ಮೊರ್ಬಿ (ಗುಜರಾತ್): ಗುಜರಾತಿನ ಮೊರ್ಬಿ ತಾಲ್ಲೂಕಿನ ವಿರ್ಪರ್ದಾ ಗ್ರಾಮದ ನಿಗೂಢ ಬಾವಿಯೊಂದು ಸಾರ್ವಜನಿಕರ ಗಮನ ಸೆಳೆದಿದೆ. ಇಲ್ಲಿನ ಕೃಷಿ ಜಮೀನೊಂದರಲ್ಲಿರುವ 18 ಅಡಿ ಆಳದ ತೆರೆದ ಬಾವಿಯಲ್ಲಿ ನೀರು ಸಮುದ್ರದ ಅಲೆಗಳಂತೆ ನೀರು ನಿರಂತರವಾಗಿ ಏರಿಳಿಯುತ್ತಿದೆ.
ಸ್ಥಳೀಯ ನಿವಾಸಿಗಳ ಮಾಹಿತಿ ಪ್ರಕಾರ, ಗುರುವಾರ ಮಧ್ಯಾಹ್ನ ಸುಮಾರು 3.00 ಗಂಟೆ ವೇಳೆಗೆ ಬಾವಿಯ ನೀರಿನಲ್ಲಿ ಮತ್ತೆ ಈ ಅಸಾಮಾನ್ಯ ಚಲನೆ ಆರಂಭವಾಗಿದೆ. ಇದೇ ರೀತಿಯ ವಿಚಿತ್ರ ಘಟನೆ ಎರಡು ದಿನಗಳ ಹಿಂದೆಯೂ ಕಂಡುಬಂದಿತ್ತು. ಬಳಿಕ ನೀರಿನ ಚಲನೆ ಕ್ರಮೇಣ ಕಡಿಮೆಯಾಗುತ್ತಾ ಗುರುವಾರ ಬೆಳಿಗ್ಗೆ ವೇಳೆಗೆ ಸಂಪೂರ್ಣ ನಿಂತಿತ್ತು. ಆದರೆ ಅದೇ ದಿನ ಮಧ್ಯಾಹ್ನ ನಂತರ ಮತ್ತೊಮ್ಮೆ ನೀರು ಸ್ವಯಂ ಆಗಿಸಮುದ್ರದ ಅಲೆಗಳಂತೆ ಚಲಿಸಲು ಆರಂಭಿಸಿರುವುದು ಜನರಲ್ಲಿ ಆಶ್ಚರ್ಯ ಮೂಡಿಸಿದೆ.
ಈ ವಿಚಿತ್ರ ವಿದ್ಯಮಾನವನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದಲೂ ಜನ ಬಾವಿಯ ಬಳಿ ಬಂದು ನೀರಿನ ಅಸಾಮಾನ್ಯ ಚಲನೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.ವಿರ್ಪರ್ಡಾ ಗ್ರಾಮದ ಹೆದ್ದಾರಿ ಪಕ್ಕದಲ್ಲಿರುವ ಈ ಬಾವಿ ಇತ್ತೀಚಿನ ಭಾರಿ ಮಳೆಗೆ ಸಂಪೂರ್ಣವಾಗಿ ತುಂಬಿತ್ತು. ಆದರೆ, ಇದ್ದಕ್ಕಿದ್ದಂತೆ ಬಾವಿಯ ಒಳಗಿನಿಂದ ಭಾರಿ ಪ್ರಮಾಣದ ಅಲೆಗಳು ಏಳಲು ಆರಂಭಿಸಿದ್ದು, ನೀರು ಹೊರಕ್ಕೆ ಚಿಮ್ಮುತ್ತಿದೆ.
ಸುತ್ತಮುತ್ತಲಿನ ಉಳಿದ ಬಾವಿಗಳಲ್ಲಿ ನೀರು ಶಾಂತವಾಗಿದ್ದರೂ, ಈ ಒಂದು ಬಾವಿಯಲ್ಲಿ ಮಾತ್ರ ನೀರು ಸಮುದ್ರದ ಅಲೆಗಳಂತೆ ಏರಿಳಿಯುತ್ತಿದೆ.
ಬಾವಿಯ ನೀರಿನಲ್ಲಿನ ಈ ರೀತಿಯ ಚಲನೆಗೆ ನಿಖರವಾದ ಕಾರಣ ಇದುವರೆಗೆ ತಿಳಿದುಬಂದಿಲ್ಲ. ಕೆಲವು ಸ್ಥಳೀಯರು, ಮೊರ್ಬಿ ಪ್ರದೇಶವು ಹಿಂದೆ ಭೂಕಂಪದ ಪರಿಣಾಮ ಅನುಭವಿಸಿರುವ ಭೂಕಂಪ ಸಂವೇದನಾಶೀಲ ವಲಯದಲ್ಲಿರುವುದರಿಂದ, ಈ ಘಟನೆಗೆ ಭೂಗರ್ಭದ ಭೂಕಂಪೀಯ ಚಟುವಟಿಕೆ ಕಾರಣವಾಗಿರಬಹುದು ಎಂದು ಊಹಿಸುತ್ತಾರೆ.
ಭೂಮಿ ಒಳಗಿನ ನೀರಿನ ಒತ್ತಡ, ಭೂವೈಜ್ಞಾನಿಕ ಚಟುವಟಿಕೆ ಅಥವಾ ಭುಮಿ ಒಳಗೆ ಸಿಕ್ಕಿಬಿದ್ದ ಅನಿಲ ಇದಕ್ಕೆ ಕಾರಣವಾಗಿರಬಹುದು ಎಂದು ತಜ್ಞರು ಭಾವಿಸಿದ್ದು, ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ಆದರೆ, ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಬಾವಿ ನೀರಿನ ಈ ನಿಗೂಢ ಚಲನೆಯ ಹಿಂದಿನ ನಿಜವಾದ ಕಾರಣವನ್ನು ತಜ್ಞರು ಪತ್ತೆಹಚ್ಚಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಸ್ಥಳೀಯರು ಇದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ