ಇಸ್ಲಾಮಾಬಾದ್/ನವದೆಹಲಿ: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ(ಪಿಒಕೆ)ದಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರ ಮೇಲೆ ಗುಂಡಿನ ದಾಳಿ ನಡೆಸಿರುವುದನ್ನು ಸಮರ್ಥಿಸಿಕೊಂಡು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಿಒಕೆ ಪ್ರತಿಭಟನಾಕಾರರನ್ನು ಭಾರತಕ್ಕೆ ಸರಿಸಮಾನವಾದ ಶತ್ರುಗಳೆಂದು ಪರಿಗಣಿಸುತ್ತೇನೆ ಎಂದು ಅವರು ಹೇಳಿದ್ದಾರೆ.
“ನಾನು ಆಜಾದ್ ಕಾಶ್ಮೀರದ ಪ್ರತಿಭಟನಾಕಾರರನ್ನು ಭಾರತದಂತೆಯೇ ಶತ್ರುಗಳ ವರ್ಗದಲ್ಲಿ ಇಡುತ್ತೇನೆ. ಅವರು ಕೂಡ ಭಾರತ ಹೇಗೋ ಅದೇ ರೀತಿಯ ಶತ್ರುಗಳು” ಎಂದು ಖವಾಜಾ ಆಸಿಫ್ ಹೇಳಿದ್ದಾರೆ.
ಈ ಮಧ್ಯೆ, ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ ವರದಿಗಳ ಬೆನ್ನಲ್ಲೇ, ನಿರಪರಾಧ ನಾಗರಿಕರ ವಿರುದ್ಧ ಪಾಕಿಸ್ತಾನ ದೌರ್ಜನ್ಯ ಮತ್ತು ಕ್ರೌರ್ಯ ಎಸಗುತ್ತಿದೆ ಎಂದು ಭಾರತ ತೀವ್ರವಾಗಿ ಆರೋಪಿಸಿದೆ.
ಪಿಒಕೆಯಲ್ಲಿ ತೀವ್ರಗೊಂಡ ಅಶಾಂತಿ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲಕೋಟ್‌ನಲ್ಲಿ ಮೂಲಭೂತ ಹಕ್ಕುಗಳಿಗಾಗಿ ಜನರು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಹಿಂಸಾಚಾರ ಮತ್ತಷ್ಟು ಉಲ್ಬಣಗೊಂಡಿದೆ. ರಾಜಕೀಯ ನಾಯಕರು ಚುನಾವಣಾ ಚಟುವಟಿಕೆಗಳಲ್ಲಿ ತೊಡಗಿರುವ ಸಂದರ್ಭದಲ್ಲಿ ಜನರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದಿದ್ದಾರೆ.
ವರದಿಗಳ ಪ್ರಕಾರ, ಸೋಮವಾರ ಪಿಒಕೆನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಸುಮಾರು 25 ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ, ಜೂನ್ 5ರಿಂದ ಆರಂಭವಾದ ಪ್ರತಿಭಟನೆಗಳು ಮತ್ತು ನಂತರ ಪಾಕಿಸ್ತಾನ ಸೇನೆ ನಡೆಸಿದ ದಮನ ಕಾರ್ಯಾಚರಣೆಯಲ್ಲಿ ಇದುವರೆಗೆ 80ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮಿರ್‌ಪುರದಲ್ಲಿ ಮತ್ತೆ ಗುಂಡಿನ ದಾಳಿ
ಮಂಗಳವಾರ ಮಿರ್‌ಪುರದಲ್ಲಿಯೂ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ವರದಿಗಳ ಪ್ರಕಾರ, ಪಾಕಿಸ್ತಾನದ ಸೇನಾ ಸಿಬ್ಬಂದಿ ಪ್ರತಿಭಟನಾಕಾರರ ಮೇಲೆ ನೇರ ಗುಂಡಿನ ದಾಳಿ ನಡೆಸಿದ್ದು, 12 ನಾಗರಿಕರು ಮೃತಪಟ್ಟಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಭಾರತದ ತೀವ್ರ ಖಂಡನೆ
ಪಿಒಕೆಯಲ್ಲಿ ನಾಗರಿಕರ ಮೇಲೆ ನಡೆದಿರುವ ಗುಂಡಿನ ದಾಳಿಯ ವರದಿಗಳ ಬೆನ್ನಲ್ಲೇ ಭಾರತ ಮಂಗಳವಾರ ಮತ್ತೊಮ್ಮೆ ಪಾಕಿಸ್ತಾನದ ಧಮನಕಾರಿ ನೀತಿಯನ್ನು ತೀವ್ರವಾಗಿ ಖಂಡಿಸಿದೆ. ಪಾಕಿಸ್ತಾನ ನಿರಪರಾಧ ನಾಗರಿಕರ ವಿರುದ್ಧ ದೌರ್ಜನ್ಯ ಮತ್ತು ಕ್ರೌರ್ಯ ಎಸಗುತ್ತಿದೆ ಎಂದು ನವದೆಹಲಿ ಆರೋಪಿಸಿದೆ. ಅಲ್ಲದೆ, ಪಾಕಿಸ್ತಾನ ನಡೆಸುತ್ತಿರುವ ತಥಾಕಥಿತ ಚುನಾವಣೆಗಳು ಕೇವಲ ಕಣ್ಣೊರೆಸುವ (Cosmetic) ಕ್ರಮಗಳಷ್ಟೇ ಎಂದು ಭಾರತ ಟೀಕಿಸಿದೆ.
ಅಂತಾರಾಷ್ಟ್ರಿಯ ಮಾಧ್ಯಮಗಳು ಮೌನ…
ತೀವ್ರ ಹಿಂಸಾಚಾರದ ನಡುವೆಯೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಪ್ರಕಾರ, ಈ ಬೆಳವಣಿಗೆಗಳ ಕುರಿತು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ಮೌನ ವಹಿಸಿವೆ ಎಂದು ಆರೋಪಿಸಲಾಗಿದೆ. ಗುಂಡಿನ ದಾಳಿಯ ಬಳಿಕ ರಸ್ತೆಗಳಲ್ಲಿ ಮೃತದೇಹಗಳು ಬಿದ್ದಿದ್ದವು ಹಾಗೂ ವಿವಿಧ ಪ್ರದೇಶಗಳಲ್ಲಿ ಗಾಯಾಳುಗಳು ನರಳುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಸಾಕಷ್ಟು ಆಂಬುಲೆನ್ಸ್‌ಗಳು ಲಭ್ಯವಿಲ್ಲದ ಕಾರಣ, ಸ್ಥಳೀಯ ನಿವಾಸಿಗಳು ಗಾಯಾಳುಗಳನ್ನು ತಮ್ಮ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಅವರು ಹೇಳಿದ್ದಾರೆ.
ಒಬ್ಬ ಪ್ರತ್ಯಕ್ಷದರ್ಶಿ, “ಕಾಶ್ಮೀರಿಗಳ ರಕ್ತ ರಸ್ತೆಗಳಲ್ಲಿ ಹರಿಯುತ್ತಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಘಟನೆಯನ್ನು ಜಗತ್ತಿನ ಮುಂದೆ ತರುವಂತೆ ಮನವಿ ಮಾಡುತ್ತೇವೆ,” ಎಂದು ಭಾವುಕರಾಗಿ ಮನವಿ ಮಾಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ