ಕಾರಕಾಸ್: ವೆನೆಜುವೆಲಾದಲ್ಲಿ ಸಂಭವಿಸಿದ ವಿನಾಶಕಾರಿ ಅವಳಿ ಭೂಕಂಪದ ಸಾವಿನ ಸಂಖ್ಯೆ 589ಕ್ಕೆ ಏರಿಕೆಯಾಗಿದ್ದು, ಇಡೀ ದೇಶವೇ ಕಣ್ಣೀರಲ್ಲಿ ಮುಳುಗಿದೆ. ಕೇವಲ ಒಂದು ದಿನದ ಅವಧಿಯಲ್ಲಿ ಮೃತರ ಸಂಖ್ಯೆ ದುಪ್ಪಟ್ಟಾಗಿದ್ದು, ಗಾಯಗೊಂಡವರ ಸಂಖ್ಯೆ 2,980ಕ್ಕೆ ತಲುಪಿದೆ ಎಂದು ದೇಶದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಶುಕ್ರವಾರ ಮಧ್ಯಾಹ್ನ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಗುರುವಾರ ರಾತ್ರಿಯ ವೇಳೆಗೆ ಸಾವಿನ ಸಂಖ್ಯೆ 235 ಎಂದು ವರದಿಯಾಗಿತ್ತು. ಆದರೆ, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೃತದೇಹಗಳು ಪತ್ತೆಯಾಗುತ್ತಿದ್ದಂತೆ ಈ ಸಂಖ್ಯೆ ಹೆಚ್ಚಾಗಿದೆ.
214 ಬಾರಿ ನಡುಗಿದ ಭೂಮಿ!
ಬುಧವಾರ ಸಂಜೆ ದೇಶವನ್ನು ಬೆಚ್ಚಿಬೀಳಿಸಿದ 7.2 ಮತ್ತು 7.5 ತೀವ್ರತೆಯ ಈ ಅವಳಿ ಭೂಕಂಪಗಳು ಕಳೆದ ಒಂದು ಶತಮಾನದಲ್ಲೇ ವೆನೆಜುವೆಲಾ ಕಂಡ ಅತ್ಯಂತ ಪ್ರಬಲ ಭೂಕಂಪಗಳಾಗಿವೆ. “ಬುಧವಾರದಿಂದ ಇಂದಿನವರೆಗೆ ಬರೋಬ್ಬರಿ 214 ಬಾರಿ ಆಫ್ಟರ್‌ಶಾಕ್‌ಗಳು (ಲಘು ಭೂಕಂಪಗಳು) ಸಂಭವಿಸಿವೆ. ಇದು ನಮ್ಮ ಭೂಪ್ರದೇಶದಲ್ಲಿ ಇನ್ನೂ ತಗ್ಗದ ಭೂಕಂಪನದ ತೀವ್ರತೆಯನ್ನು ಎತ್ತಿ ತೋರಿಸುತ್ತದೆ” ಎಂದು ರೊಡ್ರಿಗಸ್ ಕಳವಳ ವ್ಯಕ್ತಪಡಿಸಿದ್ದಾರೆ.
70,000 ಕುಟುಂಬಗಳು ಬೀದಿಗೆ
ಭೂಕಂಪದಿಂದಾಗಿ ಲಾ ಗ್ವೈರಾ ರಾಜ್ಯದಲ್ಲಿ 100ಕ್ಕೂ ಹೆಚ್ಚು ಬಹುಮಹಡಿ ಕಟ್ಟಡಗಳು ನೆಲಸಮಗೊಂಡಿದ್ದು, ಕನಿಷ್ಠ 70,000 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ವೆನೆಜುವೆಲಾದ ಆಂತರಿಕ ಸಚಿವ ಡಿಯೋಸ್ಡಾಡೊ ಕಬೆಲ್ಲೊ ಮಾಹಿತಿ ನೀಡಿದ್ದಾರೆ. ಲಾ ಗ್ವೈರಾ ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿದ್ದು, ಇಲ್ಲಿನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸಮುದ್ರ ಬಂದರುಗಳು ತೀವ್ರ ಹಾನಿಗೊಳಗಾಗಿ ಸದ್ಯಕ್ಕೆ ಬಂದ್ ಆಗಿವೆ.
ಕಣ್ಣೀರಿನ ಕಥೆಗಳು:
ದುರಂತದ ತೀವ್ರತೆಯ ನಡುವೆ, ಲಾ ಗ್ವೈರಾದಲ್ಲಿರುವ ತಮ್ಮ ನಾಪತ್ತೆಯಾದ ಸಂಬಂಧಿಕರಿಗಾಗಿ ಜನರು ಪರದಾಡುತ್ತಿರುವ ಕರುಣಾಜನಕ ಕಥೆಗಳನ್ನು ಬಿಬಿಸಿ ವರದಿ ಮಾಡಿದೆ. ಸಂಪರ್ಕ ಸಾಧನಗಳು ಸಂಪೂರ್ಣ ಕಡಿತಗೊಂಡಿದ್ದು, ಅಧಿಕೃತ ಮಾಹಿತಿಯೂ ಸಿಗದೆ ಜನರು ಕತ್ತಲಲ್ಲಿ ತಡಕಾಡುತ್ತಿದ್ದಾರೆ.
ಮಹಿಳೆಯೊಬ್ಬರು ಬಿಬಿಸಿಗೆ ನೀಡಿದ ಮಾಹಿತಿಯ ಪ್ರಕಾರ, ಭೂಕಂಪ ಸಂಭವಿಸುವ ಕೆಲವೇ ನಿಮಿಷಗಳ ಮೊದಲು ಅವರ ಚಿಕ್ಕಮ್ಮ ತನ್ನ ಸಾಕುನಾಯಿಯನ್ನು ವಾಕಿಂಗ್ ಕರೆದೊಯ್ಯಲು ಅಪಾರ್ಟ್‌ಮೆಂಟ್‌ನಿಂದ ಹೊರಬಂದಿದ್ದರು. ಆಕೆ ಹೊರಬಂದ ತಕ್ಷಣವೇ ಕಟ್ಟಡ ನೆಲಸಮಗೊಂಡಿದೆ. ಅವರ ಮನೆ ನಾಶವಾಗಿದ್ದರೂ, ಚಿಕ್ಕಮ್ಮ ಮತ್ತು ನಾಯಿ ಇಬ್ಬರೂ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯುರೋಪ್‌ನಲ್ಲಿ ನೆಲೆಸಿರುವ ವೆನೆಜುವೆಲಾ ಮೂಲದ ವ್ಯಕ್ತಿಯೊಬ್ಬರು ತಮ್ಮ ಇಬ್ಬರು ಆಪ್ತ ಸಂಬಂಧಿಕರನ್ನು ರಕ್ಷಿಸಲು 5 ಗಂಟೆಗಳ ಕಾಲದ ವ್ಯತ್ಯಾಸದ ದೂರದಲ್ಲೇ ಇದ್ದುಕೊಂಡು ಹರಸಾಹಸ ಪಡುತ್ತಿದ್ದರು. ಕರಾವಳಿ ತೀರದ ಅವಶೇಷಗಳ ಅಡಿಯಿಂದ ಜನರ ಧ್ವನಿಗಳು ಕೇಳಿಬರುತ್ತಿವೆ, ಅದರಲ್ಲಿ ತಮ್ಮವರೂ ಇರಬಹುದು ಎಂದು ಅವರು ಆಶಿಸಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಬಂದ ಸಂದೇಶ ಅವರ ಹೃದಯ ಒಡೆಯುವಂತಿತ್ತು; ಅವಶೇಷಗಳಡಿಯಿಂದ ಆ ಇಬ್ಬರು ಸಂಬಂಧಿಕರನ್ನು ಹೊರತೆಗೆಯಲಾಯಿತಾದರೂ, ಅಷ್ಟರಲ್ಲೇ ಅವರು ಪ್ರಾಣ ಬಿಟ್ಟಿದ್ದರು.
ವೆನೆಜುವೆಲಾದಲ್ಲಿ ಸದ್ಯ ರಕ್ಷಣಾ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ಸಾಗುತ್ತಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಎದುರಾಗಿದೆ. ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಲು ಪ್ರಯತ್ನ ಮಾಡಲಾಗುತ್ತಿದೆ. ಈ ಕಠಿಣ ಪರಿಸ್ಥಿತಿಗಳ ಹೊರತಾಗಿಯೂ ಅಗ್ನಿಶಾಮಕ ದಳದವರು, ಪೊಲೀಸ್ ಅಧಿಕಾರಿಗಳು, ಮಿಲಿಟರಿ ಸಿಬ್ಬಂದಿ ಮತ್ತು ಸ್ವಯಂಸೇವಕರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡುತ್ತಿದ್ದಾರೆ.
ಇದರ ನಡುವೆ ಅವಶೇಷಗಳ ರಾಶಿಯ ಮಧ್ಯೆ ಬಿದ್ದಿದ್ದ ನವಜಾತ ಶಿಶುವೊಂದನ್ನು ರಕ್ಷಣಾ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ರಕ್ಷಣೆ ಮಾಡಿದ್ದಾರೆ.
ನೆಲಸಮವಾಗಿದ್ದ ಕಟ್ಟಡದ ಅವಶೇಷಗಳ ಅಡಿಯಲ್ಲಿ ನವಜಾತ ಶಿಶುವೊಂದು ಸಿಲುಕಿಕೊಂಡಿತ್ತು. ರಕ್ಷಣಾ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ಮಗುವನ್ನು ರಕ್ಷಣೆ ಮಾಡಿದ್ದಾರೆ. ಮಗುವಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ಲಾ ಗುವೈರಾ”ದಲ್ಲಿ ರಕ್ಷಣಾ ಕಾರ್ಯಕರ್ತರು 12 ವರ್ಷದ ಬಾಲಕನನ್ನು ಅವಶೇಷಗಳಿಂದ ಜೀವಂತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ, ಅವಶೇಷದ ಅಡಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಯಿಯನ್ನು ಕೂಡ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ