₹9 ಕೋಟಿ ಚೆಕ್ ಬೌನ್ಸ್ ಪ್ರಕರಣ: ಬಾಲಿವುಡ್‌ ನಟ ರಾಜಪಾಲ್ ಯಾದವ್‌ಗೆ ಮೂರು ತಿಂಗಳ ಜೈಲು ಶಿಕ್ಷೆ

ನವದೆಹಲಿ: ಬಾಲಿವುಡ್‌ ನಟ ರಾಜಪಾಲ ಯಾದವ್ ಅವರ  ₹9 ಕೋಟಿ ಸಾಲಕ್ಕೆ ಸಂಬಂಧಿಸಿದ ಚೆಕ್ ಬೌನ್ಸ್ ಪ್ರಕರಣಗಳಲ್ಲಿದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಏಳು ಪ್ರತ್ಯೇಕ ಪ್ರಕರಣಗಳಲ್ಲೂ ತಲಾ ಮೂರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ.
ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ಈ ಆದೇಶವನ್ನು ಪ್ರಕಟಿಸಿದ್ದು, ಪ್ರತಿಯೊಂದು ಪ್ರಕರಣದಲ್ಲೂ ದೂರುದಾರರಿಗೆ ₹1.05 ಕೋಟಿ ಪಾವತಿಸುವಂತೆ ನಟ ರಾಜಪಾಲ ಯಾದವ್‌ ಅವರಿಗೆ ನಿರ್ದೇಶನ ನೀಡಿದ್ದಾರೆ.
ಇದರ ಜೊತೆಗೆ, ದೂರುದಾರರಿಗೆ ₹1,04,75,000 ಹಾಗೂ ರಾಜ್ಯ ಸರ್ಕಾರಕ್ಕೆ ₹25,000 ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಇದೇ ವೇಳೆ, ನಟನ ಪತ್ನಿ ರಾಧಾ ಯಾದವ್ ಅವರು ಪ್ರತಿಯೊಂದು ಪ್ರಕರಣದಲ್ಲೂ ದೂರುದಾರರಿಗೆ ₹5,51,380 ಪಾವತಿಸಬೇಕೆಂದು ನ್ಯಾಯಾಲಯ ಸೂಚಿಸಿದೆ.
ಈ ಹಿಂದೆ ನಟ ರಾಜಪಾಲ ಯಾದವ್ ಪಾವತಿಸಿರುವ ₹2.25 ಕೋಟಿಯನ್ನು ಅಂತಿಮ ಪಾವತಿ ಮೊತ್ತದಲ್ಲಿ ಹೊಂದಾಣಿಕೆ (ಅಡ್ಜಸ್ಟ್) ಮಾಡಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಈ ಪ್ರಕರಣದಲ್ಲಿ ಅಂತಿಮ ಸುತ್ತಿನ ರಾಜಿ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ, ಏಪ್ರಿಲ್ 2ರಂದು ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ತೀರ್ಪನ್ನು ಕಾಯ್ದಿರಿಸಿದ್ದರು. ಹೈಕೋರ್ಟ್‌ನ ನಿರಂತರ ಮಧ್ಯಸ್ಥಿಕೆಯ ಹೊರತಾಗಿಯೂ ಉಭಯ ಪಕ್ಷಗಳ ನಡುವೆ ರಾಜಿ ಸಾಧ್ಯವಾಗಿರಲಿಲ್ಲ.
ವಿಚಾರಣೆ ವೇಳೆ ರಾಜಪಾಲ ಯಾದವ್ ರಾಜಿ ಪ್ರಸ್ತಾವವನ್ನು ವಿರೋಧಿಸಿ ಭಾವನಾತ್ಮಕ ಮನವಿ ಸಲ್ಲಿಸಿದ್ದರು. ಬಾಕಿ ಮೊತ್ತ ಮರುಪಾವತಿಸುವ ವಿಚಾರದಲ್ಲಿ ರಾಜಪಾಲ ಯಾದವ್ ತಮ್ಮ ನಿಲುವನ್ನು ಪದೇಪದೇ ಬದಲಾಯಿಸುತ್ತಿರುವ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. “ನನಗೆ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ನೀವು ಸಲ್ಲಿಸಿದ ಅಂಡರ್‌ಟೇಕಿಂಗ್‌ನಲ್ಲಿ ಒಂದು ವಿಷಯ ಹೇಳಿದ್ದೀರಿ. ಈಗ ಮತ್ತೊಂದು ಹೇಳುತ್ತಿದ್ದೀರಿ” ಎಂದು ನ್ಯಾಯಾಲಯ ಹೇಳಿ, ನಟನ ಪರವಾಗಿ ಸಲ್ಲಿಸಲಾದ ವಾದಗಳಲ್ಲಿ ಕಂಡುಬಂದ ವ್ಯತ್ಯಾಸಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.
ದೂರುದಾರರ ಪರ ವಾದ
ದೂರುದಾರ ಕಂಪನಿಯ ಪರ ವಕೀಲ ಅವನೀತ ಸಿಂಗ್ ಸಿಕ್ಕಾ ವಾದ ಮಂಡಿಸಿ, ರಾಜಪಾಲ ಯಾದವ್ ಈಗಾಗಲೇ ತಮ್ಮ ಶಿಕ್ಷೆಯನ್ನು ಒಪ್ಪಿಕೊಂಡಿರುವುದರಿಂದ, ಇದೀಗ ಹಣಕಾಸಿನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
2024ರಲ್ಲಿ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿ (ರಿವಿಷನ್ ಪಿಟಿಷನ್) 1,894 ದಿನಗಳ ವಿಳಂಬದೊಂದಿಗೆ ಸಲ್ಲಿಕೆಯಾಗಿದ್ದು, ಆ ವಿಳಂಬವನ್ನು ಮನ್ನಾ ಮಾಡಲು ಯಾವುದೇ ಸಮರ್ಪಕ ಕಾರಣವನ್ನು ನೀಡಲಾಗಿಲ್ಲ ಎಂದು ಅವರು ವಾದಿಸಿದರು.
ಚೆಕ್‌ಗಳು ಅಮಾನ್ಯಗೊಂಡ ಪ್ರಕರಣದಲ್ಲಿ ಶಿಕ್ಷೆಯ ಅವಧಿ ಪೂರ್ಣಗೊಂಡರೂ, ಅದರಿಂದ ಉಂಟಾಗಿರುವ ಹಣಕಾಸಿನ ಬಾಧ್ಯತೆ ಕೊನೆಗೊಳ್ಳುವುದಿಲ್ಲ ಎಂದು ಕೂಡ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ರಾಜಿ ಪ್ರಯತ್ನಗಳು ವಿಫಲ
ವಿಚಾರಣೆ ಸಂದರ್ಭದಲ್ಲಿ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಹೈಕೋರ್ಟ್ ಹಲವು ಬಾರಿ ಪ್ರಯತ್ನಿಸಿತು.
ನ್ಯಾಯಾಲಯದ ಸಲಹೆಯ ಮೇರೆಗೆ ದೂರುದಾರ ಕಂಪನಿ ₹6 ಕೋಟಿಯನ್ನು ಪೂರ್ಣ ಮತ್ತು ಅಂತಿಮ ರಾಜಿಯಾಗಿ ಸ್ವೀಕರಿಸಲು ಒಪ್ಪಿಗೆ ಸೂಚಿಸಿತ್ತು. ಆದರೆ ಕೊನೆಯ ವಿಚಾರಣೆಯ ದಿನ ವರ್ಚುವಲ್ ಮೂಲಕ ಹಾಜರಾದ ರಾಜಪಾಲ ಯಾದವ್ ಆ ಪ್ರಸ್ತಾವವನ್ನು ತಿರಸ್ಕರಿಸಿದರು.
ತಾವು ಈಗಾಗಲೇ ಭಾರೀ ಆರ್ಥಿಕ ನಷ್ಟ ಅನುಭವಿಸಿದ್ದು, ಆಸ್ತಿ ಮಾರಾಟಕ್ಕೂ ಮುಂದಾಗಬೇಕಾಯಿತು ಹಾಗೂ ಈಗಾಗಲೇ ಸಾಕಷ್ಟು ಹಣ ಪಾವತಿಸಿದ್ದೇನೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ನಂತರ ನ್ಯಾಯಾಲಯವು ನಿಗದಿತ ಅವಧಿಯೊಳಗೆ ₹3 ಕೋಟಿ ಪಾವತಿಸುವ ಮತ್ತೊಂದು ಹಂತ ಹಂತದ ಪಾವತಿ ಯೋಜನೆಯನ್ನು ಕೇವಲ ನ್ಯಾಯಾಂಗದ ಸಲಹೆಯಾಗಿ ಮುಂದಿಟ್ಟಿತು. ಇದು ಅಂತಿಮ ರಾಜಿ ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದರೂ, ಉಭಯ ಪಕ್ಷಗಳು ಯಾವುದೇ ಒಪ್ಪಂದಕ್ಕೆ ಬರಲಿಲ್ಲ.
ಈಗಾಗಲೇ ₹2.5 ಕೋಟಿ ಪಾವತಿ
ಫೆಬ್ರವರಿಯಲ್ಲಿ ₹9 ಕೋಟಿ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ರಾಜಪಾಲ ಯಾದವ್ ₹2.5 ಕೋಟಿ ಪಾವತಿಸಿದ್ದಾರೆ ಎಂದು ಅವರ ಪರ ವಕೀಲ ಭಾಸ್ಕರ ಉಪಾಧ್ಯಾಯ ತಿಳಿಸಿದ್ದರು.
ಪ್ರಕರಣ ಹೇಗೆ ಆರಂಭವಾಯಿತು?
2012ರಲ್ಲಿ ಬಿಡುಗಡೆಯಾದ ‘ಅತಾ ಪತಾ ಲಾಪತಾ’ ಚಿತ್ರದ ವೈಫಲ್ಯದ ನಂತರ ರಾಜಪಾಲ ಯಾದವ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈ ಚಿತ್ರವು ಅವರ ನಿರ್ದೇಶನದ ಮೊದಲ ಚಿತ್ರವೂ ಆಗಿತ್ತು. ಬಳಿಕ ಪಾವತಿಯಾಗದ ಬಾಕಿ ಮೊತ್ತವು ಬಡ್ಡಿ ಸೇರಿದಂತೆ ಸುಮಾರು ₹9 ಕೋಟಿಗೆ ಏರಿಕೆಯಾಗಿದ್ದು, ಅದೇ ಈ ಕಾನೂನು ಸಮರಕ್ಕೆ ಕಾರಣವಾಯಿತು.
ಹಿಂದಿನ ಆದೇಶ
ಫೆಬ್ರವರಿ 2ರಂದು ನಡೆದ ವಿಚಾರಣೆ ವೇಳೆ, ಏಳು ಪ್ರಕರಣಗಳಲ್ಲೂ ಪ್ರತಿಯೊಂದಕ್ಕೆ ₹1.35 ಕೋಟಿ ಪಾವತಿಸಬೇಕೆಂದು ನ್ಯಾಯಾಲಯ ಸೂಚಿಸಿತ್ತು. ಅಲ್ಲದೆ, ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರ ಬಳಿ ಈಗಾಗಲೇ ಠೇವಣಿ ಇರಿಸಿದ್ದ ಮೊತ್ತವನ್ನು ದೂರುದಾರರ ಪರವಾಗಿ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.
ಇದಕ್ಕೂ ಮೊದಲು, 2025ರ ಅಕ್ಟೋಬರ್‌ನಲ್ಲಿ ತಲಾ ₹75 ಲಕ್ಷ ಮೊತ್ತದ ಎರಡು ಡಿಮ್ಯಾಂಡ್ ಡ್ರಾಫ್ಟ್‌ಗಳನ್ನು ರಿಜಿಸ್ಟ್ರಾರ್ ಜನರಲ್ ಅವರ ಬಳಿ ಠೇವಣಿ ಇಡಲಾಗಿತ್ತು. ಆದಾಗ್ಯೂ, ಇನ್ನೂ ₹9 ಕೋಟಿ ಪಾವತಿಸಬೇಕಿರುವುದು ಬಾಕಿಯೇ ಇದೆ ಎಂದು ದೆಹಲಿ ಹೈಕೋರ್ಟ್ ತನ್ನ ಆದೇಶದಲ್ಲಿ ದಾಖಲಿಸಿತ್ತು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement