ಅಮೆರಿಕದ ಜನ್ಮಸಿದ್ಧ ಪೌರತ್ವ ಹಕ್ಕು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ ; ಅಧ್ಯಕ್ಷ ಟ್ರಂಪ್‌ಗೆ ಭಾರಿ ಹಿನ್ನಡೆ

ವಾಷಿಂಗ್ಟನ್ : ಅಮೆರಿಕದ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದ್ದು, ಜನ್ಮಸಿದ್ಧ ಪೌರತ್ವ (Birthright Citizenship) ಹಕ್ಕನ್ನು ಎತ್ತಿಹಿಡಿದಿದೆ. ಅಮೆರಿಕದಲ್ಲಿ ವಲಸಿಗರಿಗೆ ಜನಿಸುವ ಅನೇಕ ಮಕ್ಕಳಿಗೆ ಸಂವಿಧಾನಾತ್ಮಕವಾಗಿ ದೊರೆಯುವ ಜನ್ಮಸಿದ್ಧ ಪೌರತ್ವದ ಹಕ್ಕನ್ನು ನಿರಾಕರಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಕಾರ್ಯನಿರ್ವಾಹಕ ಆದೇಶವನ್ನು ನ್ಯಾಯಾಲಯ ತಿರಸ್ಕರಿಸಿದೆ.
ತೀರ್ಪಿನಲ್ಲಿ, “ಅಮೆರಿಕದಲ್ಲಿ ಕಾನೂನುಬಾಹಿರವಾಗಿ ಅಥವಾ ತಾತ್ಕಾಲಿಕವಾಗಿ ನೆಲೆಸಿರುವ ಪೋಷಕರಿಗೆ ಜನಿಸುವ ಮಕ್ಕಳು ಅಮೆರಿಕದ ನ್ಯಾಯವ್ಯಾಪ್ತಿಗೆ (Jurisdiction) ಒಳಪಟ್ಟವರಾಗಿದ್ದು, ಸಂವಿಧಾನದ 14ನೇ ತಿದ್ದುಪಡಿಯ ಪೌರತ್ವ ವಿಧಿಯ (Citizenship Clause) ಪ್ರಕಾರ ಅವರು ಜನ್ಮದಿಂದಲೇ ಅಮೆರಿಕದ ಪ್ರಜೆಗಳಾಗುತ್ತಾರೆ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಈ ಪ್ರಕರಣದ ಏಪ್ರಿಲ್‌ನಲ್ಲಿ ನಡೆದ ಮೌಖಿಕ ವಾದದ ವೇಳೆ, ಅಮೆರಿಕದ ನಾಗರಿಕರಲ್ಲದ ಪೋಷಕರಿಗೆ ಅಮೆರಿಕದಲ್ಲಿ ಜನಿಸುವ ಮಕ್ಕಳಿಗೆ ಸ್ವಯಂಚಾಲಿತವಾಗಿ ಪೌರತ್ವ ದೊರೆಯುವ ಸಂವಿಧಾನಾತ್ಮಕ ತತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯುವ ಸಾಧ್ಯತೆಯಿದೆ ಎಂಬ ಸೂಚನೆಯನ್ನು ನ್ಯಾಯಮೂರ್ತಿಗಳು ನೀಡಿದ್ದರು.
ವಿಶೇಷವೆಂದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪ್ರಕರಣದ ಮೌಖಿಕ ವಾದಕ್ಕೆ ಸ್ವತಃ ಹಾಜರಾಗಿದ್ದರು. ಇದರ ಜೊತೆಗೆ ಸುಪ್ರೀಂ ಕೋರ್ಟ್‌ನಲ್ಲಿ ಮೌಖಿಕ ವಾದಕ್ಕೆ ಹಾಜರಾದ ಅಧಿಕಾರದಲ್ಲಿರುವ (ಸಿಟಿಂಗ್) ಮೊದಲ ಅಮೆರಿಕ ಅಧ್ಯಕ್ಷ ಎಂಬ ದಾಖಲೆಯನ್ನು ಅವರು ನಿರ್ಮಿಸಿದರು. ಈ ಪ್ರಕರಣ ‘ಟ್ರಂಪ್ ವಿರುದ್ಧ ಬಾರ್ಬರಾ’ (Trump v. Barbara) ಎಂಬ ಹೆಸರಿನಲ್ಲಿ ವಿಚಾರಣೆಗೆ ಒಳಪಟ್ಟಿದೆ.
ಜನ್ಮಸಿದ್ಧ ಪೌರತ್ವ ಎಂದರೇನು?
ಜನ್ಮಸಿದ್ಧ ಪೌರತ್ವ (Birthright Citizenship) ಎಂಬುದು ಅಮೆರಿಕದಲ್ಲಿ ಜನಿಸುವ ಬಹುತೇಕ ಎಲ್ಲ ವ್ಯಕ್ತಿಗಳಿಗೆ, ಅವರ ಪೋಷಕರ ರಾಷ್ಟ್ರೀಯತೆ ಅಥವಾ ವಲಸೆ ಸ್ಥಿತಿಯನ್ನು ಪರಿಗಣಿಸದೆ, ಜನ್ಮದಿಂದಲೇ ಅಮೆರಿಕದ ಪೌರತ್ವ ದೊರೆಯುವ ಕಾನೂನು ತತ್ವವಾಗಿದೆ.
ಇದು ಅಮೆರಿಕದ ಸಂವಿಧಾನದ 14ನೇ ತಿದ್ದುಪಡಿಯಲ್ಲಿ ಅಡಕವಾಗಿದೆ. ಅಮೆರಿಕದ ಅಂತರ್ಯುದ್ಧದ ಬಳಿಕ 1868ರಲ್ಲಿ ಜಾರಿಗೆ ಬಂದ ಈ ತಿದ್ದುಪಡಿಯ ಪ್ರಕಾರ, ಅಮೆರಿಕದಲ್ಲಿ ಜನಿಸಿದ ಅಥವಾ ಕಾನೂನುಬದ್ಧವಾಗಿ ಪೌರತ್ವ ಪಡೆದ ಹಾಗೂ ಅಮೆರಿಕದ ನ್ಯಾಯವ್ಯಾಪ್ತಿಗೆ ಒಳಪಡುವ ಎಲ್ಲರೂ ಅಮೆರಿಕದ ನಾಗರಿಕರಾಗುತ್ತಾರೆ.
ಆದರೆ, ಜನ್ಮಸಿದ್ಧ ಪೌರತ್ವವು ಎಲ್ಲರಿಗೂ ಅನ್ವಯಿಸುವುದಿಲ್ಲ. ರಾಜತಾಂತ್ರಿಕ ವಿನಾಯಿತಿ (Diplomatic Immunity) ಹೊಂದಿರುವ ವಿದೇಶಿ ರಾಜತಾಂತ್ರಿಕರ ಮಕ್ಕಳಿಗೆ ಈ ಹಕ್ಕು ಅನ್ವಯಿಸುವುದಿಲ್ಲ. ಏಕೆಂದರೆ ಅವರು ಅಮೆರಿಕದ ನ್ಯಾಯವ್ಯಾಪ್ತಿಗೆ ಒಳಪಟ್ಟವರಾಗಿರುವುದಿಲ್ಲ. ಇದೇ ರೀತಿಯಾಗಿ, ಅಮೆರಿಕದ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಶತ್ರು ಸೇನೆಗಳ ಮಕ್ಕಳಿಗೂಅನ್ವಯಿಸುವುದಿಲ್ಲ.
ಟ್ರಂಪ್ ಕಾರ್ಯನಿರ್ವಾಹಕ ಆದೇಶ ಏನಿತ್ತು?
2025ರ ಜನವರಿ 20ರಂದು ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದಲ್ಲಿ ಜನಿಸುವ ಕೆಲವು ಮಕ್ಕಳಿಗೆ ಜನ್ಮಸಿದ್ಧ ಪೌರತ್ವ ನೀಡುವುದನ್ನು ಕೊನೆಗೊಳಿಸುವ ಉದ್ದೇಶದಿಂದ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದರು.
ಆ ಆದೇಶದ ಪ್ರಕಾರ, ಮಗುವಿನ ಜನನದ ಸಮಯದಲ್ಲಿ ಅದರ ಪೋಷಕರು ಅಮೆರಿಕದಲ್ಲಿ ಅಕ್ರಮವಾಗಿ ಅಥವಾ ದಾಖಲೆಗಳಿಲ್ಲದೆ (Undocumented) ನೆಲೆಸಿದ್ದರೆ, ಅಂತಹ ಮಕ್ಕಳಿಗೆ ಅಮೆರಿಕದ ಪೌರತ್ವ ನೀಡಬಾರದು ಎಂದು ಸೂಚಿಸಲಾಗಿತ್ತು. ಈ ಆದೇಶಕ್ಕೆ ಸಹಿ ಹಾಕಿದ 30 ದಿನಗಳ ಬಳಿಕ ಅದು ಜಾರಿಗೆ ಬರಬೇಕಿತ್ತು.
ಆದರೆ, ಈ ಆದೇಶವನ್ನು ತಕ್ಷಣವೇ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಹಲವು ಅಮೆರಿಕ ಜಿಲ್ಲಾ ನ್ಯಾಯಾಧೀಶರು, ಈ ಆದೇಶವು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ತೀರ್ಪು ನೀಡಿದರು. ಬಳಿಕ ಎರಡು ಫೆಡರಲ್ ಮೇಲ್ಮನವಿ ನ್ಯಾಯಾಲಯಗಳೂ (Federal Appellate Courts) ಈ ಕಾರ್ಯನಿರ್ವಾಹಕ ಆದೇಶ ಜಾರಿಗೆ ಬರದಂತೆ ತಡೆ ನೀಡಿದ್ದ ತೀರ್ಪುಗಳನ್ನು ಎತ್ತಿಹಿಡಿದವು.
ಈಗ ಸುಪ್ರೀಂ ಕೋರ್ಟ್ ಕೂಡ ಜನ್ಮಸಿದ್ಧ ಪೌರತ್ವವು ಅಮೆರಿಕದ ಸಂವಿಧಾನದ 14ನೇ ತಿದ್ದುಪಡಿ ನೀಡಿರುವ ಮೂಲಭೂತ ಹಕ್ಕು ಎಂಬುದನ್ನು ಪುನರುಚ್ಚರಿಸಿ, ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶವನ್ನು ತಿರಸ್ಕರಿಸಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement