ನವದೆಹಲಿ: ಸುಮಾರು ಎರಡು ವರ್ಷಗಳಿಂದ ಭಾರತದಲ್ಲಿ ದೇಶಾಂತರದ ಜೀವನ ನಡೆಸುತ್ತಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ, “ಈ ವರ್ಷವೇ ನಾನು ನನ್ನ ದೇಶಕ್ಕೆ ಮರಳುತ್ತೇನೆ” ಎಂದು ಪ್ರಕಟಿಸುವ ಮೂಲಕ ತಮ್ಮ ದೇಶಾಂತರದ ಅಂತ್ಯಕ್ಕೆ ಸೂಚನೆ ನೀಡಿದ್ದಾರೆ.
2024ರ ಆಗಸ್ಟ್ 5ರಂದು ವಿದ್ಯಾರ್ಥಿ ನೇತೃತ್ವದ ಭಾರಿ ಜನಾಂದೋಲನದ ಬಳಿಕ ಅಧಿಕಾರ ಕಳೆದುಕೊಂಡು ಭಾರತಕ್ಕೆ ಬಂದಿದ್ದ ಹಸೀನಾ, ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹಲವು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಹಾಗೂ ನಂತರ ಅಧಿಕಾರಕ್ಕೆ ಬಂದ ಬಿಎನ್‌ಪಿ ಪಕ್ಷದ ತಾರೀಕ್ ರಹಮಾನ್ ನೇತೃತ್ವದ ಸರ್ಕಾರಗಳು ಅವಾಮಿ ಲೀಗ್ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ, ಪಕ್ಷವು ಮತ್ತೆ ಅಧಿಕಾರಕ್ಕೆ ಬರುವ ಸಾಮರ್ಥ್ಯ ಹೊಂದಿದೆ ಎಂದು ಹಸೀನಾ ವಿಶ್ವಾಸ ವ್ಯಕ್ತಪಡಿಸಿದರು.
“ಅವಾಮಿ ಲೀಗ್ ಕಾಗದದ ಮೇಲಿನ ಸಂಘಟನೆಯಲ್ಲ. ಅದು ಒಂದು ಶಕ್ತಿ. ನಮ್ಮ ಪಕ್ಷದ ಪುನರಾಗಮನವು ವಿರೋಧಿಗಳ ವೈಫಲ್ಯದ ಮೇಲೆ ಅವಲಂಬಿತವಾಗಿಲ್ಲ. ಜನರೊಂದಿಗೆ ಸೇರಿ ನಾವು ನಮ್ಮದೇ ದಾರಿಯನ್ನು ನಿರ್ಮಿಸಿಕೊಳ್ಳುತ್ತೇವೆ” ಎಂದು ಅವರು ಹೇಳಿದರು. ಜನರ ಆಶೋತ್ತರಗಳನ್ನು ರಾಜಕೀಯ ಚಳವಳಿಯಾಗಿ ರೂಪಿಸುವ ಸಾಮರ್ಥ್ಯವು ಬಾಂಗ್ಲಾದೇಶದ ರಾಷ್ಟ್ರಪಿತ ಶೇಖ್ ಮುಜಿಬುರ್ ರಹಮಾನ್ ಅವರ ಪರಂಪರೆಯಿಂದ ಬಂದಿರುವುದು ಅವಾಮಿ ಲೀಗ್‌ನ ಶಕ್ತಿಯಾಗಿದೆ ಎಂದರು.
ನಿಷೇಧದ ನಡುವೆಯೂ 77ನೇ ಸಂಸ್ಥಾಪನಾ ದಿನದ ಆಚರಣೆ
ನಿಷೇಧದ ನಡುವೆಯೂ ಜೂನ್ 23ರಂದು ಅವಾಮಿ ಲೀಗ್ ತನ್ನ 77ನೇ ಸಂಸ್ಥಾಪನಾ ದಿನವನ್ನು ದೇಶವ್ಯಾಪಿ ಆಚರಿಸಿತು. ಈ ವೇಳೆ ಹಲವಾರು ಕಾರ್ಯಕರ್ತರನ್ನು ಬಂಧಿಸಲಾಯಿತು.
ಹಸೀನಾ, ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಆಡಳಿತ ಮತ್ತು ನಂತರ ರಚನೆಯಾದ ಬಿಎನ್‌ಪಿ ಸರ್ಕಾರ ಎರಡನ್ನೂ ಅಸಂವಿಧಾನಿಕ ಎಂದು ಆರೋಪಿಸಿದರು. “ಈಗಿನ ಸರ್ಕಾರವು ನಾಟಕೀಯ ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದಿದೆ. ದೇಶದಲ್ಲಿ ಪ್ರಜಾಪ್ರಭುತ್ವವಿಲ್ಲ, ಕಾನೂನಿನ ಆಳ್ವಿಕೆಯಿಲ್ಲ, ಭದ್ರತೆಯಿಲ್ಲ. ಆರ್ಥಿಕತೆ ದುರ್ಬಲಗೊಂಡಿದೆ. ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆಯುತ್ತಿವೆ. ಉಗ್ರವಾದ ಹೆಚ್ಚುತ್ತಿದೆ. ಅವಾಮಿ ಲೀಗ್ ನಾಯಕರು ಮತ್ತು ಕಾರ್ಯಕರ್ತರು ಊಹಿಸಲೂ ಸಾಧ್ಯವಾಗದ ಮಟ್ಟದ ಸರ್ಕಾರಿ ದೌರ್ಜನ್ಯಕ್ಕೆ ಒಳಗಾಗಿದ್ದಾರೆ” ಎಂದು ಆರೋಪಿಸಿದರು.
ಪ್ರತಿ ದಿನವೂ ಅವಾಮಿ ಲೀಗ್ ಪರ ಮೆರವಣಿಗೆಗಳು
ಪಕ್ಷದ ಮೇಲೆ ನಿಷೇಧ ಹಾಗೂ ಭದ್ರತಾ ಪಡೆಗಳ ಕಠಿಣ ಕ್ರಮಗಳ ನಡುವೆಯೂ ದೇಶದ ವಿವಿಧ ಭಾಗಗಳಲ್ಲಿ ಪ್ರತಿದಿನವೂ ಅವಾಮಿ ಲೀಗ್ ಪರ ಮೆರವಣಿಗೆಗಳು ನಡೆಯುತ್ತಿವೆ. ಸಾಮಾನ್ಯ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹಸೀನಾ ಹೇಳಿದರು.
“ಪ್ರಸ್ತುತ ಸರ್ಕಾರದ ವರ್ತನೆಯೇ ಅವರಿಗೆ ಅವಾಮಿ ಲೀಗ್‌ನ ಸಂಘಟನಾ ಶಕ್ತಿಯ ಭಯವಿದೆ ಎಂಬುದನ್ನು ತೋರಿಸುತ್ತದೆ. ಅದಕ್ಕಾಗಿಯೇ ನಮ್ಮ ಸಂಸ್ಥಾಪನಾ ದಿನಾಚರಣೆಯನ್ನು ತಡೆಯಲು ಸೇನೆ, ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಮತ್ತು ಪೊಲೀಸರನ್ನು ನಿಯೋಜಿಸಿದರು. ಇದು ಅವರ ದೌರ್ಬಲ್ಯದ ಸಂಕೇತ” ಎಂದರು. “ಜನಜಾಗೃತಿ ಮೂಡಿಸುವ ಶಕ್ತಿಯಿರುವ ಅವಾಮಿ ಲೀಗ್ ಅನ್ನು ಬಲಪ್ರಯೋಗದಿಂದ ಅಥವಾ ಭಯದ ಮೂಲಕ ನಿಗ್ರಹಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ಪಕ್ಷದ ಮೇಲಿನ ನಿಷೇಧ ಹಿಂಪಡೆಯಬೇಕು
ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಬೇಕಾದರೆ ಅವಾಮಿ ಲೀಗ್ ಮೇಲಿನ ನಿಷೇಧವನ್ನು ಹಿಂಪಡೆಯಬೇಕು, ಪಕ್ಷದ ನಾಯಕರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ರದ್ದುಪಡಿಸಬೇಕು ಹಾಗೂ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಹಸೀನಾ ಆಗ್ರಹಿಸಿದರು.
“ಆಡಳಿತದಲ್ಲಿರುವವರು ಈ ಕನಿಷ್ಠ ಪ್ರಜಾಪ್ರಭುತ್ವದ ಅವಕಾಶವನ್ನೂ ನಿರಾಕರಿಸಿದರೆ, ಜನರ ಕೋಪ, ನೋವು ಹಾಗೂ ಪ್ರಜಾಪ್ರಭುತ್ವದ ಆಶಯಗಳು ಅವಾಮಿ ಲೀಗ್‌ಗೆ ಹೊಸ ದಾರಿಯನ್ನು ಸೃಷ್ಟಿಸುತ್ತದೆ” ಎಂದು ಹೇಳಿದರು.
ಮರಣದಂಡನೆ ತೀರ್ಪು ರಾಜಕೀಯ ಪ್ರತೀಕಾರ
ಢಾಕಾದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ತನಗೆ ವಿಧಿಸಿರುವ ಮರಣದಂಡನೆ ಕುರಿತು ಪ್ರತಿಕ್ರಿಯಿಸಿದ ಹಸೀನಾ, ಆ ಪ್ರಕ್ರಿಯೆಯನ್ನು ಅಕ್ರಮ, ಅಸಂವಿಧಾನಿಕ ಮತ್ತು ರಾಜಕೀಯ ದುರುದ್ದೇಶದಿಂದ ನಡೆಸಲಾಗಿದೆ ಎಂದು ಆರೋಪಿಸಿದರು.
“ಅವಾಮಿ ಲೀಗ್ ಅನ್ನು ನಾಯಕತ್ವವಿಲ್ಲದಂತೆ ಮಾಡಲು ನ್ಯಾಯಾಂಗವನ್ನು ರಾಜಕೀಯ ಪ್ರತೀಕಾರದ ಸಾಧನವಾಗಿ ಬಳಸಲಾಗಿದೆ. ಇಂತಹ ಪ್ರಯತ್ನಗಳು ಹಿಂದೆ ನಡೆದಿದ್ದವು. ಆಗಲೂ ವಿಫಲವಾಗಿದ್ದವು, ಈಗಲೂ ವಿಫಲವಾಗುತ್ತವೆ” ಎಂದು ಹೇಳಿದರು.
ತಮ್ಮ ಸರ್ಕಾರದ ಪತನವು ‘ಬಾಂಗ್ಲಾದೇಶ ವಿರೋಧಿ ಶಕ್ತಿಗಳ’ ಸಂಚಿನ ಫಲಿತಾಂಶ ಎಂದು ಹಸೀನಾ ಆರೋಪಿಸಿದರು. ಜನರನ್ನು ತಪ್ಪು ದಾರಿಗೆಳೆಯುವ ಮೂಲಕ ಸರ್ಕಾರವನ್ನು ಉರುಳಿಸಲಾಗಿದೆ ಎಂದು ಹೇಳಿದರು.
ತಮ್ಮ ಆಡಳಿತದ ಸಾಧನೆಗಳ ಪಟ್ಟಿ ಮುಂದಿಟ್ಟ ಹಸೀನಾ
ತಮ್ಮ ಸರ್ಕಾರದ ಅವಧಿಯಲ್ಲಿ ಬಾಂಗ್ಲಾದೇಶವು ಗಮನಾರ್ಹ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾಧಿಸಿತು ಎಂದು ಹಸೀನಾ ಹೇಳಿದರು. ಅವರ ಪ್ರಕಾರ,
ದೇಶದ ಜಿಡಿಪಿ ಬೆಳವಣಿಗೆ ದರ 7.25 ಶೇಕಡಾ ತಲುಪಿತ್ತು, ವಿದೇಶಿ ನೇರ ಹೂಡಿಕೆ (FDI) ಐದು ಪಟ್ಟು ಹೆಚ್ಚಳ ಕಂಡಿತ್ತು, ಬಡತನದ ಪ್ರಮಾಣ 18.7 ಶೇಕಡಾಕ್ಕೆ ಇಳಿದಿತ್ತು,ತೀವ್ರ ಬಡತನ 5.6 ಶೇಕಡಾಕ್ಕೆ ಕುಸಿದಿತ್ತು, ಆಹಾರ ಧಾನ್ಯ ಉತ್ಪಾದನೆ ನಾಲ್ಕು ಪಟ್ಟು ಹೆಚ್ಚಾಗಿತ್ತು, ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಎಂಟು ಪಟ್ಟು ಏರಿಕೆಯಾಗಿತ್ತು,ದೇಶದ ಪ್ರತಿಯೊಬ್ಬ ನಾಗರಿಕರಿಗೂ ವಿದ್ಯುತ್ ಸಂಪರ್ಕ ಒದಗಿಸಲಾಗಿತ್ತು, ಸಾಕ್ಷರತೆ, ಮಹಿಳೆಯರ ಉದ್ಯೋಗ ಪಾಲ್ಗೊಳ್ಳುವಿಕೆ ಹಾಗೂ ಆರೋಗ್ಯ ಸೇವೆಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತ್ತು, ದೇಶದಾದ್ಯಂತ ಸುಮಾರು 15 ಸಾವಿರ ಸಮುದಾಯ ಆರೋಗ್ಯ ಕೇಂದ್ರಗಳನ್ನು (ಕಮ್ಯುನಿಟಿ ಕ್ಲಿನಿಕ್‌ಗಳು) ಸ್ಥಾಪಿಸಲಾಗಿತ್ತು.
‘ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಅಪಪ್ರಚಾರವಲ್ಲ’
ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ವರದಿಗಳು “ಅತ್ಯಂತ ನೋವಿನ ಮತ್ತು ಆತಂಕಕಾರಿ” ಎಂದು ಹಸೀನಾ ಹೇಳಿದರು.
ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಹಾಗೂ ನಂತರದ ಬಿಎನ್‌ಪಿ ಸರ್ಕಾರ ಈ ಘಟನೆಗಳನ್ನು ನಿರಾಕರಿಸುತ್ತಿವೆ ಅಥವಾ ರಾಜಕೀಯ ಅಪಪ್ರಚಾರ ಎಂದು ತಳ್ಳಿಹಾಕುತ್ತಿವೆ ಎಂದು ಆರೋಪಿಸಿದ ಅವರು, ಈ ನಿರಾಕರಣೆಯ ಸಂಸ್ಕೃತಿಯೇ ದುಷ್ಕರ್ಮಿಗಳಿಗೆ ಧೈರ್ಯ ತುಂಬಿದ್ದು, ದಾಳಿಗಳು ಮುಂದುವರಿಯಲು ಕಾರಣವಾಗಿದೆ ಎಂದು ಹೇಳಿದರು.
ಆಗಸ್ಟ್ 5ರಿಂದ ಹಿಂದೂಗಳು, ಬೌದ್ಧರು, ಕ್ರೈಸ್ತರು, ಆದಿವಾಸಿಗಳು, ಅಹ್ಮದೀಯರು ಹಾಗೂ ಸೂಫಿ ಸಂಪ್ರದಾಯದ ಅನುಯಾಯಿಗಳು ಸುರಕ್ಷಿತರಾಗಿಲ್ಲ ಎಂದು ಆರೋಪಿಸಿದ ಹಸೀನಾ, ದೇವಾಲಯಗಳ ಧ್ವಂಸ, ಮನೆಗಳ ದರೋಡೆ, ಸುಲಿಗೆ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವ ಘಟನೆಗಳು ಮುಂದುವರಿದಿವೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಸುಳ್ಳು ಪ್ರಕರಣದಲ್ಲಿ ಇನ್ನೂ ಜೈಲಿನಲ್ಲಿಟ್ಟಿರುವುದನ್ನೂ ಅವರು ಉಲ್ಲೇಖಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ