ಎನ್‌ಕ್ರಿಪ್ಟೆಡ್‌ ಕಾಲ್‌, ರಹಸ್ಯ ಕಡತ, ತೀವ್ರ ನಿಗಾ : ಪೊಲೀಸರು ವಾಯುಪಡೆಯ ಹನಿಟ್ರ್ಯಾಪ್–ಗೂಢಚಾರಿಕೆ ಜಾಲ ಭೇದಿಸಿದ್ದು ಹೇಗೆ…?

ನವದೆಹಲಿ: ಪಾಕಿಸ್ತಾನ ಮೂಲದ ಗುಪ್ತಚರ ಏಜೆಂಟನಿಗೆ ರಹಸ್ಯ ರಕ್ಷಣಾ ದಾಖಲೆಗಳು ಹಾಗೂ ಸೇನಾ ಕಾರ್ಯತಂತ್ರದ  ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಸೇವೆಯಲ್ಲಿದ್ದ 44 ವರ್ಷದ ಭಾರತೀಯ ವಾಯುಪಡೆಯ (IAF) ವಿಂಗ್ ಕಮಾಂಡರ್‌ನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ. ನಾಲ್ಕು ತಿಂಗಳ ಕಾಲ ನಡೆದ ಈ ಅಧಿಕಾರಿಯ ಮೇಲೆ ನಿಗಾ ಇಟ್ಟ ಬಳಿಕ ಈ ಬಂಧನ ನಡೆದಿದೆ.
ಪಶ್ಚಿಮ ಗಡಿಭಾಗದ ಅತ್ಯಂತ ಮಹತ್ವದ ಫೀಲ್ಡ್ ಘಟಕವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಅಧಿಕಾರಿಯು ಸಾಮಾಜಿಕ ಜಾಲತಾಣದ ‘ಹನಿಟ್ರ್ಯಾಪ್’ಗೆ ಬಲಿಯಾಗಿ ಪಾಕಿಸ್ತಾನ ಮೂಲದ ಗುಪ್ತಚರ ಏಜೆಂಟನಿಗೆ ಸೇನಾ ರಹಸ್ಯಗಳನ್ನು ರವಾನಿಸಿದ್ದಾನೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ.
ಅಧಿಕಾರಿಯನ್ನು ಅಧಿಕೃತ ರಹಸ್ಯ ಕಾಯ್ದೆ (Official Secrets Act – OSA) ಅಡಿಯಲ್ಲಿ ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಈತ ತಿಹಾರ್ ಜೈಲಿನಲ್ಲಿ ಇದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದ ಸಮಗ್ರ ಆರೋಪಪಟ್ಟಿಯನ್ನು ಜುಲೈ 30ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಸಾಮಾಜಿಕ ಜಾಲತಾಣದ ಮೂಲಕ ಬಲೆಗೆ
ತನಿಖೆಯ ಪ್ರಕಾರ, ಈ ವರ್ಷದ ಆರಂಭದಲ್ಲಿ ವೈಯಕ್ತಿಕವಾಗಿ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದ ಅಧಿಕಾರಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಸಂಪರ್ಕಿಸಿದ್ದಾನೆ. ಆತ ತನ್ನನ್ನು ಮಹಿಳೆಯಂತೆ ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ.
ಆರಂಭದಲ್ಲಿ ಸಾಮಾನ್ಯ ಸಂದೇಶ ವಿನಿಮಯವಾಗಿ ಆರಂಭವಾದ ಸಂಪರ್ಕ, ಬಳಿಕ ನಿಯಮಿತ ದೂರವಾಣಿ ಮಾತುಕತೆ ಮತ್ತು ಎನ್‌ಕ್ರಿಪ್ಟ್ ಮಾಡಲಾದ ಸಂವಹನ ಅಪ್ಲಿಕೇಶನ್‌ನಲ್ಲಿ ವಿಡಿಯೊ ಕರೆಗಳವರೆಗೆ ವಿಸ್ತರಿಸಿತು.
ಹಲವು ವಾರಗಳ ಕಾಲ ಸಂಪರ್ಕದಲ್ಲಿದ್ದ ಪಾಕಿಸ್ತಾನ ಮೂಲದ ಹ್ಯಾಂಡ್ಲರ್, ಅಧಿಕಾರಿಯ ವೈಯಕ್ತಿಕ ದುರ್ಬಲತೆಗಳನ್ನು ಬಳಸಿಕೊಂಡು ಆತನ ವಿಶ್ವಾಸ ಗಳಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಬಳಿಕ, ಆತನಿಂದ ಗೌಪ್ಯ ಸೇನಾ ದಾಖಲೆಗಳ ಛಾಯಾಚಿತ್ರಗಳು, ಸೈನಿಕರ ನಿಯೋಜನೆಗೆ ಸಂಬಂಧಿಸಿದ ವಿವರಗಳು ಹಾಗೂ ಗಡಿಯಲ್ಲಿನ ಸೇನಾ ಕಾರ್ಯತಂತ್ರದ ಚಟುವಟಿಕೆಗಳು ಮತ್ತು ಕಾರ್ಯಾಚರಣೆಯ ಚಲನವಲನಗಳ ಮಾಹಿತಿಯನ್ನು ಪಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಸಹೋದ್ಯೋಗಿಯ ಮೊಬೈಲ್‌ಗೆ ಮಾಲ್‌ವೇರ್ ಅಳವಡಿಸುವ ಯತ್ನ
ರಹಸ್ಯ ದಾಖಲೆಗಳು ಮತ್ತು ಮಾಹಿತಿಯನ್ನು ಸೋರಿಕೆ ಮಾಡಿದ್ದಷ್ಟೇ ಅಲ್ಲದೆ, ಸೇನಾ ಭದ್ರತೆಗೆ ಮತ್ತಷ್ಟು ಧಕ್ಕೆಯೊಡ್ಡುವ ಪ್ರಯತ್ನವೂ ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪಾಕಿಸ್ತಾನಿ ಹ್ಯಾಂಡ್ಲರ್‌ನ ಸೂಚನೆಯ ಮೇರೆಗೆ ಅಧಿಕಾರಿಯು ತನ್ನ ಸಹೋದ್ಯೋಗಿಯ ಮೊಬೈಲ್ ಫೋನ್‌ನಲ್ಲಿ ದುರುದ್ದೇಶಪೂರಿತ ಅಪ್ಲಿಕೇಶನ್‌ವೊಂದನ್ನು ಅಳವಡಿಸಲು ಪ್ರಯತ್ನಿಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಆ ಅಪ್ಲಿಕೇಶನ್‌ ಗುಪ್ತ ರಿಮೋಟ್-ಆಕ್ಸೆಸ್ ಮಾಲ್‌ವೇರ್‌ನಂತೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಮೊಬೈಲ್‌ನ ನೈಜ-ಸಮಯದ ಸ್ಥಳವನ್ನು ಪತ್ತೆಹಚ್ಚುವುದು, ಸಂವಹನದ ದಾಖಲೆಗಳನ್ನು ಕದ್ದು ಪಡೆಯುವುದು ಹಾಗೂ ಸಾಧನದಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಹೊರತೆಗೆಯುವುದು ಸೇರಿದಂತೆ ಹಲವು ರೀತಿಯಲ್ಲಿ ಅದು ಮಾಹಿತಿ ಕದಿಯುತ್ತಿತ್ತು ಎನ್ನಲಾಗಿದೆ.
ಜನವರಿಯಿಂದ ನಿಗಾ ಇಟ್ಟಿದ್ದರು…
ಈ ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ಜನವರಿಯಲ್ಲಿ ದೊರೆತಿತ್ತು. ಪಾಕಿಸ್ತಾನಿ ಗುಪ್ತಚರ ಏಜೆಂಟ್‌ ಜೊತೆ ಸಂಪರ್ಕ ಹೊಂದಿದ್ದ ಅಂತಾರಾಷ್ಟ್ರೀಯ ದೂರವಾಣಿ ಸಂಖ್ಯೆಯೊಂದನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಎಲೆಕ್ಟ್ರಾನಿಕ್ ನಿಗಾದಲ್ಲಿಟ್ಟಿತ್ತು.
ಈ ವೇಳೆ, ಆ ಅಂತಾರಾಷ್ಟ್ರೀಯ ಸಂಖ್ಯೆಯಿಂದ ನಿರ್ದಿಷ್ಟ ಭಾರತೀಯ ಮೊಬೈಲ್ ಸಂಖ್ಯೆಗೆ ಪದೇಪದೇ ಎನ್‌ಕ್ರಿಪ್ಟ್ ಮಾಡಲಾದ ಚಾಟ್‌ ನಡೆಯುತ್ತಿರುವುದು ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿದೆ.
ಆ ಮೊಬೈಲ್ ಸಂಖ್ಯೆಯನ್ನು ಬಳಸುತ್ತಿದ್ದ ವ್ಯಕ್ತಿ ಭಾರತೀಯ ವಾಯುಪಡೆಯ ಸೇವೆಯಲ್ಲಿರುವ ವಿಂಗ್ ಕಮಾಂಡರ್ ಎಂಬುದು ಪತ್ತೆಯಾದ ಬಳಿಕ, ವಾಯುಪಡೆಯ ಕೌಂಟರ್-ಇಂಟೆಲಿಜೆನ್ಸ್ ಘಟಕಗಳು ಅಧಿಕಾರಿಯ ಮೇಲೆ ನಿಕಟ ನಿಗಾ ಆರಂಭಿಸಿದವು.
ಸಾಕಷ್ಟು ಮತ್ತು ನಿರ್ಣಾಯಕ ಡಿಜಿಟಲ್ ಸಾಕ್ಷ್ಯಗಳು ಸಿಕ್ಕ ಬಳಿಕ, ಭಾರತೀಯ ವಾಯುಪಡೆಯು ಅಧಿಕೃತ ದೂರು ದಾಖಲಿಸಿ, ಮೇ 30ರಂದು ಅಧಿಕಾರಿಯನ್ನು ದೆಹಲಿ ಪೊಲೀಸ್ ವಿಶೇಷ ಘಟಕದ ವಶಕ್ಕೆ ಒಪ್ಪಿಸಿತು.
ಭದ್ರತಾ ಉಲ್ಲಂಘನೆಗೆ ಶೂನ್ಯ ಸಹಿಷ್ಣುತೆ
ರಕ್ಷಣಾ ಭದ್ರತೆಗೆ ಸಂಬಂಧಿಸಿದ ಇಂತಹ ಪ್ರಕರಣಗಳಲ್ಲಿ ಯಾವುದೇ ರೀತಿಯ ರಾಜಿ ಇಲ್ಲ ಎಂಬ ತನ್ನ ನಿಲುವನ್ನು ಭಾರತೀಯ ವಾಯುಪಡೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಭದ್ರತಾ ಉಲ್ಲಂಘನೆ ಮತ್ತು ಗೂಢಚಾರಿಕೆ ವಿರುದ್ಧ ಶೂನ್ಯ ಸಹಿಷ್ಣುತೆ (Zero Tolerance) ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ವಾಯುಪಡೆ ತಿಳಿಸಿದೆ.
ಸಮಯೋಚಿತ ಮತ್ತು ಸಕ್ರಿಯ ನಿಗಾ ಕ್ರಮಗಳ ಮೂಲಕ ರಹಸ್ಯ ಮಾಹಿತಿ ಸೋರಿಕೆ ಪ್ರಕರಣವನ್ನು ಪತ್ತೆಹಚ್ಚಿ, ಹೆಚ್ಚಿನ ಹಾನಿ ಸಂಭವಿಸುವ ಮುನ್ನವೇ ಅದನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದು ವಾಯುಪಡೆ ಹೇಳಿದೆ.
ಪ್ರಕರಣದಲ್ಲಿ ಅಧಿಕಾರಿಯ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯಡಿ ಕಾನೂನು ಕ್ರಮ ಮುಂದುವರಿದಿದ್ದು, ಜುಲೈ 30ರಂದು ಸಲ್ಲಿಸಲಾದ ಸಮಗ್ರ ಆರೋಪಪಟ್ಟಿಯ ಆಧಾರದ ಮೇಲೆ ನ್ಯಾಯಾಲಯದಲ್ಲಿ ವಿಚಾರಣಾ ಪ್ರಕ್ರಿಯೆ ಮುಂದುವರಿಯಲಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement