್ನು ಖಚಿತಪಡಿಸಿಕೊಂಡು, ಗ್ರಾಮಸ್ಥರನ್ನೇ ಟಾರ್ಗೆಟ್ ಮಾಡಲು ಸಂಚು ರೂಪಿಸಿದ್ದ.
ನಾಲ್ಕು ತಿಂಗಳು… ಎಂಟು ಹೆಣಗಳು!
ಫೆಬ್ರವರಿಯಿಂದ ಆರಂಭವಾದ ಈ ಮೃತ್ಯುವಿನ ಸರಣಿ ಮೇ ತಿಂಗಳವರೆಗೂ ಮುಂದುವರಿದಿತ್ತು. ಫೆಬ್ರವರಿ 6 ರಂದು ಬದ್ರಿ ಎಂಬಾತ ಮೊದಲು ಸಾವಿಗೀಡಾದ. ಈತ ಸದಾ ತನಗೆ ನಿಂದಿಸುತ್ತಿದ್ದ ಹಾಗೂ ಮದ್ಯಕ್ಕಾಗಿ ಪೀಡಿಸುತ್ತಿದ್ದ ಎಂಬ ಕಾರಣಕ್ಕೆ ಮದ್ಯದಲ್ಲಿ ಬೋರಾಕ್ಸ್ ಪೌಡರ್ ಬೆರೆಸಿ ಆತನಿಗೆ ನೀಡಿದ್ದ. ಬದ್ರಿಯ ಸಾವು ಯಾರಿಗೂ ಸಂಶಯ ಉಂಟುಮಾಡಲಿಲ್ಲ.. ಇದು ಆರೋಪಿಯ ಧೈರ್ಯವನ್ನು ಮತ್ತಷ್ಟು ಹೆಚ್ಚಿಸಿತು. ಇದರ ಬೆನ್ನಲ್ಲೇ ಬುಥಾಲು, ಛತ್ತು ರಾಮ, ಬುಧರಾಮ, ವಿನೋದಕುಮಾರ, ಗಜಾನಂದ, ಚೈತುರಾಮ ಮತ್ತು ಮಹೇತರು ರಾಮ ಎಂಬುವವರು ಮುಂದಿನ ದಿನಗಳಲ್ಲಿ ಒಬ್ಬರ ಹಿಂದೆ ಒಬ್ಬರಂತೆ ಸಾವಿಗೀಡಾಗಿದ್ದರು.
ಗ್ರಾಮದಲ್ಲಿ ಒಂದಾದ ಮೇಲೊಂದರಂತೆ ಸಾವುಗಳು ಸಂಭವಿಸುತ್ತಿದ್ದರೂ, ಆರಂಭದಲ್ಲಿ ಎಲ್ಲರೂ ಇದನ್ನು ಸಾಮಾನ್ಯ ಸಾವು ಎಂದೇ ಭಾವಿಸಿದ್ದರು. ಕುಟುಂಬಸ್ಥರು ಕಣ್ಣೀರಿಟ್ಟರು, ಅಂತ್ಯಸಂಸ್ಕಾರ ಮುಗಿಸಿದರು. ಜೀವನ ಎಂದಿನಂತೆ ಸಾಗಿತು. ಆದರೆ ಗ್ರಾಮಸ್ಥರಲ್ಲಿ ಭಯ ಆವರಿಸಿತ್ತು.
ಹತ್ಯೆಯ ಹಿಂದಿನ ಕ್ಷುಲ್ಲಕ ಕಾರಣಗಳು
ಆರೋಪಿ ಜೈಸ್ವಾಲ್ ಒಪ್ಪಿಕೊಂಡಿರುವ ಕೊಲೆಯ ಹಿಂದಿನ ಕಾರಣಗಳನ್ನು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಅತ್ಯಂತ ಸಣ್ಣ ಹಾಗೂ ವೈಯಕ್ತಿಕ ದ್ವೇಷಗಳಿಗಾಗಿ ಈತ ಕೊಲೆ ಮಾಡಿರುವುದು ಗೊತ್ತಾಗಿದೆ. ಹಳೇ ಚುನಾವಣೆ ದ್ವೇಷ, ಸಾರ್ವಜನಿಕವಾಗಿ ಮಾಡಿದ ಅವಮಾನ ಮತ್ತು ನಿಂದನೆ, ತನ್ನ ಹೆಂಡತಿಯ ಮೇಲಿನ ನಡತೆಯ ಸಂಶಯ, ಮಾಟ-ಮಂತ್ರದ (ಮಾಟಗಾತಿ) ಬಗೆಗಿನ ಮೂಢನಂಬಿಕೆ, ಜಮೀನು ವಿವಾದ ಹೀಗೆ ವಿವಿಧ ಕಾರಣಗಳಿಗೆ ಈತ ಯಾರಿಗೂ ಗೊತ್ತಾಗದಂತೆ ಎಂಟು ಜನರನ್ನು ಸಾಯಿಸಿದ್ದ. ಇನ್ನು ಮಹೇತರು ರಾಮ ಎಂಬಾತನಿಗೆ ಆರೋಪಿ 50,000 ರೂಪಾಯಿ ಸಾಲ ಬಾಕಿ ಕೊಡಬೇಕಿತ್ತು. ಆ ಸಾಲದಿಂದ ತಪ್ಪಿಸಿಕೊಳ್ಳಲು ಸಾಲ ನೀಡಿದಾತನನ್ನೇ ವಿಷವಿಟ್ಟು ಕೊಂದಿದ್ದಾನೆ ಈತ !
ಶವಯಾತ್ರೆಯಲ್ಲೂ ಭಾಗಿ !
ಈ ಪ್ರಕರಣದಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ, ಆರೋಪಿಯ ವರ್ತನೆ. ಕೊಲೆ ಮಾಡಿದ ಬಳಿಕ ಈತ ಎಲ್ಲೂ ಓಡಿಹೋಗುತ್ತಿರಲಿಲ್ಲ. ಬದಲಿಗೆ ತಾನೇ ಮದ್ಯದ ಅಂಗಡಿ ಇಟ್ಟುಕೊಂಡಿದ್ದರಿಂದ, ಮೃತರ ಕುಟುಂಬದವರ ಬಳಿ ಹೋಗಿ ಸಾಂತ್ವನ ಹೇಳುತ್ತಿದ್ದ. ಶವಸಂಸ್ಕಾರದ ವಿಧಿವಿಧಾನಗಳಲ್ಲಿ ಮುಂಚೂಣಿಯಲ್ಲಿ ನಿಂತು ಸಹಾಯ ಮಾಡುತ್ತಿದ್ದ. ಇಡೀ ಹಳ್ಳಿ ಕಣ್ಣೀರಿಡುತ್ತಿದ್ದರೆ, ಈತ ಮಾತ್ರ ಸದ್ದಿಲ್ಲದೆ ತನ್ನ ಪ್ಲಾನ್ ಯಶಸ್ವಿಯಾಗಿದ್ದನ್ನು ನೋಡಿ ಬೀಗುತ್ತಿದ್ದ.
ಗೋರಿಗಳಿಂದ ಹೊರಬಂದ ಶವಗಳು
ಜೂನ್ 6 ರಂದು ಗ್ರಾಮಸ್ಥರೆಲ್ಲ ಒಟ್ಟಾಗಿ ಪೊಲೀಸರ ಬಳಿ ಹೋಗಿ, ಹಳ್ಳಿಯಲ್ಲಿ ನಡೆಯುತ್ತಿರುವ ನಿಗೂಢ ಸಾವುಗಳ ಬಗ್ಗೆ ಮತ್ತು ರಾಮ ಸಹಾಯ ಮೇಲಿರುವ ಸಂಶಯದ ಬಗ್ಗೆ ದೂರು ನೀಡಿದರು. ಪ್ರಕರಣದ ಗಂಭೀರತೆ ಅರಿತ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು.
ಆಗಲೇ ಮಣ್ಣು ಮಾಡಲಾಗಿದ್ದ ಏಳು ಶವಗಳನ್ನು ಗೋರಿಯಿಂದ ಹೊರತೆಗೆದು (Exhumed), ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತನಿಖೆಗಾಗಿ ರಾಯ್ಪುರದ ಮೆಡಿಕೋ-ಲೀಗಲ್ ಇನ್‌ಸ್ಟಿಟ್ಯೂಟ್‌ಗೆ ರವಾನಿಸಲಾಯಿತು. ಡಿಎನ್ಎ ಮತ್ತು ವಿಸೆರಾ (Viscera) ಮಾದರಿಗಳನ್ನು ಸಂಗ್ರಹಿಸಲಾಗಿದೆ. ಆದರೆ, ಮೃತರಲ್ಲೊಬ್ಬರಾದ ಬುಧರಾಮ ಜೈಸ್ವಾಲ್ ಎಂಬುವವರನ್ನು ಈಗಾಗಲೇ ದಹನ ಮಾಡಲಾಗಿದ್ದರಿಂದ ಅವರ ದೇಹದ ಮಾದರಿ ಲಭ್ಯವಾಗಿಲ್ಲ.
ಒಂಬತ್ತನೇ ಟಾರ್ಗೆಟ್ ಬಚಾವ್! ತನಿಖೆಗೆ ಸಿಕ್ಕ ಪ್ರಮುಖ ಕೊಂಡಿ
ಏಪ್ರಿಲ್ 14 ರಂದು ಆರೋಪಿ ಜೈಸ್ವಾಲ್ ಮತ್ತೊಂದು ಕೊಲೆಗೆ ಸಂಚು ರೂಪಿಸಿ ಕಾರ್ತಿಕ ಎಂಬಾತನಿಗೂ ವಿಷದ ಮದ್ಯ ನೀಡಿದ್ದ. ಮದ್ಯ ಕುಡಿದ ತಕ್ಷಣ ಕಾರ್ತಿಕ ತೀವ್ರ ಅಸ್ವಸ್ಥರಾಗಿದ್ದರು. ಆದರೆ ಕುಟುಂಬಸ್ಥರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ತಿಕ್ ಬದುಕುಳಿದಿರುವುದು ಈಗ ಆರೋಪಿಯ ಕೊಲೆಗಡುಕತನದ ಹಾದಿಯನ್ನು ಸಾಬೀತುಪಡಿಸಲು ಪೊಲೀಸರಿಗೆ ಸಿಕ್ಕ ಅತ್ಯಂತ ಪ್ರಮುಖ ಸಾಕ್ಷಿಯಾಗಿದೆ.
ಈತ ಸುಹಾಗಾ ಅಥವಾ ಬೋರಾಕ್ಸ್ ಪೌಡರ್ ಖರೀದಿಸಿದ್ದನ್ನು ಪತ್ತೆಹಚ್ಚಿ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ಆರೋಪಿ ರಾಮ ಸಹಾಯ ತಾನೇ ಎಂಟು ಜನರನ್ನು ವಿಷವಿಟ್ಟು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಒಂದು ಶಾಂತಿಯುತ ಹಳ್ಳಿಯನ್ನು ಹೆಣದ ರಾಶಿಯಾಗಿಸಿದ ಸೈಕೋ ಕಿಲ್ಲರ್ ಸದ್ಯ ಕಂಬಿ ಎಣಿಸುತ್ತಿದ್ದಾನೆ.


ನಿಮ್ಮ ಕಾಮೆಂಟ್ ಬರೆಯಿರಿ