ಸಿಸಿಟಿವಿ ಮುಚ್ಚುತ್ತಿದ್ದರು….ಶೌಚಾಲಯದಲ್ಲಿ ಹಣ ಅಡಗಿಸಿಡುತ್ತಿದ್ದರು…..: ರಾಮಮಂದಿರ ದೇಣಿಗೆ ಕಳ್ಳತನದ ಬೆಚ್ಚಿಬೀಳಿಸುವ ಕಥೆ

ಅಯೋಧ್ಯೆ: ರಾಮಮಂದಿರದ ಹುಂಡಿಗಳಲ್ಲಿ ಭಕ್ತರು ಸಮರ್ಪಿಸಿದ್ದ ಕೋಟ್ಯಂತರ ರೂಪಾಯಿ ದೇಣಿಗೆ ಹಣವನ್ನು ಎಣಿಕೆ ಮಾಡುವ ಸಿಬ್ಬಂದಿಯೇ ವ್ಯವಸ್ಥಿತವಾಗಿ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ಸಿಸಿಟಿವಿ ಕ್ಯಾಮೆರಾವನ್ನು ಉದ್ದೇಶಪೂರ್ವಕವಾಗಿ ಮುಚ್ಚಿ, ಮತ್ತೊಬ್ಬ ಸಿಬ್ಬಂದಿ ನಗದು ಹಣವನ್ನು ಬಟ್ಟೆಯೊಳಗೆ ಅಡಗಿಸಿಕೊಳ್ಳುತ್ತಿದ್ದ ವಿಧಾನ ಸೇರಿದಂತೆ ಹಣ ದೋಚಲು ಅನುಸರಿಸಿದ್ದ ಹಲವು ತಂತ್ರಗಳು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮಧ್ಯಂತರ ವರದಿಯಲ್ಲಿ ಬಹಿರಂಗಗೊಂಡಿವೆ.
ಈ ಪ್ರಕರಣದ ತನಿಖೆ ಮುಂದುವರಿದಿರುವ ನಡುವೆಯೇ, ರಾಮಮಂದಿರ ಟ್ರಸ್ಟ್‌ನ ಇಬ್ಬರು ಪ್ರಮುಖರಾದ ಚಂಪತ್ ರಾಯ್‌ ಹಾಗೂ ಅನಿಲ ಮಿಶ್ರಾ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ಬಂಧಿತರಾಗಿರುವ ಎಂಟು ಮಂದಿಯನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಅನುಮಾನ ಹೇಗೆ ಮೂಡಿತು?
ದೇಣಿಗೆ ಹಣವನ್ನು ಬ್ಯಾಂಕ್‌ಗೆ ಜಮಾ ಮಾಡುವ ವಿವರಗಳನ್ನು ಪರಿಶೀಲಿಸುವ ವೇಳೆ ಟ್ರಸ್ಟ್ ಅಧಿಕಾರಿಗಳಿಗೆ ಮೊದಲು ಅಕ್ರಮದ ಅನುಮಾನ ಮೂಡಿತ್ತು. ನಿಯಮಿತವಾಗಿ ಹುಂಡಿಗಳನ್ನು ತೆಗೆಯುವ ವೇಳೆ ಸಾಮಾನ್ಯವಾಗಿ ಒಂದೊಂದು ಹುಂಡಿಯಲ್ಲಿ 6ರಿಂದ 7 ಲಕ್ಷ ರೂಪಾಯಿ ನಗದು ಸಿಗುತ್ತಿತ್ತು. ಆದರೆ ಕೆಲವು ವಾರಗಳಿಂದ ₹500 ಮುಖಬೆಲೆಯ ನೋಟುಗಳ ಕಂತೆಗಳಲ್ಲಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡರು.
ಅನುಮಾನ ಗಾಢವಾಗುತ್ತಿದ್ದಂತೆ ನಗದು ಎಣಿಕೆ ನಡೆಯುವ ಕೊಠಡಿಯಲ್ಲಿ ಗುಪ್ತ ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಅವುಗಳಲ್ಲಿ ದಾಖಲಾಗಿದ್ದ ದೃಶ್ಯಗಳು ಕಳ್ಳತನದ ಸಂಪೂರ್ಣ ಕಾರ್ಯವೈಖರಿಯನ್ನು ಬಯಲಿಗೆಳೆದವು.

ಸಿಸಿಟಿವಿ ಮುಚ್ಚಿ ಹಣ ಕಳವು
ಗುಪ್ತ ಕ್ಯಾಮೆರಾ ದೃಶ್ಯಗಳನ್ನು ಒಂದು ವಾರ ಪರಿಶೀಲಿಸಿದಾಗ, ನಗದು ಹಣ ಎಣಿಕೆ ಮಾಡುವ ಸಿಬ್ಬಂದಿಯೊಬ್ಬರು ಸಿಸಿಟಿವಿ ಕ್ಯಾಮೆರಾದ ಮುಂದೆ ನಿಂತು ಅದರ ದೃಶ್ಯವನ್ನು ಸಂಪೂರ್ಣವಾಗಿ ಮುಚ್ಚುತ್ತಿದ್ದರು. ಅದೇ ಸಮಯದಲ್ಲಿ ಮತ್ತೊಬ್ಬ ಸಿಬ್ಬಂದಿ ನೋಟುಗಳ ಕಂತೆಗಳಿಂದ ಹಣವನ್ನು ತೆಗೆದು ತನ್ನ ಬಟ್ಟೆಯೊಳಗೆ ಅಡಗಿಸಿಕೊಳ್ಳುತ್ತಿದ್ದ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿಗಳು ತಿಳಿಸಿವೆ.
ನೋಟುಗಳ ಕಂತೆಗಳಲ್ಲೇ ಕೈಚಳಕ
ಅಲ್ಲದೆ, ಹಣ ದೋಚಲು ಮತ್ತೊಂದು ತಂತ್ರವನ್ನೂ ಆರೋಪಿಗಳು ಅನುಸರಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ನಗದು ಎಣಿಸುವ ವೇಳೆ ಪ್ರತಿ ಕಂತೆಯಲ್ಲೂ ಹೆಚ್ಚುವರಿ ನೋಟುಗಳನ್ನು ಸೇರಿಸಿ ಕಟ್ಟಲಾಗುತ್ತಿತ್ತು. ಎಣಿಕೆಯ ಸಂದರ್ಭದಲ್ಲಿ ಎಷ್ಟು ಕಂತೆಗಳಿವೆ ಎಂಬುದನ್ನು ಮಾತ್ರ ಪರಿಶೀಲಿಸಲಾಗುತ್ತಿತ್ತು. ಆದರೆ ಪ್ರತಿ ಕಂತೆಯಲ್ಲಿರುವ ನೋಟುಗಳ ಸಂಖ್ಯೆಯನ್ನು ಪರಿಶೀಲಿಸದೆ ವೌಚರ್ ಸಿದ್ಧಪಡಿಸಲಾಗುತ್ತಿತ್ತು.
ನಂತರ ಬ್ಯಾಂಕ್‌ಗೆ ಹಣ ಸಾಗಿಸುವ ಮುನ್ನ ಆ ಹೆಚ್ಚುವರಿ ನೋಟುಗಳನ್ನು ಕಂತೆಗಳಿಂದ ತೆಗೆದು ಸಾಗಿಸಲಾಗುತ್ತಿತ್ತು. ಹೀಗಾಗಿ ಬ್ಯಾಂಕ್‌ಗೆ ಜಮಾ ಮಾಡಿದ ಮೊತ್ತಕ್ಕೂ ವೌಚರ್‌ನಲ್ಲಿರುವ ಮೊತ್ತಕ್ಕೂ ಹೊಂದಿಕೆಯಾಗುತ್ತಿತ್ತು. ಆದರೆ ಮಧ್ಯದಲ್ಲೇ ಹಣವನ್ನು ಕಳವು ಮಾಡಲಾಗುತ್ತಿತ್ತು.

ಪ್ರಮುಖ ಸುದ್ದಿ :-   ಸೆಶೆಲ್ಸ್‌ನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ವರ್ಷ ಬದುಕಿರುವ ಭೂಚರ ‘ಜೋನಾಥನ್’ನನ್ನು ಭೇಟಿಯಾದ ಪ್ರಧಾನಿ ಮೋದಿ

ಕದ್ದ ಹಣವನ್ನು ಮೊದಲು ಶೌಚಾಲಯದಲ್ಲಿ ಅಡಗಿಸಿ ಇಡುತ್ತಿದ್ದರು….
ಕಳವು ಮಾಡಿದ ಹಣವನ್ನು ಆರಂಭದಲ್ಲಿ ದೇವಸ್ಥಾನದ ಆವರಣದಲ್ಲಿರುವ ಶೌಚಾಲಯಗಳಲ್ಲಿ ಅಡಗಿಸಿಡಲಾಗುತ್ತಿತ್ತು. ಬಳಿಕ ಸೂಕ್ತ ಅವಕಾಶ ದೊರಕಿದಾಗ ದೇವಸ್ಥಾನದ ಹೊರಗೆ ಕಳ್ಳಸಾಗಣೆ ಮಾಡಿ, ಬೇರೆ ಸ್ಥಳದಲ್ಲಿ ಎಲ್ಲ ಆರೋಪಿಗಳ ನಡುವೆ ಹಂಚಿಕೊಳ್ಳಲಾಗುತ್ತಿತ್ತು ಎಂದು ಎಸ್‌ಐಟಿ ತನಿಖೆ ಹೇಳಿದೆ.
ರಾಮಮಂದಿರ ಉದ್ಘಾಟನೆಯಾಗಿ ಸಾರ್ವಜನಿಕರಿಗೆ ತೆರೆದ 2024ರಿಂದಲೇ ಈ ಅಕ್ರಮ ನಡೆಯುತ್ತಿತ್ತು ಎಂಬ ಶಂಕೆಯನ್ನು ಎಸ್‌ಐಟಿ ವ್ಯಕ್ತಪಡಿಸಿದೆ. ಎಸ್‌ಐಟಿ ಮಧ್ಯಂತರ ವರದಿಯ ಪ್ರಕಾರ, ಏಪ್ರಿಲ್ 27ರಿಂದ ಜೂನ್ 5ರವರೆಗೆ ಸಿಸಿಟಿವಿ ದೃಶ್ಯಗಳಲ್ಲಿ 70ಕ್ಕೂ ಹೆಚ್ಚು ಕಳ್ಳತನದ ಘಟನೆಗಳು ದಾಖಲಾಗಿವೆ.
ಬ್ಯಾಂಕ್ ಅಧಿಕಾರಿಗಳ ಪಾತ್ರವೂ ತನಿಖೆಯಲ್ಲಿದೆ
ಬಂಧಿತರಾದ ಟಿನ್ನು ಯಾದವ್ ಹಾಗೂ ಸುಭಾಷ ಶ್ರೀವಾಸ್ತವ ಅವರ ವಿಚಾರಣೆ ವೇಳೆ ಕೆಲವು ಬ್ಯಾಂಕ್ ಅಧಿಕಾರಿಗಳ ಹೆಸರುಗಳೂ ಬೆಳಕಿಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ. ಇತರ ಶಂಕಿತರ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದ್ದು, ಕೆಲವು ಸರ್ಕಾರಿ ನೌಕರರ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
₹7ರಿಂದ ₹7.5 ಕೋಟಿ ನಾಪತ್ತೆ?
ರಾಮಮಂದಿರದ ದೇಣಿಗೆ ಹಣದಲ್ಲಿ ಸುಮಾರು ₹7ರಿಂದ ₹7.5 ಕೋಟಿ ಕಾಣೆಯಾಗಿರಬಹುದು ಎಂಬ ಮಾಹಿತಿ ಹರಿದಾಡುತ್ತಿದ್ದರೂ, ಅಧಿಕೃತವಾಗಿ ಎಷ್ಟು ಹಣ ಕಳವಾಗಿದೆ ಎಂಬುದನ್ನು ಇನ್ನೂ ಪ್ರಕಟಿಸಲಾಗಿಲ್ಲ. ಇದುವರೆಗೆ ಸುಮಾರು ₹70 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದ್ದು, ಅದರ ಎಣಿಕೆ ಪ್ರಗತಿಯಲ್ಲಿದೆ. ಅಂತಿಮವಾಗಿ ವಶವಾದ ಹಣದ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಫಾರಸಿನ ಮೂಲಕ ಉದ್ಯೋಗ
ಎಸ್‌ಐಟಿ ಮಧ್ಯಂತರ ವರದಿಯಲ್ಲಿ ಎಂಟು ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ದೇಣಿಗೆ ಹಣ ಎಣಿಕೆಯ ಜವಾಬ್ದಾರಿಯಲ್ಲಿದ್ದ ಅವಿನಾಶ ಶುಕ್ಲಾ, ಅನುಕಲ್ಪ ಮಿಶ್ರಾ, ಲವಕುಶ ಮಿಶ್ರಾ, ಮನೀಶಕುಮಾರ ಯಾದವ್, ಕರುಣೇಶ ಪಾಂಡೆ, ರಾಮಾಶಂಕರ ಮಿಶ್ರಾ, ಸುಭಾಷ ಶ್ರೀವಾಸ್ತವ ಹಾಗೂ ರಾಮಶಂಕರ ಯಾದವ್ ಅಲಿಯಾಸ್ ಟಿನ್ನು ವಿರುದ್ಧ ಆರೋಪ ಕೇಳಿಬಂದಿದೆ. ಈ ಹಿಂದೆ ರಾಮಾಶಂಕರ ಮಿಶ್ರಾ ಅವರ ಮನೆಯಿಂದ ₹10 ಲಕ್ಷ ನಗದು ವಶಪಡಿಸಿಕೊಳ್ಳಲಾಗಿತ್ತು.
ತನಿಖೆಯಲ್ಲಿ ಮತ್ತೊಂದು ಮಹತ್ವದ ಸಂಗತಿ ಬಹಿರಂಗವಾಗಿದ್ದು, ನಗದು ಎಣಿಕೆ ಕಾರ್ಯದಲ್ಲಿ ನಿಯೋಜನೆಯಾಗಿದ್ದ ಹಲವರು ವಿವಿಧ ವ್ಯಕ್ತಿಗಳ ಪರಿಚಯ ಮತ್ತು ಶಿಫಾರಸಿನ ಆಧಾರದ ಮೇಲೆ ಉದ್ಯೋಗ ಪಡೆದಿದ್ದರು ಎಂದು ತಿಳಿದುಬಂದಿದೆ.
ಟಿನ್ನು ಯಾದವ್ ಚಂಪತ್ ರೈ ಅವರ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ಸಂಬಂಧಿ ಮನೀಶ ಯಾದವನನ್ನು ನಗದು ಎಣಿಕೆ ತಂಡದಲ್ಲಿ ನೇಮಕ ಮಾಡಿಸಿದ್ದ. ಅದೇ ರೀತಿ ಅನುಕಲ್ಪ ಮಿಶ್ರಾ ತನ್ನ ಬಾವ ಲವಕುಶ ಮಿಶ್ರಾ ಅವರನ್ನು ಕೂಡ ಇದೇ ತಂಡದಲ್ಲಿ ನೇಮಕ ಮಾಡಿಸಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   120 ಕಿಮೀ ವೇಗದ ಯಶಸ್ವಿ ಪರೀಕ್ಷೆ ನಡೆಸಿದ ಭಾರತದ ಮೊದಲ ಹೈಡ್ರೋಜನ್ ರೈಲು

ಭದ್ರತಾ ನಿರ್ಲಕ್ಷ್ಯದಿಂದ ಬಂತು ಧೈರ್ಯ
ಪ್ರತಿದಿನ ಕರ್ತವ್ಯ ಮುಗಿಸಿ ಹೊರಡುವಾಗ ನಗದು ಎಣಿಕೆ ಸಿಬ್ಬಂದಿಯನ್ನು ಪರಿಶೀಲಿಸುವ ವ್ಯವಸ್ಥೆಯೇ ಇರಲಿಲ್ಲ. ಈ ಭದ್ರತಾ ಲೋಪವೇ ಆರೋಪಿಗಳಿಗೆ ಧೈರ್ಯ ನೀಡಿದ್ದು, ಹುಂಡಿಗಳನ್ನು ತೆರೆಯುತ್ತಿದ್ದ ಸ್ಥಳದಲ್ಲೇ ಹಣವನ್ನು ಕಳವು ಮಾಡಲು ಆರಂಭಿಸಿದ್ದರು ಎಂದು ಎಸ್‌ಐಟಿ ವರದಿ ತಿಳಿಸಿದೆ.
ಅವಿನಾಶ ಶುಕ್ಲಾ ಕಳವು ಮಾಡಿದ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದ ಎಂಬುದೂ ತನಿಖೆಯಲ್ಲಿ ಬಹಿರಂಗವಾಗಿದೆ.
ನಗದು ಮಾತ್ರವಲ್ಲ, ಚಿನ್ನಾಭರಣವೂ ಕಳವು
ಭಕ್ತರು ರಾಮಲಲ್ಲಾಗೆ ಸಮರ್ಪಿಸಿದ್ದ ಕಿವಿಯೋಲೆ, ಮೂಗುತಿ, ಬಳೆ, ಕಾಲುಂಗುರ ಸೇರಿದಂತೆ ಹಲವು ಚಿನ್ನಾಭರಣಗಳನ್ನೂ ಆರೋಪಿಗಳು ಕಳವು ಮಾಡಿರುವುದು ತನಿಖೆ ವೇಳೆ ಕಂಡುಬಂದಿದೆ ಎಂದು ಹೇಳಲಾಗಿದೆ.

ಪ್ರಮುಖ ಸೂತ್ರಧಾರರು ಯಾರು?
ಟಿನ್ನು ಯಾದವ್ ಹಾಗೂ ಸುಭಾಷ ಶ್ರೀವಾಸ್ತವ ಈ ಸಂಪೂರ್ಣ ಸಂಚಿನ ಪ್ರಮುಖ ರೂವಾರಿಗಳಾಗಿದ್ದರು ಎಂದು ಎಸ್‌ಐಟಿ ಗುರುತಿಸಿದೆ.
ಸಿಸಿಟಿವಿ ದೃಶ್ಯಗಳಲ್ಲಿ ಎಂಟೂ ಆರೋಪಿಗಳು ಕಳ್ಳತನ ನಡೆಸಿರುವುದು ಕಂಡುಬಂದಿದ್ದು, ಟಿನ್ನು ಯಾದವ್ ಮತ್ತು ಸುಭಾಷ ಶ್ರೀವಾಸ್ತವ ಸಂಚು ರೂಪಿಸುವುದರಿಂದ ಹಿಡಿದು ಅದರ ಅನುಷ್ಠಾನವರೆಗೂ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸುಭಾಷ ಶ್ರೀವಾಸ್ತವ ಇತರರನ್ನು ಈ ಜಾಲಕ್ಕೆ ಸೆಳೆಯುವುದರ ಜೊತೆಗೆ, ನಗದು ಎಣಿಕೆಯ ಡ್ಯೂಟಿ ಹಂಚಿಕೆ ಸೇರಿದಂತೆ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ ಎಂದು ತನಿಖೆ ತಿಳಿಸಿದೆ.
ಎಸ್‌ಐಟಿ ವರದಿಯ ಪ್ರಮುಖ ಅಂಶಗಳು
ಕಳೆದ ಮೂರು ವರ್ಷಗಳ ಆಂತರಿಕ ಲೆಕ್ಕಪರಿಶೋಧನಾ ವರದಿಗಳನ್ನು ಪರಿಶೀಲಿಸಿದ ಎಸ್‌ಐಟಿ, ದೇವಸ್ಥಾನದಲ್ಲಿರುವ ಹುಂಡಿಗಳ ಸಂಖ್ಯೆ ಹಾಗೂ ದಾಖಲೆಗಳ ನಡುವೆ ವ್ಯತ್ಯಾಸಗಳಿರುವುದನ್ನು ಪತ್ತೆಹಚ್ಚಿದೆ.
ಮಧ್ಯಂತರ ವರದಿಯಲ್ಲಿ ಸಿಸಿಟಿವಿ ಕಣ್ಗಾವಲು ಸಮರ್ಪಕವಾಗಿಲ್ಲದಿರುವುದು, ನಗದು ಎಣಿಕೆಯ ದಾಖಲೆ ನಿರ್ವಹಣೆ ಹಾಗೂ ದೇಣಿಗೆಗಳ ವರ್ಗೀಕರಣದಲ್ಲಿ ಗಂಭೀರ ಲೋಪಗಳಿರುವುದನ್ನೂ ಉಲ್ಲೇಖಿಸಲಾಗಿದೆ.
ಮೇಲ್ವಿಚಾರಣೆಯ ಹೊಣೆಗಾರಿಕೆ ಯಾರ ಮೇಲಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿದೆ. ಅಕ್ರಮಗಳು ಪತ್ತೆಯಾಗಿದ್ದರೂ ಅವುಗಳನ್ನು ತಡೆಯಲು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ನಗದು ಎಣಿಕೆ ಪ್ರಕ್ರಿಯೆ ಮೇಲೆ ಸಮರ್ಪಕ ನಿಯಂತ್ರಣ ಇರಲಿಲ್ಲ. ಭದ್ರತಾ ನಿಯಮಗಳು ಕೇವಲ ಕಾಗದದಲ್ಲೇ ಉಳಿದಿದ್ದರೆ, ಅವುಗಳ ಪಾಲನೆ ಕೇವಲ ಔಪಚಾರಿಕತೆಗೆ ಸೀಮಿತವಾಗಿತ್ತು ಎಂದು ಎಸ್‌ಐಟಿ ಮಧ್ಯಂತರ ವರದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement