ಗೋಂಡಾ: ಜೈಲಿನಲ್ಲಿರುವ ಪ್ರಿಯಕರನನ್ನು ಭೇಟಿಯಾಗಲು ಮತ್ತೊಬ್ಬ ವ್ಯಕ್ತಿಯೊಂದಿಗೆ ಬಂದಿದ್ದ ಅಪ್ರಾಪ್ತ ಬಾಲಕಿಯೊಬ್ಬಳು 10 ಜೀವಂತ ಗುಂಡುಗಳನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡು ಬಂದಿರುವುದು ಗೋಂಡಾ ವಿಭಾಗೀಯ ಕಾರಾಗೃಹದ ಭದ್ರತಾ ತಪಾಸಣೆ ವೇಳೆ ಪತ್ತೆಯಾಗಿದೆ.
ಗುರುವಾರ ಬಾಲಕಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಗೋಂಡಾ ವಿಭಾಗೀಯ ಜೈಲಿಗೆ ಆಗಮಿಸಿ, ಅಲ್ಲಿ ಬಂಧಿಯಾಗಿರುವ ಹರ್ಷು ಕಶ್ಯಪ ಎಂಬಾತನನ್ನು ಭೇಟಿಯಾಗಲು ಮುಂದಾಗಿದ್ದಳು. ಜೈಲರ್ ಆಫ್ತಾಬ್ ಆಲಂ ಅನ್ಸಾರಿ ಅವರ ಪ್ರಕಾರ, ಜೈಲಿನ ಮುಖ್ಯ ದ್ವಾರದಲ್ಲಿ ನಿಯಮಾನುಸಾರ ಭೇಟಿ ಮಾಡುವ ಇಬ್ಬರನ್ನೂ ಭದ್ರತಾ ತಪಾಸಣೆಗೆ ಒಳಪಡಿಸಲಾಗಿತ್ತು.
ಆಧಾರ್ ಕಾರ್ಡ್‌ನಲ್ಲಿದ್ದ ಹೆಸರು ಬೇರೆ, ಹೇಳಿದ ಹೆಸರು ಬೇರೆ… ಅನುಮಾನ
ಭದ್ರತಾ ತಪಾಸಣೆ ವೇಳೆ ಬಾಲಕಿ ತನ್ನ ಆಧಾರ್ ಕಾರ್ಡ್‌ನಲ್ಲಿ ನಮೂದಿಸಲಾಗಿದ್ದ ಹೆಸರಿಗಿಂತ ಭಿನ್ನವಾದ ಹೆಸರನ್ನು ಹೇಳಿದ್ದಾಳೆ. ಇದರಿಂದ ಜೈಲು ಸಿಬ್ಬಂದಿಗೆ ಅನುಮಾನ ಉಂಟಾಗಿದೆ. ಬಳಿಕ ಆಕೆಯನ್ನು ತಪಾಸಣೆ ನಡೆಸಿದಾಗ, ಆಕೆಯ ಜೇಬಿನಲ್ಲಿ 10 ಜೀವಂತ ಗುಂಡುಗಳು ಪತ್ತೆಯಾಗಿವೆ. ಇದಲ್ಲದೆ, ಬಾಲಕಿಯ ಬಳಿಯಿಂದ ನಕಲಿ ಆಧಾರ್ ಕಾರ್ಡ್ ಮತ್ತು ನಗದು ಹಣವನ್ನೂ ಜೈಲು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಗುಂಡುಗಳು ತಂದೆಯ ಲೈಸೆನ್ಸ್ ಹೊಂದಿರುವ ಪಿಸ್ತೂಲ್‌ನದ್ದು ಎಂದ ಬಾಲಕಿ
ಗುಂಡುಗಳು ಪತ್ತೆಯಾದ ಬಳಿಕ ಜೈಲು ಹೊರಠಾಣೆಯ ಉಸ್ತುವಾರಿ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಲಾಯಿತು. ಬಾಲಕಿ ಮತ್ತು ಆಕೆಯೊಂದಿಗೆ ಬಂದಿದ್ದ ವ್ಯಕ್ತಿಯನ್ನು ವಶಪಡಿಸಿಕೊಂಡ ವಸ್ತುಗಳ ಸಮೇತ ಪೊಲೀಸರಿಗೆ ಹಸ್ತಾಂತರಿಸಲಾಯಿತು.
ವಿಚಾರಣೆ ವೇಳೆ ಬಾಲಕಿ ತನ್ನ ನಿಜವಾದ ಗುರುತನ್ನು ಬಹಿರಂಗಪಡಿಸಿದ್ದಾಳೆ. ತನ್ನ ತಂದೆಯ ಲೈಸೆನ್ಸ್ ಹೊಂದಿರುವ ಪಿಸ್ತೂಲ್‌ನಿಂದಲೇ ಈ ಗುಂಡುಗಳನ್ನು ತೆಗೆದುಕೊಂಡು ಬಂದಿದ್ದಾಗಿ ಆಕೆ ಅಧಿಕಾರಿಗಳಿಗೆ ತಿಳಿಸಿದ್ದಾಳೆ ಎನ್ನಲಾಗಿದೆ.
ತನ್ನ ತಂದೆ ತುಂಬ ಕೋಪದ ಸ್ವಭಾವದವರಾಗಿದ್ದು, ತಾನು ಜೈಲಿನಲ್ಲಿರುವ ಪ್ರಿಯಕರನನ್ನು ಭೇಟಿಯಾಗಲು ಹೋಗಿರುವ ವಿಷಯ ತಿಳಿದರೆ ಅವರು ಯಾವುದಾದರೂ ತೀವ್ರ ನಿರ್ಧಾರ ಕೈಗೊಳ್ಳಬಹುದು ಎಂಬ ಭಯ ತನ್ನಲ್ಲಿತ್ತು ಎಂದು ಬಾಲಕಿ ಹೇಳಿದ್ದಾಳೆ. ಹೀಗಾಗಿ ತಂದೆಯ ಪಿಸ್ತೂಲ್‌ನಲ್ಲಿದ್ದ ಗುಂಡುಗಳನ್ನು ತೆಗೆದು ತನ್ನೊಂದಿಗೆ ತಂದಿದ್ದಾಗಿ ಆಕೆ ವಿಚಾರಣೆ ವೇಳೆ ತಿಳಿಸಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಜೈಲರ್ ಆಫ್ತಾಬ್ ಆಲಂ ಅನ್ಸಾರಿ ತಿಳಿಸಿದ್ದಾರೆ. ಬಾಲಕಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆಕೆಯೊಂದಿಗೆ ಜೈಲಿಗೆ ಬಂದಿದ್ದ ವ್ಯಕ್ತಿಯ ಬಗ್ಗೆಯೂ ತನಿಖೆ ನಡೆಯುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ