ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಅಮಿತ್ ಶಾ ವಿರುದ್ಧದ ಹೇಳಿಕೆ: ರಾಹುಲ್ ಗಾಂಧಿಗೆ ಹಕ್ಕುಚ್ಯುತಿ ನೋಟಿಸ್, ಆ.28ರೊಳಗೆ ಉತ್ತರಿಸಲು ಲೋಕಸಭೆ ಸಚಿವಾಲಯ ಸೂಚನೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಲೋಕಸಭೆಯಲ್ಲಿ ಮಾಡಿರುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ (LoP) ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದರಾದ ಅನುರಾಗ ಠಾಕೂರ್ ಮತ್ತು ಸಂಜಯ ಜೈಸ್ವಾಲ್ ಸಲ್ಲಿಸಿರುವ ಪ್ರತ್ಯೇಕ ಹಕ್ಕುಚ್ಯುತಿ ದೂರುಗಳ ಕುರಿತು ಲೋಕಸಭೆ ಕಾರ್ಯಾಲಯ ಸ್ಪಷ್ಟನೆ ಕೇಳಿದ್ದು, ಆಗಸ್ಟ್ 28ರೊಳಗೆ ಉತ್ತರ ಸಲ್ಲಿಸುವಂತೆ ರಾಹುಲ್‌ ಗಾಂಧಿಗೆ ಸೂಚಿಸಿದೆ.
ಸಾರ್ವಜನಿಕ ಪರೀಕ್ಷೆಗಳಲ್ಲಿನ ಅಕ್ರಮ ತಡೆ ಮಸೂದೆ ಕುರಿತ ಚರ್ಚೆಯ ವೇಳೆ ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಮಾಡಿದ ಹೇಳಿಕೆಗಳು ಸಂಸದೀಯ ನಿಯಮಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿ ಬಿಜೆಪಿ ಸಂಸದರು ದೂರು ನೀಡಿದ್ದರು.
ಲೋಕಸಭೆಯ ಬಿಜೆಪಿ ಮುಖ್ಯ ಸಚೇತಕರೂ ಆಗಿರುವ ಸಂಜಯ ಜೈಸ್ವಾಲ್ ಅವರು ಜುಲೈ 29ರಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಸಲ್ಲಿಸಿದ್ದರು. ರಾಹುಲ್ ಗಾಂಧಿಯವರ ಹೇಳಿಕೆಗಳು ಅಮಿತ್ ಶಾ ಅವರ ಸಂಸದೀಯ ಗೌರವಕ್ಕೆ ಧಕ್ಕೆ ತಂದಿದ್ದು, ಸದನದ ಘನತೆ ಮತ್ತು ಶಿಷ್ಟಾಚಾರವನ್ನು ಉಲ್ಲಂಘಿಸಿವೆ ಎಂದು ಅವರು ಆರೋಪಿಸಿದ್ದರು. ಸ್ಪೀಕರ್ ಈ ದೂರನ್ನು ಹಕ್ಕುಚ್ಯುತಿ ಸಮಿತಿಗೆ ರವಾನಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೋ | ಚಪ್ಪಲಿಗಳ ರಾಶಿ ಮಧ್ಯೆ ಕಳೆದುಹೋದ ಚಪ್ಪಲಿ ; ಆದ್ರೆ ವ್ಯಕ್ತಿಗೆ ಅದನ್ನು ಹುಡುಕಿಕೊಟ್ಟಿತು ಚಾಟ್‌ಜಿಪಿಟಿ....!

ಇದೇ ವಿಚಾರವಾಗಿ ಬಿಜೆಪಿ ಸಂಸದ ಅನುರಾಗ ಠಾಕೂರ್ ಅವರು ಜುಲೈ 30ರಂದು ಪ್ರತ್ಯೇಕ ದೂರು ಸಲ್ಲಿಸಿದ್ದರು. ರಾಹುಲ್ ಗಾಂಧಿ ಅವರು “ಅಸಂಸದೀಯ ಹಾಗೂ ಅವಹೇಳನಕಾರಿ ಭಾಷೆ” ಬಳಸಿದ್ದಾರೆ ಎಂದು ಆರೋಪಿಸಿರುವ ಅವರು, ಗೃಹ ಸಚಿವರ ವಿರುದ್ಧ ಗಂಭೀರ ಆರೋಪಗಳನ್ನು ಮೊದಲು ಸೂಕ್ತ ನೋಟಿಸ್ ನೀಡದೆ ಸದನದಲ್ಲಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದು ಸಂಸದೀಯ ನಿಯಮಗಳ ಉಲ್ಲಂಘನೆಯಾಗಿದೆ ಎಂಬುದು ಅವರ ವಾದವಾಗಿದೆ.ರಾಹುಲ್ ಗಾಂಧಿಯವರ ಹೇಳಿಕೆಗಳು ಹಕ್ಕುಚ್ಯುತಿ ಹಾಗೂ ಸದನದ ಅವಮಾನಕ್ಕೆ ಕಾರಣವಾಗಿವೆ ಎಂದು ಠಾಕೂರ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಲೋಕಸಭೆಯ ಹಕ್ಕುಚ್ಯುತಿ ಸಮಿತಿಯ ಜಂಟಿ ಕಾರ್ಯದರ್ಶಿ ರಾಹುಲ್ ಗಾಂಧಿಗೆ ಕಳುಹಿಸಿರುವ ಪತ್ರದಲ್ಲಿ, ಜುಲೈ 29 ಮತ್ತು 30ರಂದು ಸಲ್ಲಿಸಲಾದ ಎರಡೂ ದೂರುಗಳ ಪ್ರತಿಗಳನ್ನು ರವಾನಿಸಲಾಗಿದೆ. ಈ ಆರೋಪಗಳ ಕುರಿತು ತಮ್ಮ ಉತ್ತರ/ಅಭಿಪ್ರಾಯವನ್ನು ಆಗಸ್ಟ್ 28, 2026ರೊಳಗೆ ಸಲ್ಲಿಸುವಂತೆ ಸೂಚಿಸಿದೆ.
ಈ ನಡುವೆ, ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆ) ತಿದ್ದುಪಡಿ ಮಸೂದೆ, 2026 ಎರಡೂ ಸದನಗಳಲ್ಲಿ ವಿಸ್ತೃತ ಚರ್ಚೆಯ ಬಳಿಕ ಅಂಗೀಕಾರಗೊಂಡಿದ್ದು, ಇದೀಗ ಕಾನೂನಾಗಿ ಜಾರಿಗೆ ಬಂದಿದೆ.

ಪ್ರಮುಖ ಸುದ್ದಿ :-   ಜೆನ್‌ ಝಡ್‌ನತ್ತ ಮೋದಿ ಫೋಕಸ್: 1 ಕೋಟಿ ಯುವಕರಿಗೆ ಎಐ(AI) ತರಬೇತಿ, ಉಚಿತ ಕೋಚಿಂಗ್ ಸೇರಿ 6 ಘೋಷಣೆಗಳು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement