ಕೊಲಂಬೊ : ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ಏಕದಿನ ತಂಡದ ನಾಯಕ ಕುಸಾಲ್ ಮೆಂಡಿಸ್ ಸೇರಿದಂತೆ ಹಲವು ಪ್ರಮುಖ ಕ್ರಿಕೆಟಿಗರಿಗೆ ಶಾಲಾ ಮಟ್ಟದಲ್ಲಿ ತರಬೇತಿ ನೀಡಿದ್ದ 62 ವರ್ಷದ ಮಾಜಿ ಕ್ರಿಕೆಟ್ ಕೋಚ್ ಸುಮಿತ್ ಫೆರ್ನಾಂಡೋ, ಪಂದ್ಯವೊಂದರ ವೇಳೆ ಆಟಗಾರರ ಜೊತೆಗೆ ನಡೆದ ಗಲಾಟೆಯ ಬಳಿಕ ಮೃತಪಟ್ಟಿದ್ದಾರೆ.
ಕೊಲಂಬೊದಲ್ಲಿ ನಡೆದ ಘಟನೆಯ ಸಂಬಂಧ 17 ವರ್ಷದ ಶಾಲಾ ಕ್ರಿಕೆಟಿಗನನ್ನು ಸೋಮವಾರ ಬಂಧಿಸಲಾಗಿದ್ದು, ಹಲ್ಲೆ ನಡೆಸಿದ ಶಂಕೆಯ ಮೇರೆಗೆ ಆತನನ್ನು ಮಂಗಳವಾರ ಕೊಲಂಬೊ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ಆಗಸ್ಟ್ 17ರವರೆಗೆ ಬಾಲ ನ್ಯಾಯಾಂಗ ಸಂರಕ್ಷಣಾ ವಶಕ್ಕೆ ಒಪ್ಪಿಸಲಾಗಿದೆ ಎಂದು ಶ್ರೀಲಂಕಾ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಆಗಸ್ಟ್ 8ರಂದು ಕುಡಿಯುವ ನೀರಿನ ವಿಚಾರ ಇಬ್ಬರು ಆಟಗಾರರ ನಡುವೆ ವಿವಾದ ಉಂಟಾಗಿ ಗಲಾಟೆಗೆ ಕಾರಣವಾಗಿತ್ತು. ಘಟನೆಯ ಬಳಿಕ ಗಂಭೀರವಾಗಿ ಅಸ್ವಸ್ಥಗೊಂಡ ಫೆರ್ನಾಂಡೋ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಮಂಗಳವಾರ ಮೃತಪಟ್ಟಿದ್ದಾರೆ.
ಫೆರ್ನಾಂಡೋ ಅವರು ಕೊಲಂಬೊದ ಹೊರವಲಯದ ಮೊರಟುವಾದಲ್ಲಿರುವ ಪ್ರಿನ್ಸ್ ಆಫ್ ವೇಲ್ಸ್ ಕಾಲೇಜಿನ ಮಾಜಿ ಕ್ರಿಕೆಟ್ ಕೋಚ್ ಆಗಿದ್ದರು. ಶಾಲಾ ದಿನಗಳಲ್ಲಿ ರಾಷ್ಟ್ರೀಯ ಏಕದಿನ ತಂಡದ ನಾಯಕ ಕುಸಾಲ್ ಮೆಂಡಿಸ್ ಸೇರಿದಂತೆ ಹಲವು ಪ್ರತಿಭಾವಂತ ಕ್ರಿಕೆಟಿಗರಿಗೆ ಶಾಲಾ ಮಟ್ಟದಲ್ಲಿ ತರಬೇತಿ ನೀಡಿದ್ದರು.ನಂತರ ಅವರು ಶ್ರೀಲಂಕಾದ ಪ್ರಮುಖ ಪ್ರಥಮ ದರ್ಜೆ ಕ್ರಿಕೆಟ್ ಸ್ಪರ್ಧೆಯಲ್ಲಿ ಆಡುತ್ತಿರುವ ಬ್ಲೂಮ್ಫೀಲ್ಡ್ ಕ್ರಿಕೆಟ್ ಆ್ಯಂಡ್ ಅಥ್ಲೆಟಿಕ್ ಕ್ಲಬ್ನ ಕ್ಯುರೇಟರ್ ಆಗಿಯೂ ಸೇವೆ ಸಲ್ಲಿಸಿದ್ದರು. ಫೆರ್ನಾಂಡೋ ಅವರ ಅಂತ್ಯಕ್ರಿಯೆ ಗುರುವಾರ ನೆರವೇರಿತು.
ಶ್ರೀಲಂಕಾ ಮಿರರ್ ವರದಿ ಪ್ರಕಾರ, ಪ್ರಕರಣದ ಆರೋಪಿ ಸೀದುವಾದ ಲಿಯನಗೆಮುಲ್ಲ ನಿವಾಸಿಯಾಗಿದ್ದಾನೆ. ಪೊಲೀಸ್ ತನಿಖೆಯ ಪ್ರಾಥಮಿಕ ವರದಿ ಪ್ರಕಾರ, ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದ ಆರೋಪಿ ಸೇರಿದಂತೆ ಕೆಲ ಕ್ರಿಕೆಟಿಗರು ಕುಡಿಯಲು ನೀರಿನ ಟ್ಯಾಪ್ ಬಳಿ ತೆರಳಿದ್ದರು. ಆದರೆ ಅಲ್ಲಿ ನೀರು ಲಭ್ಯವಿರಲಿಲ್ಲ. ಈ ವಿಚಾರವಾಗಿ ಆಟಗಾರರು ಹಾಗೂ ಕ್ಲಬ್ನ ಉದ್ಯೋಗಿಯೊಬ್ಬರ ನಡುವೆ ವಾಗ್ವಾದ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಆ ಉದ್ಯೋಗಿ ಆಟಗಾರರ ಪೈಕಿ ಒಬ್ಬನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಬೆಳವಣಿಗೆ ಬಳಿಕ ಗಲಾಟೆ ಉಂಟಾಗಿ, ಫೆರ್ನಾಂಡೋ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಪ್ರಕರಣದ ತನಿಖೆ ಮುಂದುವರಿದಿದ್ದು, 17 ವರ್ಷದ ಆರೋಪಿಯನ್ನು ಬಾಲ ನ್ಯಾಯಾಂಗ ಪ್ರಕ್ರಿಯೆಯಡಿ ವಶದಲ್ಲಿರಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ