ನ್ಯೂಯಾರ್ಕ್: ಅಮೆರಿಕ ಮೂಲದ ಆರೋಗ್ಯ ಕ್ಷೇತ್ರದ ರಿಯಲ್ ಎಸ್ಟೇಟ್ ದೈತ್ಯ ಸಂಸ್ಥೆ ‘ವೆಲ್ಟವರ್ (Welltower)’ನ ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಶಂಖ್ ಮಿತ್ರ ಅವರು 2025ರಲ್ಲಿ 821 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹7,744 ಕೋಟಿ) ಮೌಲ್ಯದ ಸಂಭಾವನೆ ಪ್ಯಾಕೇಜ್ ಪಡೆದು ವಿಶ್ವದ ಎರಡನೇ ಅತಿ ಹೆಚ್ಚು ಸಂಭಾವನೆ ಪಡೆದ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ತಿಳಿಸಿದೆ.
ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಎಲಾನ್ ಮಸ್ಕ್ ಕಾಯ್ದುಕೊಂಡಿದ್ದು, ಅವರ ಸಂಭಾವನೆ ಪ್ಯಾಕೇಜ್ 158 ಬಿಲಿಯನ್ ಡಾಲರ್ (ಒಂದು ಡಾಲರ್ಗೆ =₹94.36 ಆದರೆ ಅಂದಾಜು ₹14.91 ಲಕ್ಷ ಕೋಟಿ) ಮೌಲ್ಯದ್ದಾಗಿದೆ.
2025ರಲ್ಲಿ ಕಾರ್ಪೊರೇಟ್ ವಲಯದಲ್ಲಿ ಉನ್ನತ ಅಧಿಕಾರಿಗಳ ಸಂಭಾವನೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. 2021ರ ಬಳಿಕ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸಿಇಒಗಳು 100 ಮಿಲಿಯನ್ ಡಾಲರ್ಗಿಂತ ಹೆಚ್ಚಿನ ಸಂಭಾವನೆ ಪಡೆದಿದ್ದಾರೆ. ಸುಮಾರು ಹನ್ನೆರಡು ಮಂದಿ ಮುಖ್ಯ ಕಾರ್ಯನಿರ್ವಾಹಕರು 200 ಮಿಲಿಯನ್ ಡಾಲರ್ಗಿಂತ ಹೆಚ್ಚಿನ ವೇತನ ಪ್ಯಾಕೇಜ್ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.
ಕೊಲ್ಕತ್ತಾದಿಂದ ಅಮೆರಿಕದ ಕಾರ್ಪೊರೇಟ್ ಲೋಕದ ಶಿಖರದವರೆಗೆ….
ಶಂಖ್ ಮಿತ್ರ ಅವರ ಯಶಸ್ಸಿನ ಪಯಣ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಆರಂಭವಾಯಿತು. ಅವರು ಜಾದವಪುರ ವಿಶ್ವವಿದ್ಯಾಲಯದಲ್ಲಿ ಇನ್ಸ್ಟ್ರುಮೆಂಟೇಶನ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು.
ನಂತರ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿ, ಕೊಲಂಬಿಯಾ ಬಿಸಿನೆಸ್ ಸ್ಕೂಲ್ನಲ್ಲಿ ಅಪ್ಲೈಡ್ ವ್ಯಾಲ್ಯೂ ಇನ್ವೆಸ್ಟಿಂಗ್ ವಿಷಯದಲ್ಲಿ ಎಂಬಿಎ ಪದವಿ ಪಡೆದರು. ಇದೇ ಶಿಕ್ಷಣವು ಅವರ ಹಣಕಾಸು ಮತ್ತು ಹೂಡಿಕೆ ನಿರ್ವಹಣಾ ಕ್ಷೇತ್ರದ ವೃತ್ತಿಜೀವನಕ್ಕೆ ಭದ್ರ ಅಡಿಪಾಯ ಹಾಕಿತು.
ವೆಲ್ಟವರ್ಗೆ ಸೇರುವ ಮೊದಲು ಅವರು ಸಿಟಾಡೆಲ್ ಎಲ್ಎಲ್ಸಿ ಮತ್ತು ಮಿಲೇನಿಯಂ ಮ್ಯಾನೇಜ್ಮೆಂಟ್ ಸಂಸ್ಥೆಗಳಲ್ಲಿ ಹಿರಿಯ ಹೂಡಿಕೆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು, ರಿಯಲ್ ಎಸ್ಟೇಟ್ ಸೆಕ್ಯುರಿಟೀಸ್ ಮತ್ತು ಹೂಡಿಕೆ ಪೋರ್ಟ್ಫೋಲಿಯೊಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2020ರಲ್ಲಿ ವೆಲ್ಟವರ್ನ ಸಿಇಒ ಆಗಿ ನೇಮಕ
ಶಂಖ್ ಮಿತ್ರ ಅವರು 2016ರಲ್ಲಿ ಆರೋಗ್ಯ ಸೇವೆ ಹಾಗೂ ಹಿರಿಯ ನಾಗರಿಕರ ವಸತಿ ಆಸ್ತಿಗಳ ನಿರ್ವಹಣೆಯಲ್ಲಿ ತೊಡಗಿರುವ ಪ್ರಮುಖ ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ (REIT) ಸಂಸ್ಥೆಯಾದ ವೆಲ್ಟವರ್ಗೆ ಸೇರ್ಪಡೆಯಾದರು. 2018ರಲ್ಲಿ ಸಂಸ್ಥೆಯ ಮುಖ್ಯ ಹೂಡಿಕೆ ಅಧಿಕಾರಿ (Chief Investment Officer) ಆಗಿ ನೇಮಕಗೊಂಡ ಅವರು, 2020ರಲ್ಲಿ ಸಿಇಒ ಹುದ್ದೆ ವಹಿಸಿಕೊಂಡರು.
ಅವರ ನೇಮಕದ ವೇಳೆ ವೆಲ್ಟವರ್ನ ಪ್ರಮುಖ ಸ್ವತಂತ್ರ ನಿರ್ದೇಶಕ ಜೆಫ್ರಿ ಎಚ್. ಡೊನಾಹ್ಯೂ, ಶಂಖ್ ಮಿತ್ರ ಅವರ ಹೂಡಿಕೆ ಮತ್ತು ಕಾರ್ಯಾಚರಣಾ ಸಾಮರ್ಥ್ಯವನ್ನು ಶ್ಲಾಘಿಸಿ, ಅವರ ನಾಯಕತ್ವ ಸಂಸ್ಥೆಯನ್ನು ಇನ್ನಷ್ಟು ಬಲಿಷ್ಠ ಸ್ಥಿತಿಗೆ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಸಿಇಒ ಹುದ್ದೆ ಸ್ವೀಕರಿಸಿದ ಸಂದರ್ಭದಲ್ಲಿ ಶಂಖ್ ಮಿತ್ರ ಅವರು, “ಈ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದು ನನಗೆ ವಿನಮ್ರ ಮತ್ತು ಗೌರವದ ವಿಷಯವಾಗಿದೆ. ನನ್ನ ಮೇಲೆ ವಿಶ್ವಾಸವಿಟ್ಟ ನಿರ್ದೇಶಕ ಮಂಡಳಿ ಹಾಗೂ ಸಂಸ್ಥೆಯ ಎಲ್ಲ ಉದ್ಯೋಗಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದ್ದರು.
ಷೇರು ಆಧಾರಿತ ಭಾರೀ ಸಂಭಾವನೆ
ಶಂಖ್ ಮಿತ್ರ ಅವರ ಸಂಭಾವನೆ ಪ್ಯಾಕೇಜ್ನಲ್ಲಿ ಸಾಂಪ್ರದಾಯಿಕ ವೇತನದ ಪಾಲು ಅತ್ಯಂತ ಕಡಿಮೆಯಾಗಿದ್ದು, ಬಹುತೇಕ ಸಂಪೂರ್ಣ ಮೊತ್ತ ಕಂಪನಿಯ ಷೇರುಗಳ ರೂಪದಲ್ಲೇ ನೀಡಲಾಗಿದೆ.
ಒಟ್ಟು ಪ್ಯಾಕೇಜ್ನಲ್ಲಿ ಸುಮಾರು 789 ಮಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಕಳೆದ ಅಕ್ಟೋಬರ್ನಲ್ಲಿ ಅವರಿಗೆ ನೀಡಲಾಗಿತ್ತು. ಕಂಪನಿಯ ಷೇರುಗಳ ಮೌಲ್ಯ ಏರಿಕೆಯ ಪರಿಣಾಮ, ವರ್ಷದ ಅಂತ್ಯದ ವೇಳೆಗೆ ಈ ಷೇರುಗಳ ಮೌಲ್ಯ 1 ಬಿಲಿಯನ್ ಡಾಲರ್ಗೂ ಅಧಿಕವಾಗಿದೆ ಎಂದು ವರದಿ ತಿಳಿಸಿದೆ.
ಆದಾಗ್ಯೂ, ಈ ಸಂಭಾವನೆ ಸಂಪೂರ್ಣವಾಗಿ ದೀರ್ಘಾವಧಿಯ ಕಾರ್ಯಕ್ಷಮತೆಗೆ ಸಂಬಂಧಿಸಿದೆ. ಶಂಖ್ ಮಿತ್ರ ಅವರು 2031ರವರೆಗೆ ವೆಲ್ಟವರ್ನಲ್ಲಿ ಮುಂದುವರಿದರೆ ಮಾತ್ರ ಅವರಿಗೆ ಸುಮಾರು ಅರ್ಧದಷ್ಟು ಷೇರುಗಳು ಲಭ್ಯವಾಗಲಿವೆ.
ಉಳಿದ ಷೇರುಗಳನ್ನು ಪಡೆಯಲು ಸಂಸ್ಥೆಯ ಮಾರುಕಟ್ಟೆ ಮೌಲ್ಯವನ್ನು ಕನಿಷ್ಠ 45 ಶೇಕಡಾ ಹೆಚ್ಚಿಸುವುದರ ಜೊತೆಗೆ, ಐದು ವರ್ಷಗಳ ಅವಧಿಯಲ್ಲಿ ಪ್ರಮುಖ ಷೇರು ಮಾರುಕಟ್ಟೆ ಸೂಚ್ಯಂಕಗಳನ್ನು ಮೀರಿದ ಸಾಧನೆ ಮಾಡಬೇಕಾದ ಕಟ್ಟುನಿಟ್ಟಿನ ಗುರಿಗಳನ್ನು ಕಂಪನಿ ನಿಗದಿಪಡಿಸಿದೆ.
ಮತ್ತೊಬ್ಬ ಭಾರತೀಯ ಮೂಲದ ಉದ್ಯಮಿ ಟಾಪ್-10 ಪಟ್ಟಿಯಲ್ಲಿ
ಈ ವರದಿಯ ಮತ್ತೊಂದು ವಿಶೇಷವೆಂದರೆ, ವೆಲ್ಟವರ್ನ ಇನ್ನೂ ಮೂವರು ಹಿರಿಯ ಅಧಿಕಾರಿಗಳು ತಲಾ 100 ಮಿಲಿಯನ್ ಡಾಲರ್ಗಿಂತ ಹೆಚ್ಚಿನ ಸಂಭಾವನೆ ಪ್ಯಾಕೇಜ್ ಪಡೆದಿದ್ದಾರೆ. ಒಂದೇ ಸಂಸ್ಥೆಯಲ್ಲಿ ನಾಲ್ವರು ಅಧಿಕಾರಿಗಳು ಇಷ್ಟು ದೊಡ್ಡ ಪ್ರಮಾಣದ ಸಂಭಾವನೆ ಪಡೆದಿರುವುದು ಅಪರೂಪದ ಬೆಳವಣಿಗೆಯಾಗಿದೆ.
ಎಲಾನ್ ಮಸ್ಕ್ ಮತ್ತು ಶಂಖ್ ಮಿತ್ರ ಅವರ ನಂತರದ ಸ್ಥಾನಗಳಲ್ಲಿ ಜಾರ್ಜ್ ಕುರ್ಟ್ಜ್ (248 ಮಿಲಿಯನ್ ಡಾಲರ್), ಹಾಕ್ ಟಾನ್ (205 ಮಿಲಿಯನ್ ಡಾಲರ್), ಡೇವಿಡ್ ಜಾಸ್ಲಾವ್ (165 ಮಿಲಿಯನ್ ಡಾಲರ್) ಹಾಗೂ ಸ್ಟೀಫನ್ ಶ್ವಾರ್ಜ್ಮನ್ (126 ಮಿಲಿಯನ್ ಡಾಲರ್) ಸ್ಥಾನ ಪಡೆದಿದ್ದಾರೆ.
ಇದರೊಂದಿಗೆ ಮತ್ತೊಬ್ಬ ಭಾರತೀಯ ಮೂಲದ ಉದ್ಯಮಿ ನಿಕೇಶ ಅರೋರಾ ಕೂಡ ಅಗ್ರ-10 ಅತಿ ಹೆಚ್ಚು ಸಂಭಾವನೆ ಪಡೆದ ಅಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪಾಲೊ ಆಲ್ಟೊ ನೆಟ್ವರ್ಕ್ಸ್ ಸಂಸ್ಥೆಯ ಮುಖ್ಯಸ್ಥರಾಗಿರುವ ಅವರು 100 ಮಿಲಿಯನ್ ಡಾಲರ್ ಸಂಭಾವನೆ ಪ್ಯಾಕೇಜ್ ಪಡೆದು ಎಂಟನೇ ಸ್ಥಾನದಲ್ಲಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ