ನವದೆಹಲಿ: ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision–SIR) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಮಾತ್ರಕ್ಕೆ ವ್ಯಕ್ತಿಯ ಭಾರತೀಯ ಪೌರತ್ವ ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮತ್ತೊಮ್ಮೆ ಮೌಖಿಕವಾಗಿ ಸ್ಪಷ್ಟಪಡಿಸಿದೆ.
ಬಿಹಾರ ಎಸ್‌ಐಆರ್ ಪ್ರಕರಣದಲ್ಲಿ ಈಗಾಗಲೇ ನೀಡಿದ್ದ ತೀರ್ಪಿನಲ್ಲಿಯೇ ಚುನಾವಣಾ ಆಯೋಗ (ECI) ಪೌರತ್ವ ನಿರ್ಧರಿಸುವ ಅಂತಿಮ ಸಾಂವಿಧಾನಿಕ ಪ್ರಾಧಿಕಾರವಲ್ಲ ಎಂದು ನ್ಯಾಯಾಲಯ ಹೇಳಿತ್ತು. ಆದ್ದರಿಂದ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣಕ್ಕೆ ಮಾತ್ರ ವ್ಯಕ್ತಿಯ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಪುನರುಚ್ಚರಿಸಿತು ಎಂದು ಲೈವ್ ಲಾ ವರದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ, ನ್ಯಾಯಮೂರ್ತಿ ಜಾಯ್‌ಮಲ್ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು, ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಹೊರಗಿಡಲಾದವರ ಮೇಲ್ಮನವಿಗಳನ್ನು ವಿಚಾರಣೆ ನಡೆಸುತ್ತಿರುವ ಅಪೀಲಿ ನ್ಯಾಯಮಂಡಳಿಗಳ ಕಾರ್ಯವಿಧಾನವನ್ನು ಸುಗಮಗೊಳಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಪ್ರಸೇನ್‌ಜಿತ್ ಬೋಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.
34 ಲಕ್ಷ ಮೇಲ್ಮನವಿಗಳು ಬಾಕಿ; 38 ಸಾವಿರ ಮಾತ್ರ ಇತ್ಯರ್ಥ
ಅರ್ಜಿದಾರರ ಪರ ಹಿರಿಯ ವಕೀಲ ಗೋಪಾಲ ಶಂಕರನಾರಾಯಣನ್ ಅವರು, 19 ಅಪೀಲಿ ನ್ಯಾಯಮಂಡಳಿಗಳ ಮುಂದೆ ಸುಮಾರು 34 ಲಕ್ಷ ಮೇಲ್ಮನವಿಗಳು ಇನ್ನೂ ಬಾಕಿ ಉಳಿದಿದ್ದು, ಈ ನಡುವೆ ಇಬ್ಬರು ನ್ಯಾಯಮಂಡಳಿಗಳ ನ್ಯಾಯಾಧೀಶರು ರಾಜೀನಾಮೆ ನೀಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇಲ್ಲಿಯವರೆಗೆ ಕೇವಲ 38 ಸಾವಿರ ಮೇಲ್ಮನವಿಗಳು ಮಾತ್ರ ಇತ್ಯರ್ಥಗೊಂಡಿದ್ದು, ಅವುಗಳಲ್ಲಿ ಸುಮಾರು ಶೇ.70 ಪ್ರಕರಣಗಳಲ್ಲಿ ಮೇಲ್ಮನವಿದಾರರ ಪರ ತೀರ್ಪು ಬಂದಿದೆ ಎಂದು ಅವರು ತಿಳಿಸಿದರು.
ಮೇಲ್ಮನವಿಗಳು ಬಾಕಿಯಿರುವಾಗಲೇ ಕಲ್ಯಾಣ ಯೋಜನೆಗಳ ಸೌಲಭ್ಯ ಸ್ಥಗಿತ
ಮೇಲ್ಮನವಿಗಳು ಬಾಕಿ ಇರುವ ನಡುವೆಯೇ ಪಶ್ಚಿಮ ಬಂಗಾಳ ಸರ್ಕಾರವು ಸಾರ್ವಜನಿಕ ವಿತರಣೆ ವ್ಯವಸ್ಥೆ (PDS), ಅನ್ನಪೂರ್ಣ ಯೋಜನೆ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟವರಿಗೆ ನಿರಾಕರಿಸುವಂತೆ ಅಧಿಸೂಚನೆ ಹೊರಡಿಸಿದೆ ಎಂದು ಹಿರಿಯ ವಕೀಲರು ವಾದಿಸಿದರು. ಜತೆಗೆ, ಅಂತಹ ವ್ಯಕ್ತಿಗಳಿಗೆ ಜಾತಿ ಪ್ರಮಾಣಪತ್ರಗಳನ್ನೂ ನೀಡಲಾಗುತ್ತಿಲ್ಲ ಎಂದು ಅವರು ಹೇಳಿದರು.
ಪೌರತ್ವ ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ
ಈ ವೇಳೆ ನ್ಯಾಯಮೂರ್ತಿ ಜಾಯ್‌ಮಲ್ ಬಾಗ್ಚಿ ಅವರು, ಬಿಹಾರ ಎಸ್‌ಐಆರ್ ತೀರ್ಪಿನಲ್ಲಿನ ನ್ಯಾಯಾಲಯದ ನಿರ್ದೇಶನವನ್ನು ಉಲ್ಲೇಖಿಸಿ, “ಚುನಾವಣಾ ಆಯೋಗವು ಪೌರತ್ವ ನಿರ್ಧರಿಸುವ ಸಾಂವಿಧಾನಿಕ ಪ್ರಾಧಿಕಾರವಲ್ಲ. ಅನುಮಾನಾಸ್ಪದ ಪೌರತ್ವದ ಆಧಾರದ ಮೇಲೆ ಯಾರನ್ನಾದರೂ ಮತದಾರರ ಪಟ್ಟಿಯಿಂದ ಹೊರಗಿಟ್ಟರೆ, ಅವರ ಪೌರತ್ವದ ಕುರಿತು ನಾಗರಿಕತ್ವ ಕಾಯ್ದೆಯಡಿ ನಿರ್ಧಾರ ಕೈಗೊಳ್ಳಲು ವಿಷಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಜವಾಬ್ದಾರಿ ಚುನಾವಣಾ ಆಯೋಗದ್ದಾಗಿದೆ. ಆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅವರ ಪೌರತ್ವದ ಸ್ಥಾನಮಾನ ಮುಂದುವರಿಯುತ್ತದೆ” ಎಂದು ಹೇಳಿದರು.
ಆಗ ವಕೀಲ ಗೋಪಾಲ ಶಂಕರನಾರಾಯಣನ್, ಎಸ್‌ಐಆರ್ ಬಳಿಕ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟವರಿಗೆ ಸರ್ಕಾರ ಇತರ ನಾಗರಿಕ ಸೌಲಭ್ಯಗಳನ್ನೂ ನಿರಾಕರಿಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದರು. “ಸಾರ್ವಜನಿಕ ಕಲ್ಯಾಣ ಯೋಜನೆಗಳು ಹಾಗೂ ನಾಗರಿಕರಿಗೆ ಲಭ್ಯವಿರುವ ಇತರ ಸೌಲಭ್ಯಗಳನ್ನೂ ಹಿಂಪಡೆಯಲಾಗುತ್ತದೆ ಎಂಬುದು ನ್ಯಾಯಾಲಯದ ನಿರೀಕ್ಷೆಯಲ್ಲೂ ಇರಲಿಲ್ಲ. ಆ ಸಾಧ್ಯತೆ ಗೊತ್ತಿದ್ದರೆ, ಪೌರತ್ವದ ಕುರಿತು ಅಂತಿಮ ನಿರ್ಧಾರವಾಗುವವರೆಗೆ ನಾಗರಿಕರಿಗೆ ಲಭ್ಯವಿರುವ ಇತರ ಹಕ್ಕುಗಳನ್ನು ಕಸಿದುಕೊಳ್ಳಬಾರದು ಎಂದು ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡುತ್ತಿತ್ತು” ಎಂದು ಅವರು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಾಗ್ಚಿ, “ನಮ್ಮ ತೀರ್ಪು ಅತ್ಯಂತ ಸ್ಪಷ್ಟವಾಗಿದೆ. ಸಂವಿಧಾನದ 9, 10, 11 ಮತ್ತು 12ನೇ ವಿಧಿಗಳ ಅಡಿಯಲ್ಲಿ ವ್ಯಕ್ತಿಯ ಪೌರತ್ವದ ಸ್ಥಾನಮಾನ ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾರ ಹೆಸರನ್ನು ಸೇರಿಸಬೇಕು ಅಥವಾ ಕೈಬಿಡಬೇಕು ಎಂಬುದನ್ನು ಆಯೋಗ ನಿರ್ಧರಿಸಬಹುದು. ಆದರೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲ ಎಂಬ ಕಾರಣಕ್ಕೆ ಮಾತ್ರ ವ್ಯಕ್ತಿಯ ಪೌರತ್ವ ಕಳೆದುಹೋಗುವುದಿಲ್ಲ. ಅದಕ್ಕಾಗಿಯೇ, ಇಂತಹ ಪ್ರಕರಣಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಜವಾಬ್ದಾರಿಯನ್ನೂ ಚುನಾವಣಾ ಆಯೋಗಕ್ಕೆ ನಾವು ವಿಧಿಸಿದ್ದೇವೆ” ಎಂದು ಸ್ಪಷ್ಟಪಡಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ