ಅಥೆನ್ಸ್ (ಗ್ರೀಸ್): ಗ್ರೀಸ್ನಲ್ಲಿ ಭಾನುವಾರ ಭಾರೀ ಕಾಳ್ಗಿಚ್ಚುಗಳನ್ನು ನಿಯಂತ್ರಣಕ್ಕೆ ತರಲು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಎರಡು ಅಗ್ನಿಶಾಮಕ ಬೆಲ್ (Bell) ಹೆಲಿಕಾಪ್ಟರ್ಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಗ್ರೀಸ್ನ ರಾಜಧಾನಿ ಅಥೆನ್ಸ್ನ ಪಶ್ಚಿಮ ಭಾಗದಲ್ಲಿರುವ ಪ್ಸಾಥಾ (Psatha) ಪ್ರದೇಶದಲ್ಲಿ ಕಾಳ್ಗಿಚ್ಚು ನಂದಿಸುವ ಕಾರ್ಯಾಚರಣೆಯ ವೇಳೆ ಬಾಡಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಎರಡು ಬೆಲ್ ಹೆಲಿಕಾಪ್ಟರ್ಗಳು ಪರಸ್ಪರ ಡಿಕ್ಕಿ ಹೊಡೆದಿವೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಅಪಘಾತ ಸಂಭವಿಸಿದ ತಕ್ಷಣವೇ ಸಿಬ್ಬಂದಿಯನ್ನು ಪತ್ತೆಹಚ್ಚಿ ರಕ್ಷಿಸಲು ಶೋಧ ಮತ್ತು ರಕ್ಷಣಾ ತಂಡಗಳನ್ನು ತಕ್ಷಣವೇ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಹಲವು ಭಾಗಗಳಲ್ಲಿ ಕಾಳ್ಗಿಚ್ಚು ಉಗ್ರ ರೂಪ ತಾಳಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಮುಂದಿನ ಕೆಲವು ದಿನಗಳು “ಅತ್ಯಂತ ಕಠಿಣವಾಗಿರಲಿವೆ” ಎಂದು ಗ್ರೀಸ್ ಪ್ರಧಾನಮಂತ್ರಿ ಕಿರಿಯಾಕೋಸ್ ಮಿತ್ಸೋಟಾಕಿಸ್ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಿ ದೂರದರ್ಶನ ಇಆರ್ಟಿ (ERT) ವರದಿ ಪ್ರಕಾರ, ಹೆಲಿಕಾಪ್ಟರ್ನ ಒಬ್ಬ ಸಿಬ್ಬಂದಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಲಾಗಿದ್ದು, ಇನ್ನೊಬ್ಬ ಸಿಬ್ಬಂದಿಗಾಗಿ ರಕ್ಷಣಾ ತಂಡಗಳು ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿವೆ.
ದೃಶ್ಯಗಳಲ್ಲಿ, ಹೆಲಿಕಾಪ್ಟರ್ಗಳ ರೋಟರ್ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಅವುಗಳಲ್ಲಿ ಒಂದು ಸ್ಫೋಟಗೊಂಡು ಬೆಂಕಿಯ ಜ್ವಾಲೆಗಳೊಂದಿಗೆ ಪತನಗೊಂಡಿರುವುದು ಕಂಡುಬಂದಿದೆ.
ಈ ಕುರಿತು ಫೇಸ್ಬುಕ್ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಕಿರಿಯಾಕೋಸ್ ಮಿತ್ಸೋಟಾಕಿಸ್, ಗ್ರೀಸ್ ಪ್ರಸ್ತುತ “ಅತ್ಯಂತ ತೀವ್ರ ಹವಾಮಾನ ಪರಿಸ್ಥಿತಿಯನ್ನು” ಎದುರಿಸುತ್ತಿದೆ ಎಂದು ತಿಳಿಸಿದ್ದಾರೆ. “ಗಂಟೆಗೆ 100 ಕಿಲೋಮೀಟರ್ (ಸುಮಾರು 60 ಮೈಲು) ವೇಗದಲ್ಲಿ ಗಾಳಿ ಬೀಸುತ್ತಿರುವಾಗ, ನಮ್ಮ ಬಳಿ ಇರುವ ಹಲವು ಡಜನ್ ಅಗ್ನಿಶಾಮಕ ವಿಮಾನಗಳಿಗೂ ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ” ಎಂದು ಅವರು ಹೇಳಿದ್ದಾರೆ.
ಅಥೆನ್ಸ್ ಸಮೀಪ ಭಾರೀ ಕಾರ್ಯಾಚರಣೆ
ಅಥೆನ್ಸ್ನ ವಾಯುವ್ಯ ದಿಕ್ಕಿನಲ್ಲಿ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಜನಪ್ರಿಯ ಸಮುದ್ರತೀರ ಗ್ರಾಮ ಪೋರ್ಟೊ ಜರ್ಮೆನೊ (Porto Germeno) ಸುತ್ತಮುತ್ತಲಿನ ಕಾಳ್ಗಿಚ್ಚನ್ನು ನಿಯಂತ್ರಿಸಲು ಸುಮಾರು 500 ಅಗ್ನಿಶಾಮಕ ಸಿಬ್ಬಂದಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ರಾತ್ರೋರಾತ್ರಿ ಬೆಂಕಿಯು ಪರ್ವತವನ್ನು ದಾಟಿ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಅದು ಅಥೆನ್ಸ್ನ ಪಶ್ಚಿಮ ಹೊರವಲಯದತ್ತ ಸಾಗದಂತೆ ತಡೆಯಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇನ್ನೊಂದೆಡೆ, ಉತ್ತರ ಪೆಲೋಪೊನ್ನೀಸ್ನ ಐಗಿಯಾಲಿಯಾ (Aigialia) ಪ್ರದೇಶದಲ್ಲಿ ಕಾಣಿಸಿಕೊಂಡ ಮತ್ತೊಂದು ಕಾಳ್ಗಿಚ್ಚನ್ನು ನಿಯಂತ್ರಿಸಲು ಸುಮಾರು 100 ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶನಿವಾರ ತಡರಾತ್ರಿ ಗ್ರೀಸ್ನ ಜನಪ್ರಿಯ ಪ್ರವಾಸಿ ತಾಣವಾದ ಐಯೋನಿಯನ್ ಸಮುದ್ರದ ಸೆಫಲೋನಿಯಾ (Cephalonia) ದ್ವೀಪದಲ್ಲಿಯೂ ಹೊಸದಾಗಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ.
6,500 ಹೆಕ್ಟೇರ್ಗಿಂತ ಹೆಚ್ಚು ಪ್ರದೇಶ ಸುಟ್ಟು ಭಸ್ಮ
ಗ್ರೀಸ್ ರಾಷ್ಟ್ರೀಯ ವೀಕ್ಷಣಾಲಯದ ಹವಾಮಾನ ವಿಶ್ಲೇಷಣಾ ವೇದಿಕೆ meteo.gr ನೀಡಿರುವ ಪ್ರಾಥಮಿಕ ಅಂದಾಜಿನ ಪ್ರಕಾರ, ಗಲ್ಫ್ ಆಫ್ ಕೊರಿಂತ್ ಪ್ರದೇಶ ಸೇರಿದಂತೆ ಪೋರ್ಟೊ ಜರ್ಮೆನೊ ಸುತ್ತಮುತ್ತ ನಡೆದ ವಿವಿಧ ಕಾಳ್ಗಿಚ್ಚುಗಳಲ್ಲಿ 6,500 ಹೆಕ್ಟೇರ್ (ಸುಮಾರು 16,000 ಎಕರೆ) ಪ್ರದೇಶ ಸುಟ್ಟು ಕರಕಲಾಗಿದೆ. ಆದರೆ, ಬಲವಾದ ಉತ್ತರದ ಗಾಳಿಯ ತೀವ್ರತೆ ಹಿಂದಿನ ದಿನಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದ್ದರೂ, ಹವಾಮಾನ ಪರಿಸ್ಥಿತಿ ಇನ್ನೂ ಕಾಳ್ಗಿಚ್ಚು ನಿಯಂತ್ರಣಕ್ಕೆ ಅನುಕೂಲಕರವಾಗಿಲ್ಲ ಎಂದು meteo.gr ತಿಳಿಸಿದೆ.
ಹವಾಮಾನ ಬಿಕ್ಕಟ್ಟಿನ ಪರಿಣಾಮ
ಮೆಡಿಟರೇನಿಯನ್ (Mediterranean) ಪ್ರದೇಶದ ಇತರ ರಾಷ್ಟ್ರಗಳಂತೆ ಗ್ರೀಸ್ ಕೂಡ ಹವಾಮಾನ ಬಿಕ್ಕಟ್ಟಿನ ತೀವ್ರ ಪರಿಣಾಮ ಅನುಭವಿಸುತ್ತಿದೆ. ಬೇಸಿಗೆಯಲ್ಲಿ ಅಧಿಕ ತಾಪಮಾನ, ಪದೇಪದೇ ಸಂಭವಿಸುವ ಉಷ್ಣ ಅಲೆಗಳು (Heatwaves) ಹಾಗೂ ದೀರ್ಘಕಾಲದ ಬರದ ಪರಿಣಾಮ ದೇಶದಲ್ಲಿ ಪ್ರತಿ ವರ್ಷ ಭಾರೀ ಪ್ರಮಾಣದ ಕಾಳ್ಗಿಚ್ಚುಗಳು ಕಾಣಿಸಿಕೊಳ್ಳುತ್ತಿವೆ.


ನಿಮ್ಮ ಕಾಮೆಂಟ್ ಬರೆಯಿರಿ