ಪಾಕಿಸ್ತಾನದಲ್ಲಿ 125 ವರ್ಷದ ಗುರುದ್ವಾರ ಧ್ವಂಸ; ‘ಅತ್ಯಂತ ಖಂಡನೀಯ ಕೃತ್ಯ’ ಎಂದ ಭಾರತ

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ 125 ವರ್ಷಗಳಷ್ಟು ಹಳೆಯ ಐತಿಹಾಸಿಕ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್ (Gurdwara Sri Guru Singh Sabha Sahib) ಅನ್ನು ಸ್ಥಳೀಯ ಉದ್ಯಮಿಯೊಬ್ಬರು ನೆಲಸಮಗೊಳಿಸಿರುವ ಘಟನೆ ಅಲ್ಪಸಂಖ್ಯಾತ ಸಿಖ್ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಇದು ಸಿಖ್ ಧರ್ಮದ ಪವಿತ್ರ ಆರಾಧನಾ ಕೇಂದ್ರದ ವಿರುದ್ಧ ನಡೆದ “ಅತ್ಯಂತ ಖಂಡನೀಯ ಮತ್ತು ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯ” ಎಂದು ಆರೋಪಿಸಿದೆ.
ಪಾಕಿಸ್ತಾನ ಅಧಿಕಾರಿಗಳ ಪ್ರಕಾರ, ಶೇಖುಪುರಾ ಜಿಲ್ಲೆಯ ಫರೂಖಾಬಾದ್‌ನಲ್ಲಿರುವ ಈ ಐತಿಹಾಸಿಕ ಗುರುದ್ವಾರವನ್ನು ಜೂನ್ 24ರ ರಾತ್ರಿ ಸಂಬಂಧಿತ ಇಲಾಖೆಯಿಂದ ಕಡ್ಡಾಯವಾಗಿ ಪಡೆಯಬೇಕಿದ್ದ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (NOC) ಪಡೆಯದೇ ಸ್ಥಳೀಯ ಉದ್ಯಮಿಯೊಬ್ಬರು ಧ್ವಂಸಗೊಳಿಸಿದ್ದಾರೆ.
ಸಿಖ್ ಸಮುದಾಯದ ಪ್ರತಿಭಟನೆ
ಪಾಕಿಸ್ತಾನದ ಪಂಜಾಬ್ ಸರ್ಕಾರದ ಅಧಿಕಾರಿಯೊಬ್ಬರ ಪ್ರಕಾರ, ಲಾಹೋರ್‌ನಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಫರೂಖಾಬಾದ್‌ನ ಐತಿಹಾಸಿಕ ಗುರುದ್ವಾರ ಸಿಂಗ್ ಸಭಾವನ್ನು ಸ್ಥಳೀಯ ಉದ್ಯಮಿಯೊಬ್ಬರು ಧ್ವಂಸಗೊಳಿಸಿದ್ದಾರೆ.
“ಸಂಬಂಧಿತ ಇಲಾಖೆಯಿಂದ ಕಡ್ಡಾಯವಾಗಿ ಪಡೆಯಬೇಕಿದ್ದ ಎನ್‌ಒಸಿ ಪಡೆಯದೇ ಗುರುದ್ವಾರವನ್ನು ನೆಲಸಮಗೊಳಿಸಲಾಗಿದೆ. ಸ್ಥಳೀಯ ಸಿಖ್ ಸಮುದಾಯ ಪ್ರತಿಭಟನೆ ನಡೆಸಿದ ಬಳಿಕವೇ ಸಂಬಂಧಿತ ಇಲಾಖೆ ಈ ಪ್ರಕರಣವನ್ನು ಗಮನಕ್ಕೆ ತೆಗೆದುಕೊಂಡಿದೆ” ಎಂದು ಅವರು ಅವರು ತಿಳಿಸಿದ್ದಾರೆ.
ಸಿಖ್ ಸಮುದಾಯದ ಪ್ರತಿಭಟನೆಯ ನಂತರ ಪಂಜಾಬ್ ಮುಖ್ಯಮಂತ್ರಿ ಮರ್ಯಂ ನವಾಜ್ ಈ ಘಟನೆಯ ಬಗ್ಗೆ ಗಮನಹರಿಸಿದ್ದು, ಪ್ರಕರಣದ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ತಕ್ಷಣ ಪುನರ್‌ ನಿರ್ಮಾಣಕ್ಕೆ ಆದೇಶ
ಬುಧವಾರ ಪಂಜಾಬ್ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ರಮೇಶ ಸಿಂಗ್ ಅರೋರಾ ಫರೂಖಾಬಾದ್‌ನ ಗುರುದ್ವಾರ ಸಿಂಗ್ ಸಭಾಗೆ ಭೇಟಿ ನೀಡಿ, ತಕ್ಷಣವೇ ಪುನರ್‌ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಪ್ರಕಟಿಸಿದ್ದಾರೆ.
ಅವರ ಜೊತೆ ಶೇಖುಪುರಾ ಡೆಪ್ಯುಟಿ ಕಮಿಷನರ್, ಸಹಾಯಕ ಆಯುಕ್ತ ಇಮ್ರಾನ್ ಅಲಿ ಹಾರ್ಲ್, ಮುನ್ಸಿಪಲ್ ಸಮಿತಿಯ ಮುಖ್ಯಾಧಿಕಾರಿ, ಔಕಾಫ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ಸಿಖ್ ಸಮುದಾಯದ ಅಹವಾಲುಗಳನ್ನು ಆಲಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅರೋರಾ, ಮುಖ್ಯಮಂತ್ರಿ ಮರ್ಯಂ ನವಾಜ್ ಅವರ ಸರ್ಕಾರ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳು ಹಾಗೂ ಅವರ ಧಾರ್ಮಿಕ ಸ್ಥಳಗಳ ರಕ್ಷಣೆಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಅವರು ಔಕಾಫ್ ಇಲಾಖೆಗೆ ಗುರುದ್ವಾರ ಇದ್ದ ಭೂಮಿಯ ಮಾಲೀಕತ್ವ ಹಾಗೂ ಕಾನೂನುಬದ್ಧ ಸ್ಥಿತಿಯ ಬಗ್ಗೆ ತಕ್ಷಣ ತನಿಖೆ ನಡೆಸುವಂತೆ ಸೂಚಿಸಿದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಆಸ್ತಿ ಔಕಾಫ್ ಇಲಾಖೆಯ ಆಸ್ತಿಯಾಗಿ ನೋಂದಾಯಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ಹೇಳಿದರು.
“ನಾನು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸಂಬಂಧಿತ ಅಧಿಕಾರಿಗಳು ವಾಸ್ತವಾಂಶಗಳ ಆಧಾರದ ಮೇಲೆ ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ” ಎಂದು ಅವರು ತಿಳಿಸಿದರು.
ಸ್ಥಳೀಯ ವ್ಯಾಪಾರಿಗಳ ಆಕ್ಷೇಪ
ಇನ್ನೊಂದೆಡೆ, ಗುರುದ್ವಾರದ ಸುತ್ತಮುತ್ತ ವ್ಯಾಪಾರ ನಡೆಸುತ್ತಿರುವ ಸ್ಥಳೀಯ ವ್ಯಾಪಾರಿಗಳು ಪುನರ್‌ನಿರ್ಮಾಣ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅವರ ಪ್ರಕಾರ, ಈ ಗುರುದ್ವಾರ ಸುಮಾರು 80 ವರ್ಷಗಳಿಂದ ಬಳಕೆಯಲ್ಲಿರದೆ ಪರಿತ್ಯಕ್ತ ಸ್ಥಿತಿಯಲ್ಲಿತ್ತು. ಈ ಅವಧಿಯಲ್ಲಿ ಹಲವಾರು ಕುಟುಂಬಗಳು ಅಲ್ಲಿ ನೆಲೆಸಿದ್ದು, ಅನೇಕ ಅಂಗಡಿಗಳು ನಿರ್ಮಾಣವಾಗಿವೆ.
ಗುರುದ್ವಾರದ ಪುನರ್‌ನಿರ್ಮಾಣದಿಂದ ಹಲವು ಕುಟುಂಬಗಳು ಸ್ಥಳಾಂತರಗೊಳ್ಳುವ ಪರಿಸ್ಥಿತಿ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿರುವ ವ್ಯಾಪಾರಿಗಳು, ಸ್ಥಳಾಂತರ ಅನಿವಾರ್ಯವಾದರೆ ಸರ್ಕಾರವು ಬಾಧಿತ ಕುಟುಂಬಗಳಿಗೆ ಪರ್ಯಾಯ ವಸತಿ ಹಾಗೂ ಜೀವನೋಪಾಯ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಭಾರತದ ತೀವ್ರ ಖಂಡನೆ
ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಈ ಘಟನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿ, ಪಾಕಿಸ್ತಾನ ಸರ್ಕಾರವು ತಕ್ಷಣ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನಿನ ಮುಂದೆ ನಿಲ್ಲಿಸಬೇಕು ಹಾಗೂ ಧ್ವಂಸಗೊಂಡ ಗುರುದ್ವಾರದ ಭಾಗಗಳನ್ನು ಆದಷ್ಟು ಬೇಗ ಮರುನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.
“ಪಾಕಿಸ್ತಾನದ ಫರೂಖಾಬಾದ್‌ನಲ್ಲಿರುವ 125 ವರ್ಷಗಳ ಐತಿಹಾಸಿಕ ಹಾಗೂ ಪವಿತ್ರ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್ ಧ್ವಂಸಗೊಂಡಿರುವ ಸುದ್ದಿ ನಮ್ಮನ್ನು ತೀವ್ರವಾಗಿ ನೋಯಿಸಿದೆ. ಸಿಖ್ ಧರ್ಮದ ಪವಿತ್ರ ಸ್ಥಳದ ವಿರುದ್ಧ ನಡೆದಿರುವ ಈ ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸ್ಥಳೀಯ ಆಡಳಿತ ಅಥವಾ ಎವಾಕ್ಯುಯಿ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ETPB) ಈ ಕುರಿತು ಯಾವುದೇ ಅರ್ಥಪೂರ್ಣ ಕ್ರಮ ಕೈಗೊಂಡಿಲ್ಲ ಎಂಬ ವರದಿಗಳು ಕೂಡ ಗಂಭೀರ ಕಳವಳಕ್ಕೆ ಕಾರಣವಾಗಿವೆ” ಎಂದು ಅವರು ಹೇಳಿದರು.
ಜೈಸ್ವಾಲ್ ಅವರು, ಇದು ಪ್ರತ್ಯೇಕ ಘಟನೆ ಅಲ್ಲ ಎಂದು ಹೇಳಿ, ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಅವರ ಆರಾಧನಾ ಸ್ಥಳಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದಾಳಿಗಳು ಮತ್ತು ಧಾರ್ಮಿಕ ಅಸಹಿಷ್ಣುತೆ ನಿರಂತರವಾಗಿ ಮುಂದುವರಿಯುತ್ತಿವೆ ಎಂದು ಆರೋಪಿಸಿದರು.
“ಈ ಪ್ರಕರಣದ ಬಗ್ಗೆ ತ್ವರಿತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಧ್ವಂಸಗೊಂಡ ಗುರುದ್ವಾರವನ್ನು ಶೀಘ್ರದಲ್ಲೇ ಮರುನಿರ್ಮಿಸಬೇಕು. ಜೊತೆಗೆ, ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ, ಭದ್ರತೆ ಮತ್ತು ಅವರ ಧಾರ್ಮಿಕ ಸ್ಥಳಗಳ ರಕ್ಷಣೆಯನ್ನು ಖಚಿತಪಡಿಸುವುದು ಪಾಕಿಸ್ತಾನ ಸರ್ಕಾರದ ಜವಾಬ್ದಾರಿಯಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಪಂಥೀಯ ಹಿಂಸಾಚಾರ ಮತ್ತು ಧಾರ್ಮಿಕ ಅಸಹಿಷ್ಣುತೆಗೆ ನಿರ್ಣಾಯಕ ಅಂತ್ಯ ಹಾಡಬೇಕು” ಎಂದು ಅವರು ಒತ್ತಾಯಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement