ʼಆಪರೇಷನ್ ಸಿಂಧೂರʼದಲ್ಲಿ ಭಾರತಕ್ಕೆ ಭಾರಿ ಯಶಸ್ಸು; ತನ್ನ ಸೋಲು ಮುಚ್ಚಿಕೊಳ್ಳಲು ಸುಳ್ಳು ಕಥೆ ಕಟ್ಟಿದ ಪಾಕ್‌ ಸೇನೆ : ನೂರೀನ್ ನಿಯಾಝಿ

ನವದೆಹಲಿ: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿ ನೂರೀನ್ ನಿಯಾಝಿ ಅವರು, ಭಾರತದ ‘ಆಪರೇಷನ್ ಸಿಂಧೂರ’ ನಂತರ ಪಾಕಿಸ್ತಾನ ಸೇನೆಯು ತನ್ನ ಯುದ್ಧ ವೈಫಲ್ಯಗಳನ್ನು ಮುಚ್ಚಿಹಾಕಲು ‘ನಕಲಿ ವಿಜಯ ಕಥನ’ (Victory Narrative) ಸೃಷ್ಟಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನ ನಡುವೆ ನಾಲ್ಕು ದಿನಗಳ ಕಾಲ ನಡೆದ ಸೇನಾ ಸಂಘರ್ಷವು ಪಾಕಿಸ್ತಾನದ ಸೇನೆ ಹಾಗೂ ಆಡಳಿತವು ಸಾರ್ವಜನಿಕರ ಮುಂದೆ ಬಿಂಬಿಸಿದ ರೀತಿಯಲ್ಲಿ ನಡೆದಿಲ್ಲ ಎಂದು ಹೇಳಿದ್ದಾರೆ. ಭಾರತದ ‘ಆಪರೇಷನ್ ಸಿಂಧೂರ’ ಭಾರೀ ಯಶಸ್ಸು ಸಾಧಿಸಿದ್ದು, ತನ್ನ ಸೋಲನ್ನು ಮರೆಮಾಚಲು ಪಾಕಿಸ್ತಾನ ಸೇನೆ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನಿಯಾಝಿ ಅವರ ಈ ಹೇಳಿಕೆಗಳು ಪಾಕಿಸ್ತಾನದ ಆಡಳಿತ ಮತ್ತು ಸೇನಾ ವ್ಯವಸ್ಥೆಯಲ್ಲಿ ತೀವ್ರ ಸಂಚಲನ ಉಂಟುಮಾಡಿವೆ. ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಸೈಬರ್ ಕ್ರೈಂ ತನಿಖಾ ಸಂಸ್ಥೆ (NCCIA), ಸೇನೆ ಮತ್ತು ಸರ್ಕಾರಿ ಸಂಸ್ಥೆಗಳ ವಿರುದ್ಧ “ಸುಳ್ಳು, ಅವಹೇಳನಕಾರಿ ಹಾಗೂ ಪ್ರಚೋದನಕಾರಿ” ಸಾಮಾಜಿಕ ಜಾಲತಾಣದ ವಿಷಯಗಳನ್ನು ಹರಡಿದ ಆರೋಪದಡಿ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಪ್ರಧಾನಿ ಮೋದಿ ನಿವಾಸದ ಬಳಿ ಕಾಂಗ್ರೆಸ್ ಪ್ರತಿಭಟನೆ : ರಾಹುಲ್, ಪ್ರಿಯಾಂಕಾ ಗಾಂಧಿ ವಶಕ್ಕೆ, ಬಸ್‌ನಲ್ಲಿ ಕರೆದೊಯ್ದ ಪೊಲೀಸರು

“ಸರ್ಕಾರಿ ಸಂಸ್ಥೆಗಳಿಗೆ ಅಪಕೀರ್ತಿ ಉಂಟುಮಾಡುವ ಹಾಗೂ ಸುಳ್ಳು ಸುದ್ದಿಗಳನ್ನು ಹರಡುವ ಉದ್ದೇಶದಿಂದ ನೀವು ಸುಳ್ಳು, ಅವಹೇಳನಕಾರಿ ಮತ್ತು ಪ್ರಚೋದನಕಾರಿ ಸಾಮಾಜಿಕ ಜಾಲತಾಣದ ವಿಷಯಗಳನ್ನು ಪ್ರಸಾರ ಮಾಡಿರುವುದು ಕಂಡುಬಂದಿದೆ” ಎಂದು ಎನ್‌ಸಿಸಿಐಎ ನೀಡಿರುವ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಸಂದರ್ಶನದಲ್ಲಿ ನೂರೀನ್ ನಿಯಾಝಿ ಯಾವುದೇ ಸಾಕ್ಷ್ಯಾಧಾರಗಳನ್ನು ನೀಡದೆ ಎರಡು ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಮೊದಲ ಆರೋಪದಲ್ಲಿ, ಇಸ್ರೇಲ್‌ಗೆ ಸಂಬಂಧಿಸಿದ “ಮೌನ ಒಪ್ಪಂದ” (Tacit Understanding) ಕಾರಣದಿಂದ ಭಾರತ ಉದ್ದೇಶಪೂರ್ವಕವಾಗಿ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಲಿಲ್ಲ ಎಂದು ಅವರು ಹೇಳಿದ್ದಾರೆ. ಈ ಬೆಳವಣಿಗೆಯ ಉದ್ದೇಶ, ಪಾಕಿಸ್ತಾನವು ಇಸ್ರೇಲ್ ಅನ್ನು ಮಾನ್ಯತೆ ನೀಡುವ ದಿಸೆಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಅಬ್ರಹಾಂ ಒಪ್ಪಂದಗಳಿಗೆ (Abraham Accords) ಪಾಕಿಸ್ತಾನವು ಸೇರ್ಪಡೆಯಾಗಲು ಅನುಕೂಲ ಕಲ್ಪಿಸುವುದಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಪ್ರಸ್ತುತ ಪಾಕಿಸ್ತಾನವು ಇಸ್ರೇಲ್ ಅನ್ನು ರಾಷ್ಟ್ರವಾಗಿ ಮಾನ್ಯತೆ ನೀಡದ ದೇಶಗಳಲ್ಲಿ ಒಂದಾಗಿದ್ದು, ಅದರೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧ ಹೊಂದಿಲ್ಲ. 2020ರಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಅಬ್ರಹಾಂ ಒಪ್ಪಂದಗಳ ಕಾರಣದಿಂದ ಇಸ್ರೇಲ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಬಹ್ರೇನ್, ಸುಡಾನ್ ಮತ್ತು ಮೊರಾಕೊ ಸೇರಿದಂತೆ ಹಲವು ಅರಬ್ ರಾಷ್ಟ್ರಗಳು ರಾಜತಾಂತ್ರಿಕ, ಆರ್ಥಿಕ ಹಾಗೂ ಭದ್ರತಾ ಸಂಬಂಧಗಳನ್ನು ಸ್ಥಾಪಿಸಿವೆ.
ಎರಡನೇ ಆರೋಪದಲ್ಲಿ, ಪಾಕಿಸ್ತಾನದ ಆಡಳಿತ ‘ಮಾರ್ಕಾ-ಎ-ಹಕ್’ (Maarka-e-Haq) ಎಂದು ಬಣ್ಣಿಸಿದ್ದ ಸೇನಾ ಸಂಘರ್ಷವು ಮತ್ತಷ್ಟು ಉಲ್ಬಣಗೊಳ್ಳುವುದನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ತಡೆದರು ಎಂದು ನೂರೀನ್ ನಿಯಾಝಿ ಹೇಳಿದ್ದಾರೆ. ಪಾಕಿಸ್ತಾನದ ನಾಯಕತ್ವವು ಮುಖ ಉಳಿಸಿಕೊಳ್ಳುವ(Face-saving Exit) ಉದ್ದೇಶದಿಂದ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.
ಇದಕ್ಕೆ ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ಪಕ್ಷದ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನೂರೀನ್ ನಿಯಾಝಿ ಅವರ ಹೇಳಿಕೆಗಳು ಪಾಕಿಸ್ತಾನದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವಂತಿವೆ ಎಂದು ಖಂಡಿಸಿದ್ದಾರೆ.

ಪ್ರಮುಖ ಸುದ್ದಿ :-   ದಾಂಪತ್ಯ ಜಗಳದಲ್ಲಿ ಉದ್ಯೋಗದಾತರಿಗೆ ಹೆಂಡತಿ ದೂರು ನೀಡುವುದು ಏಕೆ..? ಈ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಕಳವಳ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement