ಕಾರವಾರ: ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ-ಕಾರವಾರ ರಸ್ತೆಯಲ್ಲಿ ಹಾರವಾಡ ಕ್ರಾಸ್ ಸಮೀಪ ಖಾಸಗಿ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ನಡೆದಿದೆ ಎಂದು ವರದಿಯಾಗಿದೆ.
ಗಾಯಾಳುಗಳನ್ನು ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣವೇ ಅಂಕೋಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ, ಬೆಂಗಳೂರಿನಿಂದ ಕಾರವಾರದತ್ತ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಅವರ್ಸಾ ಗಡಿ ಪ್ರದೇಶದ ಕಿರು ಸೇತುವೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ಉರುಳಿ ಬಿದ್ದಿದೆ. ಬಸ್ ಮರಕ್ಕೆ ಸಿಲುಕಿ ನಿಂತಿದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ನಿವಾಸಿಗಳು, ವಾಹನ ಸವಾರರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಸ್ನೊಳಗೆ ಸಿಲುಕಿದ್ದ ಕೆಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ