ನವದೆಹಲಿ: ಹಲವು ವಾರಗಳಿಂದ ದೇಶದ ಬಹುತೇಕ ಕಡೆ ನೈರುತ್ಯ ಮುಂಗಾರು ಮಳೆಯ ಕೊರತೆ ದಿನೇದಿನೇ ಹೆಚ್ಚಾಗುತ್ತಿದ್ದ ವೇಳೆ ಈಗ ಅದು ಮತ್ತೆ ಚುರುಕುಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
ಹವಾಮಾನ ತಜ್ಞರ ಪ್ರಕಾರ, ಈ ವಾರ ಬಂಗಾಳ ಕೊಲ್ಲಿ ಮತ್ತು ಮಧ್ಯ ಭಾರತದ ಭಾಗಗಳಲ್ಲಿ ಎರಡು ಮಹತ್ವದ ಹವಾಮಾನ ವ್ಯವಸ್ಥೆಗಳು (ಕಡಿಮೆ ಒತ್ತಡದ ಪ್ರದೇಶಗಳು) ರೂಪುಗೊಳ್ಳುವ ಸಾಧ್ಯತೆ ಇದೆ. ಇವುಗಳ ಪರಿಣಾಮವಾಗಿ ದೇಶದ ಬಹುತೇಕ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದ್ದು, ವಿಶೇಷವಾಗಿ ದೇಶದ ಫಶ್ಚಿಮ ಕರಾವಳಿಯಲ್ಲಿ ಅತಿ ಭಾರಿ ಮಳೆಯಾಗುವ ಸಾಧ್ಯತೆ ಕಂಡುಬರುತ್ತಿದೆ. ಅಲ್ಲದೆ, ಅತ್ಯಂತ ಹೆಚ್ಚು ಮಳೆ ಕೊರತೆ ಎದುರಿಸುತ್ತಿದ್ದ ಉತ್ತರ ಹಾಗೂ ಮಧ್ಯ ಭಾರತದಲ್ಲಿ ಸ್ಥಿರ ಮುಂಗಾರು ಪರಿಸ್ಥಿತಿಗೆ ಚಾಲನೆ ಸಿಗುವ ಸಾಧ್ಯತೆ ಇದೆ.
ಜೂನ್ ತಿಂಗಳ ಅಂತ್ಯಕ್ಕೆ ತಲುಪಿದರೂ ಭಾರತದ ಬಹುತೇಕ ಕಡೆ ಮುಂಗಾರು ಇನ್ನೂ ಸಂಪೂರ್ಣವಾಗಿ ಪ್ರವೇಶಿಸಲು ವಿಫಲವಾಗಿದೆ. ಈ ಪ್ರದೇಶಗಳಲ್ಲಿ ವಾತಾವರಣದಲ್ಲಿ ತೇವಾಂಶ ಕ್ರಮೇಣ ಹೆಚ್ಚಾಗಿದ್ದರೂ, ಮುಂಗಾರು ಪರಿಚಲನೆಯ ಕೊರತೆಯಿಂದಾಗಿ ವ್ಯಾಪಕ ಮಳೆ ಸುರಿಯಲು ಸಾಧ್ಯವಾಗಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಆದರೆ ಈ ಪರಿಸ್ಥಿತಿ ಶೀಘ್ರದಲ್ಲೇ ಬದಲಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಪ್ರಮುಖ ಕಾರಣವಾಗಿರುವುದು ಮುಂಗಾರು ಟ್ರಫ್ (Monsoon Trough). ಸಾಮಾನ್ಯವಾಗಿ ಭಾರತದ ಋತುಮಾನದ ಮಳೆಯ ಬಹುಪಾಲನ್ನು ನಿಯಂತ್ರಿಸುವ ಈ ಕಡಿಮೆ ಒತ್ತಡದ ಪಟ್ಟಿಯು ಈ ಬಾರಿ ರೂಪುಗೊಂಡಿದ್ದರೂ, ತನ್ನ ಸಾಮಾನ್ಯ ಸ್ಥಾನಕ್ಕಿಂತ ಉತ್ತರಕ್ಕೆ, ಹಿಮಾಲಯದ ತಪ್ಪಲಿನ ಸಮೀಪದಲ್ಲೇ ನೆಲೆಸಿದೆ. ಇದರಿಂದ ಸಕ್ರಿಯ ಮಳೆಯ ವಲಯವು ಇಂಡೋ-ಗಂಗಾ ಸಮತಟ್ಟು ಪ್ರದೇಶಗಳಿಂದ ಉತ್ತರದತ್ತ ಸರಿದಿದ್ದು, ದೆಹಲಿ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ಮುಂಗಾರು ಸಂಪೂರ್ಣವಾಗಿ ಪ್ರವೇಶಿಸಲು ವಿಳಂಬವಾಗಿದೆ.ಆದರೆ ಇತ್ತೀಚಿನ ಹವಾಮಾನ ಮಾದರಿಗಳ ಮುನ್ಸೂಚನೆಯ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಮುಂಗಾರು ಟ್ರಫ್ ಕ್ರಮೇಣ ದಕ್ಷಿಣದತ್ತ ಸರಿಯಲಿದೆ. ಅದು ತನ್ನ ಸಾಮಾನ್ಯ ಸ್ಥಾನಕ್ಕೆ ತಲುಪುತ್ತಿದ್ದಂತೆ ವಾತಾವರಣದಲ್ಲಿ ಉತ್ತರ ಭಾರತದಲ್ಲಿಯೂ ಗುಡುಗು-ಮಿಂಚಿನೊಂದಿಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ಜುಲೈ 1ರಿಂದ 5ರ ಅವಧಿಯಲ್ಲಿ ಉತ್ತರ ಭಾರತದಲ್ಲಿ ಮುಂಗಾರು ಸಂಪೂರ್ಣವಾಗಿ ನೆಲೆಗೊಳ್ಳುವ ಸಾಧ್ಯತೆ ಇದ್ದು, ಇದರ ಪರಿಣಾಮವಾಗಿ ತಾಪಮಾನದಲ್ಲಿ ಗಮನಾರ್ಹ ಇಳಿಕೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಆದರೆ ಈ ಮುಂಗಾರು ಪುನಶ್ಚೇತನಕ್ಕೆ ಕೇವಲ ಮುಂಗಾರು ಟ್ರಫ್ ಒಂದೇ ಕಾರಣವಾಗುವುದಿಲ್ಲ. ಈ ವಾರ ಬಂಗಾಳ ಕೊಲ್ಲಿಯಲ್ಲಿ ಒಂದರ ಹಿಂದೆ ಮತ್ತೊಂದು ಎರಡು ಕಡಿಮೆ ಒತ್ತಡದ ಪ್ರದೇಶಗಳು (low-pressure area) ರೂಪುಗೊಂಡು ಮಧ್ಯ ಭಾರತದ ಮೂಲಕ ಒಳನಾಡಿನತ್ತ ಸಾಗುವ ಸಾಧ್ಯತೆ ಇದೆ.
ಈ ಎರಡೂ ವ್ಯವಸ್ಥೆಗಳು ಅಪಾರ ಪ್ರಮಾಣದ ತೇವಾಂಶವನ್ನು ವಾತಾವರಣಕ್ಕೆ ಪೂರೈಸಲಿದ್ದು, ಮುಂಗಾರು ಪರಿಚಲನೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಪೂರ್ವ, ಮಧ್ಯ ಹಾಗೂ ಪಶ್ಚಿಮ ಭಾರತದ ಅನೇಕ ಭಾಗಗಳಲ್ಲಿ ಮಳೆಯ ತೀವ್ರತೆಯನ್ನು ಹೆಚ್ಚಿಸಲಿವೆ.
ಭಾರತದ ಪಶ್ಚಿಮ ಕರಾವಳಿಯ ಕೊಂಕಣ ಭಾಗದಲ್ಲಿಯೂ ಮತ್ತೊಮ್ಮೆ ಭಾರೀ ಮಳೆಯ ಅಬ್ಬರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮುಂಬೈನಲ್ಲಿ ವಾರದ ಮಧ್ಯಭಾಗದಿಂದ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಪ್ರಸ್ತುತ ಮುನ್ಸೂಚನೆಗಳ ಪ್ರಕಾರ, ಮುಂಬೈ ಮತ್ತು ಮುಂಬೈ ಮಹಾನಗರ ಪ್ರದೇಶದ ಕೆಲವು ಭಾಗಗಳಲ್ಲಿ ವಾರಾಂತ್ಯದ ವೇಳೆಗೆ ಸುಮಾರು 500 ಮಿಲಿಮೀಟರ್ ಮಳೆಯಾಗುವ ಸಾಧ್ಯತೆ ಇದ್ದು, ಈ ಹವಾಮಾನ ವ್ಯವಸ್ಥೆಗಳು ನಿರೀಕ್ಷೆಯಂತೆ ರೂಪುಗೊಂಡರೆ ಭಾರಿಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಮುಂಗಾರು ಚಟುವಟಿಕೆ ಪುನಶ್ಚೇತನಗೊಳ್ಳುವುದರಿಂದ ಮಳೆಯ ಕೊರತೆ ಎದುರಿಸುತ್ತಿರುವ ಹಲವು ಪ್ರದೇಶಗಳಲ್ಲಿ ಗಮನಾರ್ಹ ಪ್ರಮಾಣದ ಮಳೆ ಬೀಳುವ ನಿರೀಕ್ಷೆಯಿದೆ. ನಿರಂತರವಾಗಿ ಭಾರೀ ಮಳೆಯಾಗುವ ಪ್ರದೇಶಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಪ್ರವಾಹ, ಜಲಾವೃತ ಹಾಗೂ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಸುಮಾರು ಒಂದು ತಿಂಗಳ ನಿರೀಕ್ಷೆಯ ಬಳಿಕ ಭಾರತದ ಮುಂಗಾರು ವ್ಯವಸ್ಥೆ ಮತ್ತೆ ಚುರುಕುಗೊಳ್ಳುತ್ತಿರುವ ಲಕ್ಷಣಗಳು ಸ್ಪಷ್ಟವಾಗಿವೆ. ಹವಾಮಾನ ಮುನ್ಸೂಚನೆಗಳು ನಿಜವಾದರೆ, ಜುಲೈ ಮೊದಲ ವಾರವು ಅಲ್ಲಲ್ಲಿ ಸುರಿಯುತ್ತಿದ್ದ ಮುಂಗಾರು ಮಳೆ ದೇಶದ ಬಹುತೇಕ ಭಾಗಗಳಲ್ಲಿ ವ್ಯಾಪಕ ಹಾಗೂ ನಿರಂತರ ಮುಂಗಾರು ಮಳೆಯತ್ತ ಸಾಗುವ ಮಹತ್ವದ ಘಟ್ಟವಾಗಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ