ಹೊನ್ನಾವರ : ಬಡಗುತಿಟ್ಟಿನ ಯಕ್ಷಗಾನ ರಂಗಭೂಮಿ ಕಂಡ ಅಪರೂಪದ ಹಾಸ್ಯ ಕಲಾವಿದ ಶ್ರೀಧರ ಭಟ್ ಕಾಸರಕೋಡ (52) ಅವರು ಶುಕ್ರವಾರ ನಿಧನರಾಗಿದ್ದಾರೆ. ಅವರು ಅಲ್ಪಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಅನಾರೋಗ್ಯದ ಕಾರಣಕ್ಕೆ ಮಣಿಪಾಲ ಆಸ್ಪತ್ರೆಗೆ ಒಯ್ಯುವಾಗ ಮಾರ್ಗಮಧ್ಯೆಯೇ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೂಲತಃ ಹೊನ್ನಾವರ ತಾಲ್ಲೂಕಿನ ಕಾಸರಕೋಡ ಗ್ರಾಮದವರಾದ ಅವರು, ಪ್ರಸ್ತುತ ಸಾಲ್ಕೋಡ್ ಗ್ರಾಮದ ಮುಲ್ಲೆಮಕ್ಕಿಯಲ್ಲಿ ವಾಸವಾಗಿದ್ದರು. ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಸುಮಾರು ಮೂರು ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಶ್ರೀಧರ ಭಟ್ ಅವರು ತಮ್ಮ ಪಕ್ವ ಹಾಸ್ಯ ಅಭಿನಯ, ಸಹಜ ಹಾಸ್ಯಪ್ರಜ್ಞೆ ಹಾಗೂ ಸಮಯಪ್ರಜ್ಞೆಯ ಅರ್ಥಗಾರಿಕೆ ಹಾಗೂ ನಿಷಿತಮತಿತ್ವ ಹಾಗೂ ಪ್ರತ್ಯುತ್ಪನ್ನಮತಿತ್ವವನ್ನು ಹೊಂದುವ ಮೂಲಕ ಯಕ್ಷಗಾನಾಭಿಮಾನಿಗಳ ಮನಗೆದ್ದಿದ್ದರು.
ಅವರ ಹಾಸ್ಯವು ಕೇವಲ ಮನರಂಜನೆಗೆ ಸೀಮಿತವಾಗದೆ, ಸಂದರ್ಭೋಚಿತ ಸಂಭಾಷಣೆ ಮತ್ತು ಅರ್ಥಪೂರ್ಣ ನಿರೂಪಣೆಯ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿತ್ತು.
ಗುಂಡಬಾಳ, ಮಂದಾರ್ತಿ, ಸಾಲಿಗ್ರಾಮ ಸೇರಿದಂತೆ ಹಲವು ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಅವರು ಹಾಸ್ಯ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಹಾಸ್ಯ ಪಾತ್ರಗಳಿಗೆ ತಮ್ಮ ವಿಶಿಷ್ಟ ಅಭಿನಯದ ಮೂಲಕ ಜೀವ ತುಂಬಿದ ಅವರು ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದರು. ರಂಗದಲ್ಲಿ ಅವರ ಪ್ರವೇಶವೇ ಪ್ರೇಕ್ಷಕರಲ್ಲಿ ಸಂಭ್ರಮ ಮೂಡಿಸುತ್ತಿತ್ತು. ಮುಖಭಾವ, ಮುಖಚರ್ಯೆ, ಸಂಭಾಷಣೆಯ ಲಾಲಿತ್ಯ, ಸಮಯೋಚಿತ ಹಾಸ್ಯಪ್ರಯೋಗಗಳು ಹಾಗೂ ಸಹಜ ಅಭಿನಯ ಅವರ ಕಲಾಜೀವನದ ಪ್ರಮುಖ ವೈಶಿಷ್ಟ್ಯಗಳಾಗಿದ್ದವು. ಅವರು ನಿರ್ವಹಿಸಿದ ಹಾಸ್ಯ ಪಾತ್ರಗಳು ಮಕ್ಕಳಿಂದ ಹಿರಿಯರವರೆಗೆ ಎಲ್ಲ ವರ್ಗದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದವು.
ರಾಜಾ ರುದ್ರಕೋಪ ಪ್ರಸಂಗದ ಅಜ್ಜಿ, ಕೀಚಕ ವಧೆಯ ವಿಜಯ, ಕೃಷ್ಣಾರ್ಜುನ ಕಾಳಗದ ದಾರುಕ, ಭಸ್ಮಾಸುರ ಮೋಹಿನಿಯ ಬ್ರಾಹ್ಮಣ, ಕನಕಾಂಗಿ ಕಲ್ಯಾಣದ ಬಲರಾಮನ ದೂತ, ಕಾರ್ತಿವೀರ್ಯಾರ್ಜುನ ಪ್ರಸಂಗದ ಬಾಗಿಲಭಟ ಮೊದಲಾದ ಪಾತ್ರಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಯಕ್ಷಗಾನದಲ್ಲಿ ಹಾಸ್ಯ ಪಾತ್ರ ನಿರ್ವಹಿಸುವುದು ಅತ್ಯಂತ ಸವಾಲಿನ ಕೆಲಸ. ಕಥೆಯ ಗಂಭೀರತೆಗೆ ಧಕ್ಕೆಯಾಗದಂತೆ ಪ್ರೇಕ್ಷಕರನ್ನು ನಗಿಸುತ್ತಾ ಕಥೆಯ ಓಟವನ್ನು ಮುಂದುವರಿಸುವ ಜವಾಬ್ದಾರಿಯನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು. ಸಂದರ್ಭಕ್ಕೆ ಪೂರಕವಾದ ಹಾಸ್ಯ, ಚುರುಕಾದ ಸಂಭಾಷಣೆ ಹಾಗೂ ಪಕ್ವ ಅಭಿನಯದ ಮೂಲಕ ಯಕ್ಷಗಾನದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದರು.
ಶ್ರೀಧರ ಭಟ್ ಕಾಸರಕೋಡ ಅವರ ಅಗಲಿಕೆಯಿಂದ ಯಕ್ಷಗಾನ ರಂಗವು ಪ್ರತಿಭಾವಂತ, ಅಪರೂಪದ ಹಾಸ್ಯ ಕಲಾವಿದನನ್ನು ಕಳೆದುಕೊಂಡಂತಾಗಿದೆ. ಅವರ ಕಲಾಸೇವೆ, ಸಹಜ ಅಭಿನಯ ಮತ್ತು ಹಾಸ್ಯ ವೈಭವವು ಯಕ್ಷಗಾನ ಪ್ರೇಮಿಗಳ ಮನಸ್ಸಿನಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿಯಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ