ನವದೆಹಲಿ : ಹೈದರಾಬಾದಿನ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಆ್ಯಂಡ್ ರಿಸರ್ಚ್ (NALSAR) ವಿಶ್ವವಿದ್ಯಾಲಯದ 2026ರ ಬ್ಯಾಚ್ನ ಕಾನೂನು ಪದವೀಧರರನ್ನು ಯಾವುದೇ ರಾಜ್ಯ ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿಕೊಳ್ಳಬಾರದು ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಕ್ರಮದ ಕುರಿತು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತಅವರು, ಇದು “ಸಂಪೂರ್ಣ ಅನಗತ್ಯ” ವಾದದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಲ್ಸಾರ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ಭಾಗವಹಿಸುವುದನ್ನು ವಿರೋಧಿಸಿ ನಡೆದಿದ್ದ ಅಭಿಯಾನದ ಹಿನ್ನೆಲೆಯಲ್ಲಿ ಬಿಸಿಐ ಈ ಕಠಿಣ ಕ್ರಮ ಕೈಗೊಂಡಿತ್ತು. ಈ ಅಭಿಯಾನಕ್ಕೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣಗೊಳ್ಳುವವರೆಗೆ 2026ರ ಬ್ಯಾಚ್ನ ಯಾವುದೇ ಪದವೀಧರರನ್ನು ರಾಜ್ಯ ಬಾರ್ ಕೌನ್ಸಿಲ್ಗಳು ನೋಂದಾಯಿಸಿಕೊಳ್ಳಬಾರದು ಎಂದು ಬಿಸಿಐ ನಿರ್ದೇಶಿಸಿತ್ತು.
ಆದರೆ, ನಿರ್ದೇಶನ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಬಿಸಿಐ ತನ್ನ ನಿಲುವನ್ನು ಬದಲಿಸಿತ್ತು. ತನ್ನ ಬಳಿ ಲಭ್ಯವಾದ ಇತ್ತೀಚಿನ ಮಾಹಿತಿಯ ಪ್ರಕಾರ ನಾಲ್ಸಾರ್ನ 2026ರ ಬಹುತೇಕ ಪದವೀಧರರು ಇದರಿಂದ ದೂರವಿದ್ದು, ಮುಖ್ಯ ನ್ಯಾಯಮೂರ್ತಿಯನ್ನು ಅಗೌರವಗೊಳಿಸುವ ಯಾವುದೇ ಕ್ರಮದಲ್ಲಿ ಭಾಗವಹಿಸುವ ಉದ್ದೇಶ ಅವರಿಗಿಲ್ಲ ಎಂಬುದು ತಿಳಿದುಬಂದಿದೆ ಎಂದು ಬಿಸಿಐ ಹೇಳಿದೆ. ಬಳಿಕ ತನ್ನ ಹಿಂದಿನ ಸುತ್ತೋಲೆಯನ್ನು ಹಿಂಪಡೆದಿರುವುದಾಗಿ ಸುಪ್ರೀಂ ಕೋರ್ಟ್ಗೆ ತಿಳಿಸಿತು.
ಈ ಬೆಳವಣಿಗೆಯ ನಡುವೆಯೇ ಬಿಸಿಐ ಸುತ್ತೋಲನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್ನಲ್ಲಿ ಪ್ರಸ್ತಾಪಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ಬಿಸಿಐ ಕ್ರಮದ ಬಗ್ಗೆ ತೀವ್ರ ಅಸಮ್ಮತಿ ವ್ಯಕ್ತಪಡಿಸಿದರು.
“ಇದು ಸಂಪೂರ್ಣ ಅನಗತ್ಯ. ನಾನೂ ಒಮ್ಮೆ ವಿದ್ಯಾರ್ಥಿಯಾಗಿದ್ದೆ; ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ. ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದದ ವಿಚಾರ. ಮಧ್ಯಪ್ರವೇಶಿಸಲು ಅವರು (ಬಿಸಿಐ) ಯಾರು?” ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಬಿಸಿಐನ ಸುತ್ತೋಲೆಗಳ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೌನ್ಸಿಲ್ಗೆ ಸೂಚಿಸಿದೆ. ಅಲ್ಲದೆ, ನಾಲ್ಸಾರ್ ವಿದ್ಯಾರ್ಥಿಗಳು ಅಥವಾ ಬೋಧಕ ವರ್ಗದ ಸದಸ್ಯರ ವಿರುದ್ಧ ಯಾವುದೇ ಶಿಕ್ಷಾತ್ಮಕ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿದೆ.
ಸುಪ್ರೀಂ ಕೋರ್ಟ್ನಲ್ಲಿ ಬಿಸಿಐ ಪರ ವಕೀಲರು ಹಾಜರಾಗಿ, ವಿವಾದಿತ ಸುತ್ತೋಲೆಯನ್ನು ಈಗಾಗಲೇ ಹಿಂಪಡೆಯಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ವಿದ್ಯಾರ್ಥಿಗಳ ಅಭಿಯಾನದ ಹಿನ್ನೆಲೆಯಲ್ಲಿ ನಾಲ್ಸಾರ್ನ ಉಪಕುಲಪತಿಗಳಿಂದ ವಾಸ್ತವಾಂಶಗಳ ವರದಿಯನ್ನೂ ಬಿಸಿಐ ಕೇಳಿತ್ತು. ಅಭಿಯಾನವನ್ನು ಆರಂಭಿಸಿದವರು, ಸಂಘಟಿಸಿದವರು ಅಥವಾ ವಿದ್ಯಾರ್ಥಿಗಳನ್ನು ಅದರಲ್ಲಿ ಭಾಗವಹಿಸಲು ಸಂಘಟಿಸಿದವರ ವಿವರಗಳನ್ನು ಒಳಗೊಂಡ ವರದಿ ನೀಡುವಂತೆ ಸೂಚಿಸಲಾಗಿತ್ತು. ಈ ವಿಚಾರಣೆಯ ಅವಧಿಯಲ್ಲಿ 2026ರ ಬ್ಯಾಚ್ನ ಯಾವುದೇ ಪದವೀಧರರನ್ನು ರಾಜ್ಯ ಬಾರ್ ಕೌನ್ಸಿಲ್ನಲ್ಲಿ ನೋಂದಾಯಿಸಬಾರದು ಎಂಬ ನಿರ್ದೇಶನವನ್ನೂ ನೀಡಲಾಗಿತ್ತು. ಆದರೆ, ಇದೀಗ ಆ ನಿರ್ಧಾರವನ್ನು ಬಿಸಿಐ ಹಿಂಪಡೆದಿದೆ.
ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅಧ್ಯಕ್ಷ ಹಾಗೂ ಹಿರಿಯ ವಕೀಲ ವಿಕಾಸ ಸಿಂಗ್ ಅವರು ಬಿಸಿಐ ಕ್ರಮವನ್ನು “ಅನಿಯಂತ್ರಿತ, ಕಾನೂನುಬಾಹಿರ ಮತ್ತು ಅಸಮರ್ಪಕ” ಎಂದು ತೀವ್ರವಾಗಿ ಖಂಡಿಸಿದ್ದರು.
ಆಗಸ್ಟ್ 13ರಂದು ಬಿಸಿಐ ಅಧ್ಯಕ್ಷ ಮನನ್ ಕುಮಾರ ಮಿಶ್ರಾ ಅವರಿಗೆ ಬರೆದ ಪತ್ರದಲ್ಲಿ ವಿಕಾಸ ಸಿಂಗ್ ಅವರು ಬಿಸಿಐನ ನಿರ್ದೇಶನಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದರು. ಇಡೀ ಬ್ಯಾಚ್ನ ಎನ್ರೋಲ್ಮೆಂಟ್ನ್ನು ತಡೆಹಿಡಿಯುವ ನಿರ್ಧಾರವು ವಿದ್ಯಾರ್ಥಿಗಳು ತಮ್ಮ ಮಾತಿನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಅವರನ್ನು ಬೆದರಿಸುವ ಪ್ರಯತ್ನದಂತೆಯೇ ಕಾಣುತ್ತದೆ ಎಂದು ಅವರು ಹೇಳಿದ್ದರು.
ವಿಶ್ವವಿದ್ಯಾಲಯಗಳು ಮುಕ್ತ ಚಿಂತನೆ, ಚರ್ಚೆ ಮತ್ತು ಭಿನ್ನಾಭಿಪ್ರಾಯಗಳಿಗೆ ವೇದಿಕೆಯಾಗಬೇಕು ಎಂದು ಸಿಂಗ್ ಒತ್ತಿ ಹೇಳಿದರು. ಕೇವಲ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಯ ಅಭಿಪ್ರಾಯ ಅಥವಾ ನಿಲುವಿಗೆ ವಿದ್ಯಾರ್ಥಿಗಳು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಕಾನೂನು ವೃತ್ತಿಗೆ ಪ್ರವೇಶಿಸುವ ಹಕ್ಕಿನಿಂದ ವಂಚಿಸುವ ಅಥವಾ ಆ ಹಕ್ಕನ್ನು ನಿರಾಕರಿಸುವ ಬೆದರಿಕೆ ಹಾಕಬಾರದು ಎಂದು ಅವರು ಸ್ಪಷ್ಟಪಡಿಸಿದರು.
“ಸಂವಿಧಾನಾತ್ಮಕ ಅಧಿಕಾರಿಯೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ವಿದ್ಯಾರ್ಥಿಗಳ ಕಾನೂನು ವೃತ್ತಿಗೆ ಪ್ರವೇಶಿಸುವ ಹಕ್ಕನ್ನು ಕಸಿದುಕೊಳ್ಳುವ ಬೆದರಿಕೆ ಹಾಕಲಾಗದು,” ಎಂದು ಹಿರಿಯ ವಕೀಲ ವಿಕಾಸ ಸಿಂಗ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕಾನೂನು ವೃತ್ತಿಯ ಪ್ರಮುಖ ನಿಯಂತ್ರಣ ಸಂಸ್ಥೆಯಾಗಿದ್ದು, ನಾಲ್ಸಾರ್ನ 2026ರ ಬ್ಯಾಚ್ಗೆ ಸಂಬಂಧಿಸಿದ ಈ ಬೆಳವಣಿಗೆ ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ, ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಹಾಗೂ ಕಾನೂನು ವೃತ್ತಿಗೆ ಪ್ರವೇಶದ ಹಕ್ಕಿನ ಕುರಿತು ಮಹತ್ವದ ಚರ್ಚೆಗೆ ಕಾರಣವಾಗಿದೆ. ಇದೀಗ ಬಿಸಿಐ ತನ್ನ ವಿವಾದಿತ ನಿರ್ದೇಶನವನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ, ನಾಲ್ಸಾರ್ ವಿದ್ಯಾರ್ಥಿಗಳ ವಿರುದ್ಧದ ಎನ್ರೋಲ್ಮೆಂಟ್ ನಿರ್ಬಂಧ ಮುಂದುವರಿಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ