ತಮಿಳುನಾಡು ಸಿಎಂ ವಿಜಯ ವಿರುದ್ಧದ ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸಂಗೀತಾ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ ಮತ್ತು ಅವರ ಪತ್ನಿ ಸಂಗೀತಾ ಸೋರ್ನಲಿಂಗಂ ಅವರ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಗೀತಾ ಅವರು ತಮ್ಮ ಅರ್ಜಿಯನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಇಂದು, ಶುಕ್ರವಾರ (ಆಗಸ್ಟ್‌ ೭)ನ್ಯಾಯಾಲಯ ಪ್ರಕರಣವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಿದೆ.
ಇಂದು, ಶುಕ್ರವಾರ ನಡೆದ ವಿಚಾರಣೆಯಲ್ಲಿ ಸಂಗೀತಾ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿ, ವಿಚ್ಛೇದನ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಕಾರಣಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದಾದ ಬಳಿಕ ನ್ಯಾಯಾಲಯ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಆದೇಶಿಸಿತು.
ಈ ವರ್ಷದ ಫೆಬ್ರವರಿಯಲ್ಲಿ ಸಂಗೀತಾ ಅವರು, ತಮಿಳುನಾಡಿನ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ತಮ್ಮ ಮತ್ತು ವಿಜಯ ನಡುವಿನ ಭಿನ್ನಾಭಿಪ್ರಾಯಗಳು ಸರಿಪಡಿಸಲಾಗದ ಹಂತಕ್ಕೆ ತಲುಪಿರುವುದರಿಂದ ವಿವಾಹವನ್ನು ರದ್ದುಗೊಳಿಸಬೇಕೆಂದು ಅವರು ಮನವಿ ಮಾಡಿದ್ದರು.

ವಿಚ್ಛೇದನ ಪ್ರಕರಣವು ಈ ವರ್ಷ ಹಲವು ಬಾರಿ ಮುಂದೂಡಿಕೆಗೆ ಒಳಗಾಗಿತ್ತು. ಕಳೆದ ಜೂನ್ 15ರಂದು ನಡೆದ ವಿಚಾರಣೆಯಲ್ಲಿಯೇ ಸಂಗೀತಾ ತಮ್ಮ ಅರ್ಜಿಯನ್ನು ಹಿಂತೆಗೆದುಕೊಳ್ಳುವ ಉದ್ದೇಶವನ್ನು ನ್ಯಾಯಾಲಯಕ್ಕೆ ತಿಳಿಸಿದ್ದರು. ಆ ಸಂದರ್ಭದಲ್ಲಿಯೂ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕವೇ ವಿಚಾರಣೆಯಲ್ಲಿ ಭಾಗವಹಿಸಿದ್ದರು. ಬಳಿಕ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 7ಕ್ಕೆ ನಿಗದಿಪಡಿಸಲಾಗಿತ್ತು.
ಇದಕ್ಕೂ ಮುನ್ನ ಕಳೆದ ತಿಂಗಳು ನಡೆದ ವಿಚಾರಣೆಯಲ್ಲಿ ವಿಜಯ ಮತ್ತು ಸಂಗೀತಾ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅವರ ಪರ ವಕೀಲರು ಮಾತ್ರ ಹಾಜರಾಗಿ, ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಲು ತೊಂದರೆ ಇರುವುದಾಗಿ ತಿಳಿಸಿದ್ದರು. ಇದಕ್ಕೂ ಹಿಂದಿನ ಹಲವು ವಿಚಾರಣೆಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಇಬ್ಬರೂ ಗೈರಾಗಿದ್ದರು.
ಶುಕ್ರವಾರ ಸಂಗೀತಾ ತಮ್ಮ ಅರ್ಜಿಯನ್ನು ಹಿಂತೆಗೆದುಕೊಂಡ ಕಾರಣ, ನ್ಯಾಯಾಲಯ ಪ್ರಕರಣವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಿದೆ.

ಪ್ರಮುಖ ಸುದ್ದಿ :-   ಮದುವೆ ಮನೆಯಲ್ಲಿ ಪೊಲೀಸ್ ಅಧಿಕಾರಿ ಹತ್ಯೆ ; ಹೆಸರು ಬದಲಿಸಿಕೊಂಡು ನಕಲಿ ವೈದ್ಯನಾಗಿ ಬದುಕಿದ್ದ ಆರೋಪಿ 28 ವರ್ಷಗಳ ನಂತರ ಸೆರೆ...!

ಸಂಗೀತಾ ಈ ಹಿಂದೆ ತಮ್ಮ ಅರ್ಜಿಯಲ್ಲಿ ವಿವಾಹವನ್ನು ರದ್ದುಗೊಳಿಸುವಂತೆ ಕೋರುವುದರ ಜೊತೆಗೆ, ಶಾಶ್ವತ ಜೀವನಾಂಶ (ಪರ್ಮನೆಂಟ್ ಅಲಿಮನಿ) ನೀಡುವಂತೆ ಮನವಿ ಮಾಡಿದ್ದರು. ಅಲ್ಲದೆ, ಚೆನ್ನೈನ ನೀಲಂಕರೈಯಲ್ಲಿರುವ ದಂಪತಿಯ ವೈವಾಹಿಕ ನಿವಾಸದಲ್ಲೇ ವಾಸಿಸಲು ಅನುಮತಿ ನೀಡುವಂತೆಯೂ ನ್ಯಾಯಾಲಯವನ್ನು ಕೋರಿದ್ದರು.
ವಿಜಯ ಮತ್ತು ಸಂಗೀತಾ ಅವರ ಸಂಬಂಧ ಸುಮಾರು ಮೂರು ದಶಕಗಳಷ್ಟು ಹಳೆಯದು. 1999ರ ಆಗಸ್ಟ್ 25ರಂದು ಚೆನ್ನೈನಲ್ಲಿ ಇವರ ವಿವಾಹ ನಡೆದಿತ್ತು. 2000ರ ಆಗಸ್ಟ್ 26ರಂದು ದಂಪತಿಗೆ ಮೊದಲ ಮಗ ಜನಿಸಿದ್ದು, 2005ರಲ್ಲಿ ಪುತ್ರಿ ಜನಿಸಿದ್ದಾಳೆ.
2023ರಲ್ಲಿ ವಿಜಯ ಅವರು ಭಾಗವಹಿಸಿದ್ದ ಹಲವು ಪ್ರಮುಖ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಂಗೀತಾ ಗೈರಾಗಿದ್ದ ಹಿನ್ನೆಲೆಯಲ್ಲಿ ದಂಪತಿಯ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ಊಹಾಪೋಹಗಳು ಆರಂಭವಾಗಿದ್ದವು. ಆ ಸಮಯದಲ್ಲಿ ಇಂತಹ ವರದಿಗಳನ್ನು ತಳ್ಳಿಹಾಕಲಾಗಿತ್ತು.

ಆದರೆ 2025ರಲ್ಲಿ ಟಿವಿಕೆ ಆಯೋಜಿಸಿದ್ದ ಎರಡನೇ ರಾಜ್ಯ ಸಮ್ಮೇಳನ ಸೇರಿದಂತೆ ಪ್ರಮುಖ ರಾಜಕೀಯ ಕಾರ್ಯಕ್ರಮಗಳಲ್ಲಿ ಸಂಗೀತಾ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಇದೇ ರೀತಿಯ ಪ್ರಶ್ನೆಗಳು ಉದ್ಭವಿಸಿದ್ದವು.
ಇದರ ನಡುವೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಾಗೂ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷಗಳ ಹಲವು ದಶಕಗಳ ರಾಜಕೀಯ ಪ್ರಾಬಲ್ಯಕ್ಕೆ ತೆರೆ ಎಳೆದಿತ್ತು.
ನಂತರ ಕಾಂಗ್ರೆಸ್, ಸಿಪಿಐ, ಸಿಪಿಐ (ಎಂ), ವಿದುತಲೈ ಚಿರುಥೈಗಲ್ ಕಚ್ಚಿ (ವಿಸಿಕೆ) ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪಕ್ಷಗಳ ಬೆಂಬಲದೊಂದಿಗೆ ಟಿವಿಕೆ ಸರ್ಕಾರ ರಚಿಸಿತು. ಇದರೊಂದಿಗೆ ತಮಿಳುನಾಡಿನಲ್ಲಿ ಹಲವು ದಶಕಗಳ ಬಳಿಕ ಮೊದಲ ಬಾರಿಗೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಪ್ರಮುಖ ಸುದ್ದಿ :-   ಪುತ್ರಿಯರಿಗಾಗಿ ಜೀವನ ಮುಡಿಪಾಗಿಟ್ಟಿದ್ದ ತಂದೆ ವೃದ್ಧಾಶ್ರಮದಲ್ಲಿ ನಿಧನ ; ₹5100 ಕಳುಹಿಸಿ ವಿಡಿಯೊ ಕಾಲ್‌ನಲ್ಲಿ ಕೊನೆ ವಿದಾಯ ಹೇಳಿದ ಪುತ್ರಿಯರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement