ಬಾಲಾಸೋರ್ : ಒಡಿಶಾದ ಬಾಲಾಸೋರ್ ಜಿಲ್ಲೆಯ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ಎಟಿಎಂ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳ ತಂಡ ಎಟಿಎಂ ಯಂತ್ರವನ್ನು ಕಪ್ಪು ಬಣ್ಣದ ಥಾರ್ (Thar) ವಾಹನಕ್ಕೆ ಹಗ್ಗ ಕಟ್ಟಿ ಎಳೆದಿದ್ದಾರೆ. ಅದು ಕಿತ್ತುಬಂದ ನಂತರ ಅದರೊಳಗಿನ ಹಣವನ್ನು ದೋಚಿ ಪರಾರಿಯಾಗಿದೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೇವಲ ಕೆಲವೇ ನಿಮಿಷಗಳಲ್ಲಿ ಈ ಕೃತ್ಯ ಎಸಗಿರುವುದು ದೃಶ್ಯಗಳಿಂದ ಬಹಿರಂಗವಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಶನಿವಾರ ಮುಂಜಾನೆ ಸುಮಾರು 2 ಗಂಟೆ ವೇಳೆಗೆ ಐದಕ್ಕಿಂತ ಹೆಚ್ಚು ಮಂದಿ ಕಪ್ಪು ಬಣ್ಣದ ಥಾರ್ ವಾಹನದಲ್ಲಿ ಎಟಿಎಂ ಕೇಂದ್ರಕ್ಕೆ ಆಗಮಿಸಿದರು. ಮೊದಲು ಎಟಿಎಂ ಕಿಯೋಸ್ಕ್ಗೆ ನುಗ್ಗಿದ ಅವರು, ಯಂತ್ರವನ್ನು ಕಿತ್ತುಹಾಕಿ, ಅದನ್ನು ಥಾರ್ಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋದರು.
ನಂತರ ಎಟಿಎಂ ಯಂತ್ರವನ್ನು ಒಡೆದು ಅದರೊಳಗಿನ ಸಂಪೂರ್ಣ ಹಣವನ್ನು ದೋಚಿಕೊಂಡು ಆರೋಪಿಗಳು ಪರಾರಿಯಾದರು. ಹಾನಿಗೊಳಗಾದ ಎಟಿಎಂ ಯಂತ್ರವನ್ನು ರಸ್ತೆಯ ಮಧ್ಯದಲ್ಲೇ ಬಿಟ್ಟು ತೆರಳಿದ್ದಾರೆ. ಎಟಿಎಂನಿಂದ ಎಷ್ಟು ಹಣ ದೋಚಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ರಾತ್ರಿ 2:14ಕ್ಕೆ ಕಪ್ಪು ಬಣ್ಣದ ಎಸ್ಯುವಿ ವಾಹನವು ಎಟಿಎಂ ಕಿಯೋಸ್ಕ್ ಮುಂದೆ ಬಂದು ನಿಲ್ಲುತ್ತದೆ. ಬಳಿಕ ಹಲವು ಮಂದಿ ವಾಹನದಿಂದ ಇಳಿದು ದಪ್ಪ ಹಗ್ಗವೊಂದನ್ನು ತೆಗೆದುಕೊಂಡು, ಅದರ ಒಂದು ತುದಿಯನ್ನು ವಾಹನದ ಹಿಂಭಾಗಕ್ಕೆ ಕಟ್ಟಿ, ಮತ್ತೊಂದು ತುದಿಯನ್ನು ಎಟಿಎಂ ಯಂತ್ರಕ್ಕೆ ಬಿಗಿಯಾಗಿ ಕಟ್ಟಿ ಬರುತ್ತಾರೆ. ನಂತರ ವಾಹನವನ್ನು ವೇಗವಾಗಿ ಚಲಾಯಿಸುತ್ತಿದ್ದಂತೆ ಹಗ್ಗ ಬಿಗಿಯಾಗಿ ಎಳೆದು, ಎಟಿಎಂ ಯಂತ್ರವು ಕಿಯೋಸ್ಕ್ನಿಂದ ಸಂಪೂರ್ಣವಾಗಿ ಕಿತ್ತು ಹೊರಬೀಳುತ್ತದೆ. ಈ ವೇಳೆ ಕಟ್ಟಡದ ಅವಶೇಷಗಳು ಹಾಗೂ ಮುರಿದ ಚೌಕಟ್ಟಿನ ಭಾಗಗಳು ರಸ್ತೆಗೆ ಚದುರಿದ ದೃಶ್ಯವೂ ಸೆರೆಯಾಗಿದೆ.
ರಾತ್ರಿ 2:17ರ ವೇಳೆಗೆ ದುಷ್ಕರ್ಮಿಗಳು ಮತ್ತೆ ಎಸ್ಯುವಿ ವಾಹನಕ್ಕೆ ಏರಿ ಸ್ಥಳದಿಂದ ವೇಗವಾಗಿ ಪರಾರಿಯಾಗುತ್ತಾರೆ. ಅಂದರೆ ಕೇವಲ ಮೂರು ನಿಮಿಷಗಳಲ್ಲೇ ಸಂಪೂರ್ಣ ದರೋಡೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿರುವುದು ಸಿಸಿಟಿವಿಯಿಂದ ತಿಳಿದುಬಂದಿದೆ.
ಕಳೆದ ಕೆಲವು ತಿಂಗಳುಗಳಿಂದ ಈ ಪ್ರದೇಶದಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಗಸ್ತು ಹೆಚ್ಚಿಸಬೇಕು ಹಾಗೂ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಖೈರಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಎಟಿಎಂ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಪೊಲೀಸರು, ಕೃತ್ಯಕ್ಕೆ ಬಳಸಲಾದ ವಾಹನ ಹಾಗೂ ಆರೋಪಿಗಳ ಗುರುತು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ. ದರೋಡೆ ಹೇಗೆ ನಡೆದಿದೆ ಎಂಬುದರ ಸಂಪೂರ್ಣ ವಿವರವನ್ನು ಸಿಸಿಟಿವಿ ದೃಶ್ಯಾವಳಿಗಳು ಸ್ಪಷ್ಟವಾಗಿ ದಾಖಲಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ