ಮೈಸೂರು : ಸಕಲ ಸರ್ಕಾರಿ ಗೌರವಗಳೊಂದಿಗೆ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಅಂತ್ಯಕ್ರಿಯೆ ಹೆಚ್. ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದ ಜಮೀನಿನಲ್ಲಿ ಭಾನುವಾರ ಸಂಜೆ ನಡೆಯಿತು. ಜಾನಕಿ ಅವರ ಆಸೆಯಂತೆ ಅವರ ತೋಟದಲ್ಲೇ ಅಂತ್ಯಕ್ರಿಯೆ ಮಾಡಲಾಗಿದೆ.
ಜಾನಕಿ ಅವರಿಗೆ ಜಿಲ್ಲಾಡಳಿತದಿಂದ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಯಿತು. ಸರ್ಕಾರದ ಪರವಾಗಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದರು. ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಪೊಲೀಸರಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಮೃತರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ನಂತರ ಜಾನಕಿ ಅವರ ಪುತ್ರ ಮುರುಳಿಕೃಷ್ಣ ಅವರ ಮಗಳಾದ ಅಪ್ಸರಾ ಅವರು ತೆಲುಗು ಬ್ರಾಹ್ಮಣ ಕುಟುಂಬದ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು. ಎಸ್. ಜಾನಕಿ ಅವರ ಪುತ್ರ ಇದೇ ವರ್ಷದ ಜನವರಿ ತಿಂಗಳಲ್ಲಿ ಮೃತಪಟ್ಟಿದ್ದರು. ಹೀಗಾಗಿ, ಮೊಮ್ಮಗಳು ಅಪ್ಸರಾ ಅವರು ತಮ್ಮ ಅಜ್ಜಿಯ ಅಂತ್ಯ ಸಂಸ್ಕಾರ ಕ್ರಿಯೆಗಳನ್ನು ನೆರವೇರಿಸಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಗಾನ ಕೋಗಿಲೆ ಎಸ್. ಜಾನಕಿ ಅವರ ಪಾರ್ಥಿವ ಶರೀರ ನೋಡಿದ ಅಭಿಮಾನಿಗಳು ಭಾವುಕರಾಗಿ ಕಂಬನಿ ಮಿಡಿದರು.
ಮೈಸೂರಿನಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಿನಿಮಾ ಕ್ಷೇತ್ರದ ದಿಗ್ಗಜರು, ಸಂಗೀತ ನಿರ್ದೇಶಕರು, ಕಲಾವಿದರು, ಸಾವಿರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು.
ನಂತರ ಅಂತ್ಯಕ್ರಿಯೆಗಾಗಿ ಪಾರ್ಥಿವ ಶರೀರವನ್ನು ಹೆಚ್. ಡಿ. ಕೋಟೆ ತಾಲೂಕಿನ ಕಣಿಯನಹುಂಡಿಯ ಅವರ ಅಭಿಮಾನಿ (ನೋಡಿಕೊಳ್ಳುತ್ತಿದ್ದವರು) ನವೀನ್ ಅವರ ತೋಟದತ್ತ ಭಾನುವಾರ ಮಧ್ಯಾಹ್ನ 3:09ಕ್ಕೆ ಒಯ್ಯಲಾಯಿತು. 3:09ಕ್ಕೆ ಅಂತಿಮಯಾತ್ರೆ ಆರಂಭವಾಯಿತು. ಮಾರ್ಗದುದ್ದಕ್ಕೂ ಅಭಿಮಾನಿಗಳು ನಿಂತು ನೆಚ್ಚಿನ ಗಾಯಕಿಗೆ ಅಂತಿಮ ವಿದಾಯ ಹೇಳಿದರು.
ಶನಿವಾರ ಸಂಜೆ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಭಾನುವಾರ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.
ಪಾರ್ಥಿವ ಶರೀರವನ್ನು ಶನಿವಾರ ತಡರಾತ್ರಿ ಕುವೆಂಪುನಗರದ ಅಪೋಲೊ ಆಸ್ಪತ್ರೆಯಿಂದ ಅವರು ಕೊನೆಯ ದಿನಗಳನ್ನು ಕಳೆದಿದ್ದ ಬೋಗಾದಿಯ ಅಭಿಮಾನಿಯ ಮನೆಗೆ ಒಯ್ಯಲಾಗಿತ್ತು. ಅಲ್ಲಿ ಬಂಧುಗಳು ದರ್ಶನ ಪಡೆದರು. ಭಾನುವಾರ ಬೆಳಗ್ಗೆ ಶಾಸಕ ಜಿ. ಟಿ. ದೇವೇಗೌಡ ಅವರು ನಮನ ಸಲ್ಲಿಸಿದರು. ಜಾನಕಿಚ ಅವರ ಸೊಸೆ ಹಾಗೂ ಮೊಮ್ಮಗಳು ಸೇರಿದಂತೆ ಕುಟುಂಬದವರು ಪೂಜೆ ಮೊದಲಾದ ಅಂತಿಮ ವಿಧಿ ವಿಧಾನ ನೆರವೇರಿಸಿದ ಬಳಿಕ ಮಹಾರಾಜ ಕಾಲೇಜು ಮೈದಾನಕ್ಕೆ ಪಾರ್ಥಿವ ಶರೀರವನ್ನು ಆಂಬ್ಯುಲೆನ್ಸ್ನಲ್ಲಿ ತರಲಾಗಿತ್ತು.
ಕನ್ನಡ ಸೇರಿ ೨೦ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಖ್ಯಾತ ಗಾಯಕಿ ಎಸ್. ಜಾನಕಿ (88) ಅವರು ವಯೋಸಹಜ ಕಾಯಿಲೆಯಿಂದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದರು. ಇವರು ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಇವರ 1938ರ ಏಪ್ರಿಲ್ 23ರಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಲ ಗ್ರಾಮದಲ್ಲಿ ಜನಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ