ಇರಾನ್‌ | ಎಲ್ಲಿದ್ದಾರೆ ಮೊಜ್ತಬಾ ? ತಂದೆ ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಮೂವರು ಪುತ್ರರು ಹಾಜರು ; ಮೊಜ್ತಬಾ ಮಾತ್ರ ಗೈರು !

ತೆಹ್ರಾನ್: ಹತ್ಯೆಯಾದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಗೆ ಅಂತಿಮ ವಿದಾಯ; ಪುತ್ರ ಮೊಜ್ತಬಾ ಖಮೇನಿ ಗೈರುಹಾಜರಿ ಕುತೂಹಲಕ್ಕೆ ಕಾರಣ
ಇರಾನ್‌ನ ಹತ್ಯೆಯಾದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಅಂತಿಮ ವಿಧಿವಿಧಾನಗಳು ಭಾನುವಾರದಿಂದ ಆರಂಭಗೊಂಡಿದ್ದು, ವಾರಪೂರ್ತಿ ನಡೆಯಲಿರುವ ಅಂತಿಮ ಯಾತ್ರೆಗೆ ಸಾವಿರಾರು ಜನರು ಸೇರಿದ್ದಾರೆ. ತೆಹ್ರಾನ್‌ನ ಇಮಾಮ್ ಖೊಮೇನಿ ಗ್ರ್ಯಾಂಡ್ ಮೊಸಲ್ಲಾದಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಭಾಗವಹಿಸಿ ತಮ್ಮ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ಆದರೆ ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದ ಸಂಗತಿ ಎಂದರೆ, ಖಮೇನಿಯವರ ಪುತ್ರ ಹಾಗೂ ಇರಾನಿನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಗೈರುಹಾಜರಾಗಿರುವುದು.
ಮೊಜ್ತಬಾ ಖಮೇನಿ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಿರುವುದು ಅವರ ಕುರಿತು ಮತ್ತಷ್ಟು ಪ್ರಶ್ನೆಗಳನ್ನು ಮೂಡಿಸಿದೆ.

ಖಮೇನಿಯವರ ಇತರ ಮೂವರು ಪುತ್ರರಾದ ಮೊಸ್ತಫಾ, ಮೇಸಮ್ ಮತ್ತು ಮಸೂದ್ ಅವರು ಅಂತಿಮ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರೆ, ಮೊಜ್ತಬಾ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇರಾನ್‌ನ ಸರ್ಕಾರಿ ಮಾಧ್ಯಮಗಳು ಬಿಡುಗಡೆ ಮಾಡಿದ ಚಿತ್ರಗಳಲ್ಲಿ ಈ ಮೂವರು ಪುತ್ರರು ತಮ್ಮ ತಂದೆಯ ಶವಪೆಟ್ಟಿಗೆಯ ಸಮೀಪ ನಿಂತಿರುವ ದೃಶ್ಯಗಳು ಕಂಡುಬಂದಿವೆ. ಅಷ್ಟೇ ಅಲ್ಲದೆ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘರ್ ಖಾಲಿಬಾಫ್, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮುಖ್ಯಸ್ಥ ಜನರಲ್ ಅಹ್ಮದ್ ವಾಹಿದಿ ಹಾಗೂ ಕುಡ್ಸ್ ಫೋರ್ಸ್ ಕಮಾಂಡರ್ ಇಸ್ಮಾಯಿಲ್ ಖಾನಿ ಸೇರಿದಂತೆ ದೇಶದ ಬಹುತೇಕ ಸಂಪೂರ್ಣ ಉನ್ನತ ನಾಯಕತ್ವ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಆದರೆ ಮೊಜ್ತಬಾ ಅವರು ಮಾತ್ರ ಗೈರಾಗಿದ್ದರು.
ಇದಕ್ಕೂ ಮುನ್ನವೇ ಇರಾನ್ ಅಧಿಕಾರಿಗಳು, ತಮ್ಮ ತಂದೆಯ ಆರು ದಿನಗಳ ಅಂತಿಮ ಯಾತ್ರೆಯ ಯಾವುದೇ ಕಾರ್ಯಕ್ರಮದಲ್ಲೂ ಮೊಜ್ತಬಾ ಖಮೇನಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದರು.

56 ವರ್ಷದ ಮೊಜ್ತಬಾ ಖಮೇನಿ, ಅಮೆರಿಕ ಮತ್ತು ಇಸ್ರೇಲ್ ಫೆಬ್ರವರಿ 28ರಂದು ಇರಾನ್ ಮೇಲೆ ಜಂಟಿ ದಾಳಿ ನಡೆಸಿದ ಬಳಿಕ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆ ದಾಳಿಯಲ್ಲೇ ಅಲಿ ಖಮೇನಿ ಸಾವಿಗೀಡಾಗಿದ್ದರು. ವರದಿಗಳ ಪ್ರಕಾರ, ಆ ದಾಳಿಯಲ್ಲಿ ಮೊಜ್ತಬಾ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೊಜ್ತಬಾ ಬದುಕಿದ್ದಾರೋ ಅಥವಾ ಮೃತಪಟ್ಟಿದ್ದಾರೋ ಎಂಬ ಬಗ್ಗೆ ಅಮೆರಿಕಕ್ಕೆ ಖಚಿತ ಮಾಹಿತಿ ಇಲ್ಲ ಎಂದು ಹೇಳಿದ್ದರು. ನಂತರ ಅವರು, “ಅವರು ಜೀವಂತವಾಗಿದ್ದಾರೆ” ಎಂದು ಹೇಳಿದ್ದು, ಭವಿಷ್ಯದಲ್ಲಿ ಅವರನ್ನು ಭೇಟಿಯಾಗುವ ಆಶಯವನ್ನೂ ವ್ಯಕ್ತಪಡಿಸಿದ್ದರು. ಆದರೆ ಇದನ್ನು ಇರಾನ್ ಅಧಿಕಾರಿಗಳು ತಳ್ಳಿಹಾಕಿದ್ದರು. ಅಲ್ಲದೆ, ಮೊಜ್ತಬಾ ಜೀವಂತವಾಗಿದ್ದಾರೆ ಎಂದು ಸರ್ಕಾರ ಹೇಳುತ್ತಿದ್ದರೂ, ಅವರ ಯಾವುದೇ ಹೊಸ ಫೋಟೋ ಅಥವಾ ವಿಡಿಯೊವನ್ನು ಬಿಡುಗಡೆ ಮಾಡದಿರುವುದು ಅವರ ಬಗ್ಗೆ ಆರೋಗ್ಯದ ಊಹಾಪೋಹಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ.

ಭಾನುವಾರ ಅಲಿ ಖಮೇನಿಯವರ ಅಂತ್ಯಕ್ರಿಯೆಯ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿತ್ತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಜನರು ತಮ್ಮ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ಅಲ್ಲದೆ, ಖಮೇನಿಯವರ ಹತ್ಯೆಕೋರರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಅಂತ್ಯಯಾತ್ರೆಯಲ್ಲಿ ಕಂಡುಬಂದ ಭಾರೀ ಜನಸಾಗರವು ಡೊನಾಲ್ಡ್ ಟ್ರಂಪ್ ಅವರಿಗೂ ಅಚ್ಚರಿ ಮೂಡಿಸಿದೆ. “ನಾನು ನಿಜವಾಗಿಯೂ ಆಶ್ಚರ್ಯಗೊಂಡೆ. ಸಾಮಾನ್ಯ ಇರಾನಿಯರು ಅಲಿ ಖಮೇನಿಯನ್ನು ದ್ವೇಷಿಸುತ್ತಾರೆ ಎಂದು ನಾನು ಯಾವಾಗಲೂ ಭಾವಿಸಿದ್ದೆ,” ಎಂದು ಟ್ರಂಪ್ ಆಕ್ಸಿಯೊಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. “ಅವರನ್ನು ಜನರು ಇಷ್ಟಪಡುವುದಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ಅಂತ್ಯಕ್ರಿಯೆಯ ದೃಶ್ಯಗಳು ನನ್ನನ್ನು ಅಚ್ಚರಿಗೊಳಿಸಿವೆ” ಎಂದು ಅವರು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement