ಮುಂಬೈ: 33 ವರ್ಷದ ನಟಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಶಕೀಲ್ ನೂರಾನಿ (73) ಅವರನ್ನು ಮುಂಬೈನ ಮಾಲ್ವಾಣಿ ಪೊಲೀಸರು ಆಗಸ್ಟ್ 8ರ ಮುಂಜಾನೆ ಬಂಧಿಸಿದ್ದಾರೆ.
‘ಬಡೆ ದಿಲ್ ವಾಲಾ’ (1999) ಹಾಗೂ ‘ಜೋರು ಕಾ ಗುಲಾಮ್’ (2000) ಸೇರಿದಂತೆ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ನೂರಾನಿ ಅವರನ್ನು ಬಂಧಿಸಿದ ಬಳಿಕ ಬೋರಿವಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು ಆಗಸ್ಟ್ 12ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪೊಲೀಸ್ ದೂರಿನ ಪ್ರಕಾರ, ಚಿತ್ರವೊಂದರ ಕುರಿತು ಚರ್ಚಿಸುವ ನೆಪದಲ್ಲಿ ನೂರಾನಿ ಅವರು ನಟಿಯನ್ನು ತಮ್ಮ ಮಾಲ್ವಾಣಿ ನಿವಾಸಕ್ಕೆ ಕರೆಯಿಸಿಕೊಂಡಿದ್ದರು. ಅಲ್ಲಿ ಆಕೆಗೆ ಪಾನೀಯದಲ್ಲಿ ಯಾವುದೋ ವಸ್ತು ಬೆರೆಸಿ ನೀಡಿದ ಬಳಿಕ ಆಕೆ ಪ್ರಜ್ಞಾಹೀನಳಾದಳು ಎಂದು ಆರೋಪಿಸಲಾಗಿದೆ. ಬಳಿಕ ನೂರಾನಿ ಅವರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಯನ್ನು ಚಿತ್ರೀಕರಿಸಿಕೊಂಡಿದ್ದ ನೂರಾನಿ, ಆ ವಿಡಿಯೋವನ್ನು ಪ್ರಸಾರ ಮಾಡುವುದಾಗಿ ಬೆದರಿಸಿ, ಪೊಲೀಸರನ್ನು ಸಂಪರ್ಕಿಸದಂತೆ ಹಾಗೂ ಕುಟುಂಬದವರಿಗೆ ವಿಷಯ ತಿಳಿಸದಂತೆ ಬೆದರಿಕೆ ಹಾಕಿದ್ದರು ಎಂದು ನಟಿ ಆರೋಪಿಸಿದ್ದಾರೆ. ವಿಡಿಯೋವನ್ನು ಬಳಸಿಕೊಂಡು ತಮ್ಮನ್ನು ಬ್ಲ್ಯಾಕ್ಮೇಲ್ ಮಾಡಲಾಗುತ್ತಿತ್ತು ಎಂದೂ ಅವರು ದೂರಿನಲ್ಲಿ ಹೇಳಿದ್ದಾರೆ.
ಸ್ಕ್ರಿಪ್ಟ್ ಓದುವ ನೆಪದಲ್ಲಿ ನೂರಾನಿಯವರ ನಿವಾಸಕ್ಕೆ ತೆರಳಿದಾಗ, ಅವರು ನೀಡಿದ ಪಾನೀಯ ಸೇವಿಸಿದ ಬಳಿಕ ತಾನು ಪ್ರಜ್ಞಾಹೀನಳಾದೆ ಎಂದು ನಟಿ ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ಆ ಸಂದರ್ಭದಲ್ಲಿ ನೂರಾನಿ ಅವರು ತನ್ನ ವಿಡಿಯೋ ಮಾಡಿಕೊಂಡಿದ್ದು, ಅದನ್ನು ಹರಿಬಿಡುವುದಾಗಿ ಬೆದರಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ಗಳು 64(2)(M), 123, 351(2) ಮತ್ತು 88 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದೇ ವೇಳೆ, ನೂರಾನಿ ಅವರ ಪರ ವಕೀಲ ವಿಕಾಸ್ ಸಿಂಗ್ ಗೋಯರ್ ಅವರು ತಮ್ಮ ಕಕ್ಷಿದಾರರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಾದಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ