ಮೈಸೂರು: ಅಳುತ್ತಿದ್ದ ಐದು ವರ್ಷದ ಮಗುವನ್ನು ಸಮಾಧಾನಪಡಿಸುವ ಉದ್ದೇಶದಿಂದ ಪೋಷಕರು ಖರೀದಿಸಿದ್ದ ಕುರ್ಕುರೆ ಪ್ಯಾಕೆಟ್ ದುರಂತಕ್ಕೆ ಕಾರಣವಾಗಿ, ಅದರೊಳಗಿದ್ದ ಸಣ್ಣ ಪ್ಲಾಸ್ಟಿಕ್ ಆಟದ ಚೆಂಡು ಗಂಟಲಿನಲ್ಲಿ ಸಿಲುಕಿ ಉಸಿರುಗಟ್ಟಿ ಬಾಲಕ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.
ಮೃತ ಬಾಲಕನನ್ನು ಗೌರಿಪುರ ಗ್ರಾಮದ ರೈತರಾದ ಸಂತೋಷ ಮತ್ತು ಐಶ್ವರ್ಯ ದಂಪತಿಯ ಪುತ್ರ ಮುಕುಂದ ಮಯೂರ (5) ಎಂದು ಗುರುತಿಸಲಾಗಿದೆ.
ಶನಿವಾರ ಮಧ್ಯಾಹ್ನ ಮನೆಯಲ್ಲಿ ಮುಕುಂದ ಅಳುತ್ತಿದ್ದಾಗ, ಆತನನ್ನು ಸಮಾಧಾನಪಡಿಸುವ ಉದ್ದೇಶದಿಂದ ಪೋಷಕರು ಸಮೀಪದ ಅಂಗಡಿಯಿಂದ ಒಂದು ತಿಂಡಿ ಪ್ಯಾಕೆಟ್ ಖರೀದಿಸಿ ನೀಡಿದ್ದರು.
ತಿಂಡಿಯನ್ನು ಸೇವಿಸಿದ ಕೆಲವೇ ನಿಮಿಷಗಳಲ್ಲಿ ಮುಕುಂದನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಆತಂಕಗೊಂಡ ಪೋಷಕರು ಹಾಗೂ ಕುಟುಂಬದವರು ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಮಾರ್ಗಮಧ್ಯೆಯೇ ಆತ ಮೃತಪಟ್ಟಿದ್ದಾನೆ.
ಆಸ್ಪತ್ರೆಗೆ ಕರೆದೊಯ್ದ ಬಳಿಕ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದರು. ತಿಂಡಿ ಪ್ಯಾಕೆಟ್ನೊಳಗಿದ್ದ ಸಣ್ಣ ಪ್ಲಾಸ್ಟಿಕ್ ಆಟದ ಚೆಂಡು ಮಗುವಿನ ಗಂಟಲಿನಲ್ಲಿ ಸಿಲುಕಿ ಉಸಿರುಗಟ್ಟುವಿಕೆಗೆ ಕಾರಣವಾಗಿ ಮೃತಪಟ್ಟಿರುವುದಾಗಿ ವೈದ್ಯರು ಕುಟುಂಬಕ್ಕೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ