ಸಿಜೆಪಿ ಪ್ರತಿಭಟನೆ | ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಬಲವಂತದ ಕ್ರಮ ಬೇಡ ಎಂದ ಸುಪ್ರೀಂಕೋರ್ಟ್ ; ಅಪ್ರಾಪ್ತರ ತಕ್ಷಣ ಬಿಡುಗಡೆಗೆ ಸೂಚನೆ

ನವದೆಹಲಿ : ದೆಹಲಿ ಜಂತರ್ ಮಂತರ್ ಹಾಗೂ ವಿವಿಧ ರಾಜ್ಯಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಇತ್ತೀಚಿನ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರತಿಭಟನಾಕಾರರ ವಿರುದ್ಧ ಯಾವುದೇ ಬಲವಂತದ (Coercive) ಕ್ರಮ ಕೈಗೊಳ್ಳಬಾರದು ಎಂದು ಮಂಗಳವಾರ ಮಹತ್ವದ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿತು.
ಆದರೆ, ಅಪರಾಧ ಹಿನ್ನೆಲೆ (ಕ್ರಿಮಿನಲ್ ಆಂಟಿಸಿಡೆಂಟ್ಸ್) ಹೊಂದಿರುವವರಿಗೆ ಈ ರಕ್ಷಣೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಜೊತೆಗೆ, ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಯಾವುದೇ ಎಫ್‌ಐಆರ್‌ಗಳ ತನಿಖೆಗೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿದೆ.
ನ್ಯಾಯಾಲಯ ತನ್ನ ಆದೇಶದಲ್ಲಿ, “ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಟಿ) ಹಾಗೂ ಇತರೆ ರಾಜ್ಯಗಳು ದಾಖಲಾಗಿರುವ ಎಫ್‌ಐಆರ್‌ಗಳ ತನಿಖೆಯನ್ನು ಮುಂದುವರಿಸಬಹುದು. ಆದರೆ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಈ ರಕ್ಷಣೆ ಅಪರಾಧ ಹಿನ್ನೆಲೆ ಹೊಂದಿರುವವರಿಗೆ ಅನ್ವಯಿಸುವುದಿಲ್ಲ. ಪ್ರತಿಭಟನೆಗಳ ಸಂಬಂಧ ಬಂಧನಕ್ಕೊಳಗಾದ ಅಥವಾ ವಶಕ್ಕೆ ಪಡೆಯಲಾದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಾಗೂ ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಮಕ್ಕಳನ್ನು ಎಲ್ಲಾ ರಾಜ್ಯಗಳು ತಕ್ಷಣ ಬಿಡುಗಡೆ ಮಾಡಬೇಕು” ಎಂದು ತಿಳಿಸಿದೆ.

ಪೊಲೀಸ್ ದೌರ್ಜನ್ಯ ಆರೋಪದ ಕುರಿತು ಸ್ವತಂತ್ರ ತನಿಖೆಗೆ ಸಮಿತಿ
ಪ್ರತಿಭಟನೆಗಳ ವೇಳೆ ಪೊಲೀಸರು ಮಿತಿ ಮೀರಿದ ಕ್ರಮ ಕೈಗೊಂಡಿದ್ದಾರೆ ಎಂಬ ಆರೋಪಗಳು ಪ್ರಾಥಮಿಕವಾಗಿ ನ್ಯಾಯಸಮ್ಮತ ತನಿಖೆಗೆ ಅರ್ಹವಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗಾಗಿ, ಈ ಹಿಂಸಾಚಾರ ಮತ್ತು ಪೊಲೀಸ್ ದೌರ್ಜನ್ಯ ಆರೋಪಗಳ ಬಗ್ಗೆ ನ್ಯಾಯಸಮ್ಮತ ಹಾಗೂ ಸ್ವತಂತ್ರ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸುವ ಉದ್ದೇಶವಿದೆ ಎಂದು ಕೋರ್ಟ್ ತಿಳಿಸಿತು.
ಆದರೆ, ಸಮಿತಿ ರಚಿಸುವ ಮೊದಲು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ತಮ್ಮ ನಿಲುವನ್ನು ದಾಖಲಿಸುವ ಅವಕಾಶ ನೀಡಬೇಕು ಎಂದು ಹೇಳಿದ ನ್ಯಾಯಾಲಯ, ಹಿಂಸಾಚಾರ ನಡೆದ ಇತರೆ ರಾಜ್ಯಗಳಿಗೂ ತಮ್ಮ ಅಭಿಪ್ರಾಯ ಸಲ್ಲಿಸಲು ಅವಕಾಶ ಕಲ್ಪಿಸಿದೆ.ಈ ಹಿನ್ನೆಲೆಯಲ್ಲಿ ದೆಹಲಿ, ಮಹಾರಾಷ್ಟ್ರ, ಬಿಹಾರ, ಕೇರಳ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಎಲ್ಲ ಡಿಜಿಟಲ್ ದಾಖಲೆಗಳನ್ನು ಸಂರಕ್ಷಿಸಲು ಆದೇಶ
ಪ್ರತಿಭಟನೆಗಳಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು, ಡ್ರೋನ್ ವಿಡಿಯೊಗಳು, ಬಾಡಿ ಕ್ಯಾಮೆರಾ ದೃಶ್ಯಗಳು, ವೈರ್‌ಲೆಸ್ ಸಂವಹನ ದಾಖಲೆಗಳು, ಪೊಲೀಸ್ ಕಂಟ್ರೋಲ್ ರೂಂ (ಪಿಸಿಆರ್) ಕರೆಗಳ ವಿವರಗಳು ಸೇರಿದಂತೆ ಎಲ್ಲಾ ದಾಖಲೆಗಳನ್ನು ಸಂರಕ್ಷಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಇದೇ ವೇಳೆ, ಪ್ರತಿಭಟನಾಕಾರರ ಡಿಜಿಟಲ್ ಮತ್ತು ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕ ವಲಯಕ್ಕೆ ಬಹಿರಂಗಪಡಿಸಬಾರದು ಎಂದು ಸ್ಪಷ್ಟ ಆದೇಶ ನೀಡಿದೆ.

ಪ್ರಮುಖ ಸುದ್ದಿ :-   ನೀವು ಸಂಭ್ರಮದಲ್ಲಿ ಮುಳುಗಿದಿರಿ, ಪ್ರತಿಭಟನಾಕಾರರು ಹಸಿವಿನಿಂದ ನರಳುತ್ತಿದ್ದರು"; ಸಿಜೆಪಿ ನಾಯಕರ ನೃತ್ಯ ವಿಡಿಯೊಗಳಿಗೆ ಭಾರಿ ಆಕ್ರೋಶ

ಪೆಲೆಟ್ ಗನ್, ರಬ್ಬರ್ ಬುಲೆಟ್, ವಿದ್ಯುತ್ ಲಾಠಿ ಬಳಕೆ ಆರೋಪ
ಪ್ರತಿಭಟನೆಗಳ ವೇಳೆ ಪೆಲೆಟ್ ಗನ್ ಬಳಕೆಯಿಂದ ಒಬ್ಬ ವಿದ್ಯಾರ್ಥಿ ದೃಷ್ಟಿ ಕಳೆದುಕೊಂಡಿದ್ದಾನೆ ಎಂಬ ಆರೋಪವನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ. ಇದಲ್ಲದೆ, ರಬ್ಬರ್ ಬುಲೆಟ್‌, ವಿದ್ಯುತ್ ಲಾಠಿಗಳು ಹಾಗೂ ಮೊಳೆಗಳನ್ನು ಅಳವಡಿಸಿದ ಲಾಠಿಗಳನ್ನು ಬಳಸಲಾಗಿದೆ ಎಂಬ ಆರೋಪಗಳನ್ನೂ ನ್ಯಾಯಾಲಯ ಪರಿಗಣಿಸಿದೆ. ಪ್ರತಿಭಟನೆ ವೇಳೆ ಸಾಮಾನ್ಯ ನಾಗರಿಕರ ಉಡುಪಿನಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂಬ ಆರೋಪವೂ ಆದೇಶದಲ್ಲಿ ದಾಖಲಾಗಿದೆ. ಇನ್ನೊಂದೆಡೆ, ಅಪರಾಧಿಗಳು ಪ್ರತಿಭಟನೆಗೆ ನುಸುಳಿ ಪೊಲೀಸ್ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿದ್ದಾರೆ ಎಂಬ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದವನ್ನೂ ನ್ಯಾಯಾಲಯ ದಾಖಲಿಸಿದೆ.
ಪ್ರತಿಭಟನೆಗಳಿಗೆ ಹೊಸ ಮಾರ್ಗಸೂಚಿ ಅಗತ್ಯ
ಈ ಸಂದರ್ಭದಲ್ಲಿ, ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಪ್ರತಿಭಟನೆಗಳ ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.”ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರತಿಭಟನೆಗಳು ನಡೆಯುವುದು ಸಹಜ. ಆದರೆ ಇಂತಹ ಸಂದರ್ಭಗಳನ್ನು ನಿಭಾಯಿಸಲು ಪರಿಣಾಮಕಾರಿ ವ್ಯವಸ್ಥೆ ಇರಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಹೇಳಿದರು. ಇತ್ತೀಚಿನ ಘಟನೆಗಳ ಬಗ್ಗೆ ಸಮಗ್ರ ಹಾಗೂ ಪಾರದರ್ಶಕ ತನಿಖೆ ಅಗತ್ಯ ಎಂದೂ ಅವರು ತಿಳಿಸಿದರು.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರಕ್ಕೆ ಮುಂದೂಡಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಅವರೂ ನಮಗೆ ಭಾರತದಂತೆಯೇ ಶತ್ರುಗಳು ; ಪಿಒಕೆಯಲ್ಲಿ ಪ್ರತಿಭಟನಾಕಾರರ ಹತ್ಯೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಸಮರ್ಥನೆ

ಪ್ರಕರಣದ ಹಿನ್ನೆಲೆ

ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗಳಿಗೆ ಅವಕಾಶ ಕಲ್ಪಿಸುವ ಮಾರ್ಗಸೂಚಿಗಳನ್ನು ರೂಪಿಸುವಂತೆ ಸಲ್ಲಿಸಲಾದ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ದೆಹಲಿ ಜಂತರ್ ಮಂತರ್ ಹಾಗೂ ಬಿಹಾರದಲ್ಲಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಬಲಪ್ರಯೋಗ ನಡೆಸಿದ ಹಿನ್ನೆಲೆಯಲ್ಲಿ ಈ ಅರ್ಜಿಗಳು ಸಲ್ಲಿಕೆಯಾಗಿದ್ದವು. ಕೆಲವು ಅರ್ಜಿಗಳಲ್ಲಿ ಪ್ರತಿಭಟನೆಯ ವೇಳೆ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಲಾಗಿತ್ತು.
ಜೂನ್ ತಿಂಗಳಲ್ಲಿ ಆನ್‌ಲೈನ್ ಸಂಘಟನೆ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿತ್ತು. ನಂತರ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಪ್ರತಿಭಟನೆಗೆ ಬೆಂಬಲ ಸೂಚಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರಿಂದ ಚಳವಳಿಗೆ ಮತ್ತಷ್ಟು ವೇಗ ದೊರೆಯಿತು.
ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಅವರನ್ನು ಪ್ರತಿಭಟನಾ ಸ್ಥಳದಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಅವರು 26 ದಿನಗಳ ಉಪವಾಸವನ್ನು ಜುಲೈ 23ರಂದು ಮೆಡಾಂಟಾ ಆಸ್ಪತ್ರೆಯಲ್ಲಿ ಅಂತ್ಯಗೊಳಿಸಿದ್ದರು. ಜುಲೈ 20ರಂದು ನಡೆದ “ಸಂಸದ್ ಚಲೋ” ಮೆರವಣಿಗೆಯನ್ನು ತಡೆಯಲು ದೆಹಲಿ ಪೊಲೀಸರು ಹಾಗೂ ರಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಲಾಠಿಚಾರ್ಜ್, ಅಶ್ರುವಾಯು ಹಾಗೂ ಪೆಲೆಟ್ ಗನ್‌ಗಳನ್ನು ಬಳಸಿದ್ದರು ಎಂಬ ಆರೋಪಿಸಲಾಗಿತ್ತು. ಜುಲೈ 25ರಂದು ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಿದ ಬಳಿಕ ಪ್ರತಿಭಟನೆಗಳನ್ನು ಹಿಂಪಡೆಯಲಾಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement